Homeಮುಖಪುಟನೆರೆಯ ಹೊರೆ: ನೆಮ್ಮದಿಯಲ್ಲಿ ಒಂದೂ ಊರಿಲ್ಲ, ಆರು ತಿಂಗಳಾದರೂ ಸೂರಿಲ್ಲ

ನೆರೆಯ ಹೊರೆ: ನೆಮ್ಮದಿಯಲ್ಲಿ ಒಂದೂ ಊರಿಲ್ಲ, ಆರು ತಿಂಗಳಾದರೂ ಸೂರಿಲ್ಲ

- Advertisement -
- Advertisement -

ಗದಗ: ‘ಕರೆಕ್ಟ್ ಅಂದ್ರ ಕರೆಕ್ಟ್’ ಎಂದು ಅಳತೆಪಟ್ಟಿ ಹಿಡಿದು ಮನೆ ಕಾಮಗಾರಿಯನ್ನು ಅಳೆದವರಂತೆ ಆಡುತ್ತಿರುವ ಜಿಲ್ಲೆಯ ಆಡಳಿತಶಾಹಿ, ನೆರೆ ಪ್ರವಾಹ ಬಂದು ಏಳು ತಿಂಗಳಾಗುತ್ತ ಬಂದರೂ ಮನೆ ನಿರ್ಮಾಣಕ್ಕೆ ಅಥವಾ ರಿಪೇರಿಗೆ ಎರಡನೇ ಕಂತಿನ ಹಣ ನೀಡಲು ತಯಾರಿಲ್ಲ. ಆರು ತಿಂಗಳಾದರೂ ಹಲವಾರು ಊರುಗಳ ನೂರಾರು ಕುಟುಂಬಗಳು ಸುಭದ್ರ ಸೂರಿಲ್ಲದೇ ಜೀವನ ನಡೆಸುತ್ತಿವೆ.

ಈ ಕಡೆ ಜಮೀನಿನಲ್ಲಾದ ಕೊರೆತ, ರಸ್ತೆ ಸೇರಿದಂತೆ ಒಂದಿಲ್ಲೊಂದು ಸಮಸ್ಯೆ ಇದ್ದೇ ಇದೆ. ಹೀಗಾಗಿ ಮಲಪ್ರಭೆ, ಬೆಣ್ಣೆಹಳ್ಳ ತಣ್ಣಗಾಗಿ ಒಣಗಿದರೂ, ನಮ್ಮ ಅಧಿಕಾರಿಗಳ ಒಣ ಉಸಾಬರಿ ಮಾತ್ರ ನಿಂತಿಲ್ಲ.

ಗಣಿ, ಭೂವಿಜ್ಞಾನ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರ ನರಗುಂದ ಕ್ಷೇತ್ರ ನೆರೆಪ್ರವಾಹಕ್ಕೆ ಸಿಕ್ಕು ನಜ್ಜುಗುಜ್ಜಾಗಿದೆ. ಆದರೆ ಪಾಟೀಲರು ಇದರ ಬಗ್ಗೆ ತೆಲೆ ಕೆಡಿಸಿಕೊಂಡಿಲ್ಲ. ಪರಿಹಾರ ತಂದಿದ್ದಿನಲ್ಲ ಎಂದು ಮನೆಯಿಂದ ತಂದವರಂತೆ ಮಾತಾಡುತ್ತಾರೆ ಹೊರತು, ಆ ಪರಿಹಾರ ಸಂತ್ರಸ್ತರಿಗೆ ತಲುಪಿತೋ ಇಲ್ಲವೋ ಎಂಬ ಬಗ್ಗೆ ಕಾಳಜಿಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾವು ಗಣಿ ಸಚಿವ ಎಂಬುದು ಇಂಪಾರ್ಟೆಂಟ್, ಅದಕ್ಕೇ ಅವರು ಜಿಲ್ಲೆಯ ಜೀವನಾಡಿ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಹೊಂಚು ಹಾಕಿ ಕುಳಿತಿರುವ ಬಲ್ಡೊಟಾ ಮತ್ತು ಪೊಸ್ಕೊಗಳಂತಹ ಕಂಪನಿಗಳ ಬಗ್ಗೆ ಸಾಫ್ಟ್‌ ಕಾರ್ನರ್ ಹೊಂದಿದ್ದಾರೆ. ಗಣಿ ಖಾತೆ ನಿಭಾಯಿಸಬೇಕಲ್ಲ, ಪಾಪ, ಅವರಿಗೆ ಜಿಲ್ಲಾ ಉಸ್ತುವಾರಿ ಮಾಡಕು ಟೈಮ್ ಇಲ್ಲವಂತೆ.

