Homeಮುಖಪುಟಕರಾಳ ದೇಶದ್ರೋಹ ಕಾನೂನು ಕೊನೆಗೊಳ್ಳಬಹುದೇ?

ಕರಾಳ ದೇಶದ್ರೋಹ ಕಾನೂನು ಕೊನೆಗೊಳ್ಳಬಹುದೇ?

- Advertisement -
- Advertisement -

ಸೆಡಿಷನ್ ಅಂದರೆ ದೇಶದ್ರೋಹ ಕಾನೂನಿನ ಸಂವಿಧಾನಾತ್ಮಕತೆಗೆ ಸಂಬಂಧಿಸಿದ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಕೊಳ್ಳಲಿದೆ. ಇದನ್ನು ಜಸ್ಟೀಸ್ ರಮಣ ಅವರ ನೇತೃತ್ವದ ಮೂವರು ನ್ಯಾಯಾಧೀಶರ ಬೆಂಚ್ ಪರಿಶೀಲಿಸಿ, ವಿಚಾರಣೆ ನಡೆಸಿ, ನಿರ್ಧರಿಸಲಿದೆ. ಚೀಫ್ ಜಸ್ಟೀಸ್ ರಮಣ ಅವರು ಇದರ ಬಗ್ಗೆ ಯಾವ ರೀತಿ ಯೋಚಿಸುತ್ತಾರೆ ಎಂಬುದರ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದೆ; ವಿಚಾರಣೆಯ ಸಮಯದಲ್ಲಿ ಅವರು ಅಟಾರ್ನಿ ಜನರಲ್‌ಗೆ, ಸ್ವಾತಂತ್ರ್ಯ ಬಂದು 75 ವರ್ಷಗಳಾದ ಮೇಲೂ ಈ ಕಾಯಿದೆ ಅವಶ್ಯಕತೆ ಇದೆಯೇ ಎಂದು ಕೇಳಿದರು. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ’ಈ ವಸಾಹತುಶಾಹಿ ಕಾನೂನು’ನ್ನು ಬ್ರಿಟಿಷರು ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬಳುಸುತ್ತಿದ್ದರು ಹಾಗೂ ಮಹಾತ್ಮ ಗಾಂಧಿ ಮತ್ತು ಬಾಲ ಗಂಗಾಧರ ತಿಲಕ ಅವರ ವಿರುದ್ಧ ಬಳಸಿದ್ದರು ಎಂದು ಹೇಳಿದರು.

ನ್ಯಾಯಾಂಗದ ಬಳಗದಲ್ಲಿಯೂ ಈ ಕಾನೂನನ್ನು ರದ್ದುಪಡಿಸುವ ಕಡೆಗೇ ಒಲವು ಬಲವಾಗಿರುವಂತೆ ಕಾಣಿಸುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಐವರು ನಿವೃತ್ತ ನ್ಯಾಯಾಧೀಶರುಗಳು (ಜಸ್ಟೀಸ್ ದೀಪಕ್ ಗುಪ್ತ, ಆಫ್ತಾಬ್ ಅಲಂ, ವಿ ಗೋಪಾಲಗೌಡ, ರೋಹಿಂಟನ್ ನಾರಿಮನ್ ಮತ್ತು ಮದನ್ ಲೋಕುರ್) ಈ ಕಾನೂನನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಪಡಿಸುವ ಅಗತ್ಯದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ.

ಜಸ್ಟೀಸ್ ರಮಣ

ದೇಶದ್ರೋಹ ಪ್ರಕರಣವನ್ನು ದಾಖಲಿಸುವುದಕ್ಕೆ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ, ಕೇದಾರನಾಥ ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸೂಚಿಸಿತ್ತು. ಆದರೆ ಕೆಳಹಂತದ ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ, ಈ ಎರಡೂ ಕಡೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದ ಮಾರ್ಗಸೂಚಿಗಳನ್ನು ಎತ್ತಿಹಿಡಿಯಲು ಸತತವಾಗಿ ವಿಫಲವಾಗಿರುವುದು ದೇಶದ್ರೋಹ ಕಾನೂನು ರದ್ದುಪಡಿಸುವ ವ್ಯಾಪಕ ಅಭಿಪ್ರಾಯಕ್ಕೆ ಕಾರಣವಾಗಿವೆ. ಪ್ರಭುತ್ವದ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ಭಾಷಣಕ್ಕೆ ಮಾತ್ರ ದೇಶದ್ರೋಹದ ಕಾನೂನನ್ನು ಸೀಮಿತವಾಗಿಸಬೇಕು ಎಂದು 1962ರಲ್ಲಿಯೇ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತ್ತು.

ಸರ್ವೋಚ್ಚ ನ್ಯಾಯಾಲಯ ಹೇಳಿದ್ದ ಮಾತುಗಳು ಹೀಗಿವೆ: ’ಪ್ರತಿಕ್ರಿಯೆಗಳು ಎಷ್ಟೇ ತೀವ್ರತರ ಮಾತುಗಳನ್ನು ಹೊಂದಿರಲಿ, ಸರಕಾರದ ಕ್ರಮಗಳ ವಿರುದ್ಧ ಅಸಮ್ಮತಿಯನ್ನು ವ್ಯಕ್ತಪಡಿಸುವ ಟೀಕೆಗಳಾಗಿರಲಿ, ಆದರೆ ಆ ಹಿಂಸೆಯ ಕ್ರಿಯೆಗಳ ಮೂಲಕ ಸಾರ್ವಜನಿಕ ಅವ್ಯವಸ್ಥೆಯನ್ನು ಸೃಷ್ಟಿಸುವುದಕ್ಕೆ ಕಾರಣವಾಗುವ ಭಾವನೆಗಳನ್ನು ಸೃಷ್ಟಿಸದೇ ಇದ್ದರೆ ಅದನ್ನು ಶಿಕ್ಷಾರ್ಹ ಎಂದು ಪರಿಗಣಿಸಬಾರದು’. ಹಾಗಾಗಿ, ’ಸಾರ್ವಜನಿಕ ಅವ್ಯವಸ್ಥೆಯನ್ನು ಸೃಷ್ಟಿಸುವ ಅಥವಾ ಹಿಂಸೆಯ ಬಳಕೆ’ ಇಲ್ಲವಾದರೆ ಈ ಕಾನೂನು ಅನ್ವಯಿಸುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

1995ರ ಬಲವಂತ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಇಂದಿರಾ ಗಾಂಧಿಯ ಹತ್ಯೆಯಾದ ದಿನದಂದು ’ಖಾಲಿಸ್ತಾನ್ ಜಿಂದಾಬಾದ್’ಅನ್ನು ಒಳಗೊಂಡ ಘೋಷಣೆಗಳನ್ನು ಕೂಗಿದ್ದು ದೇಶದ್ರೋಹವಾಗುವುದೇ ಎಂಬುದರ ಬಗ್ಗೆ ತೀರ್ಪು ನೀಡಿತ್ತು. ಆಗ ಸರ್ವೋಚ್ಚ ನ್ಯಾಯಾಲಯವು, “ಇತರ ಯಾವುದೇ ರೀತಿಯ ಕ್ರಿಯೆಗಳನ್ನು ಮಾಡದೇ ಒಂದೆರಡು ಸಲ ಇಂತಹ ಕ್ಯಾಷುವಲ್ ಘೋಷಣೆಗಳನ್ನು ಕೂಗಿರುವುದಕ್ಕೆ ದೇಶದ್ರೋಹದ ಕಾನೂನು ಅನ್ವಯಿಸುವುದು ನಮಗೆ ಕಷ್ಟವಾಗುತ್ತದೆ” ಎಂದು ಹೇಳಿತ್ತು.

