Homeಚಳವಳಿಕಟ್ಟಬೇಕಿರುವುದು ಪರ್ಯಾಯ ಮಾಧ್ಯಮವನ್ನಲ್ಲ; ಹೊಸ ಮುಖ್ಯವಾಹಿನಿ ಮಾಧ್ಯಮವನ್ನು

ಕಟ್ಟಬೇಕಿರುವುದು ಪರ್ಯಾಯ ಮಾಧ್ಯಮವನ್ನಲ್ಲ; ಹೊಸ ಮುಖ್ಯವಾಹಿನಿ ಮಾಧ್ಯಮವನ್ನು

- Advertisement -
- Advertisement -

ಇದೇ ಅಂಕಣದಲ್ಲಿ ಹಲವು ಬಾರಿ ಹೊಸ ಮಾಧ್ಯಮದ ಕುರಿತು ಬರೆಯಲಾಗಿದೆ. ಪರ್ಯಾಯ ಮಾಧ್ಯಮ ಎಂದರೆ, ಅದು ಈಗಿನ ಟಿವಿ ಚಾನೆಲ್‌ಗಳು ಅಥವಾ ಪತ್ರಿಕೆಗಳಿಗಿಂತ ಹೂರಣ ಭಿನ್ನವಾಗಿದ್ದು ಸ್ವರೂಪ ಹಳೆಯದೇ ಇರುವುದಲ್ಲ ಎಂಬುದನ್ನು ಇಲ್ಲಿ ಪದೇ ಪದೇ ಪ್ರಸ್ತಾಪಿಸಲಾಗಿದೆ. ಇಂದಿನ ಮಾಧ್ಯಮಗಳ ಸ್ವರೂಪಕ್ಕೂ, ದೇಶದ ಇಂದಿನ ಆಡಳಿತದ ಸ್ವಭಾವಕ್ಕೂ ತಾಳೆಯಾದರೆ ಮಾತ್ರ ಅವು ಉಳಿದುಕೊಳ್ಳಲು ಸಾಧ್ಯವಿರುವ ಸ್ಥಿತಿಯಿದೆ. ಹಾಗಾಗಿಯೇ ಈಗಿನ ಮಾಧ್ಯಮಗಳ ಪ್ರಗತಿಪರ ನಕಲನ್ನು ಮಾಡುತ್ತೇವೆಂದು ಹೊರಟವರೂ ಚಿಂದಿಯಾಗಿ ಹೋಗುತ್ತಾರೆ, ಹೋಗಿದ್ದಾರೆ. ಅದಕ್ಕೆ ಪತ್ರಿಕೋದ್ಯಮ ಕಾರ್ಯನಿರ್ವಹಿಸಲು ಬೇಕಾದ ಎಕನಾಮಿಕ್ಸೂ ಕಾರಣ; ಹೊಸ ಸಂದರ್ಭವೂ ಕಾರಣ.

ಕ್ರೌಡ್ ಫಂಡಿಂಗ್ (ಜನರಿಂದಲೇ ಹಣ ಸಂಗ್ರಹಿಸುವುದರ) ಮೂಲಕವೇ ಪರ್ಯಾಯ ಮಾಧ್ಯಮ ಸಂಸ್ಥೆ ನಡೆಸುತ್ತೇವೆಂದು ಕೆಲವು ಹಿರಿಯ ಪತ್ರಕರ್ತರು ಅಖಿಲ ಭಾರತ ಮಟ್ಟದಲ್ಲೇ ದೊಡ್ಡ ಪ್ರಯತ್ನ ನಡೆಸಿದ್ದರು. ಅದೂ ಮುಂದುವರೆಯಲಿಲ್ಲ. ಇಂದು ಕ್ರೌಡ್‌ ಫಂಡಿಂಗ್‌ ಮಾತ್ರವಲ್ಲದೇ ಕ್ರೌಡ್ ಬೇಸ್ಡ್ ಆದ ಮತ್ತು ಹೊಸದೇ ಸ್ವರೂಪದ ಮಾಧ್ಯಮ ಮಾತ್ರ ಉಳಿದುಕೊಳ್ಳಲು ಸಾಧ್ಯ. ಜನರನ್ನು ಆ ಪಾಟಿ ಸಂಘಟಿಸಿ ಪರಿಣಾಮಕಾರಿಯಾಗಿ ನೆಲೆ ನಿಂತು ಬೆಳವಣಿಗೆಯ ದಿಕ್ಕಿನಲ್ಲಿರುವ ಆಂದೋಲನವೂ ಇಲ್ಲದಾಗ, ಜನರನ್ನು ಆಧರಿಸಿದ ಮಾಧ್ಯಮ ಹೇಗೆ ಬೆಳೆಯಲು ಸಾಧ್ಯ ಎಂಬುದು ಮುಂದಿನ ಪ್ರಶ್ನೆ.

