Homeಕರ್ನಾಟಕಕರಾವಳಿ ಕಾಂಗ್ರೆಸ್‌ನಲ್ಲಿ ’ಪ್ರಮೋದ್ ಮಧ್ವರಾಜ್ ಮನಸ್ಥಿತಿ’ ದಂಡು!

ಕರಾವಳಿ ಕಾಂಗ್ರೆಸ್‌ನಲ್ಲಿ ’ಪ್ರಮೋದ್ ಮಧ್ವರಾಜ್ ಮನಸ್ಥಿತಿ’ ದಂಡು!

- Advertisement -
- Advertisement -

ಸಂಘ ಪರಿವಾರದ ’ದೂರನಿಯಂತ್ರಿತ ಆಡಳಿತ’ ದೇಶದಲ್ಲಿ ಶುರುವಾದ ಬಳಿಕ ಅಪ್ಪಟ ಸಮಯಸಾಧಕತನವೆ ರಾಜಕೀಯ ಸಿದ್ಧಾಂತ ಎಂಬಂತಾಗಿಬಿಟ್ಟಿದೆ. ಹಿಂದುತ್ವದ ಹೆಸರಲ್ಲಿ ಅವಕಾಶವಾದಿ ರಾಜಕಾರಣ ಪೋಷಿಸುತ್ತಿರುವ ಬಿಜೆಪಿ ಸೈಕಲಾಜಿಕಲ್ ವಾರ್‌ಅನ್ನು ಸದ್ದಿಲ್ಲದೆ ಶುರುಹಚ್ಚಿಕೊಂಡಂತಿದೆ. ದೇಶದಲ್ಲಿ ವಿರೋಧ ಪಕ್ಷಗಳು ಖಾಲಿಯಾಗುತ್ತಿವೆ; ಬಿಜೆಪಿ ಸೇರಿದರೆ ಅಧಿಕಾರದ ಸ್ಥಾನ-ಮಾನಪಡೆಯಬಹುದು; ಐಟಿ ರೇಡು ತಪ್ಪಿಸಿಕೊಂಡು ನಿರಾತಂಕವಾಗಿ ಮುನ್ನಡೆಯಬಹುದು; ಇಲ್ಲದಿದ್ದರೆ ಉದ್ಯೋಗ-ಉದ್ಯಮ ನಷ್ಟವಾಗಿ ಜೈಲು ಸೇರಬೇಕಾಗುತ್ತದೆ ಎಂಬಂಥ ಭಯಾನಕ ರಾಜಕೀಯ ಸಂದೇಶಗಳು ಬಿತ್ತರಗೊಳ್ಳುತ್ತಿವೆ.

