Homeಕರ್ನಾಟಕಮಳಲಿ ಪೇಟೆ ಮಸೀದಿ ವಿವಾದ | ಆಡಳಿತ ಮಂಡಳಿ ಅರ್ಜಿ ವಜಾ; ಬಿಜೆಪಿ ಬೆಂಬಲಿತ ವಿಎಚ್‌ಪಿ...

ಮಳಲಿ ಪೇಟೆ ಮಸೀದಿ ವಿವಾದ | ಆಡಳಿತ ಮಂಡಳಿ ಅರ್ಜಿ ವಜಾ; ಬಿಜೆಪಿ ಬೆಂಬಲಿತ ವಿಎಚ್‌ಪಿ ಅರ್ಜಿ ಪುರಸ್ಕರಿಸಿದ ಕೋರ್ಟ್‌

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಪೇಟೆಯಲ್ಲಿರುವ, ಮಸೀದಿ ವಿವಾದ ಪ್ರಕರಣವನ್ನು ಅಧೀನ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಬಹುದು ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಬುಧವಾರ ಆದೇಶಿಸಿದ್ದು, 2023ರ ಜನವರಿ 8ರಂದು ಅರ್ಜಿ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.

ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಯಾದ ವಿಎಚ್‌ಪಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಮಳಲಿ ಮಸೀದಿ ವಿವಾದ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯನ್ನು ಸಿವಿಲ್‌ ನ್ಯಾಯಾಲಯವೇ ಆಲಿಸಲಿದೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮಳಲಿ ಮಸೀದಿಯಲ್ಲಿ ದೇಗುಲ ಮಾದರಿ ರಚನೆ ಪತ್ತೆಯಾಗಿದ್ದು, ಕೋರ್ಟ್​ ಕಮಿಷನರ್ ಮೂಲಕ ಸರ್ವೆ ನಡೆಸಲು ಆದೇಶ ನೀಡಬೇಕು” ಎಂದು ಕೋರಿ ವಿಹೆಚ್‌ಪಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಸೀದಿ ಸಮಿತಿ, “ಇಂಥ ಆದೇಶ ಮಾಡಲು ಅಧೀನ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ವಿಎಚ್‌ಪಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು” ಎಂದು ಕೋರಿತ್ತು.

ಇದನ್ನೂ ಓದಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

ಮಳಲಿಪೇಟೆಯ ಪ್ರಾಚೀನ ಮಸೀದಿ ನವೀಕರಣ ಕಾಮಗಾರಿಯ ವೇಳೆ ಅದರ ಸಾಂಪ್ರದಾಯಿಕ ಕೆತ್ತನೆ ಹಾಗೂ ರಚನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದನ್ನು ವಿವಾದ ಮಾಡಿದ್ದ ವಿಎಚ್‌ಪಿ ಮಸೀದಿಯ ರಚನೆಯು ದೇವಾಲಯದ ಮಾದರಿಯಲ್ಲಿದೆ ಎಂದು ವಾದಿಸಿ ದಾವೆ ಹೂಡಿತ್ತು. ಧನಂಜಯ್ ಮತ್ತು ಮನೋಜ್ ಕುಮಾರ್ ಎಂಬುವವರು ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಈ ದಾವೆ ಹೂಡಿದ್ದರು. ನಂತರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು.

ಈ ಮಧ್ಯೆ, ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅಡಿಯಲ್ಲಿ ದಾವೆಯು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್ ಒಬ್ಬರನ್ನು ನೇಮಕ ಮಾಡಿ ಪರಿಶೀಲನೆ ನಡೆಸುವಂತೆ ಕೋರಿದ್ದರು.

ಆದರೆ, ಸಿವಿಲ್ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸಲು ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಇದನ್ನೂ ಓದಿ:  ಮಸೀದಿ ವಾಸ್ತು ಶೈಲಿಗಳೂ, ಪೊಳ್ಳು ವಾದಗಳೂ!

ಏನಿದು ವಿವಾದ?