ಪತ್ರಿಕೆ ಮತ್ತು ಟಿವಿಗಳಷ್ಟೇ ಅಲ್ಲದೇ ಸಾಮಾಜಿಕ ಮಾಧ್ಯಮಗಳೂ ಸಹಾ ಇಂದು ದುಷ್ಟ ಹಿತಾಸಕ್ತಿಗಳ ಕೈಯ್ಯಲ್ಲಿನ ಶಕ್ತಿಶಾಲಿಯಾದ ಆಯುಧವಾಗಿ ಝಳಪಿಸಲ್ಪಡುತ್ತಿವೆ. ಆದರೆ ಅದು ಕೇವಲ ಉಪಕರಣ ಮಾತ್ರವಾಗಿಲ್ಲ; ಬದಲಿಗೆ ಈ ಮೂರನ್ನೂ ಸೇರಿಸಿ ಜನರ ಮನೋಲೋಕವನ್ನು ಬೇಕೆಂದ ಹಾಗೆ ರೂಪಿಸುವ ದೊಡ್ಡ ಯಂತ್ರಾಂಗವನ್ನು ನಿರ್ಮಿಸಲಾಗಿದೆ. ಹಲವರು ಭಾವಿಸುತ್ತಿರುವ ರೀತಿ ಈ ಯಂತ್ರಾಂಗವನ್ನು ಮೋದಿ ಬ್ರ್ಯಾಂಡ್ ರಾಜಕಾರಣ ಅಥವಾ ಅವರ ಟೀಂ ರೂಪಿಸಿದ್ದಲ್ಲ. ಹಾಗೆ ನೋಡಿದರೆ ಆ ಬ್ರ್ಯಾಂಡ್‌ ರಾಜಕಾರಣವನ್ನು ಮತ್ತು ಮೋದಿ ಟೀಂ ಅನ್ನು ರೂಪಿಸಲು ಈ ಯಂತ್ರಾಂಗವೇ ಕೊಡುಗೆ ಕೊಡುಗೆ ನೀಡಿದೆ. ಇದು ಈ ಕಾಲದ ಒಂದು ವಿದ್ಯಮಾನ; ಜಾಗತಿಕ ವಿದ್ಯಮಾನ. ಒಂದು ಹಂತದ ಬೆಳವಣಿಗೆಯ ನಂತರ ಸಾಮಾಜಿಕ ಜಾಲತಾಣಗಳನ್ನೂ ಸಹಾ ತಮಗೆ ಬೇಕಾದ ಹಾಗೆ ಆಡಿಸಲು, ಬಳಸಿಕೊಳ್ಳಲು ಮೋದಿ ಥರದವರು ಚೆನ್ನಾಗಿ ಅರಿತಿದ್ದಾರೆ. ಅದೊಂದು ದೊಡ್ಡ ಕಾರ್ಪೋರೇಟ್‌ ಉದ್ದಿಮೆಯಾಗಿದೆ. ಹಾಗಾಗಿ ಕೇವಲ ಸಾಮಾಜಿಕ ಜಾಲತಾಣಗಳನ್ನು ನಂಬಿಕೊಂಡು ಪರ್ಯಾಯವನ್ನು ಕಟ್ಟುವುದೂ ಸಾಧ್ಯವಿಲ್ಲ.


ಇದನ್ನೂ ಓದಿ: ಮಾಧ್ಯಮಗಳೇ ಸಂದೇಶವಾದರೆ ಸಂವಿಧಾನದ ಆಶಯಗಳೇ ಪತನ!