 

ತಮ್ಮ ಹಕ್ಕಿನ ಹಣಕ್ಕೆ ಕಾದವರ ಎದುರು ಅಧಿಕಾರಿಗಳು ತಾಂತ್ರಿಕ ತೊಂದರೆ, ಮೆಜರ್‌ಮೆಂಟು, ಫ್ಲಿಂಥು, ನಿಯಮ ಎನ್ನುವುದಿದೆಯಲ್ಲ, ಅದಂತೂ ಬದುಕುವ ಹಕ್ಕಿನ ಮೇಲೆ ದಾಳಿ ಮಾಡಿದಂತೆ.

ಜಿಲ್ಲೆಯ ನೆರೆಪೀಡಿತ ತಾಲೂಕುಗಳಾದ ನರಗುಂದ ಮತ್ತು ರೋಣಗಳಲ್ಲಿ ಅಧಿಕಾರಶಾಹಿಯ ‘ಕಂತಿನ ಲೆಕ್ಕಕ್ಕೆ’ ಹೈರಾಣಾದವರು ಡಿಸಿಯವರಿಗೆ ದೂರು ತಲುಪಿಸಿದರೂ ಪ್ರಯೋಜನವಾಗಿಲ್ಲ.

ಅಂತೂ ಇಂತೂ ಪರಿಹಾರ ಬಂತು!
ಆರಂಭದಲ್ಲಿ ಈ ಸರ್ಕಾರದಿಂದ ನೆರೆ ಪರಿಹಾರ ಸಿಗುವುದೋ ಇಲ್ಲವೋ ಎಂಬ ಅನುಮಾನ, ಆತಂಕಗಳಿದ್ದವು. ಆದರೂ ಅಂತೂ ಇಂತೂ ಪರಿಹಾರ ಬಂತು. ಆದರೀಗ ಮುಳ್ಳಾಗಿರುವುದು ಕಂತು!

ಕೊಣ್ಣೂರು, ವಾಸನ, ಬೂದಿಹಾಳ, ಮೆಣಸಗಿ.. ಹೀಗೆ ನೆರೆಪೀಡಿತ ಯಾವ ಊರಿಗೆ ಹೋದರೂ ಜನರ ಗೋಳು ನಿಂತೇ ಇಲ್ಲ. ಮನೆ ನಿರ್ಮಾಣಕ್ಕೆ ಹಣ ನೀಡುವಾಗಲೇ ಗ್ರೇಡುಗಳ ಹೆಸರಿನಲ್ಲಿ ನಿಯಮಗಳ ಗೋಡೆಗಳು ಎದ್ದವು. ಮನೆ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ವಿಂಗಡಿಸಲು ಎ, ಬಿ, ಮತ್ತು ಸಿ ಎಂದು ಮೂರು ಗ್ರೇಡ್‌ಗಳನ್ನು ಮಾಡಲಾಯಿತು. ಸಂಪೂರ್ಣ ಮನೆ ನೆಲಸಮವಾಗಿದ್ದರೆ ‘ಎ’ ಗ್ರೇಡ್‌ನಲ್ಲಿ ಅದಕ್ಕೆ ಪೂರ್ಣ ಪರಿಹಾರ, ಶೇ.50ರಷ್ಟು ಹಾನಿಯಾಗಿದ್ದರೆ ಅದಕ್ಕೆ ‘ಬಿ’ ಗ್ರೇಡ್‌ನಲ್ಲಿ ಶೇ.50 ಪರಿಹಾರ ಮತ್ತು ಶೇ.25ರಿಂದ 30ರಷ್ಟು ಹಾನಿಯಾಗಿದ್ದರೆ ‘ಸಿ’ ಗ್ರೇಡ್‌ನಲ್ಲಿ 25-30 ಸಾವಿರ ರೂ ನೀಡುವ ನಿಯಮ ಮಾಡಲಾಯಿತು.