ಸಂಘಪರಿವಾರದ ಹಿಂದುತ್ವ ತಂತ್ರಗಾರಿಕೆಗೆ ಪೂರಕವಾದ ಪರಿಸ್ಥಿತಿ ಕಾಂಗ್ರೆಸ್, ಜನತಾದಳ ಮತ್ತಿತರ ಪಕ್ಷದಲ್ಲಿದೆ. ವಿರೋಧ ಪಕ್ಷದಲ್ಲಿದ್ದು ಅಧಿಕಾರ, ಅಂತಸ್ತು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಹಿಡನ್ ಹಿಂದುತ್ವ ಸಿದ್ಧಾಂತಿಗಳು ಬಿಜೆಪಿ ಬೆಳೆಯಲು ಸಹಕರಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ ಉಡುಪಿಯ ’ದೊಡ್ಡ’ ರಾಜಕಾರಣಿ ಪ್ರಮೋದ್ ಮಧ್ವರಾಜ್ ಅವಶ್ಯಕತೆ ಬಿಜೆಪಿಗಿತ್ತಾ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಸ್ವಜಾತಿ (ಮೊಗವೀರ) ಮತಗಳನ್ನೇ ಪಡೆಯಲಾಗದ ಪ್ರಮೋದ್‌ರಿಂದ ಬಿಜೆಪಿಗೆ ಪ್ರಯೋಜನ ಇಲ್ಲವೆಂಬುದು ಸಂಘ ಸೂತ್ರಧಾರರಿಗೆ ಗೊತ್ತಿಲ್ಲದ ಸಂಗತಿಯೆ? ಪ್ರಮೋದ್ ಅವರು ಸೇರಿರುವ ಮೊಗವೀರ ಸಮುದಾಯದ ಮುಕ್ಕಾಲು ಪಾಲು ಓಟುಗಳು ಬಿಜೆಪಿಗೆ ಬೀಳುತ್ತಿರುವಾಗ ಅವರನ್ನು ನಾಲ್ಕು ವರ್ಷಗಳ ಕಾಲ ಬಿಜೆಪಿಯ ಮಂತ್ರಿ-ಶಾಸಕರ ಮತ್ತು ಕರಾವಳಿಯ ಸರ್ವೋಚ್ಚ ನಾಯಕನ ಮನೆ ಬಾಗಿಲು ಕಾಯುವಂತೆ ಮಾಡಿ ಸತಾಯಿಸಿ ಪಾರ್ಟಿಗೆ ಸೇರಿಸಿಕೊಂಡ ಸಂಘದ ಉದ್ದೇಶವಾದರೂ ಏನಿರಬಹುದು?

ಇದಕ್ಕೆಲ್ಲ ಸರಳ ಉತ್ತರಗಳು ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ ಹೈರಾಣಾಗುತ್ತಿದೆ; ಬಿಜೆಪಿ ಕಡೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಬಿಂಬಿಸಿ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿ ದೀರ್ಘಕಾಲದವರೆಗೆ ಪ್ರಮೋದ್ ಬಿಜೆಪಿ ಗೇಟಿನ ಮುಂದೆ ನಿಲ್ಲುವಂತೆ ಮಾಡಲಾಗಿತ್ತಂತೆ.
ಉಡುಪಿಯಲ್ಲಿರುವ ಮತ್ತೊಂದು ಸುದ್ದಿಯ ಪ್ರಕಾರ ಪ್ರಮೋದ್ ಮಧ್ವರಾಜ್ ನಡೆಸುತ್ತಿರುವ ಕೋಟ್ಯಂತರ ರುಪಾಯಿ ವಹಿವಾಟಿನ ಫಿಶ್ ಮಿಲ್‌ನಿಂದ ಮಲ್ಪೆಯಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಆ ಫ್ಯಾಕ್ಟರಿ ಬಂದ್ ಮಾಡಿಸುವ ಬೆದರಿಕೆಗೆ ಕಂಗಾಲಾಗಿರುವ ಪ್ರಮೋದ್ ಬಿಜೆಪಿ ಸೇರಬೇಕಾಗಿ ಬಂತೆನ್ನಲಾಗಿದೆ. ಮತ್ತೊಂದು ತರ್ಕದ ಪ್ರಕಾರ, ಬಿಜೆಪಿ ಸೇರಿದರೆ ಕೇಂದ್ರ ರಕ್ಷಣಾ ಮಂತ್ರಿ, ರಾಜ್ಯದ ಮುಖ್ಯಮಂತ್ರಿ ಆಗುವ ಯೋಗ ಖುಲಾಯಿಸಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರಿಂದ ಪ್ರಮೋದ್ ಅತ್ತೂ ಕರೆದು ಬಿಜೆಪಿ ಸೇರ್ಪಡೆಯಾಗಿದ್ದಾರಂತೆ!

