Homeಕರ್ನಾಟಕಮೈಸೂರು: 11 ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಮುನ್ನಡೆ

ಮೈಸೂರು: 11 ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಮುನ್ನಡೆ

- Advertisement -
- Advertisement -

ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ಈ ಭಾರಿ ಹೆಚ್ಚಿನ ಸ್ಥಾನಗಳನ್ನು ಮೈಸೂರು ಜಿಲ್ಲೆಯಲ್ಲಿ ಪಡೆಯುವ ಸಾಧ್ಯತೆ ಹೆಚ್ಚಾಗುತ್ತಿದೆ.

ವರುಣಾ ವಿಧಾನಸಭಾ ಕ್ಷೇತ್ರ

ಸಿದ್ದರಾಮಯ್ಯ (ಕಾಂಗ್ರೆಸ್)- ಮುನ್ನಡೆ

ವಿ.ಸೋಮಣ್ಣ (ಬಿಜೆಪಿ)- ಹಿನ್ನಡೆ

ಭಾರತೀಶಂಕರ್‌ (ಜೆಡಿಎಸ್)- ಹಿನ್ನಡೆ

ಕೃಷ್ಣಮೂರ್ತಿ (ಬಿಎಸ್‌ಪಿ)- ಹಿನ್ನಡೆ

ಅಭ್ಯರ್ಥಿಗಳ ಹಿನ್ನೆಲೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಂಪ್ರದಾಯಿಕ ಕ್ಷೇತ್ರವಾದ ವರುಣಾ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. 2008, 2013 ಸಿದ್ದರಾಮಯ್ಯನವರು ಇಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಮುಖ್ಯಮಂತ್ರಿಯೂ ಆದರು. 2018ರಲ್ಲಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಗೆದ್ದಿದ್ದರು. ಆದರೆ ಈ ಭಾರಿ ಸಿದ್ದರಾಮಯ್ಯನವರು ಸ್ವಕ್ಷೇತ್ರಕ್ಕೆ ಮರಳಿದರು. ಸಿದ್ದರಾಮಯ್ಯನವರನ್ನು ಕಟ್ಟಿಹಾಕಬೇಕೆಂದು ಸಚಿವ ವಿ.ಸೋಮಣ್ಣನವರನ್ನು ವರುಣಾದಿಂದ ಕಣಕ್ಕಿಳಿಸಲಾಗಿತ್ತು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡದೆ ಸೋಮಣ್ಣನವರನ್ನು ವರುಣಾ ಮತ್ತು ಚಾಮರಾಜನಗರದಿಂದ ಸ್ಪರ್ಧೆಗೆ ಇಳಿಸಲಾಗಿತ್ತು. ಸಿದ್ದರಾಮಯ್ಯನವರು ವರುಣಾದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮುಂದೆ ಬಿಜೆಪಿಯ ಜಾತಿ ಸಮೀಕರಣದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಕಾಣುತ್ತಿದೆ.

****

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ

ಜಿ.ಟಿ.ದೇವೇಗೌಡ (ಜೆಡಿಎಸ್)- ಮುನ್ನಡೆ

ಮಾವಿನಹಳ್ಳಿ ಸಿದ್ದೇಗೌಡ (ಕಾಂಗ್ರೆಸ್)- ಹಿನ್ನಡೆ

ಕವೀಶ್ ಗೌಡ (ಬಿಜೆಪಿ)- ಹಿನ್ನಡೆ

ಸಿದ್ದರಾಮಯ್ಯನವರು 2018ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಸೋಲಿಸಿ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದ ಜಿ.ಟಿ.ದೇವೇಗೌಡ ಅವರು 2013ರಿಂದಲೂ ಚಾಮುಂಡೇಶ್ವರಿಯನ್ನು ಪ್ರತಿನಿಧಿಸುತ್ತಿದ್ದಾರೆ. ಈ ಚುಣಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾವಿನಹಳ್ಳಿ ಸಿದ್ದೇಗೌಡ ಅವರು ಮೂಲತಃ ಜಿ.ಟಿ.ದೇವೇಗೌಡ ಅವರ ಶಿಷ್ಯರು. ಈ ಚುನಾವಣೆಯಲ್ಲಿ ಸಿದ್ದೇಗೌಡರೇ ಜಿ.ಟಿ.ಡಿ. ಜೊತೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆದರೆ ಜಿ.ಟಿ.ದೇವಗೌಡ ಮತ್ತು ಮಾವಿನಹಳ್ಳಿ ಸಿದ್ದೇಗೌಡ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿತ್ತು. ನಿರೀಕ್ಷೆಯಂತೆ ಜಿ.ಟಿ.ದೇವೇಗೌಡ ಮುನ್ನಡೆ ಸಾಧಿಸಿದ್ದಾರೆ.