ಕೇದಾರನಾಥ ಮತ್ತು ಬಲವಂತ ಸಿಂಗ್ ಪ್ರಕರಣಗಳ ತೀರ್ಪುಗಳನ್ನು ಸತತವಾಗಿ ಉಲ್ಲಂಘಿಸಲಾಗಿದೆ. ಭಿನ್ನಮತೀಯರು, ಪತ್ರಕರ್ತರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳು ಹಾಗೂ ಇಷ್ಟವಿಲ್ಲದ ಸರ್ಕಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಮಾನ್ಯ ನಾಗರಿಕರನ್ನೂ ಗುರಿಯಾಗಿಸಲು ಈ ಕಾನೂನನ್ನು ಬಳಸಲಾಗಿದೆ. ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳೆರಡೂ ದೇಶದ್ರೋಹದ ಪ್ರಕರಣಗಳನ್ನು ಹಾಕುವಾಗ ’ಹಿಂಸೆಗೆ ಪ್ರಚೋದನೆ’ ಇರಬೇಕು ಎಂಬ ಕಾನೂನಾತ್ಮಕ ಅಗತ್ಯತೆಯನ್ನು ನಿರಾಯಾಸವಾಗಿ ನಿರ್ಲಕ್ಷಿಸಿವೆ. ಕೇದಾರನಾಥ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಸೂಚಿಸಿದ ಕಾನೂನನ್ನು ಎಲ್ಲಾ ಸರಕಾರಗಳು ಸತತವಾಗಿ ನಿರ್ಲಕ್ಷಿಸಿವೆ.

ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಮೇಲೆ ದೇಶದ್ರೋಹ ಕಾನೂನಿನ ದುರ್ಬಳಕೆಯು ಹೆಚ್ಚಾಗಿದೆ. ’ಆರ್ಟಿಕಲ್ 14’ ಮಾಧ್ಯಮ ಸಂಸ್ಥೆಯ ಒಂದು ಅಧ್ಯಯನ ಸೂಚಿಸುವಂತೆ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಿಂದ ದೇಶದ್ರೋಹದ ಕಾನೂನಿನಡಿಯಲ್ಲಿ ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿದ ಸಂಖ್ಯೆಯಲ್ಲಿ 190% ಹೆಚ್ಚಳವಾಗಿದೆ. ಈ ಮಹಿಳೆಯರಲ್ಲಿ ಒಬ್ಬ ಕಲಾವಿದೆ, ಒಬ್ಬ ಸಿನೆಮಾ ನಿರ್ದೇಶಕಿ, ಒಬ್ಬ ಅಕಾಡೆಮಿಕ್, ಒಬ್ಬ ಹೋರಾಟಗಾರ್ತಿ, ಒಬ್ಬ ವಿದ್ಯಾರ್ಥಿನಿ, ಒಬ್ಬ ಗೃಹಿಣಿ ಮತ್ತು ಒಬ್ಬ ರಾಜಕಾರಣಿಯೂ ಸೇರಿದ್ದಾರೆ.

2010 ಮತ್ತು 2021ರ ನಡುವೆ ರಾಜಕಾರಣಿಗಳು ಮತ್ತು ಸರ್ಕಾರಗಳನ್ನು ಟೀಕಿಸಿದ್ದಕ್ಕಾಗಿ 405 ಜನ ಭಾರತೀಯರ ಮೇಲೆ ದೇಶದ್ರೋಹದ ಆರೋಪದ ಪ್ರಕರಣಕ್ಕೆ ದಾಖಲಿಸಲಾಗಿದೆ. ಅದರಲ್ಲಿ 96% ಪ್ರಕರಣಗಳನ್ನು 2014ರ ನಂತರ ದಾಖಲಿಸಿರುವುದು. ಅದರಲ್ಲಿ 149 ಜನರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಾಗೂ 144 ಜನರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ’ವಿಮರ್ಶಾತ್ಮಕ’ ಹಾಗೂ/ಅಥವಾ ’ಅವಹೇಳನಾತ್ಮಕ’ ಟಿಪ್ಪಣಿಗಳನ್ನು ಮಾಡಿದ್ದಕಾಗಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕ ಸ್ವಾತಂತ್ರ್ಯದ ದೃಷ್ಟಿಯಲ್ಲಿ ಈ ಕಾನೂನನ್ನು ಇಲ್ಲವಾಗಿಸಬೇಕು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಆದರೆ ದುರದೃಷ್ಟವಶಾತ್, ಭಾರತದ ಒಕ್ಕೂಟ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರ್ವೋಚ್ಚ ನ್ಯಾಯಾಲಯದಲ್ಲಿ ತಾಳಿರುವ ನಿಲುವಿನ ಪ್ರಕಾರ, ಕೇದಾರನಾಥ ತೀರ್ಪು ಸಮಯದ ಪರೀಕ್ಷೆಯಲ್ಲಿ ಈ ಕಾನೂನು ಉತ್ತೀರ್ಣವಾಗಿದೆ ಹಾಗೂ ಸೆಕ್ಷನ್ 124-ಎನ ಸಂವಿಧಾನಾತ್ಮಕತೆಯನ್ನು ಮರುಪರಿಶೀಲನೆ ಮಾಡುವ ಅಗತ್ಯ ಇಲ್ಲ ಎಂದು. ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತುಸು ಭಿನ್ನವಾದ ನಿಲುವನ್ನು ತಾಳಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124-ಎ ತೆಗೆದುಹಾಕುವ ಅಗತ್ಯ ಇಲ್ಲ ಆದರೆ ಈ ಕಾನೂನಿನ ದುರ್ಬಳಕೆಯನ್ನು ತಡೆಗಟ್ಟಲು ನ್ಯಾಯಾಲಯವು ಮಾರ್ಗಸೂಚಿಗಳನ್ನು ರಚಿಸಬಹುದು ಎಂದಿದ್ದಾರೆ.

ಭಾರತದ ಒಕ್ಕೂಟ ಸರಕಾರವು ಈ ಕಾನೂನನ್ನು ರದ್ದುಪಡಿಸಲು ವಿರೋಧಿಸುತ್ತಿರುವುದು ನ್ಯಾಯಾಲಯಕ್ಕೆ ಒಂದು ಸವಾಲಾಗಲಿದೆ. ಒಕ್ಕೂಟ ಸರಕಾರದ ಈ ಗಟ್ಟಿಯಾದ ಪ್ರತಿಪಾದನೆಯ ಹೊರತಾಗಿಯೂ ಸರ್ವೋಚ್ಚ ನ್ಯಾಯಾಲಯ ತನ್ನ ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ನಿರ್ವಹಿಸುವುದಕ್ಕೆ ಸಿದ್ಧವಾಗಿದೆಯೇ ಹಾಗೂ ಈ ಕಾನೂನು ಸಂವಿಧಾನಾತ್ಮಕವಾಗಿಲ್ಲ ಎಂಬ ತೀರ್ಮಾನಕ್ಕೆ ಬಂದರೆ ಅದನ್ನು ತೆಗೆದುಹಾಕಲು ಸನ್ನದ್ಧವಾಗಿದೆಯೇ ಎಂಬುದನ್ನು ತೋರಿಸಬೇಕಿದೆ. ಒಂದು ವೇಳೆ ಸರ್ವೋಚ್ಚ ನ್ಯಾಯಾಲಯ ನಿಜವಾಗಿಯೂ ಈ ಕಾನೂನನ್ನು ತೆಗೆದುಹಾಕಿದರೆ, ಭಾರತದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಒದಗಿರುವ ದೊಡ್ಡ ತೊಡಕನ್ನು ತೆಗೆದುಹಾಕಿದಂತಾಗುತ್ತದೆ.

