Homeಕರ್ನಾಟಕಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

ಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

- Advertisement -
- Advertisement -

ಉಡುಪಿಯ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದರು. ಅದರಲ್ಲಿ ಏನೂ ಆಶ್ಚರ್ಯವಿಲ್ಲ. ಏಕೆಂದರೆ ಅವರು ಬಿಜೆಪಿ ಸೇರುತ್ತಾರೆಂಬ ಮಾತು ಈಗಿನದ್ದಲ್ಲ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ ಅವರು, ಬಿಜೆಪಿಗೆ ಸೇರಿ 2018ರ ಚುನಾವಣೆಯಲ್ಲಿ ಆ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾತಿತ್ತು. ಆ ವಿಚಾರ ಚರ್ಚೆಗೆ ಬಂದಾಗ ಪ್ರಮೋದ್ ಅಷ್ಟು ಗಟ್ಟಿಯಾಗಿ ಎಂದೂ ನಿರಾಕರಿಸಿರಲಿಲ್ಲ. ಅಂತಿಮವಾಗಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಸೋತರು. 2019ರಲ್ಲಿ ಲೋಕಸಭಾ ಚುನಾವಣೆ ಬಂದಾಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಕಾಂಗ್ರೆಸ್‌ನ ಪ್ರಮೋದ್ ಜೆಡಿಎಸ್‌ಗೆ ಹೋಗಿ, ಟಿಕೆಟ್ ಪಡೆದುಕೊಂಡು ಸ್ಪರ್ಧಿಸಿದರು; ಸೋತರು. ಆಗಲೂ ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದಿದ್ದರು. ಕಾಂಗ್ರೆಸ್‌ನಲ್ಲೇ ’ಇದ್ದರು’. ಆ ನಂತರವೂ ’ಮುಂದಿನ ಚುನಾವಣೆಗೆ ಮುಂಚೆ ಬಿಜೆಪಿಗೆ ಹೋಗುತ್ತಾರೆ; ಈ ಸಾರಿ ಕಾಪುವಿನಿಂದ ಸ್ಪರ್ಧೆಯಂತೆ; ಲೋಕಸಭೆಗೆ ಅವರೇ ಸ್ಪರ್ಧಿಯಂತೆ ಇತ್ಯಾದಿ’ ಮಾತುಗಳು ಕೇಳಿಬರುತ್ತಲೇ ಇದ್ದವು. ಅಷ್ಟರಮಟ್ಟಿಗೆ ಅವರ ಕಾಂಗ್ರೆಸ್ ನಿಷ್ಠೆ ಎಂದೂ ಸಂಶಯಾತೀತ ಆಗಿರಲಿಲ್ಲ. ಇದೇ ಪ್ರಮೋದ್ 2018ರ ಚುನಾವಣೆಯಲ್ಲಿ ಉಡುಪಿಯಲ್ಲಿ ಪ್ರಚಾರಕ್ಕೆ ತನ್ನ ಜೊತೆ ಬರಬೇಡಿರಿ ಎಂದು ಮುಸ್ಲಿಮರಿಗೆ
ಹೇಳಿದ್ದರೆನ್ನಲಾದ ಮಾತು ಸುದ್ದಿಯಾಗಿತ್ತು.

ಕಾಂಗ್ರೆಸ್ ಸಂಘಟನೆಗೆ ಅಥವಾ ಸಿದ್ಧಾಂತಕ್ಕೆ ಅವರು ನಿಷ್ಠರಾಗಿದ್ದರೆನ್ನಲು ಯಾವ ಆಧಾರಗಳೂ ಇರಲಿಲ್ಲ.