ಸ್ಥಳೀಯರ ಪ್ರಕಾರ ಮಳಲಿ ಮಸೀದಿ ಸುಮಾರು 900 ನೂರು ವರ್ಷಗಳಷ್ಟು ಹಳೆಯದು. ಊರು ಬೆಳೆದಂತೆ ಈ ಮಸೀದಿಯಲ್ಲಿ ಜನರಿಗೆ ಜಾಗ ಸಾಕಾಗದ ಕಾರಣಕ್ಕೆ ಅದರ ಹೊರ ಭಾಗದಲ್ಲಿ ಕೂಡಾ ಮಸೀದಿಯನ್ನು ವಿಸ್ತರಿಸಲಾಗಿತ್ತು. ಎಪ್ರಿಲ್‌‌ನಲ್ಲಿ ಪ್ರಾಚೀನ ಮಸೀದಿಯ ರಚನೆಯನ್ನು ಹಾಗೆ ಬಿಟ್ಟು, ನಂತರ ವಿಸ್ತರಿಸಿರುವ ಕಟ್ಟಡವನ್ನು ಕೆಡವಿ ನವೀಕರಣಕ್ಕೆ ಊರಿನ ಜನರು ಸಿದ್ದತೆ ನಡೆಸಿದ್ದರು. ಈ ವೇಳೆ ಪ್ರಾಚೀನ ಮಸೀದಿಯ ಶೈಲಿಯ ಕಾರಣಕ್ಕೆ ಅದನ್ನು ವಿವಾದ ಮಾಡಲಾಗುತ್ತಿದೆ.

ಬಿಜೆಪಿ ಬೆಂಬಲಿತ ಬಜರಂಗದಳ ಮತ್ತು ವಿಎಚ್‌ಪಿ ಸುದ್ದಿ ಹರಡಿರುವಂತೆ ಅದು ಹೊಸದಾಗಿ ಪತ್ತೆಯಾದ ಕಟ್ಟಡ ಅಲ್ಲ. ಜೊತೆಗೆ ಅದು ದರ್ಗಾವನ್ನು ಕಡೆವಿದಾಗ ಧುತ್ತನೆ ಪ್ರತ್ಯಕ್ಷವಾದ ಕಟ್ಟಡವೂ ಅಲ್ಲ. “ನಾವು ಅಲ್ಲಿಯೆ ತಲತಲಾಂತರದಿಂದ ನಮಾಜ್‌ ಮಾಡುತ್ತಲೇ ಬಂದಿದ್ದೇವೆ” ಎಂದು ಸ್ಥಳೀಯ ನಾಗರೀಕ ಝಾಕಿರ್‌ ನಾನುಗೌರಿ.ಕಾಂಗೆ ಹೇಳಿದ್ದಾರೆ.

ಎಪ್ರಿಲ್‌ನಲ್ಲಿ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ್ದ ಮಳಲಿ ಪೇಟೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಮೊಹಮ್ಮದ್‌ ಮಾಮು, “ಇದು ಸುಮಾರು 900 ವರ್ಷಗಳಷ್ಟು ಹಳೆಯ ಮಸೀದಿಯಾಗಿದೆ. ಇದೇನೂ ಹೊಸದಾಗಿ ಏನೂ ಪತ್ತೆಯಾಗಿದ್ದಲ್ಲ, ನಾವು ತಲೆಮಾರುಗಳಿಂದಲೂ ಪ್ರಾರ್ಥನೆ ಮಾಡುತ್ತಲೆ ಬಂದಿರುವ ಮಸೀದಿಯಾಗಿದೆ. ಹೊರಗಿನ ಕಟ್ಟಡಗಳನ್ನು ಕೆಡವಿದಾಗ ಅದರ ಆಕರ್ಷಕ ಶೈಲಿಯ ರಚನೆಗಳು ಹೊರಗೆ ಗೋಚರಿಸಿದೆ. ಈ ರೀತಿಯ ಮಸೀದಿಯನ್ನು ಕಂಡಿರದ ಹಾಗೂ ಈಗಾಗಲೆ ಬಿಜೆಪಿ ಹರಡಿರುವ ಸುಳ್ಳುಗಳಿಂದ ಪ್ರೇರೇಪಿತರಾಗಿರುವವರು ಮಸೀದಿಯನ್ನು ದೇವಸ್ಥಾನ ಎಂದು ಯಾವುದೆ ಆಧಾರ ಇಲ್ಲದೆ ಪ್ರತಿಪಾದಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:  ‘ಮಸ್ಜಿದ್‌‌ ಝೀನತ್‌ ಭಕ್ಷ್‌’: ಕರ್ನಾಟಕದ ಅತ್ಯಂತ ಪುರಾತನ ಮಸೀದಿಯನ್ನು ದೇವಸ್ಥಾನ ಎಂದು ಪ್ರತಿಪಾದಿಸಿ ವಿಡಿಯೊ ವೈರಲ್‌‌ ಮಾಡಿರುವ ದುಷ್ಕರ್ಮಿಗಳು

