Homeಮುಖಪುಟಬೇಲಿಮ್ ವಾಸ್ ಹಿಂಸಾಚಾರ: ಮುಸ್ಲಿಂ ಯುವಕರ ಬಂಧನ, ಕುಟುಂಬಸ್ಥರ ಮೇಲೆ ಪೊಲೀಸ್‌ ದೌರ್ಜನ್ಯದ ಆರೋಪ

ಬೇಲಿಮ್ ವಾಸ್ ಹಿಂಸಾಚಾರ: ಮುಸ್ಲಿಂ ಯುವಕರ ಬಂಧನ, ಕುಟುಂಬಸ್ಥರ ಮೇಲೆ ಪೊಲೀಸ್‌ ದೌರ್ಜನ್ಯದ ಆರೋಪ

- Advertisement -
- Advertisement -

ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಖೇರಾಲು ಎಂಬಲ್ಲಿ ಬೇಲಿಮ್ ವಾಸ್ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದೆ. ಇಲ್ಲಿ ಸ್ಥಳೀಯ ಮುಸ್ಲಿಮರು ಭಯದಿಂದ ದಿನದೂಡುತ್ತಿದ್ದು, ಆ ಪ್ರದೇಶದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

ಜನವರಿ 21ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಮುನ್ನಾದಿನದಂದು ಆ ಪ್ರದೇಶದ ಹಿಂದೂ ನಿವಾಸಿಗಳು ‘ಶೋಭಾ ಯಾತ್ರೆ’ ರ್ಯಾಲಿಯನ್ನು ನಡೆಸಿದ್ದಾರೆ. ಸ್ಥಳೀಯರ ಅಂದಾಜಿನ ಪ್ರಕಾರ ಈ ರ್ಯಾಲಿಯಲ್ಲಿ ಕನಿಷ್ಠ 600-700 ಜನರು ಭಾಗವಹಿಸಿದ್ದರು. ರ್ಯಾಲಿಯು ತನ್ನ ನಿಗದಿತ  ಹಾದಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ಸಾಗಿ ಆ ಪ್ರದೇಶದ ಮಸೀದಿಯನ್ನು ತಲುಪಿದೆ. ಮಸೀದಿಯ ಹೊರಗೆ ಜೋರಾಗಿ ಸಂಗೀತ ನುಡಿಸದಂತೆ ಹಾಗೂ ಪಟಾಕಿ ಸಿಡಿಸದಂತೆ ಸ್ಥಳೀಯ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮನವಿ ಮಾಡಿದ್ದಾರೆ. ಆ ಮನವಿಗಳನ್ನು ಯಾತ್ರೆಯಲ್ಲಿ ಮೋಜು-ಮಸ್ತಿನಿಂದ ಇದ್ದ ಜನರು ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಮಾತಿನ ಚಕಮಕಿ ನಡೆದು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ. ರ್ಯಾಲಿಯಲ್ಲಿ ಭಾಗವಹಿಸಿದವರು ಕತ್ತಿ, ಕೋಲು, ಕಲ್ಲುಗಳನ್ನು ಬಳಸಿದ್ದಾರೆ. ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆ ಮೆಹ್ಸಾನಾ ಪೊಲೀಸರು ಅಶ್ರುವಾಯು ಬಳಸಿ ಜನರನ್ನು ಚದುರಿಸಲು ಪ್ರಾರಂಭಿಸಿದರು.

ಬೆಲಿಮ್ ವಾಸ್‌ನಲ್ಲಿನ ಸ್ಥಳೀಯ ಮುಸ್ಲಿಮರು ಪೊಲೀಸರು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡರು ಎಂದು ಹೇಳಿದ್ದಾರೆ. ಪೊಲೀಸರು 13 ಮಂದಿಯನ್ನು ಬಂಧಿಸಿದ್ದು, ಇದರಲ್ಲಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ. ಬಂಧಿತ ಎಲ್ಲರೂ ಬೆಲಿಮ್ ವಾಸ್ ನಿವಾಸಿಗಳಾಗಿದ್ದು, ಮುಸ್ಲಿಮ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ತಮ್ಮ ಮನೆಗಳಿಗೆ ನುಗ್ಗಿ, ಮನೆಗಳ ಬಾಗಿಲುಗಳನ್ನು ಒಡೆದು ಹಾಕಿದ್ದಾರೆ, ಕಾರುಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಮುಸ್ಲಿಂ ಮಹಿಳೆಯರು ಆರೋಪಿಸಿದ್ದಾರೆ.