ಇದು ರಾಜಕೀಯ ಮತ್ತು ಔದ್ಯೋಗಿಕ ವಿಶ್ಲೇಷಣೆಯಾದರೆ, ಮೂಲಭೂತವಾಗಿ ಪ್ರಮೋದ್ ಸಂಘ ತತ್ವಾದರ್ಶದ ರಾಜಕಾರಣಿಯೆಂಬ ವ್ಯಾಖ್ಯಾನಗಳೂ ಬರಲಾರಂಭಿಸಿವೆ. ಸಿದ್ದರಾಮಯ್ಯ ಸರಕಾರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಪ್ರಮೋದ್ ಬುದ್ಧಿಪೂರ್ವಕವಾಗೆ ಟಿಪ್ಪು ಜಯಂತಿಗೆ ಚಕ್ಕರ್ ಹಾಕಿದ್ದರೆಂದು ಅಂದು ಸುದ್ದಿಯಾಗಿತ್ತು. ಮಾಜಿ ಶಾಸಕನಾಗಿ ಸಂಘ ಶ್ರೇಷ್ಠರ ಮನ ಒಲಿಸುವ ಪ್ರಯತ್ನದಲ್ಲಿದ್ದ ಪ್ರಮೋದ್ ಕಾರ್ಯಕ್ರಮ ಒಂದರಲ್ಲಿ ತಾನು ಟಿಪ್ಪು ಜಯಂತಿಗೆ ಹೋಗದಂಥ ’ಸುಸಂದರ್ಭ’ ಒದಗಿಬಂದುದನ್ನು ವಿವರಿಸಿ ತನ್ನ ಅಸಹಿಷ್ಣು ರೀತಿ-ನೀತಿ ಬಹಿರಂಗ ಮಾಡಿಕೊಂಡಿದ್ದರು. ಅಷ್ಟ ಮಠದ ಕಾರ್ಯಕ್ರಮದಲ್ಲಿ- ’ಉಡುಪಿಯ ಕೃಷ್ಣ ದೇವಾಲಯವನ್ನು ಸಿದ್ದರಾಮಯ್ಯ ಸರಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸಿಎಂಗೆ ಫೋನ್ ಮಾಡಿ ತಡೆಯೊಡ್ಡಿದ್ದೆ’ ಎಂದು ಹೇಳಿದ್ದರು. ಅಲ್ಲಿಗೆ ಪ್ರಮೋದ್ ತಾವಿದ್ದ ಪಕ್ಷದ ಸಿದ್ಧಾಂತಕ್ಕೆ ಯಾವದೇ ನಿಷ್ಠೆ-ನಿಯತ್ತುಗಳಿಲ್ಲದೆ ಕೇವಲ ಅಧಿಕಾರ ಲಾಲಸೆಗಾಗಿ ಮಾತ್ರ ಕಾಂಗ್ರೆಸ್‌ನಲ್ಲಿದ್ದ ಸಂಘ ಪರಿವಾರ ಮನಸ್ಥಿತಿಯವರು ಎಂದು ಸ್ವಯಂ ಸಾಬೀತುಪಡಿಸಿಕೊಂಡಿದ್ದರೆನ್ನಲಾಗಿದೆ.

