Homeಮುಖಪುಟಮುಗ್ಧ ನಗುವೊಂದರೆ ಕಣ್ಮರೆ: ಪುನೀತ್ ರಾಜಕುಮಾರ್ ಸಾರ್ಥಕ ಬದುಕಿನ ಸ್ಮರಣೆ

ಮುಗ್ಧ ನಗುವೊಂದರೆ ಕಣ್ಮರೆ: ಪುನೀತ್ ರಾಜಕುಮಾರ್ ಸಾರ್ಥಕ ಬದುಕಿನ ಸ್ಮರಣೆ

ಪುನೀತ್ ಸಾವು ಹುಟ್ಟು ಹಾಕಿದ ತಲ್ಲಣಗಳಿಂದ ಒಂದು ನಾಡು ಹೇಗೆ ತನ್ನನ್ನು ಬಿಡುಗಡೆಗೊಳಿಸಿಕೊಳ್ಳಲು ಪ್ರಯತ್ನಿಸಿತು ಎಂಬುದರ ನುಡಿರೂಪವೇ ಈ ಪುಸ್ತಕ.

- Advertisement -
- Advertisement -

ಇಂದು ಪುನೀತ್ ರಾಜಕುಮಾರ್ ಅವರ ಜನ್ಮದಿನ. ಪುನೀತ್ ನಮ್ಮನ್ನಗಲಿ ಸರಿಸುಮಾರು ಐದು ತಿಂಗಳು ಕಳೆದವು. ಅವರ ಸ್ಮರಣೆಗಾಗಿ ಗೌರಿ ಮೀಡಿಯಾ ಟ್ರಸ್ಟ್ “ಮುಗ್ಧ ನಗುವೊಂದರೆ ಕಣ್ಮರೆ” ಎಂಬ ಪುಸ್ತಕವನ್ನು ಪ್ರಕಟಿಸಿದೆ. ಆ ಪುಸ್ತಕಕ್ಕೆ ಹಂಪಿ ವಿವಿ ಪ್ರಾಧ್ಯಾಪಕರಾದ ಪ್ರೊ.ಎ.ಎಸ್ ಪ್ರಭಾಕರ್‌ರವರು ಬರೆದ ಪ್ರಸ್ತಾವನೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಪುನೀತ್ ರಾಜಕುಮಾರ್: ಸಾರ್ಥಕ ಬದುಕೊಂದರ ಸ್ಮರಣೆ

ಇತ್ತೀಚೆಗೆ ನನ್ನನ್ನು ಆಳವಾಗಿ ಕಲಕಿದ ಎರಡು ಸಾವುಗಳೆಂದರೆ ನನ್ನ ತಮ್ಮ ಸುರೇಶನದು, ಇನ್ನೊಂದು ಪುನಿತ್ ರಾಜಕುಮಾರ್ ಅವರದು. ಸುರೇಶ ನನ್ನ ತಮ್ಮ. ಸಹಜವಾಗಿಯೇ ಅವನ ಸಾವು ನನಗೆ ಅತೀವ ದುಃಖವನ್ನು ನೀಡಿತು. ಅವನು ನನಗಿಂತ ತುಂಬಾ ಚಿಕ್ಕವನು. ನಾನು ಅವನನ್ನು ಎತ್ತಿಕೊಂಡು, ಆಡಿಸಿ ಬೆಳಸಿದ್ದೆ. ನನ್ನ ಕಣ್ಣಮುಂದೆ ಆಡಿಕೊಂಡು ಬೆಳೆದ ಅವನು ಇಲ್ಲವಾದಾಗ ನನಗೆ ಆದ ನೋವು ಮತ್ತು ದುಃಖವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ನನ್ನ ತಮ್ಮನ ಜೊತೆಗಿನ ರಕ್ತ ಸಂಬಂಧದ ಕಾರಣಕ್ಕಾಗಿ ನನ್ನನ್ನೂ ಒಳಗೊಂಡಂತೆ, ನನ್ನ ಕುಟುಂಬ, ನನ್ನ ಬಂಧುಗಳು ಮತ್ತು ಹಿತೈಷಿಗಳು ತೀವ್ರವಾಗಿ ನೊಂದುಕೊಂಡರು. ಇದು ಒಂದು ಖಾಸಗಿ ದುಃಖ. ಆದರೆ ಕರ್ನಾಟಕದ ಜನ ತೀವ್ರ ಹತಾಶೆಯಿಂದ ಒದ್ದಾಡಿದ್ದು, ದುಃಖಿತರಾಗಿದ್ದು ೨೦೨೧ರ ಅಕ್ಟೋಬರ್ ೨೯ರ ಮಧ್ಯಾಹ್ನ. ಅಂದು ಪುನೀತ್ ರಾಜಕುಮಾರ್ ಅನಿರೀಕ್ಷಿತವಾಗಿ ನಮ್ಮನ್ನಗಲಿದ್ದರು. ಅಂದು ಇಡೀ ನಾಡಿನ ಜನ ತಮ್ಮ ಮನೆಯ ಮಗನನ್ನು ಕಳೆದುಕೊಂಡಿದ್ದರು. ಪುನೀತ್ ಇಲ್ಲವಾದ ದಿನ ಜನ ಅನುಭವಿಸಿದ ದುಃಖ ಕೇವಲ ಸಾರ್ವಜನಿಕವಾಗಿರಲಿಲ್ಲ, ಖಾಸಗಿಯದ್ದೂ ಆಗಿತ್ತು. ಪುನೀತ್ ಸಾವಿನ ನಂತರದ ದುಃಖ ಮತ್ತು ವಿಷಾದಗಳು ನೋಡುನೋಡುತ್ತಲೇ ರಾಜ್ಯ ಮತ್ತು ಭಾಷೆಗಳ ಗಡಿಗಳನ್ನು ಮೀರಿ ವ್ಯಾಪಿಸಿಬಿಟ್ಟವು. ಪುನೀತ್ ಅವರನ್ನು ಎಂದೂ ಬೇಟಿ ಮಾಡದ, ಒಡನಾಟವಿಲ್ಲದ ಕೋಟ್ಯಾಂತರ ಜನ ಅಂದು ವಿಲವಿಲ ಒದ್ದಾಡಿ ಹೋದರು. ನಗರ, ಪಟ್ಟಣ, ಹಳ್ಳಿ ಮತ್ತು ಆದಿವಾಸಿಗಳ ಹಾಡಿಗಳಲ್ಲೂ ಪುನೀತ್ ಸಾವು ಅರಗಿಸಿಕೊಳ್ಳದ ವಿಷಾದವನ್ನು ಹರಡಿಬಿಟ್ಟಿತ್ತು. ಕೇವಲ ಸಿನೇಮಾ ಕಲಾವಿದನೊಬ್ಬನ ಅಗಲುವಿಕೆ ಈ ಮಟ್ಟದ ಶೋಕಕ್ಕೆ ಕಾರಣವಾದ ಉದಾಹರಣೆಗಳು ಇರಲಿಲ್ಲ. ಪುನೀತ್ ಹೀಗೆ ಕನ್ನಡ ಸಮಾಜದ ಮನೆ ಮಗನಾಗಿ ಯಾವಾಗ ರೂಪುಗೊಂಡರು? ಝಗಮಗಿಸುವ ಸಿನೇಮಾ ರಂಗದ ಥಳುಕಿನ ಲೋಕದ ತಾರೆಯೊಂದು ಅಸ್ತಂಗತವಾಗಿದ್ದಲ್ಲಿ ಜನ ಹೀಗೆ ಮರುಗುತ್ತಿದ್ದರೇ? ಗೊತ್ತಿಲ್ಲ. ಆದರೆ, ಸಾರ್ವಜನಿಕ ಬದುಕಿನೊಂದಿಗೆ ಯಾವ ಸಂಬಂಧಗಳನ್ನೂ ಇಟ್ಟುಕೊಳ್ಳದ ಸಿನಿಮಾ ನಟರ ಅಗಲುವಿಕೆ ಈ ಪರಿಯ ನೋವುನ್ನು ಉಂಟು ಮಾಡುತ್ತಿರಲಿಲ್ಲ. ಪುನಿತ್ ಕನ್ನಡ ನಾಡಿನ ಜನರ ಸಂವೇದನಗಳಲ್ಲಿ ಹುದುಗಿ ಹೋಗಿದ್ದ ಕಾರಣಕ್ಕಾಗಿ ಈ ಅಪರಿಮಿತ ನೋವು ಎಲ್ಲರನ್ನೂ ಕಾಡಿತು.

ಸಾವು ಅನಿವಾರ್ಯ ಎಂಬ ಕಟು ವಾಸ್ತವವನ್ನು ಮನುಷ್ಯ ಇಂದಿಗೂ ಒಪ್ಪಿಕೊಳ್ಳುತ್ತಿಲ್ಲ. ಈ ಕಾರಣದಿಂದಾಗಿ ಸಾವು ಮನುಷ್ಯ ಸಮಾಜವನ್ನು ಅನಾದಿ ಕಾಲದಿಂದ ದಿಕ್ಕೆಡಿಸುತ್ತಾ ಬಂದಿದೆ. ಮನುಷ್ಯ ಸಮಾಜವು ತನ್ನ ಒಡನಾಡಿಯೊಬ್ಬನ ಸಾವನ್ನು ಗಾಢ ವಿಷಾದದ ಮೂಲಕ, ಕಳೆದುಕೊಳ್ಳುವ ಅಭದ್ರತೆಯ ಮೂಲಕವೇ ಎದುರುಗೊಳ್ಳುತ್ತದೆ. ಇದರ ನಡುವೆ ಮನುಷ್ಯ ಸಾವನ್ನು ಗೆಲ್ಲುವ ವಿಫಲ ಯತ್ನವನ್ನು ಮಾಡುತ್ತಲೇ ಇದ್ದಾನೆ. ನಮ್ಮ ಸಾಮಾಜಿಕ ತತ್ವಜ್ಞಾನದ ಆಳದಲ್ಲೂ ಸಾವು ಮತ್ತು ಅದರ ನಂತರದ ಬದುಕಿನ ಮೀಮಾಂಸೆ ತೀವ್ರವಾಗಿ ನಡೆಯುತ್ತಾ ಬಂದಿದೆ. ಮಾನವ ಸಮಾಜದಲ್ಲಿ ವ್ಯಕ್ತಿಯೊಬ್ಬನ ಮರಣದ ಸಂದರ್ಭ ಮತ್ತು ಆನಂತರದ ಆಚರಣೆಗಳಲ್ಲಿ ಸಾವಿನ ಅನಿವಾರ್ಯತೆ ಮತ್ತು ಅದರಿಂದ ಉತ್ಪನ್ನವಾಗುವ ವಿಷಾದವನ್ನು ಮೀರುವ ಕುರುಹುಗಳಿವೆ. ಈ ಜೀವನಾವರ್ತಕ ಆಚರಣೆಗಳಲ್ಲಿ ಬದುಕಿನ ನಶ್ವರತೆ ಮತ್ತು ಅಮರತ್ವದ ಕುರಿತ ತತ್ವವೂ ಅಡಗಿದೆ. `ಸತ್ತವರು ಎಲ್ಲಿಗೂ ಹೋಗುವುದಿಲ್ಲ, ನಮ್ಮಲ್ಲೇ ಇರುತ್ತಾರೆ’ ಎಂಬ ತಿಳುವಳಿಕೆಯು ಈ ಸರಳ ತತ್ವದ ಹಿಂದೆ ಕೆಲಸ ಮಾಡುತ್ತಿದೆ. ಈ ತತ್ವವು ಸಾವಿನ ನಂತರದ ಆಚರಣೆಗಳಲ್ಲಿ ಪುನರಭಿನಯವಾಗುತ್ತಿರುತ್ತದೆ. ಸಾವು ಹುಟ್ಟು ಹಾಕುವ ಭೀಕರ ಏಕಾಂಗಿತನದಿಂದ ಜನರನ್ನು ಬಿಡುಗಡೆಗೊಳಿಸುವ ಉಪಕ್ರಮವೂ ಈ ಆಚರಣೆಗಳ ಹಿಂದಿದೆ. ಆದರೆ, ಪುನೀತ್ ಸಾವಿನ ಸಂದರ್ಭದಲ್ಲಿ ಜನರನ್ನು ಹೀಗೆ ಯಾವ ಉಪಕ್ರಮಗಳೂ ಸಾಂತ್ವನಗೊಳಿಸಲಿಲ್ಲ. ಸಾಂತ್ವನಗೊಳಿಸಲು ಸಾಧ್ಯವೂ ಇರಲಿಲ್ಲ. ಪುನೀತ್ ಸಾವು ಕನ್ನಡದ ಜನತೆಯಲ್ಲಿ ಅನೂಹ್ಯ ತಲ್ಲಣಗಳನ್ನು ಹುಟ್ಟು ಹಾಕಿತ್ತು.

ಜಿಮ್ಮನಲ್ಲಿ ದೇಹ ದಂಡಿಸಿ ಕಬ್ಬಿಣದ ಪ್ರತಿಮೆಯಂತಿದ್ದ ಪುನೀತ್‌ರ ಹೃದಯ ಇದ್ದಕ್ಕಿದ್ದಂತೆ ಸ್ತಭ್ದವಾಯಿತು ಎಂಬುದನ್ನು ಇಂದಿಗೂ ಜನ ನಂಬಲು ತಯಾರಿಲ್ಲ. ಅಕ್ಟೋಬರ್ ೨೯ರ ಮಧ್ಯಾಹ್ನವೂ ಜನ ಪುನೀತ್‌ರ ಸಾವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ವಾಸ್ತವ ಬೇರೆಯೇ ಇತ್ತು. ಪುನೀತ್ ನಮ್ಮನ್ನು ಬಿಟ್ಟು ಹೊರಟುಬಿಟ್ಟಿದ್ದರು. ತಲ್ಲಣಗೊಂಡ ಜನ ತಮ್ಮನ್ನು ತಾವು ಸಮಾಧಾನಿಸಿಕೊಳ್ಳಲು ಹಲವು ಮಾರ್ಗಗಳ ಮೊರೆ ಹೋದರು. ಕಛೇರಿಯಲ್ಲಿ ಕುಳಿತಿದ್ದ ನಾನು ಇಡೀ ದಿನ ಏನೂ ಮಾಡಲಾಗದೆ ಒದ್ದಾಡಿದೆ. ಸಮಾಧಾನಗೊಳ್ಳಲು ಪ್ರಯತ್ನಿಸಿದೆ. ಏನೂ ಮಾಡಲಾಗದೆ ಪುನೀತ್ ಅವರ ಮೇಲೆ ಟಿಪ್ಪಣಿಯೊಂದನ್ನು ಬರೆದು ನೋವನ್ನು ಮರೆಯಲು ಮುಂದಾದೆ. ಈ ಸುದ್ದಿ ಸುಳ್ಳಾಗಲಿ ಎಂದು ನಾನು ನಂಬದ ದೇವರಲ್ಲಿ ಕೇಳಿಕೊಂಡೆ. ನನ್ನೊಳಗಿನ ಹತಾಶೆಯು ದೇವರ ಮೇಲೆ ಸಿಟ್ಟನ್ನು ಹುಟ್ಟು ಹಾಕಿತ್ತು. `ಅರೆ, ನಾನು ನಂಬದ ದೇವರ ಮೇಲೇಕೆ ನನಗೆ ಸಿಟ್ಟು’ ಎಂದು ಪ್ರಶ್ನಿಸಿಕೊಂಡೆ. ನನ್ನಂತೆಯೇ ಜನ ದಿಕ್ಕುಗಾಣದೆ ಟಿವಿಗಳ ಮುಂದೆ ಕುಳಿತಿದ್ದರು. ಕಂಠೀರವ ಕ್ರಿಡಾಂಗಣದ ಕಡೆ ಜನ ನದಿಗಳಂತೆ ಹರಿದು ಹೋದರು. ಅತ್ತರು, ರೋಧಿಸಿದರು, ಸಾವೆಂಬ ಕಠೋರ ವಾಸ್ತವದ ಎದುರು ಸೋತು ಸುಣ್ಣವಾದರು. ತಮ್ಮ ಮನೆಯವನನ್ನು, ತಮ್ಮದೇ ಬಂಧುವನ್ನು, ಅಣ್ಣನನ್ನು, ತಮ್ಮನನ್ನು, ಗೆಳೆಯನನ್ನು ಕಳೆದುಕೊಂಡ ದುಃಖ ಎಲ್ಲರನ್ನೂ ಕಾಡಿತು. ಜನ ತಮ್ಮ ಹಳ್ಳಿಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಲು ಪೋಷ್ಟರ್‌ಗಳನ್ನು ಕಟ್ಟಿದರು. ನಗರಗಳ ಬೀದಿಗಳಲ್ಲಿ ನಿಲ್ಲಿಸಿದ ಪುನೀತ್ ಕಟೌಟ್‌ಗಳ ಎದುರು ಮುಸ್ಲಿಮ್ ಬಂಧುಗಳು ನಮಾಜು ಮಾಡಿದರು, ಕ್ರೈಸ್ತರು ಪ್ರಾರ್ಥನೆ ಮಾಡಿದರು, ದೇವಾಲಯಗಳಲ್ಲಿ ಜನ ದೀಪಗಳನ್ನು ಉರಿಸಿದರು. ತಮ್ಮೂರಿನ ಬೀದಿಗಳಿಗೆ ಪುನೀತ್ ಹೆಸರನ್ನಿಟ್ಟರು. ಮದುಮಕ್ಕಳು ಪುನೀತ್ ಫೋಟೋದ ಮುಂದೆ ನಿಂತು ಲಗ್ನದ ಶುಭ ಕಾರ್ಯಗಳನ್ನು ಕೈಗೊಂಡರು.

ಜನ ಹೀಗೆ ಪುನೀತ್ ಅವರನ್ನು ಯಾಕೆ ಪ್ರೀತಿಸಿದರು? ಸಿನೇಮಾ ನಟನೆಂದೇ? ಅಥವಾ ಡಾ. ರಾಜಕುಮಾರ್ ಮಗನೆಂದೇ? ಈ ಪ್ರಶ್ನೆಗಳಿಗೆ ನಿಖರ ಉತ್ತರಗಳಿಲ್ಲ. ಪುನೀತ್ ಸಾವಿಗೆ ನಮ್ಮ ಸಮಾಜ ಹೀಗೆ ಹಲುಬಿದ್ದಕ್ಕೆ ಕಾರಣ ಅವರು ಜನಮುಖಿಯಾಗಿ ತಮ್ಮನ್ನು ಹಲವು ಉಪಕ್ರಮಗಳಲ್ಲಿ ತೊಡಗಿಸಿಕೊಂಡದ್ದು. ಮತ್ತು ಯಾವ ಅಹಮ್‌ಗಳಿಲ್ಲದೆ ಎಲ್ಲರನ್ನೂ ಒಳಗೊಳ್ಳುತ್ತಲೇ ಬದುಕಿದ್ದೂ ಇದಕ್ಕೆ ಕಾರಣವಿರಬಹುದು. ಇದಲ್ಲದೆ, ಕನ್ನಡ ಚಿತ್ರರಂಗದಲ್ಲಿ ಬಾಲಕಲಾವಿದರು ಸ್ಟಾರ್ ಆಗಿ ಬೆಳಗಿದ್ದು ಕಡಿಮೆ. ಆದರೆ ಮುಗ್ಧ ನಗುವಿನ ಪುನೀತ್ ಬಾಲಕಲಾವಿದನಾಗಿ ಎಲ್ಲರ ಮನದೊಳಕ್ಕೆ ಇಳಿದು ಹೋಗಿದ್ದರು. ಡಾ. ರಾಜಕುಮಾರ್ ಅವರು ಶ್ರೇಣೀಕೃತ ಸಮಾಜದ ಅಂಚಿನಲ್ಲಿರುವ ಶೂದ್ರ ಸಮುದಾಯವೊಂದರಲ್ಲಿ ಜನಿಸಿದವರು. ಯಾವ ಪ್ರಭಾವೀ ಹಿನ್ನೆಲೆಗಳಿಲ್ಲದಿದ್ದರೂ ಕೇವಲ ತಮ್ಮ ಪ್ರತಿಭೆಯೊಂದರಿಂದಲೇ ಅಗಾಧವಾಗಿ ಬೆಳೆದು ನಿಂತವರು. ಅಭಿನಯವನ್ನು ಧ್ಯಾನಿಸಿ ಕಲಾಜಗತ್ತಿಗೆ ಅಮೂಲ್ಯ ಕೊಡುಗೆಯನ್ನು ನೀಡಿದವರು. ಡಾ. ರಾಜಕುಮಾರ್ ಎಷ್ಟೇ ಎತ್ತರಕ್ಕೇರಿದರೂ ಸರಳತೆ ಮತ್ತು ವಿನಯಗಳೇ ತಮ್ಮ ಅತ್ಯಂತಿಕ ಮೌಲ್ಯಗಳೆಂಬಂತೆ ಬದುಕಿದರು. ಡಾ. ರಾಜಕುಮಾರ್ ಅವರಿಗೆ ಈ ಮಾನವೀಯ ಮೌಲ್ಯಗಳು ಸುಖದ, ಲೋಲುಪತೆಯ ಅತ್ಯುಗ್ರ ಶಿಖರವನ್ನು ತಲುಪಿದ ನಂತರ ಮೈಗೂಡಿದವುಗಳೇನಲ್ಲ. ಕೀರ್ತಿ, ಹಣ ಮತ್ತು ಪ್ರಭಾವಗಳು ತಮ್ಮ ಸುತ್ತ ಗಿರಕಿ ಹೊಡೆದಾಗಲೂ ಡಾ. ರಾಜ್ ಹಳ್ಳಿಗನ ಪ್ರಾಂಜಲ ಅಮಾಯಕತೆಯನ್ನು ಕಳೆದುಕೊಳ್ಳಲಿಲ್ಲ. ಲೌಕಿಕದ ಅಹಮ್‌ಗಳನ್ನು ತಿರಸ್ಕರಿಸುತ್ತಲೇ ಮುಗ್ಧತೆಯನ್ನು ಧ್ಯಾನಿಸುವ ಋಷಿಯಂತೆ ಅವರು ಬದುಕಿದರು. ಅವರ ಮೂರೂ ಜನ ಮಕ್ಕಳು ಸ್ಟಾರ್‌ಗಳಾಗಿ ಬೆಳಗಿದರೂ ತಂದೆಯ ಸಾಮಾಜಿಕ ನಡವಳಿಕೆಗಳನ್ನು ಮೈಗೂಡಿಸಿಕೊಂಡೇ ಬಂದಿದ್ದಾರೆ. ಯಾವ ವಿವಾದಗಳಿಗೂ ಒಳಗಾಗದೆ, ಯಾರನ್ನೂ ನೋಯಿಸದೆ ಅಪ್ಪಟ ವಿನಯವಂತರಾಗಿ ಬದುಕುತ್ತಿರುವ ಡಾ. ರಾಜ್ ಮನೆಯವರನ್ನು ನಾಡಿನ ಜನ ಇದೇ ಕಾರಣಕ್ಕೆ ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಮಾನವೀಯ ಸಂಬಂಧಗಳು ವಿಘಟನೆಗೊಂಡು ಈ ಸಂದರ್ಭದಲ್ಲಿ ನಮ್ಮ ಸಮಾಜ ತಲ್ಲಣಗಳಲ್ಲಿ ಬದುಕುತ್ತಿದೆ. ಜಾತಿ, ಕೋಮು ಮತ್ತು ವರ್ಗಾಧಾರಿತ ಸಂಘರ್ಷಗಳಲ್ಲಿ ನಲುಗಿರುವ ಸಮಾಜದ ಮೇಲೆ ಇಂತಹ ಅನಿರೀಕ್ಷಿತ ಸಾವುಗಳು ಈಗಾಗಲೇ ಇರುವ ಗಾಯಗಳ ಮೇಲೆ ಬರೆ ಎಳೆಯುತ್ತವೆ. ಪುನೀತ್ ತಮ್ಮ ತಾರಾ ಮೌಲ್ಯದ ವರ್ಚಿಸ್ಸಿನ ನಡುವೆಯೂ ಕೇವಲ ಮನುಷ್ಯನಂತೆ ಬದುಕಿದ್ದರು ಎಂಬುದಕ್ಕೆ ಅವರ ಜೀವನದ ಅನೇಕ ಘಟನೆಗಳನ್ನ ಉದಾಹರಿಸಬಹುದು. ಬಡವರಿಗೆ, ಅಸಹಾಯಕರಿಗೆ, ದುರ್ಬಲರಿಗೆ ಅವರು ನೆರವಿಗೆ ನಿಂತಿದ್ದಾರೆ. ತಮ್ಮ ವೃತ್ತಿಯ ಭಾಗವಾಗಿ ಪಡೆಯುತ್ತಿದ್ದ ಸಂಭಾವನೆಯ ದೊಡ್ಡ ಮೊತ್ತವನ್ನು ಸಮಾಜಕ್ಕೆ ನೀಡಬೇಕು ಎಂಬ ಮೌಲ್ಯವನ್ನು ಪುನೀತ್ ತಮ್ಮ ತಂದೆಯಿಂದ ಕಲಿತಿರಬಹುದು. ವಿನಯ ಮತ್ತು ಸರಳತೆಗಳು ಕೇವಲ ಔಪಚಾರಿಕ ನಡವಳಿಕೆಗಳಾದೆ ಅವರ ಬದುಕಿನ ಅಂತರ್ಗತ ಮೌಲ್ಯಗಳೇ ಆಗಿದ್ದವು.

ಪುನೀತ್ ಸಾವಿನ ನಂತರ ಅನೇಕ ಜನರಿಗೆ ಬದುಕಿನ ನಶ್ವರತೆಯ ಕುರಿತು ಒಂದು ಅಂದಾಜು ಸಿಕ್ಕಂತಿದೆ. ಅನೇಕರು ತಮ್ಮಗಳ ತಮ್ಮಗಳ ನಡುವಿನ ಮನಸ್ಥಾಪಗಳನ್ನು ಮರೆತು ಒಂದಾಗಲು ಪ್ರಯತ್ನಿಸುತ್ತಿದ್ದಾರೆ. ಯಾರನ್ನೂ ದ್ವೇಷಿಸದ ನಿರುಮ್ಮಳ ಮನಸ್ಸು ತಮಗಿರಬೇಕು ಎಂದು ಹಂಬಲಿಸುತ್ತಿದ್ದಾರೆ. ಯಾವಾಗ ನಮ್ಮ ಬದುಕು ಕೊನೆಗೊಳ್ಳುವುದೋ ಎಂಬ ಧಾವಂತದಲ್ಲಿ ಉಪಯುಕ್ತ ಕೆಲಸಗಳಲ್ಲಿ ತೊಡಗಿಕೊಳ್ಳಲು ಮುಂದಾಗುತ್ತಿದ್ದಾರೆ. ಪುನೀತ್ ಅವರ ಅನಿರೀಕ್ಷಿತ ಸಾವು ಇಂತಹ ಎಚ್ಚರಗಳನ್ನು ನಮ್ಮಲ್ಲಿ ಹುಟ್ಟುಹಾಕಿದೆ. ಪುನೀತ್ ತಾವು ಇನ್ನಿಲ್ಲವಾದ ಮೇಲೂ ನಮ್ಮನ್ನು ಅಗೋಚರವಾಗಿ ನಿಯಂತ್ರಿಸುತ್ತಿದ್ದಾರೆ. ಇಂತಹ ಒಬ್ಬ ವ್ಯಕ್ತಿಯ ಅಲ್ಪಾಯುಷ್ಯದ ಬದುಕು ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ನಾಡಿನ ಜನರನ್ನು ಪ್ರಭಾವಿಸಿದ್ದು ನನ್ನಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಈ ಕಾರಣಕ್ಕಾಗಿ ಪುನೀತ್ ಅವರದು ಒಂದು ಸಾರ್ಥಕ ಬದುಕು.

ಪುನೀತ್ ಸಾವು ಹುಟ್ಟು ಹಾಕಿದ ತಲ್ಲಣಗಳಿಂದ ಒಂದು ನಾಡು ಹೇಗೆ ತನ್ನನ್ನು ಬಿಡುಗಡೆಗೊಳಿಸಿಕೊಳ್ಳಲು ಪ್ರಯತ್ನಿಸಿತು ಎಂಬುದರ ನುಡಿರೂಪವೇ ಈ ಪುಸ್ತಕ. ನಾಡಿನ ಅನೇಕ ಹಿರಿಯ ಲೇಖಕರು ತಮ್ಮ ಸಂಕಟಮಯ ಅಂತರಂಗಗಳನ್ನು ಈ ಬರಹಗಳಲ್ಲಿ ತೆರದಿಟ್ಟಿದ್ದಾರೆ. ಹಿರಿಯರಾದ ಪ್ರೊ. ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ದಿನೇಶ್ ಅಮೀನಮಟ್ಟು, ಕೆ. ಫಣಿರಾಜ್, ಶ್ರೀಪಾದ ಭಟ್, ಪ್ರೊ. ಪ್ರಶಾಂತ ನಾಯಕ್, ಶಿವಸುಂದರ್, ಪರಮೇಶ್ವರ್ ಗುಂಡಕಲ್, ಕಲಾವಿದ ಕಿಚ್ಚ ಸುದೀಪ್, ಚೇತನ್ ಅಹಿಂಸಾ, ಚಂದನ್‌ಗೌಡ, ಮಾಯಾಶರ್ಮಾ, ನಟ ಅನಿರುದ್ಧ, ನಿರ್ದೇಶಕ ಬಿ.ಎಂ. ಗಿರಿರಾಜ್, ಪತ್ರಕರ್ತರಾದ ಮಹಮದ್ ಹನೀಫ್, ಮಾಸ್ಟರ್ ಮಂಜುನಾಥ್, ಶಶಿ ಸಂಪಳ್ಳಿ, ಸಂಧ್ಯಾರಾಣಿ, ಸುರೇಶ್ ಶಿಕಾರಿಪುರ, ಬಿ.ಪಿ. ಮಹೇಂದ್ರಕುಮಾರ್, ರೋಹಿತ್ ಅಗಸರಹಳ್ಳಿ, ಮಮತ ಅರಸೀಕೆರೆ, ಶಾಂತಕುಮಾರಿ, ಪರಮೇಶ್ವರ್ ಗುರುಸ್ವಾಮಿ, ಮಹೇಂದ್ರ ಸಿಂಹ, ಸಂಭಾಷಣೆಕಾರ ಮಾಸ್ತಿ ಮುಂತಾದ ಲೇಖಕರ ಬರಹಗಳು ಈ ಸಂಕಲನದಲ್ಲಿವೆ. ಇಂತಹ ಉಪಯುಕ್ತ ಬರಹಗಳನ್ನು ಇಲ್ಲಿ ಸಂಕಲಿಸಿ ಕನ್ನಡದ ಜನತೆಗೆ ಒಪ್ಪಿಸುತ್ತಿದ್ದೇವೆ. ಈ ಬರಹಗಳನ್ನು ಪ್ರಸ್ತುತ ಕೃತಿಯಲ್ಲಿ ಪ್ರಕಟಿಸಲು ಒಪ್ಪಿಗೆ ನೀಡಿದ ಎಲ್ಲ ಲೇಖಕರಿಗೆ ಧನ್ಯವಾದಗಳು.