“ಇದೇ ಮಾದರಿಯ ವಾಸ್ತುಶೈಲಿಯ ಪ್ರಾಚೀನ ಮಸೀದಿಗಳು ಕರಾವಳಿಯಲ್ಲಿ ಹಲವಾರು ಇದೆ. ಮಸೀದಿಯ ವಾಸ್ತು ಶೈಲಿ ಹಾಗೆ ಇದ್ದ ಕೂಡಲೇ ಅದು ದೇವಸ್ಥಾನಗಳು ಆಗುತ್ತದೆಯೆ?. ಈ ರೀತಿಯ ವಾಸ್ತುಶೈಲಿ ಮಸೀದಿಗೆ ಇರಬಾರದು ಎಂದರೆ ಯಾವ ನ್ಯಾಯ?” ಎಂದು ಅವರು ಪ್ರಶ್ನಿಸಿದ್ದರು.

ಮಳಲಿ ಮಸೀದಿಯ ವಾಸ್ತುಶೈಲಿಯನ್ನು ಅಭ್ಯಾಸ ಮಾಡಿದ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ, “ಮಳಲಿ ಮಸೀದಿಯು ದ್ರಾವಿಡ ಶೈಲಿಯ ಒಂದು ಪ್ರಬೇಧವಾದ ಕೇರಳ ವಾಸ್ತುವನ್ನು ಬಳಸಿಕೊಂಡಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾದ್ದರಿಂದ, ಇಳಿಜಾರಾದ ಮಾಡು ಬಹಳ ಅಗತ್ಯ.‌ ಮಾಡನ್ನು ಮುಳಿ ಹುಲ್ಲು ಅಥವಾ ಹಂಚು ಬಳಸಿ ಕಟ್ಟಲಾಗಿದೆ. ಒಳಗಿನ ಕಂಬವು ವಿಜಯನಗರ ಕಾಲದ್ದು.‌ ಹೀಗಾಗಿ ಇದು ಸುಮಾರು 15-16ನೇ ಶತಮಾನದ್ದೆಂದು ಹೇಳಬಹುದು. ಹಿಂದೂ ಮುಸ್ಲಿಂ ಮೈತ್ರಿಯನ್ನು ಸಾರುವ ಇಂಥ ಕಟ್ಟಡಗಳು ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಹೇರಳವಾಗಿ ಕಂಡು ಬರುತ್ತವೆ” ಎಂದು ಹೇಳಿದ್ದಾರೆ.

“ವಿಜಯನಗರ ಮತ್ತು ವಿಜಯನಗರೋತ್ತರ ಕಾಲದಲ್ಲಿ ಇಂಡೋ ಸಾರ್ಸೆನಿಕ್ (ಇಂಡೋ-ಇಸ್ಲಾಮಿಕ್) ಶೈಲಿಯ ಅನೇಕ ಧಾರ್ಮಿಕ ಕಟ್ಟಡಗಳು ಬೆಳೆದಿವೆ. ಇವು ಎರಡೂ ಸಂಸ್ಕೃತಿಗಳ ಅತ್ಯುತ್ತಮ ಅಂಶಗಳನ್ನು ಒಟ್ಟಿಗೆ ತರುವ ಪ್ರಯತ್ನ.‌ ಹಂಪಿಯ ಕಮಲ ಮಹಲ್ ಇದಕ್ಕೆ ಒಳ್ಳೆಯ ಉದಾಹರಣೆ” ಎಂದು ಡಾ. ಬಿಳಿಮಲೆ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ತುಳುನಾಡಿನ ಮಸೀದಿಗಳು ದ್ರಾವಿಡಶೈಲಿಯಲ್ಲಿ ಯಾಕಿದೆ? ತುಳುನಾಡಿನ ಇತಿಹಾಸವೇನು? ಮಾಧ್ಯಮಗಳ ಸುಳ್ಳುಗಳೇನು?

ಮಸೀದಿಯ ಒಳಭಾಗದ ದೃಶ್ಯವನ್ನು ಕೆಳಗಿನ ವಿಡಿಯೊದಲ್ಲಿ ನೋಡಿ

ಕರ್ನಾಟಕದ ಕರಾವಳಿಯಲ್ಲಿ ಹಾಗೂ ನೆರೆಯ ಕೇರಳದಲ್ಲೂ ಇದೇ ರೀತಿಯ ಹಲವಾರು ಮಸೀದಿಗಳು ಇವೆ. ಉದಾಹರಣೆಗೆ ಕಾಸರಗೋಡಿನ ಮಾಲಿಕು ದಿನಾರ್‌‌ ಮಸೀದಿಯನ್ನು ಓದುಗರು ಗಮನಿಸಬಹುದು.