ಒಂದು ವೇಳೆ ಚೀಫ್ ಜಸ್ಟೀಸ್ ರಮಣ ಅವರ ನೇತೃತ್ವದ ಬೆಂಚ್ ಈ ಕಾನೂನನ್ನು ತೆಗೆದುಹಾಕಿದರೆ, ಅದು ಚೀಫ್ ಜಸ್ಟೀಸ್ ರಮಣ ಅವರ ಅಧಿಕಾರಾವಧಿಯಲ್ಲಿ ಆದ ಅತ್ಯಂತ ಪ್ರಮುಖ ಸಾಧನೆಯಾಗಲಿದೆ. ರಮಣ ಅವರ ಅಧಿಕಾರವಧಿ 2022ರ ಆಗಸ್ಟ್‌ನಲ್ಲಿ ಮುಗಿಯಲಿದೆ. ಹಾಗೂ ಅಷ್ಟರಲ್ಲಿ ಇತರ ಪ್ರಮುಖ ವಿಷಯಗಳಾದ ಚುನಾವಣಾ ಬಾಂಡ್ಸ್, ಸೆಕ್ಷನ್ 370ರ ಸಂವಿಧಾನಾತ್ಮಕತೆ, ಸಿಎಎಗೆ ಹಾಕಿರುವ ಸವಾಲು ಮುಂತಾದವುಗಳ ಬಗ್ಗೆ ತೀರ್ಪು ಬರುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ವೇಳೆ ಸೆಕ್ಷನ್ 124-ಎ ಸಂವಿಧಾನಾತ್ಮಕವಲ್ಲ ಎಂದು ತೀರ್ಮಾನಿಸಿದರೆ, ಕಾರ್ಯಾಂಗದ ಅತಿಯಾದ ಒತ್ತಡವಿದ್ದಾಗಲೂ, ನ್ಯಾಯಾಲಯವು ಸಂವಿಧಾನಾತ್ಮಕ ಮೌಲ್ಯಗಳ ಪರವಾಗಿ ನಿಲ್ಲಲು ಅಣಿಯಾಗಿರುವ ಸಂಸ್ಥೆ ಎಂಬ ಅದರ ಬಗೆಗಿನ ಗೌರವವನ್ನು ಇನ್ನಷ್ಟು ಹೆಚ್ಚಿಸಲಿದೆ. ಇಂತ ಒಂದು ನಿರ್ಣಯವು ದೇಶಾದ್ಯಂತ ಮಾನವ ಹಕ್ಕು ಹೋರಾಟಗಾರರಿಗೆ ಹುರುಪು ನೀಡಿದಂತಾಗುತ್ತದೆ ಹಾಗೂ ಭಾರತೀಯ ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸಿದಂತಾಗುತ್ತದೆ.

ಇಂತಹ ಒಂದು ನಿರ್ಣಯವನ್ನು (ಒಂದು ವೇಳೆ ನಿರೀಕ್ಷೆಯಂತೆ ಬಂದರೆ) ಎಷ್ಟೇ ಸಂಭ್ರಮಿಸಿದರೂ, ನಾವು
ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದು ಏನೆಂದರೆ, ದೇಶದ್ರೋಹದ ಕಾನೂನು ಇಲ್ಲವಾದರೂ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ಈ ಸರಕಾರದ ಕೈಯಲ್ಲಿ ಹಲವಾರು ಸಾಧನಗಳಿವೆ. ಅದರಲ್ಲಿ ಎಲ್ಲಕ್ಕಿಂತ ಅಪಾಯಕಾರಿಯಾಗಿರುವುದು ಯುಎಪಿಎ (ಅನ್‌ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್- ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ). ಇದರ ಅಡಿಯಲ್ಲಿಯೇ ಪ್ರಕರಣ ದಾಖಲಿಸಿರುವ ಭೀಮಾ ಕೊರೆಗಾಂವ್-13, ಸಿಎಎ ವಿರೋಧಿ ಪ್ರತಿಭಟನಾಕಾರರ ಜೊತಗೆ ದೇಶಾದ್ಯಂತ ಸಾವಿರಾರು ಜನರು ಇನ್ನೂ ಜೈಲಿನಲ್ಲಿದ್ದಾರೆ. ದೇಶದ್ರೋಹದ ಕಾನೂನಿನ ಅಡಿಯಲ್ಲಿ ಬಂಧಿತರಾದವರು ಬಹಳ ಕಷ್ಟದ ನಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಬಹುದು ಆದರೆ ಯುಎಪಿಎ ಅಡಿಯಲ್ಲಿ ಬಂಧಿತರಿಗೆ ಇಂತಹ ಯಾವ ಸೌಲಭ್ಯವೂ ಇಲ್ಲ. ಹಾಗಾಗಿ, ಯುಎಪಿಎಯ ಸಂವಿಧಾನಾತ್ಮಕತೆಯನ್ನೂ ಸರ್ವೋಚ್ಚ ನ್ಯಾಯಾಲವ ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ನ ರಾಜ್ಯಾಧ್ಯಕ್ಷರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಇಂದಿನ ಮಾಬ್ ಹಿಂಸೆ ಮುಂದೆ ನರಮೇಧಕ್ಕೆ ಕಾರಣವಾದೀತು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...