ಇಂಥ ಕನಿಷ್ಟ ಬದ್ಧತೆಯಿಲ್ಲದ ದೊಡ್ಡ ದಂಡೇ ಕರಾವಳಿ ಕಾಂಗ್ರೆಸ್ ಪಕ್ಷದಲ್ಲಿದೆ. ಕಾರವಾರದ ಮಾಜಿ ಶಾಸಕ-ಗಣಿ ಹಗರಣದಲ್ಲಿ ಜೈಲಿಗೆ ಹೋಗಿಬಂದಿರುವ ಸತೀಶ್ ಸೈಲ್ ಮತ್ತು ಜನತಾ ದಳದ ಮಾಜಿ ಮಂತ್ರಿ ಆನಂದ ಅಸ್ನೋಟಿಕರ್ ಬಿಜೆಪಿ ಪ್ರವೇಶಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್-ಜನತಾದಳದ ಅಭ್ಯರ್ಥಿಯಾಗಿದ್ದ ಆನಂದ ಅಸ್ನೋಟಿಕರ್ ತಮ್ಮ ಬಿಜೆಪಿ-ಸಂಘಪರಿವಾರದ ಎದುರಾಳಿ, ಶೂದ್ರ ವಿರೋಧಿ ಅನಂತಕುಮಾರ್ ಹೆಗಡೆ ಮತಾಂಧ ಮಸಲತ್ತುಗಾರನೆಂದು ನೇರಾನೇರ ಟೀಕಿಸಿದ್ದರು. ಆದರೆ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿದ ಮೊಟ್ಟಮೊದಲ ತಂಡದಲ್ಲಿದ್ದ ಆನಂದ ಅಲ್ಲಿ ಮಂತ್ರಿಯಾಗಿ, ಶಾಸಕ ಸ್ಥಾನದಿಂದಲೆ ಅನರ್ಹನಾಗಿ ಆ ಪಾರ್ಟಿಯಿಂದ ಹೊರಬಂದಿದ್ದರು. ಕಾಂಗ್ರೆಸ್ ಸೇರಲು ಆರ್.ವಿ.ದೇಶಪಾಂಡೆ ಬಿಡದಿದ್ದಾಗ ಜನತಾ ದಳಕ್ಕೆ ಹೋಗಿದ್ದರು. ಈಗ ಮತ್ತೆ ಬಿಜೆಪಿ ಸೇರಲು ಹವಣಿಸುತ್ತಿರುವ ಅಸ್ನೋಟಿಕರ್ ಬದ್ಧತೆಯೆ ಪ್ರಶ್ನಾರ್ಹವೆಂದು ಜನರು ಆಡಿಕೊಳ್ಳುತ್ತಿದ್ದಾರೆ.

ಸತೀಶ್ ಸೈಲ್

ಮಾಜಿ ಶಾಸಕ ಸತೀಶ್ ಸೈಲ್ ದೈಹಿಕವಾಗಿ ಕಾಂಗ್ರೆಸ್‌ನಲ್ಲಿದ್ದರೂ ಮಾನಸಿಕವಾಗಿ ಬಿಜೆಪಿಯಲ್ಲಿದ್ದಾರೆ. ಶಾಸಕಿ ರೂಪಾಲಿ ನಾಯ್ಕ್‌ರಿಗೆ ಟಿಕೆಟ್ ತಪ್ಪಿಸಿ ತಾನೆ ಬಿಜೆಪಿ ಶಾಸಕನಾಗುವ ಆಸೆಯಲ್ಲಿದ್ದಾರೆನ್ನಲಾಗಿದೆ. 2018ರ ಅಸೆಂಬ್ಲಿ ಚುನಾವಣಾ ಸಂದರ್ಭದಿಂದ ಗಣಿ ಲಾಬಿ ಮುಖಾಂತರ ಬಿಜೆಪಿ ಪ್ರವೇಶಿಸುವ ಎಲ್ಲ ತಂತ್ರಗಾರಿಕೆಯನ್ನೂ ಪ್ರಯೋಗಿಸುತ್ತಿದ್ದಾರೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಕೃಪಾಶೀರ್ವಾದದ ರೂಪಾಲಿ ನಾಯ್ಕ್ ಅಡ್ಡಗಾಲು ಹಾಕಿರುವುದು ಕಾರವಾರದಲ್ಲಿ ಬಹಿರಂಗ ರಹಸ್ಯ. ಬ್ರಾಹ್ಮಣರಿಗೂ ಮೀಸಲಾತಿ ಬೇಕೆನ್ನುವ ಮಂತ್ರಿ ಶಿವರಾಮ ಹೆಬ್ಬಾರ್, ಕಾಂಗ್ರೆಸ್‌ನಲ್ಲಿದ್ದಾಗ ಸಂಘ ತತ್ವ ಪರಿಪಾಲಕರಾಗಿದ್ದರು.