ಮೊದಲನೆಯ ಕಂತೇನೋ ಬಂತು. ಆದರೆ ಇನ್ನು ಎಷ್ಟೋ ಜನರಿಗೆ ಎರಡನೇ ಕಂತು ಬರದೇ ಮನೆಗಳೆಲ್ಲ ಅರ್ಧಂಬರ್ಧ ರಿಪೇರಿಯಾಗಿ ನಿಂತಿವೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಇನ್ನೂ 20 ಕೋಟಿ ರೂ ಉಳಿದಿದೆ. ಮೊದಲನೇ ಕಂತಿನ ಹಣದಲ್ಲಿ ಇಂತಿಷ್ಟು ಕಾಮಗಾರಿಯಾಗಿದ್ದರೆ ಮಾತ್ರ ಎರಡನೇ ಕಂತು ಎಂದು ಕ್ರೂರತನ ತೋರಲಾಗುತ್ತಿದೆ.

ಇವರು ನಿಯಮ ಮಾಡಿದ್ದು ಆರು ತಿಂಗಳ ಹಿಂದೆ. ಪ್ರತಿ ತಿಂಗಳೂ ಸಿಮೆಂಟ್, ಕಲ್ಲು, ಕಬ್ಬಿಣ, ನಿರ್ಮಾಣದ ಕೂಲಿ ಏರುತ್ತಲೇ ಇರುವಾಗ ಇವರು ಹೇಳಿದಷ್ಟು ಎತ್ತರಕ್ಕೆ ಮನೆ ತಂದು ನಿಲ್ಲಿಸಿದರಷ್ಟೇ ಇನ್ನೊಂದು ಕಂತು ಎನ್ನುವುದು ಅವೈಜ್ಞಾನಿಕ ಮತ್ತು ಹೊಣೆಗೇಡಿತನ.

ಕೊಣ್ಣೂರು ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿ ಗ್ರೇಡ್ ಫಲಾನುಭವಿಗಳಿಗೆ ಒಂದನೆಯ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಎರಡನೇ ಕಂತು ಮರೀಚಿಕೆಯಾಗಿದೆ. ಹೀಗಾಗಿ ಫಲಾನುಭವಿಗಳ ಮನೆಗಳು ಅಪೂರ್ಣವಾಗಿವೆ. ಮನೆಗಳನ್ನು ಪೂರ್ಣ ಮಾಡಬೇಕೆಂದರೆ, ಲೋಕದಲ್ಲಿಲ್ಲದ ನಿಯಮ ತೋರಿಸುವ ಅಧಿಕಾರಿಗಳು ನಿರಾಶೆ ಮೂಡಿಸುತ್ತಿದ್ದಾರೆ. ಇಂತಹ ಆಪತ್ತಿನ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಬೇಕಾದ ಜನಪ್ರತಿನಿಧಿಗಳು ಹತ್ತಿರ ಸುಳಿಯುತ್ತಿಲ್ಲ.

ನೆರೆಪ್ರವಾಹಕ್ಕೂ ಮುನ್ನ ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದ ತಮ್ಮದೇ ತೆರಿಗೆ ಹಣಕ್ಕೆ ‘ಕಂತು’ ಎಂಬ ಹಾಳೆ ಸುತ್ತಿ ಭಿಕ್ಷೆಯಂತೆ ನೀಡುತ್ತಿರುವುದನ್ನು ಕಂಡು ಅಸಮಾಧಾನಗೊಂಡಿದ್ದಾರೆ.

ಮಾರ್ಚ್‌ನಲ್ಲೇನಾದರೂ ಅಕಾಲಿಕ ಮಳೆ ಸುರಿದರೆ ಈಗ ಮತ್ತೆ ಮನೆ ತುಂಬ ನೀರು ನಿಲ್ಲಲಿದೆ. ಇದ್ಯಾವುದರ ಪರಿವೆಯೂ ಇಲ್ಲದ ಜಿಲ್ಲಾಡಳಿತ ಫ್ಲಿಂಥು, ಜಿಪಿಎಸ್ಸು ಅಂತೆಲ್ಲ ಮಾತಾಡುತ್ತ ಕುಳಿತಿದೆ.