ಕರಾವಳಿಯ ಪ್ರಾಚೀನ ಮಸೀದಿಯ ಬಗ್ಗೆ ಹಲವಾರು ಡಾಕ್ಯುಮಂಟ್‌ ಮಾಡುತ್ತಿರುವ ಲೇಖಕ, ಇಸ್ಮತ್‌ ಪಜೀರ್‌, “ಮಸೀದಿಗೆ ಸುಮಾರು 900 ವರ್ಷಗಳ ಇತಿಹಾಸವಿದೆ. 900 ವರ್ಷಗಳ ಹಿಂದೆಯೆ ಪ್ರಸ್ತುತ ಕಾಣುತ್ತಿರುವಂತೆ ವೈಭವಯುತವಾಗಿ ಕಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಕಾಲಕ್ಕೆ ಅದನ್ನು ನವೀಕರಣ ಮಾಡುತ್ತಲೇ ಬಂದಿದ್ದಾರೆ. ಈ ರೀತಿಯ ಹಲವಾರು ಮಸೀದಿಗಳು ಕರಾವಳಿಯಲ್ಲಿ ಇವೆ. ಉದಾಹರಣೆಗೆ ಹಳೆ ಬಂದರ್‌ನಲ್ಲಿ ಇರುವ 1400 ವರ್ಷಗಳ ಹಿಂದಿನ ಝೀನತ್‌ ಬಖ್ಷ್‌ ಮಸೀದಿ. ದ್ರಾವಿಡ ವಾಸ್ತುಶೈಲಿ ಇದ್ದಕೂಡಲೇ ಅದು ದೇವಸ್ಥಾನ ಆಗುವುದಿಲ್ಲ. ಇಲ್ಲಿನ ಮುಸ್ಲಿಮರು ಕೂಡಾ ಸ್ಥಳೀಯ ದ್ರಾವಿಡ ಸಂಸ್ಕೃತಿಯವರೇ ಆಗಿರುವುದರಿಂದ ಅವರು ಕಟ್ಟಿದ ಮಸೀದಿ ಸ್ಥಳೀಯ ಶೈಲಿಯಲ್ಲೇ ಇರುತ್ತದೆ. ಅದರಲ್ಲಿ ವಿಶೇಷ ಏನೂ ಇಲ್ಲ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ಹುಡುಗಿಯರೆ ಸೇರಿ ನಡೆಸುವ ‘ಮುಹಮ್ಮದ್‌ ಅಂಕಲ್‌’ ನೇತೃತ್ವದ ಬೆಂಕಿಕೆರೆ ಗಣೇಶೋತ್ಸವ!

ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಳ, ಉಳ್ಳಾಲ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಮೂವತ್ತು ಪುರಾತನ ಮಸೀದಿಗಳಿವೆ ಎಂದು ಇಸ್ಮತ್‌ ಪಜೀರ್‌ ಹೇಳುತ್ತಾರೆ. ಅದರಲ್ಲೂ ಜಿಲ್ಲೆಯ ವಲವೂರು, ಅಕ್ಕರಂಗಡಿ, ಅಜಿಲಮೊಗರು, ವಿಟ್ಲ ಪರ್ತಿಪ್ಪಾಡಿ, ಅಮ್ಮುಂಜೆ ಸೇರಿದಂತೆ ಆರರಿಂದ ಏಳು ಮಸೀದಿಗಳು ಮಳಲಿ ಪೇಟೆಯಲ್ಲಿರುವ ಮಸೀದಿಯ ವಾಸ್ತು ಶೈಲಿಯಲ್ಲೇ ಕಟ್ಟಲ್ಪಟ್ಟಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸತ್ಯ ಆದಷ್ಟು ಬೇಗ ಹೊರಬರಲಿದೆ..’; ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ

0
ದೇಶದಾದ್ಯಂತ ಭಾರೀ ಸುದ್ದಿಯಾಗಿರುವ, ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಲೈಂಗಿಕ ಹಗರಣದ ಪ್ರಮುಖ ಆರೋಪಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯೆ...