HomeUncategorized'ಕಸ ಈಗ ಮತ್ತೆ ತೊಟ್ಟಿಗೆ ಸೇರಿದೆ': INDIA  ಮೈತ್ರಿಕೂಟ ತೊರೆದ ನಿತೀಶ್‌ ವಿರುದ್ಧ ಪ್ರತಿಪಕ್ಷಗಳ ನಾಯಕರು...

‘ಕಸ ಈಗ ಮತ್ತೆ ತೊಟ್ಟಿಗೆ ಸೇರಿದೆ’: INDIA  ಮೈತ್ರಿಕೂಟ ತೊರೆದ ನಿತೀಶ್‌ ವಿರುದ್ಧ ಪ್ರತಿಪಕ್ಷಗಳ ನಾಯಕರು ವಾಗ್ಧಾಳಿ

- Advertisement -
- Advertisement -

INDIA  ಮೈತ್ರಿಕೂಟ ತೊರೆದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸಲು ಸಿದ್ಧರಾಗಿದ್ದಾರೆ. ರಾಜಭವನದಲ್ಲಿ ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕಾರ ನಡೆಯಲಿದ್ದು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸುವ ಸಾಧ್ಯತೆ ಇದೆ.

ನಿತೀಶ್ ಮೊದಲಿಗೆ 9 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದರಲ್ಲಿ ಮೂವರು ಬಿಜೆಪಿ ಮತ್ತು ಉಳಿದವರು ಜೆಡಿಯು ಶಾಸಕರಾಗಿದ್ದಾರೆ. ವಿಜಯ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಡಿಸಿಎಂಗಳಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ.

ನಿತೀಶ್ ಅವರು ಭಾನುವಾರ ಬೆಳಗ್ಗೆ ರಾಜ್ಯಪಾಲ ರಾಜೇಂದ್ರ ವಿ ಅರ್ಲೇಕರ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಹೊಸ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ಮುಂದುವರಿಯುವಂತೆ ರಾಜ್ಯಪಾಲರು ನಿತೀಶ್‌ ಕುಮಾರ್‌ಗೆ ಸೂಚಿಸಿದ್ದರು.

ಬಿಹಾರ ಸಿಎಂ ನಿತೀಶ್‌ ಕುಮಾರ್‌ INDIA ಮೈತ್ರಿಕೂಟದ ನಾಯಕರಲ್ಲಿ ಮುಂಚೂಣಿಯಲ್ಲಿದ್ದರು. ಅವರನ್ನು ಮೈತ್ರಿ ಬಣದ ಸಂಚಾಲಕರನ್ನಾಗಿ ನೇಮಿಸಲಾಗಿತ್ತು. ಆದರೆ ಇದೀಗ ನಿತೀಶ್‌ ಕುಮಾರ್‌ ತೆಗೆದುಕೊಂಡಿರುವ ನಿಲುವು ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ.

ಜೈರಾಮ್ ರಮೇಶ್ ಪ್ರತಿಕ್ರಿಯೆ:

INDIA ಬಣದಿಂದ ನಿತೀಶ್ ಕುಮಾರ್ ನಿರ್ಗಮನದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ರಾಜಕೀಯ ಪಾಲುದಾರರನ್ನು ಆಗಾಗ್ಗೆ ಬದಲಾಯಿಸುವ ನಿತೀಶ್ ಕುಮಾರ್, ಬಣ್ಣ ಬದಲಾಯಿಸುವಲ್ಲಿ ಗೋಸುಂಬೆಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಪ್ರಧಾನಿ ಮತ್ತು ಬಿಜೆಪಿ ಭಯಭೀತರಾಗಿದ್ದಾರೆ ಮತ್ತು ಅದರಿಂದ ಗಮನವನ್ನು ಬೇರೆಡೆ ಸೆಳೆಯಲು ಈ ರಾಜಕೀಯ ನಾಟಕವನ್ನು ಸೃಷ್ಟಿಸಲಾಗಿದೆ ಎಂದು ಜೈರಾಮ್‌ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಒವೈಸಿ ಪ್ರತಿಕ್ರಿಯೆ

ಬಿಹಾರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಿತೀಶ್ ಕುಮಾರ್, ತೇಜಸ್ವಿ ಯಾದವ್ ಮತ್ತು ಪ್ರಧಾನಿ ಮೋದಿ ಬಿಹಾರದ ಜನರ ಕ್ಷಮೆಯಾಚಿಸಬೇಕು. ಈ ಮೂವರೂ ಬಿಹಾರದ ಜನರಿಗೆ, ವಿಶೇಷವಾಗಿ ನಿತೀಶ್ ಕುಮಾರ್‌ ಬಿಹಾರದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಹೇಳಿದ್ದಾರೆ.

ತೇಜಸ್ವಿ ಯಾದವ್ ಅವರಿಗೆ ಈಗ ಹೇಗೆ ಅನಿಸುತ್ತದೆ ಎಂದು ನಾನು ಕೇಳಲು ಬಯಸುತ್ತೇನೆ? ಅವರು ನಮ್ಮ ನಾಲ್ವರು ಶಾಸಕರನ್ನು ಕರೆದೊಯ್ದರು. ಅವರು ಈಗ ಅದೇ ನೋವು ಅನುಭವಿಸುತ್ತಿದ್ದಾರೆಯೇ?  ನಮ್ಮನ್ನು ಆಡಿಸಿದ ರೀತಿಯಲ್ಲಿಯೇ ಈಗ ಅವರು ಆಡಿದ್ದಾರೆ. ನಿತೀಶ್ ಕುಮಾರ್ ಅವರು ಬದುಕಿರುವವರೆಗೂ ಸಿಎಂ ಆಗಬೇಕೆಂದು ಬಯಸುತ್ತಾರೆ. ಬಿಜೆಪಿಯವರು ಎಲ್ಲವನ್ನೂ ಬಯಸುತ್ತಾರೆ. ಬಿಹಾರದ ಜನರಿಗೆ ದ್ರೋಹ ಮಾಡಿದ್ದಾರೆ. ಬಿಹಾರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆ.

ಡಿಎಂಕೆ ಪ್ರತಿಕ್ರಿಯೆ:

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ಮೈತ್ರಿಯಿಂದ ನಿರ್ಗಮಿಸಿರುವುದು ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಕೇಸರಿ ಪಕ್ಷಕ್ಕೆ “ನಷ್ಟ” ಮತ್ತು ವಿರೋಧ ಪಕ್ಷದ ಮೈತ್ರಿಗೆ “ಲಾಭ” ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಹೇಳಿದೆ.

ನಿತೀಶ್ ಕುಮಾರ್ ಅವರ ಈ ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಡಿಎಂಕೆ ವಕ್ತಾರ ಜೆ ಕಾನ್‌ಸ್ಟಾಂಡೈನ್ ರವೀಂದ್ರನ್, ಜನರು ಈ ದ್ರೋಹದ ಕೃತ್ಯವನ್ನು ಎಂದಿಗೂ ಒಪ್ಪುವುದಿಲ್ಲ. ನಿತೀಶ್‌ ಕುಮಾರ್ ಬಿಹಾರದಲ್ಲಿ ಹಿರಿಯ ನಾಯಕರಾಗಿದ್ದರೂ, ಅವರು ಸಂಪೂರ್ಣವಾಗಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ, ಅವರಿಗೆ ಸಮಗ್ರತೆ ಇಲ್ಲ. ಒಬ್ಬ ನಾಯಕನಿಗೆ ಸಮಗ್ರತೆ ಮತ್ತು ವಿಶ್ವಾಸಾರ್ಹತೆ ಬಹಳ ಮುಖ್ಯ. ನಿತೀಶ್ ಕುಮಾರ್ INDIA ಬಣ ತೊರೆಯುವುದರಿಂದ ನಮಗೆ ಲಾಭ ಮತ್ತು ಇದು ಬಿಜೆಪಿಗೆ ನಷ್ಟ, ಜನರು ಸರಿಯಾದ ಸಮಯದಲ್ಲಿ ನಿತೀಶ್ ಕುಮಾರ್ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಶಶಿತರೂರ್‌ ಪ್ರತಿಕ್ರಿಯೆ:

ಬಿಹಾರದ ಮಹಾಘಟಬಂಧನ್ ಸರ್ಕಾರದಿಂದ ಹೊರನಡೆದ ನಿತೀಶ್ ಕುಮಾರ್ ಅವರನ್ನು ಟೀಕಿಸಿದ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ನಿತೀಶ್‌ ಕುಮಾರ್‌ ಅವರನ್ನು ತತ್ವರಹಿತ ರಾಜಕಾರಣಿ ಎಂದು ಹೇಳಿದ್ದಾರೆ.

ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಾಘೇಲ್ ಪ್ರತಿಕ್ರಿಯೆ

ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಾಘೇಲ್ ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ವಿಶ್ವಾಸಾರ್ಹತೆ ಈಗ ಮುಗಿದಿದೆ. ನಿತೀಶ್ ಕುಮಾರ್ ಅವರ ಚಟುವಟಿಕೆಗಳನ್ನು ನೋಡಿ, ಅವರು ಏನನ್ನಾದರೂ ಮಾಡುತ್ತಾರೆ ಎಂದು ಜನರಿಗೆ ಅನುಮಾನವಿತ್ತು ಮತ್ತು ಅವರು ಹಾಗೆಯೇ ಮಾಡಿದ್ದಾರೆ. ಇದು ಇಂಡಿಯಾ ಒಕ್ಕೂಟವನ್ನು ದುರ್ಬಲಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಸಿಎಂ ಹುದ್ದೆಗೆ ನಿತೀಶ್‌ ಕುಮಾರ್‌ ರಾಜೀನಾಮೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು  ‘ಕಸ ಈಗ ಮತ್ತೆ ತೊಟ್ಟಿಗೆ ಸೇರಿದೆ’ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ:

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ಬಗ್ಗೆ ನನಗೆ ತಿಳಿದಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ದೇಶದಲ್ಲಿ ಆಯಾ ರಾಮ್-ಗಯಾ ರಾಮ್ ಅವರಂತಹ ಅನೇಕ ಜನರಿದ್ದಾರೆ ಎಂದು ಹೇಳಿದ್ದಾರೆ.

ಮೊದಲು ಅವರು ಮತ್ತು ನಾವು ಒಟ್ಟಿಗೆ ಹೋರಾಡುತ್ತಿದ್ದೆವು, ನಾನು ಲಾಲು ಜಿ ಮತ್ತು ತೇಜಸ್ವಿ ಅವರೊಂದಿಗೆ ಮಾತನಾಡುವಾಗ, ಅವರು ನಿತೀಶ್ ಹೋಗುತ್ತಿದ್ದಾರೆ ಎಂದು ಹೇಳಿದರು, ಅವರು ಉಳಿಯಲು ಬಯಸಿದ್ದರೆ ಅವರು ಉಳಿಯುತ್ತಿದ್ದರು ಆದರೆ ಅವರು ಹೋಗಬೇಕೆಂದು ಬಯಸುತ್ತಾರೆ. ಈ ಮಾಹಿತಿಯನ್ನು ಈಗಾಗಲೇ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ನಮಗೆ ನೀಡಿದ್ದಾರೆ. ಇಂದು ಅದು ನಿಜವಾಯಿತು. ದೇಶದಲ್ಲಿ ಆಯಾ ರಾಮ್-ಗಯಾ ರಾಮ್ ಅವರಂತಹ ಅನೇಕ ಜನರಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

ಇದನ್ನು ಓದಿ: ಬೇಲಿಮ್ ವಾಸ್ ಹಿಂಸಾಚಾರ: ಮುಸ್ಲಿಂ ಯುವಕರ ಬಂಧನ, ಕುಟುಂಬಸ್ಥರ ಮೇಲೆ ಪೊಲೀಸ್‌ ದೌರ್ಜನ್ಯದ ಆರೋಪ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...