ಸಚಿವ ಸಿ.ಸಿ ಪಾಟೀಲ್‌

ರೋಣ ಮತ್ತು ನರಗುಂದದ ಎಲ್ಲ ಹಂತಗಳ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜನರ ಪರವಾಗಿ ಧ್ವನಿ ಎತ್ತುವುದು ಈಗ ಅನಿವಾರ್ಯ. ಅವರನ್ನು ಆರಿಸಿದ್ದು ಇನ್ನೇತಕ್ಕೆ?


ಸರ್ವೆ ನಂ. 703 ಮತ್ತು 705ರಲ್ಲಿ 15*20 ವಿಸ್ತೀರ್ಣದ ನನ್ನ ಎರಡು ಮನೆ ಇದ್ದವು. 703ರ ಮನೆ ಪೂರ್ತಿ ಬಿದ್ದಿದ್ದರೆ, 705ರ ಮನೆ ಭಾಗಶ: ಬಿದ್ದಿತ್ತು. ಸರ್ವೆ ಮಾಡಲು ಬಂದವರಿಗೆ 705ರ ಮನೆ ಬೇಡ, ಪೂರ್ತಿ ಬಿದ್ದ 703ರ ಮನೆ ಪರಿಗಣಿಸಿ ಎಂದೆ. ಎರಡನ್ನೂ ಸರ್ವೇ ಮಾಡಿಕೊಂಡು ಹೋಗಿ, ಭಾಗಶ: ಬಿದ್ದ ಮನೆ ಆಯ್ಕೆ ಮಾಡಿದ್ದಾರೆ. ಈ ಕುರಿತು ಡಿಸಿವರೆಗೆ ದೂರು ಕೊಟ್ಟರೂ ಸರಿಪಡಿಸಿಲ್ಲ.
-ವೀರಪ್ಪ ದ್ಯಾವಣ್ಣವರ, ಕೊಣ್ಣೂರು


ನನ್ನ ಹೊಲ, ಮನೆ ಎರಡೂ ಹಾನಿಯಾಗಿವೆ. ಭಾಗಶ: ಹಾನಿ ಎಂದು ಮೊದಲ ಕಂತು 25 ಸಾವಿರ ರೂ. ನೀಡಿದರು. 6 ತಿಂಗಳಾದರೂ 2ನೇ ಕಂತು ನೀಡುತ್ತಿಲ್ಲ. ತಹಸೀಲ್ದಾರ್, ಡಿಸಿ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ.
– ಕೃಷ್ಣಪ್ಪ, ವಾಸನ

ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ನೆರೆ ಪರಿಹಾರಕ್ಕೆ 57 ಕೋಟಿ ರೂ. ಖರ್ಚು ಮಾಡಿದ್ದೇವೆ. ಇನ್ನೂ 20 ಕೋಟಿ ರೂ ಇದೆ. ಆದರೆ ಮನೆ ನಿರ್ಮಾಣ ಅಥವಾ ರಿಪೇರಿಗೆ ಮೊದಲ ಕಂತು ಪಡೆದ ಬಹುತೇಕರು ಅದನ್ನು ಪೂರ್ಣಗೊಳಿಸಿಲ್ಲ. ಫ್ಲಿಂಥ್‌ವರೆಗೂ ಬಂದರೆ 2ನೇ ಕಂತು ಬಿಡುಗಡೆ ಮಾಡುತ್ತೇವೆ, ಅವರೇ ಅವಸರ ಮಾಡುತ್ತಿಲ್ಲ. 10 ಕೋಟಿ ರೂ ಬೆಳೆ ಪರಿಹಾರ ನೇರವಾಗಿ ರೈತರ ಖಾತೆಗೆ ಹೋಗಿದೆ. ಕೆಲವು ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ತಲುಪಿಲ್ಲ. ಸರಿಪಡಿಸುತ್ತೇವೆ.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...