ಈ ಪುಸ್ತಕವನ್ನು ದಶಕಗಳ ಕಾಲ ಕನ್ನಡದ ಪ್ರಜ್ಞೆಯನ್ನು ಜಾಗೃತವಾಗಿಟ್ಟಿದ್ದ ಡಾ. ರಾಜಕುಮಾರ್ ಅವರಿಗೆ ಅರ್ಪಿಸುತ್ತಿದ್ದೇವೆ.

ಇಲ್ಲಿ ಮುದ್ರಿಸಲಾದ ಬಹುಪಾಲು ಛಾಯಾಯಚಿತ್ರಗಳನ್ನು ನಾವು Dr. Rajkumar: The Person behind the Personality ಪುಸ್ತಕದಿಂದ ಮತ್ತೆ ಕೆಲವನ್ನು ಇತರೆ ವೆಬ್‌ಸೈಟ್‌ಗಳಿಂದ ಆಯ್ದುಕೊಂಡಿದ್ದೇವೆ. ಈ ಪುಸ್ತಕವನ್ನು ಗೌರಿ ಮೀಡಿಯಾದಿಂದ ಪ್ರಕಟಿಸುತ್ತಿದ್ದೇವೆ. ಪ್ರಕಟಣೆಗೆ ಕಾರಣಕರ್ತರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಆಕೃತಿ ಗುರುಪ್ರಸಾದ್, ರಾಜು ಮತ್ತು ಲೇಖನಗಳನ್ನು ಟೈಪಿಸಿ ಕೊಟ್ಟ ಕೃಷ್ಣ ಅವರಿಗೆ ಧನ್ಯವಾದಗಳು. ಗಿರೀಶ್ ತಾಳೀಕಟ್ಟೆಯವರು ಮುಖಪುಟ ರಚಿಸಿದ್ದಲ್ಲದೆ, ಪುಸ್ತಕದ ಒಳಪುಟಗಳನ್ನು ವಿನ್ಯಾಸ ಮಾಡಿದ್ದಾರೆ. ಇಲ್ಲಿನ ಲೇಖನಗಳನ್ನು ಪುಸ್ತಕದಲ್ಲಿ ಅಳವಡಿಸಲು ಒಪ್ಪಿಗೆ ಸೂಚಿಸಿದ ಎಲ್ಲ ಲೇಖಕರಿಗೆ ಧನ್ಯವಾದಗಳು.

  • ಡಾ. ಎ. ಎಸ್. ಪ್ರಭಾಕರ

ಪುನೀತ್ ರಾಜ್‌ಕುಮಾರ್: ಮುಗ್ದ ನಗುವೊಂದರೆ ಕಣ್ಮರೆ ಪುಸ್ತಕ ಖರೀದಿಸಲು ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Phone: 93536 66821
Email: [email protected]


ಇದನ್ನೂ ಓದಿ: ಪುನೀತ್ ನುಡಿನಮನ; ಕರ್ನಾಟಕದ ಮನೆಮಗನ ನಿರ್ಗಮನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...