ರುಬಿನಾ ಅವರ ಪತಿ ಮೊಹಮ್ಮದ್ ಹುಸೇನ್(30) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರ ನಡೆದ ಕೆಲವೇ ಗಂಟೆಗಳಲ್ಲಿ ಅವರ ಮನೆಗೆ ಪೊಲೀಸರು ನುಗ್ಗಿದ್ದರು. ಪೊಲೀಸರು ಹುಸೇನ್ ಅವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುವಾಗ ತೀವ್ರವಾಗಿ ಥಳಿಸಿದ್ದಾರೆ. ಅವರು ನಮ್ಮ ಗೇಟುಗಳು, ಬಾಗಿಲುಗಳನ್ನು ಮುರಿದರು ಮತ್ತು ಸುತ್ತಲೂ ಎಲ್ಲವನ್ನೂ ಚದುರಿಸಿದ್ದಾರೆ. ಇದಕ್ಕೆ ಮಹಿಳೆಯರು ವಿರೋಧಿಸಿದಾಗ ಅವರನ್ನು ಕೂಡ ಬಂಧಿಸುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ. ರುಬಿನಾಳ ಪತಿ ಮೆಹ್ಸಾನಾದ ವಸಾಯಿ ಜೈಲಿನಲ್ಲಿ ಇತರ 12 ಮುಸ್ಲಿಮರೊಂದಿಗೆ ಇದ್ದಾರೆ. ಹುಸೇನ್ ಖಿನ್ನತೆಯಿಂದ ಬಳಲುತ್ತಿದ್ದು, ಔಷಧಿಯನ್ನು ಸೇವಿಸುತ್ತಿದ್ದರು, ಆದರೆ ಈಗ ಜೈಲಿನಲ್ಲಿ ಔಷಧಿಗಳನ್ನು ನೀಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಹಿಂಸಾಚಾರಕ್ಕೆ ಸಂಬಂಧಿಸಿ ಮೊಹಮ್ಮದ್ ಸಿದ್ದಿಕ್ ಎಂಬವರ 16 ವರ್ಷದ ಮಗ ರೆಹಮತುಲ್ಲಾನನ್ನು ಮೆಹ್ಸಾನಾ ಪೊಲೀಸರು ಬಂಧಿಸಿ ಐದು ದಿನಗಳಾಗಿವೆ. ಅವರು ನನ್ನ ಮಗನನ್ನು ಬಂಧಿಸಿ ಎಲ್ಲಿಗೆ ಕರೆದೊಯ್ದರು ಎಂಬ ಬಗ್ಗೆ ಯಾವುದೇ ಕುಟುಂಬ ಸದಸ್ಯರಿಗೆ ತಿಳಿಸಲಿಲ್ಲ. ಇಂದು, ಐದು ದಿನಗಳ ನಂತರ ವಿಷಯ ಸ್ಪಷ್ಟವಾಗುವವರೆಗೆ ಅವರನ್ನು ಮಕ್ಕಳ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಕಾರ್ಪೊರೇಟರ್ ಜುಬೇರ್ ಬೆಲಿಮ್, ಈ ಹಿಂದೆ ಶಾಂತಿಯುತವಾಗಿದ್ದ ಖೇರಾಲು ನೆರೆಹೊರೆ ಇಂತಹ ಉದ್ದೇಶಿತ ಕ್ರಮಕ್ಕೆ ಹೇಗೆ ಸಾಕ್ಷಿಯಾಯಿತು ಎಂದು ಪ್ರದೇಶದ ಜನರು ದಿಗ್ಭ್ರಮೆಗೊಂಡಿದ್ದಾರೆ. ಮುಸ್ಲಿಮರು ಇಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ, ನಾವು ಎಂದಿಗೂ ಅಸುರಕ್ಷಿತರಾಗಿದ್ದೇವೆ ಎಂದು ಭಾವಿಸಿರಲಿಲ್ಲ. ಅವರು ಕತ್ತಿಗಳು ಮತ್ತು ರಾಡ್‌ಗಳನ್ನು ಹೊಂದಿದ್ದರು ಮತ್ತು ನಂತರ ಅವರು ಕಲ್ಲುಗಳನ್ನು ತೂರಿದರು. ಅವರು ನನ್ನ ಮನೆಯ ಟಿವಿಯನ್ನು ಒಡೆದರು, ಅವರು ಹತ್ತಿರದ ಉಪಾಹಾರ ಗೃಹವನ್ನು ಸುಟ್ಟು ಹಾಕಿದರು. ಇದು ತುಂಬಾ ಅಪಾಯಕಾರಿ. ದೇವಾಲಯದ ಶಂಕು ಸ್ಥಾಪನೆ ಹಿನ್ನೆಲೆ ನಾವು ರ್ಯಾಲಿಯನ್ನು ನಿರೀಕ್ಷಿಸಿದ್ದೇವೆ, ಆದರೆ ಈ ರೀತಿ ಗುರಿಯಾಗಬಹುದೆಂದು ನಿರೀಕ್ಷಿಸಿರಲಿಲ್ಲ ಎಂದು ಬೆಲಿಮ್ ಅವರು ಹೇಳಿದ್ದಾರೆ.

ಇನ್ನೊಬ್ಬ ಸ್ಥಳೀಯರು ಈ ಬಗ್ಗೆ ಮಾತನಾಡಿ, ರ್ಯಾಲಿಯಲ್ಲಿ ಭಾಗವಹಿಸಿದ್ದವರ ವೀಡಿಯೊಗಳನ್ನು ಹೊಂದಿದ್ದೇವೆ. ಆದರೆ ಪುತ್ರ ಬಂಧನದಲ್ಲಿರುವುದರಿಂದ ಅದನ್ನು ಪೊಲೀಸರಿಗೆ ಅದನ್ನು ನೀಡಲು ಬಯಸುವುದಿಲ್ಲ. ನನ್ನ ಮಗ ಅವನ ಕಾಲೇಜಿನಲ್ಲಿ ಒಬ್ಬನೇ ಮುಸ್ಲಿಂ, ಅವನು ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತ, ವಿಶ್ವ ಹಿಂದೂ ಪರಿಷತ್ತಿನ ಗೂಂಡಾಗಳು ಅವನ ಮೇಲೆ ಬಹಳ ಕಾಲದಿಂದ ಕಣ್ಣಿಟ್ಟಿದ್ದರು ಮತ್ತು ಈಗ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸ್ಥಳೀಯರು ಕತ್ತಿ ಹಿಡಿದು ನಮ್ಮ ಮನೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ವೀಡಿಯೊಗಳು ನನ್ನ ಬಳಿ ಇವೆ. ಆದರೆ ನಾನು ಹಿಂದೂಗಳ ವಿರುದ್ಧ ದೂರು ನೀಡಿದರೆ ನನ್ನನ್ನು ಬಂಧಿಸಲಾಗುತ್ತದೆ ಅಥವಾ ನನ್ನ ಕುಟುಂಬವು ಭದ್ರತಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಾನು ಹೆದರುತ್ತೇನೆ. ಇದು ಯೋಜಿತ ದಾಳಿ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ನಮ್ಮನ್ನು ಪ್ರಚೋದಿಸಲು ಉದ್ದೇಶಿಸಲಾಗಿತ್ತು ಎಂದು ಹೇಳಿದ್ದಾರೆ.

ಅವರ ನೆರೆಹೊರೆಯವರಾದ ಶೈಸ್ತಾ ಕೂಡ ಇದೇ ರೀತಿಯಾಗಿ ಪೊಲೀಸ್‌ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ.  ನನ್ನ ಪತಿ ವಜೀರ್ ಮೊಹಮ್ಮದ್ ಸಾದಿಕ್ ಅಲಿ ಅವರನ್ನು ಥಳಿಸಲಾಗಿದೆ. ಅವರ ತಲೆಗೆ ಆರು ಹೊಲಿಗೆಗಳನ್ನು ಹಾಕಲಾಗಿದೆ. ಪೊಲೀಸರು ನಮ್ಮ ಮನೆಗೆ ನುಗ್ಗಿ ನನ್ನ ಪತಿಯನ್ನು ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಅವರು ನಮ್ಮ ಎಲ್ಲಾ ಫೋನ್‌ಗಳನ್ನು ಸೀಜ್‌ ಮಾಡಿದ್ದಾರೆ. ನಮ್ಮ ಮಗಳು 4ನೇ ತರಗತಿಯಲ್ಲಿ ಓದುತ್ತಿದ್ದು, ಹಿಂಸಾಚಾರ ಮತ್ತು ತಂದೆಯ ಬಂಧನದ ಬಳಿಕ ಆಕೆಯನ್ನು ಶಾಲೆಗೆ ಕಳಹಿಸಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ. ಹಿಂಸಾಚಾರದ ದಿನದಂದು ಹಿಂದೂ ಯುವಕರನ್ನು ಸಜ್ಜುಗೊಳಿಸಿರುವುದರ ಹಿಂದೆ ಸ್ಥಳೀಯ ಹಿಂದುತ್ವ ಗುಂಪುಗಳ ಕೈವಾಡ ಇದೆ ಎಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಾಜ್ಯ ಮೀಸಲು ಪೊಲೀಸ್ ಪಡೆ ಕಮಾಂಡೆಂಟ್ ರುಶಿಕೇಶ್ ಬಿ.ಉಪಾಧ್ಯಾಯ ಈ ಕುರಿತು ಪ್ರತಿಕ್ರಿಯಿಸಿದ್ದು,  ಮೆಹ್ಸಾನಾದಲ್ಲಿ 13 ಮಂದಿಯ ಬಂಧನವನ್ನು ದೃಢಪಡಿಸಿದ್ದಾರೆ. ಉದ್ವಿಗ್ನತೆಯನ್ನು ತಡೆಯಲು ಪೊಲೀಸರು ಶಾಂತಿ ಸಭೆಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

 ಇದನ್ನು ಓದಿ: ಗಣರಾಜ್ಯೋತ್ಸವದ ಭಾಷಣದಲ್ಲಿ ‘ಜೈ ಭೀಮ್-ಜೈ ಭಾರತ್’ ಹೇಳಿದ್ದಕ್ಕೆ ದಲಿತ ವಿದ್ಯಾರ್ಥಿಗೆ ಥಳಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...