****

ಚಾಮರಾಜ ವಿಧಾನಸಭಾ ಕ್ಷೇತ್ರ

ಕೆ.ಹರೀಶ್‌ಗೌಡ (ಕಾಂಗ್ರೆಸ್)- ಮುನ್ನಡೆ

ಎಲ್.ನಾಗೇಂದ್ರ (ಬಿಜೆಪಿ)- ಹಿನ್ನಡೆ

ಎಚ್‌.ಕೆ.ರಮೇಶ್ (ಜೆಡಿಎಸ್‌)- ಹಿನ್ನಡೆ

ಜೆಡಿಎಸ್‌ನಿಂದ ಬಂಡಾಯವೆದ್ದು 2018ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 21,282 ಮತಗಳನ್ನು ಪಡೆದು ಗಮನ ಸೆಳೆದಿದ್ದ ಕೆ.ಹರೀಶ್ ಗೌಡ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. 2018ರಲ್ಲಿ ಗೆದ್ದಿದ್ದ ಎಲ್.ನಾಗೇಂದ್ರ ಅವರನ್ನು ಬಿಜೆಪಿ ಮತ್ತೆ ಕಣಕ್ಕಿಳಿಸಿತ್ತು. ವಾಸು ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು.

***

ಕೃಷ್ಣರಾಜ ವಿಧಾನಸಭಾ ಕ್ಷೇತ್ರ

ಟಿ.ಎಸ್.ಶ್ರೀವತ್ಸ (ಬಿಜೆಪಿ)- ಮುನ್ನಡೆ

ಎಂ.ಕೆ.ಸೋಮಶೇಖರ್‌ (ಕಾಂಗ್ರೆಸ್)- ಹಿನ್ನಡೆ

ಕೆ.ವಿ.ಮಲ್ಲೇಶ್ (ಜೆಡಿಎಸ್)- ಹಿನ್ನಡೆ

ಶಾಸಕರಾಗಿದ್ದ ಎ.ಎಸ್.ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿಸಿ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿತ್ತು. ರಾಮದಾಸ್ ಅವರಿಗೆ ಸಾಂಪ್ರದಾಯಿಕ ಎದುರಾಳಿಯಾಗಿದ್ದ ಎಂ.ಕೆ.ಸೋಮಶೇಖರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಸಾಮಾನ್ಯವಾಗಿ ರಾಮು- ಸೋಮು ಸ್ಪರ್ಧೆಯಾಗುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ಟಿ.ಎಸ್.ಶ್ರೀವತ್ಸ ಅವರು ಎಷ್ಟರ ಮಟ್ಟಿಗೆ ಸೋಮಶೇಖರ್‌ ಅವರಿಗೆ ಪೈಪೋಟಿ ನೀಡುತ್ತಾರೆಂಬ ಕುತೂಹಲ ಹುಟ್ಟಿಕೊಂಡಿತ್ತು. ಕಳೆದ ಬಾರಿಯೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಅವರಿಗೆ ಈ ಸಲವೂ ಜೆಡಿಎಸ್ ಟಿಕೆಟ್ ನೀಡಿತ್ತು.

****

ನರಸಿಂಹರಾಜ ವಿಧಾನಸಭಾ ಕ್ಷೇತ್ರ

ತನ್ವೀರ್‌ ಸೇಠ್ (ಕಾಂಗ್ರೆಸ್)- ಮುನ್ನಡೆ

ಅಬ್ದುಲ್ ಮಜೀದ್ (ಎಸ್‌ಡಿಪಿಐ)- ಹಿನ್ನಡೆ

ಸಂದೇಶ್‌ ಸ್ವಾಮಿ (ಬಿಜೆಪಿ)- ಹಿನ್ನಡೆ

ಅಬ್ದುಲ್‌ ಖಾದರ್ (ಜೆಡಿಎಸ್)-

ಕಾಂಗ್ರೆಸ್ಸಿನ ಮಾಜಿ ಸಚಿವ ತನ್ವೀರ್‌ ಸೇಠ್‌ ಅವರು ಸತತವಾಗಿ ಗೆದ್ದು ಬರುತ್ತಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಕಳೆದೆರಡು ಚುನಾವಣೆಯಿಂದಲೂ ಪೈಪೋಟಿ ನೀಡುತ್ತಾ ಬಂದಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್‌ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಸ್‌ಡಿಪಿಐ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಮನವೊಲಿಕೆಗೆ ಮುಂದಾಗಿದ್ದರು.

****

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ

ಅಶ್ವಿನ್‌ ಕುಮಾರ್‌ (ಜೆಡಿಎಸ್)- ಮುನ್ನಡೆ

ಡಾ.ಎಚ್.ಸಿ.ಮಹದೇವಪ್ಪ (ಕಾಂಗ್ರೆಸ್)- ಹಿನ್ನಡೆ

ಡಾ.ರೇವಣ್ಣ (ಬಿಜೆಪಿ)- ಹಿನ್ನಡೆ

ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರನ್ನು 28,000 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದ ಜೆಡಿಎಸ್‌ನ ಅಶ್ವಿನ್‌ಕುಮಾರ್‌ ಅವರು ಈ ಭಾರಿಯೂ ಎದುರಾಳಿಯಾಗಿದ್ದರು. ಕ್ಷೇತ್ರದಲ್ಲಿ ಇಟ್ಟುಕೊಂಡಿರುವ ಭಾರೀ ಜನಸಂಪರ್ಕ ಅವರ ಕೈಹಿಡಿಯುವ ಸಾಧ್ಯತೆ ಇದೆ ಎಂದು ಊಹಿಸಲಾಗಿತ್ತು. ಮತ್ತೊಂದೆಡೆ ನರಸೀಪುರ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದ, ಹಿರಿಯ ದಲಿತ ನಾಯಕ ಮಹದೇವಪ್ಪ ಶತಾಯಗತಾಯ ಗೆಲ್ಲಲು ಯತ್ನಿಸಿದ್ದರು. ಕೈತಪ್ಪಿದ್ದ ಕ್ಷೇತ್ರವನ್ನು ಮತ್ತೆ ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ರೇವಣ್ಣ ಅವರಿಗೆ ಬಿಜೆಪಿ ಕಣಕ್ಕಿಳಿಸಿತ್ತು. ಟಿ.ನರಸೀಪುರ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.

****

ನಂಜನಗೂಡು ವಿಧಾನಸಭಾ ಕ್ಷೇತ್ರ

ದರ್ಶನ್ ಧ್ರುವನಾರಾಯಣ (ಕಾಂಗ್ರೆಸ್)- ಮುನ್ನಡೆ

ಬಿ.ಹರ್ಷವರ್ಧನ್ (ಬಿಜೆಪಿ)- ಹಿನ್ನಡೆ

ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲ.

ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌.ಧ್ರುವನಾರಾಯಣ ಅವರ ಹಠಾ‌ತ್ ನಿರ್ಗಮನದ ಬಳಿಕ ಅವರ ಪುತ್ರನಾದ ದರ್ಶನ್ ಧ್ರುವ ನಾರಾಯಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಧ್ರುವನಾರಾಯಣ ಅವರು ನಂಜನಗೂಡಿನಲ್ಲಿ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅನುಕಂಪದ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಟಿಕೆಟ್ ನೀಡಲಾಗಿತ್ತು. ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಬಿಜೆಪಿಯಿಂದ 2018ರಲ್ಲಿ ಗೆದ್ದಿದ್ದ ಬಿ.ಹರ್ಷವರ್ಧನ್‌ ಅವರು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಮತ್ತು ಹಿರಿಯ ದಲಿತ ನಾಯಕ ಬಿ.ಬಸವಲಿಂಗಪ್ಪ ಅವರ ಮೊಮ್ಮಗ. ನಂಜನಗೂಡು ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.

***

ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರ

ಅನಿಲ್ ಚಿಕ್ಕಮಾದು (ಕಾಂಗ್ರೆಸ್)- ಮುನ್ನಡೆ

ಕೃಷ್ಣನಾಯಕ (ಬಿಜೆಪಿ)- ಹಿನ್ನಡೆ

ಜಯಪ್ರಕಾಶ್ (ಜೆಡಿಎಸ್)- ಹಿನ್ನಡೆ

ಹಾಲಿ ಶಾಸಕರಾಗಿದ್ದ ಅನಿಲ್‌ ಚಿಕ್ಕಮಾದು (ಸಿ.ಅನಿಲ್‌ಕುಮಾರ್‌) ಅವರು ಮಾಜಿ ಶಾಸಕ ಚಿಕ್ಕಮಾದು ಅವರ ಪುತ್ರ. ಜೆಡಿಎಸ್‌ನಲ್ಲಿ ಇದ್ದು ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಶಾಸಕರನ್ನಾಗಿ ಮಾಡುವಲ್ಲಿ ದಿವಂಗತ ಆರ್‌.ಧ್ರುವನಾರಾಯಣ್ ಅಂತಹ ನಾಯಕರ ಪಾತ್ರ ಮಹತ್ವದ್ದಾಗಿದೆ. ಈಗ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಎರಡನೇ ಅವಧಿಗೆ ಸ್ಪರ್ಧಿಸಿದ್ದರು. ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿತ್ತು. ಹೀಗಾಗಿ ಇಬ್ಬರು ಮಾಜಿ ಶಾಸಕರ ಪುತ್ರರ ಜೊತೆಗೆ ಕೃಷ್ಣ ನಾಯಕ ಅವರು ಪ್ರಮುಖ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಕೃಷ್ಣನಾಯಕ್‌ ಮೂಲತಃ ಜೆಡಿಎಸ್‌ನಲ್ಲಿ ಇದ್ದವರು. ಅಪ್ಪಾಜಿ ಕ್ಯಾಂಟೀನ್‌ ಮಾಡಿ ಗಮನ ಸೆಳೆದಿದ್ದರು. ಕೋವಿಡ್ ಸಮಯದಲ್ಲಿ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಿ ಜನಮನ್ನಣೆ ಗಳಿಸಿದ್ದಾರೆ. ಎಚ್.ಡಿ.ಕೋಟೆ ಎಸ್‌ಟಿ ಮೀಸಲು ಕ್ಷೇತ್ರವಾಗಿದೆ.

***

ಹುಣಸೂರು ವಿಧಾನಸಭಾ ಕ್ಷೇತ್ರ

ಜಿ.ಡಿ.ಹರೀಶ್‌ಗೌಡ (ಜೆಡಿಎಸ್‌)- ಮುನ್ನಡೆ

ಎಚ್‌.ಪಿ.ಮಂಜುನಾಥ್‌ (ಕಾಂಗ್ರೆಸ್)- ಹಿನ್ನಡೆ

ದೇವರಹಳ್ಳಿ ಸೋಮಶೇಖರ್‌ (ಬಿಜೆಪಿ)- ಹಿನ್ನಡೆ

ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕರ್ಮಭೂಮಿ ಹುಣಸೂರು ವಿಧಾನಸಭಾ ಕ್ಷೇತ್ರ. 2013ರ ಚುನಾವಣೆ ಮತ್ತು 2019ರ ಉಪಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಮಂಜುನಾಥ್ ಈ ಭಾರಿಯೂ ಪಕ್ಷದಿಂದ ಕಣದಲ್ಲಿದ್ದಾರೆ. ಇವರ ಎದುರಲ್ಲಿ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‌ಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹರೀಶ್‌ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ದೇವರಹಳ್ಳಿ ಸೋಮಶೇಖರ್‌ ಈ ಚುನಾವಣೆಯಲ್ಲಿ ಬಿಜೆಪಿಗೆ ಸೇರಿ ಟಿಕೆಟ್ ಪಡೆದಿದ್ದರು.

***

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ

ಕೆ.ವೆಂಕಟೇಶ್ (ಕಾಂಗ್ರೆಸ್)- ಮುನ್ನಡೆ

ಕೆ.ಮಹದೇವ್ (ಜೆಡಿಎಸ್)- ಹಿನ್ನಡೆ

ಸಿ.ಎಚ್.ವಿಜಯಶಂಖರ್‌- ಹಿನ್ನಡೆ

ಸತತವಾಗಿ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದ ಹಿರಿಯ ರಾಜಕಾರಣಿ ಕೆ.ವೆಂಕಟೇಶ್ 2018ರಲ್ಲಿ ಸೋತಿದ್ದರು. ಸತತವಾಗಿ ಸೋಲು ಕಂಡಿದ್ದ ಜೆಡಿಎಸ್‌ನ ಕೆ.ಮಹದೇವ್ ಅವರಿಗೆ ಅನುಕಂಪದ ಅಲೆ ಇತ್ತು. ಇನ್ನು ಮಾಜಿ ಸಚಿವ, ಮಾಜಿ ಶಾಸಕ ಸಿ.ಎಚ್.ವಿಜಯಶಂಕರ್‌ ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದಾರೆ.

***

ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರ

ರವಿಶಂಕರ್‌ (ಕಾಂಗ್ರೆಸ್)- ಮುನ್ನಡೆ

ಸಾ.ರಾ.ಮಹೇಶ್‌ (ಜೆಡಿಎಸ್)- ಹಿನ್ನಡೆ

ಹೊಸಹಳ್ಳಿ ವೆಂಕಟೇಶ್ (ಬಿಜೆಪಿ)- ಹಿನ್ನಡೆ

ಕೆ.ಆರ್‌.ನಗರ ಕ್ಷೇತ್ರವು ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಪೈಪೋಟಿಯ ನೆಲ. ಮಾಜಿ ಸಚಿವ ಸಾರಾ ಮಹೇಶ್ ಸತತವಾಗಿ ಗೆಲ್ಲುತ್ತಾ ಬಂದಿದ್ದು, ಕಾಂಗ್ರೆಸ್ ಓಟಕ್ಕೆ ಬ್ರೇಕ್‌ ಹಾಕಿದ್ದರು. ಕಳೆದ ಚುನಾವಣೆಯಲ್ಲಿ ಸೋತಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ರವಿಶಂಕರ್‌ ಅವರಿಗೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...