ಕಾಂಗ್ರೆಸ್‌ಗೆ ಅಂತಹ ಸಿದ್ಧಾಂತ ಇದೆಯಾ ಎಂದು ಯಾರಾದರೂ ಕೇಳಬಹುದು. ಏಕೆಂದರೆ ಮೇಲೆ ಹೇಳಿದ ಅಷ್ಟೆಲ್ಲಾ ನಡೆದರೂ ಪ್ರಮೋದ್ ಮಧ್ವರಾಜ್‌ರು ತಾವಾಗಿಯೇ ಹೋಗುವತನಕ ಕಾಂಗ್ರೆಸ್ ಪಕ್ಷವು ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಶಿಸ್ತು ಕ್ರಮ ಹೋಗಲಿ, ಅವರಿಗೆ ಪರ್ಯಾಯವಾಗಿ ಕ್ಷೇತ್ರದಲ್ಲಿ ಇನ್ನೊಬ್ಬ ಅಭ್ಯರ್ಥಿಯನ್ನು ಮುಂದೆ ತರುವುದನ್ನೂ ಮಾಡಲಿಲ್ಲ. ಮೊದಲಿಗೆ ಕ್ಷೇತ್ರಕ್ಕೊಬ್ಬರು ಗೆಲ್ಲುವ ಅಭ್ಯರ್ಥಿಯನ್ನು ಹುಟ್ಟಿ ಹಾಕುವ ಯೋಜನೆಯೂ ಕಾಂಗ್ರೆಸ್‌ಗೆ ಇರುವುದಿಲ್ಲ; ಎರಡನೆಯದಾಗಿ, ಆ ಕ್ಷೇತ್ರದಲ್ಲಿರುವ ಹಾಲಿ ನಾಯಕ ಎಷ್ಟೇ ಪಕ್ಷ ವಿರೋಧಿಯಾಗಿದ್ದರೂ ಅಲ್ಲಿ ಬದಲಿ ಪ್ರಯತ್ನಕ್ಕೆ ಆಸ್ಪದ ಕೊಟ್ಟರೆ ಈತ ಕೋಪಿಸಿಕೊಂಡು ಪಕ್ಷ ಬಿಟ್ಟುಬಿಡಬಹುದು ಎಂಬ ಆತಂಕವನ್ನೂ ನಿವಾರಿಸಿಕೊಳ್ಳುವುದಿಲ್ಲ.

ಇದು ಕಾಂಗ್ರೆಸ್ ಪಕ್ಷಕ್ಕೆ ಅಂಟಿರುವ ರೋಗದ ಒಂದು ಲಕ್ಷಣ ಅಷ್ಟೇ. ಇಲ್ಲದಿದ್ದರೆ ಸಾಲುಸಾಲಾಗಿ ಆ ಪಕ್ಷದಿಂದ ಹತ್ತಾರು ಶಾಸಕರು (ಅವರಲ್ಲಿ ಹಾಲಿ ಸಚಿವರಾಗಿದ್ದ ಎಂ.ಟಿ.ಬಿ.ನಾಗರಾಜ್ ಸಹಾ ಇದ್ದರು) ಬಿಜೆಪಿಗೆ ಹೋಗುತ್ತಿರಲಿಲ್ಲ. ಇನ್ನೂ ತಮಾಷೆಯೆಂದರೆ ರಾಜೀನಾಮೆ ಕೊಡಲು ರಾಜಭವನಕ್ಕೆ ಹೋಗಿದ್ದವರಲ್ಲಿ ಒಬ್ಬರಾದ ರಾಮಲಿಂಗಾರೆಡ್ಡಿಯವರು ಈಗ ಕಾಂಗ್ರೆಸ್‌ನ ರಾಜ್ಯ ಕಾರ್ಯಾಧ್ಯಕ್ಷರಲ್ಲಿ ಒಬ್ಬರು!

ಎಲ್ಲಾ ಸೆಕ್ಯುಲರ್ ಮತಗಳೂ ಕಾಂಗ್ರೆಸ್‌ಗೆ ಹೋಗಬೇಕು; ತಪ್ಪಬಾರದು ಎಂದು ಹಲವರು (ಕಾಂಗ್ರೆಸ್‌ನಲ್ಲಿ ಎಂದೂ ಇರದವರೂ ಸೇರಿ) ಬಲವಾಗಿ ಪ್ರತಿಪಾದಿಸುತ್ತಾರೆ. ಅವರ ಮಟ್ಟಿಗೆ ಅದು ಜೀವನ್ಮರಣದ ಪ್ರಶ್ನೆ. ಆದರೆ ಈ ಕಾಂಗ್ರೆಸ್‌ಗೆ ಹಾಕಿದ ’ಸೆಕ್ಯುಲರ್ ಮತ’ವು (ಅಂಥದ್ದೊಂದು ಇದೆಯಾ ಎಂಬ ಅನುಮಾನವಿದೆ) ’ಸೆಕ್ಯುಲರ್’ ಶಾಸಕನನ್ನೇ ಆಯ್ಕೆ ಮಾಡುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಹೀಗೇಕೆ? ಹೀಗಿದ್ದೂ ಕಾಂಗ್ರೆಸ್ ಪಕ್ಷವು ತನ್ನ ಸಿದ್ಧಾಂತವೆಂದು ಹೇಳಿಕೊಳ್ಳುವ ವಿಚಾರಗಳಿಗೆ ಬದ್ಧವಾಗಿರುವವರನ್ನು ಏಕೆ ಗುರುತಿಸಿ ಬೆಳೆಸುವುದಿಲ್ಲ? ಏಕೆಂದರೆ ಆ ಸಿದ್ಧಾಂತದ ಕುರಿತು ನಾಯಕತ್ವ ವಹಿಸಿರುವ ಹೆಚ್ಚಿನವರಿಗೆ ಸಂಪೂರ್ಣ ವಿಶ್ವಾಸವಿಲ್ಲ. ಒಂದು ವೇಳೆ ಇದ್ದರೂ, ಇದು ಈ ಹೊತ್ತಿನಲ್ಲಿ ಬಲ ಹೊಂದಿಲ್ಲ ಎಂಬ ಭಯ ಅವರಿಗಿದೆ. ಅಷ್ಟೇ ಅಲ್ಲದೇ, ಕೋಮುವಾದಿ ಧ್ರುವೀಕರಣಕ್ಕೆ ಕೊಡಬೇಕಾದ ಪ್ರತಿಮದ್ದು ಯಾವುದು ಎಂಬುದರ ಕುರಿತು ಅವರಿಗೆ ಗೊತ್ತೇ ಇದ್ದಂತಿಲ್ಲ. ಹಾಗಿದ್ದರೂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ರಂತಹವರು ತಮ್ಮ ಕರ್ತವ್ಯವೆಂದು ಭಾವಿಸಿ, ಮುಂದೊಂದು ದಿನ ’ಜನರೇ ಅರ್ಥ ಮಾಡಿಕೊಳ್ಳಬಹುದು’ ಎಂಬ ನಿರೀಕ್ಷೆಯಲ್ಲಿ ಗಟ್ಟಿದನಿಯಲ್ಲಿ ಮತೀಯ ರಾಜಕಾರಣದ ವಿರುದ್ಧ ಮಾತಾಡುತ್ತಿದ್ದಾರೆಂಬುದು ನಿಜ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಅದನ್ನು – ಅಂದರೆ ಸೆಕ್ಯುಲರ್ ರಾಜಕಾರಣವನ್ನು – ಗೆಲ್ಲಿಸಲು ರಾಜ್ಯದ ಎಲ್ಲೆಡೆಯೂ ಸಲ್ಲಬಹುದಾದ ವೈಚಾರಿಕ, ಸಂಘಟನಾತ್ಮಕ ಹಾಗೂ ರಾಜಕೀಯ ಪ್ರತಿರೋಧವನ್ನು ಕಟ್ಟುವ ಪ್ರಯತ್ನ ಇಲ್ಲ. ಯಾವ ಪಕ್ಷವು ತಾನು ಸೋತ 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರಿಗಿಂತ ಹೆಚ್ಚು – ಶೇ.35ಕ್ಕಿಂತ ಹೆಚ್ಚು – ಮತಗಳನ್ನು ಪಡೆದುಕೊಂಡಿತ್ತೋ, ಆ ಪಕ್ಷದ ಸ್ಥಿತಿ ಇದು. ಅಂದರೆ ಈ ರಾಜ್ಯದ ಜನರು ಕಾಂಗ್ರೆಸ್‌ಅನ್ನು ಪೂರ್ಣವಾಗಿ ತಿರಸ್ಕರಿಸಿಲ್ಲ. ಯಾವ ದಕ್ಷಿಣ ಕನ್ನಡದಲ್ಲಿ ಅತ್ಯಂತ ಹೆಚ್ಚು ಮತೀಯ ಧ್ರುವೀಕರಣ ಇದೆಯೆಂದು ಹೇಳಲಾಗುತ್ತಿದೆಯೋ, ಅಲ್ಲೇ 2013ರಲ್ಲಿ ಒಂದು ಕ್ಷೇತ್ರ ಬಿಟ್ಟರೆ (ಅದೂ ಕಡಿಮೆ ಅಂತರದಲ್ಲಿ ಸೋತಿದ್ದು) ಮಿಕ್ಕೆಲ್ಲಾ ಕಡೆ ಗೆದ್ದಿದ್ದ ಪಕ್ಷವಿದು. ಅದು ಹೇಗೆ ಸಾಧ್ಯವಾಯಿತು? ಕರ್ನಾಟಕದ ಇತರ ಭಾಗಗಳಲ್ಲಾದರೂ ಕೆಜೆಪಿ ಅಥವಾ ಬಿಎಸ್‌ಆರ್ ಪಕ್ಷಗಳು ಬಿಜೆಪಿಯ ಮತಗಳನ್ನು ಒಡೆದವು ಎಂದು ಹೇಳಬಹುದು. ಕರಾವಳಿಯಲ್ಲಿ ಅದೂ ಆಗಿರಲಿಲ್ಲ.

ತಾನು ತನ್ನದೆಂದು ಹೇಳಿಕೊಳ್ಳುವ ಸೆಕ್ಯುಲರ್ ರಾಜಕಾರಣದ ಕುರಿತು (ಒಂದಷ್ಟು ಜನರಿಗೆ ನಿಷ್ಠೆಯಿದೆ ಎನ್ನುವುದು ಹೌದಾದರೂ) ತನಗೇ ಖಚಿತ ಭರವಸೆಯಿರದ ಪಕ್ಷವು ಕನಿಷ್ಠ ಅಂಕಿ-ಅಂಶ ಅಥವಾ ಹಿಂದಿನ ಉದಾಹರಣೆಗಳನ್ನೂ ಗಮನಿಸಿಯಾದರೂ ಧೈರ್ಯ ತಂದುಕೊಳ್ಳುವುದಿಲ್ಲ. ಅದನ್ನು ಹೊರತುಪಡಿಸಿ ಪಕ್ಷದ ಗೆಲುವಿನಲ್ಲೇ ತಮ್ಮ ಗೆಲುವೂ ಇದೆ ಎಂಬ ಸ್ವಾರ್ಥದಿಂದಲಾದರೂ ಏನಾದರೂ ಮಾಡಬೇಕಲ್ಲವೇ? ಏಕೆಂದರೆ ಈ ಸದ್ಯ ಯಾರು ಮುಂದಿನ ಸಿಎಂ ಅಭ್ಯರ್ಥಿ ಎಂಬ ಘೋಷಣೆ (ಅಥವಾ ಕನಿಷ್ಠ ಕಾಂಗ್ರೆಸ್ ಹೈಕಮಾಂಡ್‌ನಿಂದ ಕಿವಿಯಲ್ಲಿ ಉಸುರುವಿಕೆ) ಆಗುತ್ತದೆ ಎಂಬುದರ ಮೇಲೆಯೇ ಕೆಲಸ ಮಾಡಬೇಕೇ ಇಲ್ಲವೇ ಎಂಬುದನ್ನು ತೀರ್ಮಾನಿಸುತ್ತೇವೆ ಅಥವಾ ತೀರ್ಮಾನವಾಗುತ್ತದೆ ಎಂದು ಕಾಂಗ್ರೆಸ್‌ನ ಶೇ.75 ಭಾಗದಷ್ಟು ನಾಯಕರು ಭಾವಿಸಿಕೊಂಡಿದ್ದಾರೆ. ಸರಿಯಾಗಿ ಇನ್ನೊಂದು ವರ್ಷಕ್ಕೆ ಕರ್ನಾಟಕ ವಿಧಾನಸಭೆಯ ಚುನಾವಣೆಯಿದೆ. ಸುಮಾರು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಬಹಳ ಕಷ್ಟ ಮತ್ತು ಅಲ್ಲಿ ತಮಗೆ ಸೂಕ್ತ ಅಭ್ಯರ್ಥಿಯೇ ಇಲ್ಲ ಎಂದು ಕಾಂಗ್ರೆಸ್‌ನ ಬಹುತೇಕ ದೊಡ್ಡ ನಾಯಕರು ಖಾಸಗಿಯಾಗಿ ಹೇಳುತ್ತಾರೆ. ಗೆಲ್ಲುವ ಸಾಧ್ಯತೆಯಿರುವ 125 ಕ್ಷೇತ್ರಗಳಲ್ಲಿ ಗಂಭೀರ ಪ್ರಯತ್ನ ಪಡುವುದರ ಜೊತೆಗೆ, ಉಳಿದ ಕ್ಷೇತ್ರಗಳಲ್ಲಿ ಗಂಭೀರ ಪ್ರತಿರೋಧ ಒಡ್ಡಬೇಕು; ರಾಜ್ಯಮಟ್ಟದಲ್ಲಿ ಜನರಿಗೆ ಅಹುದಹುದೆನಿಸುವ ರೀತಿಯ ರಾಜಕೀಯ ಒಲವು ಬೆಳೆಸಬೇಕು. ಆಗ ಮಾತ್ರ ಅದು ಗೆಲ್ಲಲು ಸಾಧ್ಯ. ಆ ರಾಜಕೀಯ ಕಥನ ಕಟ್ಟಲು ಸೂಕ್ತವಾದ ತರ್ಕ ಹಾಗೂ ರಾಜಕೀಯ ಮಥನದ ಅಗತ್ಯವಿದೆ.

ಇಂತಹ ಯಾವುದೂ ನಡೆಯದ ಪಕ್ಷದಲ್ಲಿ ಅವಕಾಶವಾದಿಗಳು, ಪಕ್ಷಾಂತರ ಪ್ರವೀಣರು, ಕಡುಭ್ರಷ್ಟರು, ಹೇಗೋ ಮಾಡಿ ಗೆಲ್ಲುವವರು, ಪಕ್ಷ ಮುಳುಗುತ್ತಿರುವ ಸಂದರ್ಭದಲ್ಲೂ ಕತ್ತು ಕೊಯ್ಯಬಲ್ಲವರು ಇಂಥವರೆಲ್ಲರೂ ಇರುತ್ತಾರೆ. ಕಡೆಯ ಘಳಿಗೆಯಲ್ಲಿ ಅಂಥವರಲ್ಲಿ ಯಾರಿಗೋ ಟಿಕೆಟ್ ಸಹಾ ಕೊಡುತ್ತಾರೆ. ಏಕೆಂದರೆ
ಅಂಥವರಿಗೇ ಗೆಲುವಿನ ಸಾಧ್ಯತೆ (Winnability) ಹೆಚ್ಚು ಎಂಬ ಅತಾರ್ಕಿಕ ನಂಬುಗೆ ರಾಜಕಾರಣದಲ್ಲಿದೆ. ಸಿದ್ಧಾಂತ ಹಾಳಾಗಲಿ, ಪಕ್ಷಕ್ಕಾಗಿ ದುಡಿಯುವವರಿಗೆ ಟಿಕೆಟ್ ಎಂಬ ನಿಯಮವೂ ಇಲ್ಲದಾದಾಗ ಬೇರೆ ಪಕ್ಷಗಳಿಂದ ಬರುವವರಿಗೂ ಸಲೀಸಾಗಿ ಟಿಕೆಟ್ ನೀಡಲಾಗುತ್ತದೆ. ಹೀಗಿದ್ದಾಗ ಪಕ್ಷ ಸಂಘಟನೆ ಬಲವಾಗುವುದಾಗಲೀ, ಕರ್ನಾಟಕದ ಜನರು ಇಂದೂ ತಿರಸ್ಕರಿಸದ ಸೆಕ್ಯುಲರ್ ರಾಜಕಾರಣವನ್ನು ಗಟ್ಟಿಗೊಳಿಸುವುದಾಗಲೀ ಹೇಗೆ ಸಾಧ್ಯ? ಇದು ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಲ್ಲ. ಜೆಡಿಎಸ್‌ನಲ್ಲಿ ಕುಟುಂಬದ ಪಾರುಪತ್ಯದ ಜೊತೆಗೆ ಇಂತಹುದೇ ರಾಜಕಾರಣ ನಡೆಯುತ್ತದೆ.

ಇನ್ನು ಅತ್ಯಂತ ಕಡುಭ್ರಷ್ಟರು ಇರುವ ಪಕ್ಷವಾದ ಬಿಜೆಪಿಯು ದುಷ್ಟ ಸಿದ್ಧಾಂತವೊಂದನ್ನು ಹೊಂದಿದ್ದು ಅದಕ್ಕೆ ನಿಷ್ಠವಾಗಿದೆ. ಅದೊಂದಕ್ಕೆ ಪರಮ ನೀಚರು, ಲಂಪಟರು, ಭ್ರಷ್ಟಾತಿಭ್ರಷ್ಟರು ಯಾರೇ ಬಂದರೂ ಅಲ್ಲಿ ಸ್ವಾಗತವಿರುತ್ತದೆ. ಯಾವ ಸಿದ್ಧಾಂತವೂ ಇಲ್ಲದ, ಹಣ ಮಾಡುವುದು ಮತ್ತು ರಾಜ್ಯವನ್ನು ಎಲ್ಲಾ ರೀತಿಯಲ್ಲೂ ಕಲುಷಿತಗೊಳಿಸುವುದರಲ್ಲಿ ಪರಿಣಿತಿ ಸಾಧಿಸಿರುವ ಯಾರೇ ಇದ್ದರೂ, ಮತೀಯ ರಾಜಕಾರಣದ ಅಜೆಂಡಾಕ್ಕೆ ವಿರೋಧ ವ್ಯಕ್ತಪಡಿಸದೇ ಇದ್ದರೆ ಸಾಕು; ಗೆಲ್ಲುವ ಸಾಧ್ಯತೆ ಇದ್ದರೆ ಕರೆದುಕೊಳ್ಳುತ್ತಾರೆ. ಹೀಗಾಗಿ ಪ್ರಮೋದ್ ಮಧ್ವರಾಜ್‌ರಂತಹವರ ಪಕ್ಷಾಂತರವು ಯಾವ ರೀತಿಯಲ್ಲೂ ಆಶ್ಚರ್ಯಕರವಲ್ಲ. ಪ್ರಶ್ನೆಯಿರುವುದು ಕರ್ನಾಟಕದ ಪ್ರಜ್ಞಾವಂತ ಮತದಾರರು ಈ ಪರಿಸ್ಥಿತಿಯನ್ನು ನಿಭಾಯಿಸಲು ಯಾವ ದಾರಿಯನ್ನು ಹುಡುಕಿಕೊಳ್ಳಬೇಕೆಂಬುದರಲ್ಲಿ.

ಅಂತಿಮವಾಗಿ ಷರಾ ಹೀಗೆ ಬರೆಯಬಹುದೇನೋ: ಈ ಪ್ರಜಾತಂತ್ರವು ಬಿಜೆಪಿಯ ಕಾರಣಕ್ಕೆ ಅಪಾಯದಲ್ಲಿದೆ; ಆದರೆ ಕಾಂಗ್ರೆಸ್ ಒಂದೇ ಅದನ್ನು ರಕ್ಷಿಸಲಾರದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕರಾಳ ದೇಶದ್ರೋಹ ಕಾನೂನು ಕೊನೆಗೊಳ್ಳಬಹುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...