ಬಾಂಬೈ ಬಾಯ್ಸ್‌ಗೆ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ ಎನ್ನಲಾಗಿರುವ ಹಿನ್ನೆಲೆಯಲ್ಲಿ ಹೆಬ್ಬಾರ್ ಚಿತ್ತ ಕಾಂಗ್ರೆಸ್‌ನತ್ತ ಹರಿದಿದೆ ಎನ್ನಲಾಗುತ್ತಿದೆ. ಹೆಬ್ಬಾರ್ ಕಾಂಗ್ರೆಸ್‌ಗೆ ಬಂದರೆ ಬಿಜೆಪಿಗೇ ಲಾಭವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಹೇಳುತ್ತಾರೆ. ಪಕ್ಷಾಂತರ ಮತ್ತು ಎಂಟಿ ಇನ್‌ಕಂಬೆನ್ಸ್‌ನಿಂದ ಜನರ ತಾತ್ಸಾರಕ್ಕೆ ತುತ್ತಾಗಿರುವ ಹೆಬ್ಬಾರ್‌ಗೆ ಆನಂದ್ ಅಸ್ನೋಟಿಕರ್ ಪರಿಸ್ಥಿತಿ ಬಂದರೆ ಅಚ್ಚರಿ ಇಲ್ಲವೆನ್ನಲಾಗುತ್ತಿದೆ. ಹಳಿಯಾಳದ ಮಾಜಿ ಎಮ್ಮೆಲ್ಸಿ ಶ್ರೀಕಾಂತ ಘೋಟನೇಕರ್ ಬಿಜೆಪಿ ಮೇಲೆ ಕಣ್ಣಿಟ್ಟು ’ಶಿವಾಜಿ ಮಹಾರಾಜ್ ಕಿ ಜೈ’ ಎನ್ನುತ್ತಿದ್ದಾರೆ. ಮರಾಠರು ಹೆಚ್ಚಿರುವ ಹಳಿಯಾಳದಲ್ಲಿ ಕೇಸರಿ ಹವಾ ಬೀಸುತ್ತಿರುವುದನ್ನು ಅರಿತಿರುವ ಘೋಟನೇಕರ್ ಪರೋಕ್ಷವಾಗಿ ಕೇಸರಿ ಅಭಿಯಾನಕ್ಕೆ ಅನುವು ಮಾಡಿ ಕೊಡುತ್ತ ಮುಂದೊಂದು ದಿನ ಅದರ ಲಾಭ ತನಗೆ ಅಥವಾ ತನ್ನ ಮಗನಿಗೆ ದಕ್ಕುವ ದೂ(ದು)ರಾಲೋಚನೆ ನಡೆಸಿದ್ದಾರೆಂಬ ಚರ್ಚೆಗಳು ನಡೆದಿದೆ.

ಒಂದು ಗಮನಾರ್ಹ ಅಂಶವೆಂದರೆ ಬಿಜೆಪಿಗೆ ಹೋಗುವವರು ರಸಭರಿತ ಕಬ್ಬಾಗಿ ಹೋಗುತ್ತಾರೆ; ರಸ ಹಿಂಡಿದ ಜಲ್ಲೆಯಾಗಿ ಹೊರಬರುತ್ತಿದ್ದಾರೆ. ಬಿಜೆಪಿಯಲ್ಲಿ ಇರುವಷ್ಟು ದಿನ ಸಂಘ ಸೂತ್ರಧಾರರ ಆಜ್ಞಾನುಧಾರಿಗಳಾಗಿ ತಮ್ಮದೇ ಅಸ್ತಿತ್ವಕ್ಕೆ ಮುಳುವಾಗುವಷ್ಟು ಹಿಂದುತ್ವ ಮತ್ತು ಮತೋನ್ಮತ್ತ ಮಸಲತ್ತು ಮಾಡುತ್ತ ಭಸ್ಮಾಸುರರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸಮಾಜದ ನೆಮ್ಮದಿಗೂ ಭಂಗ ತರುತ್ತಿರುವುದು ದುರಂತವೆಂದು ಪ್ರಜ್ಞಾವಂತರು ಕಳವಳ ಪಡುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...