ಹಾಗಾಗಿ ನಾವು ಈ ಕಾಲಘಟ್ಟಕ್ಕೆ ಸೂಕ್ತವಾದ ಮಾಧ್ಯಮವನ್ನೇ ನಾವು ಕಟ್ಟಿಕೊಳ್ಳಬೇಕು. ಇದಕ್ಕಾಗಿ ಜಗತ್ತಿನ ವಿವಿಧೆಡೆಗಳ ಹಲವು ಪ್ರಯೋಗಗಳಿಂದಲೂ ಕಲಿಯಬೇಕು.. ಇದುವರೆಗಿನ ಮಾಧ್ಯಮಗಳೆಲ್ಲದರಿಂದಲೂ (ಪ್ರಿಂಟ್‌, ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಿಂದ) ಪಡೆದುಕೊಳ್ಳಲು ಇರುತ್ತದೆ, ಅವನ್ನೂ ಬಳಸಿಕೊಳ್ಳಬೇಕಿದೆ. ಆದರೆ ಅದ್ಯಾವುದೂ ಹೊಸ ಕಾಲದ ಮಾಧ್ಯಮ ಆಗಿರುವುದಿಲ್ಲ.

ಸಾಮಾಜಿಕ ಜಾಲತಾಣಗಳು ಅಸ್ತಿತ್ವಕ್ಕೆ ಬಂದ ನಂತರ ಮತ್ತು ಪ್ರಜಾತಂತ್ರವು ಈ ಪ್ರಮಾಣಕ್ಕೆ ವಿಸ್ತರಣೆಯಾದ ನಂತರ (ಪ್ರಜಾತಂತ್ರವು ಇನ್ನೊಂದು ಅರ್ಥದಲ್ಲಿ ಕುಗ್ಗುತ್ತಿದೆ ಎಂಬುದು ಬೇರೆ ಚರ್ಚೆ) ಮಾಧ್ಯಮದ ಅಸ್ತಿತ್ವದ ವಿಚಾರದಲ್ಲಿ ಒಂದು ದೊಡ್ಡ ಬದಲಾವಣೆ ಆಗಿದೆ. ಹೊಸ ಕಾಲದ ಮಾಧ್ಯಮವು ಪ್ರತ್ಯೇಕ ಅಸ್ತಿತ್ವವನ್ನು ಹೊಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ಹೊಸ ಬಗೆಯ ಮಾಧ್ಯಮಕ್ಕೂ, ಹೊಸ ಕಾಲದ ರಾಜಕೀಯ ಆಂದೋಲನಕ್ಕೂ ಅವಿನಾಭಾವ ಸಂಬಂಧವಿರುತ್ತದೆ. ಅವು ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಅಂತಹ ಆಂದೋಲನವನ್ನು ಕಟ್ಟುವುದೆಂದರೆ ಹೊಸ ಮಾಧ್ಯಮವನ್ನೂ ಕಟ್ಟಿದಂತೆಯೇ. ಹಾಗೆಯೇ ಇದಿಲ್ಲದೇ ಅದೂ ಇಲ್ಲ. ಮುಂದಿನ ದಿನಗಳಲ್ಲಿ ಕೇಂದ್ರೀಕೃತವಾದ, ಒಂದು ನಿರ್ದಿಷ್ಟ ಸಣ್ಣ ಗುಂಪಿನ ಹಿತಾಸಕ್ತಿಯನ್ನು ಕಾಯುವ ಪ್ರಗತಿಪರ ಜನಚಳವಳಿ ಸಾಧ್ಯವಿಲ್ಲ. ಹಾಗೆಯೇ ಕಳೆದ ಶತಮಾನದಲ್ಲಿ ಘನೀಭವಿಸಿದ ಯಾವುದೇ ಸಿದ್ಧಾಂತದ ಘನ ಎರಕದಲ್ಲೇ ಕೆಲಸ ಮಾಡುವ ಒಂದು ಚಳವಳಿಯೂ ಇಂದು ಸಾಧ್ಯವಿಲ್ಲ.

ಅದೇ ರೀತಿ ಕೇಂದ್ರೀಕೃತವಾದ ಒಂದು ಮಾಧ್ಯಮ ಸಂಸ್ಥೆಯು ಹೊಸ ಮಾಧ್ಯಮ ಆಂದೋಲನವನ್ನು ಕಟ್ಟುವುದೂ ಸಾಧ್ಯವಿಲ್ಲ.

ಇದುವರೆಗಿನ ಎಲ್ಲವೂ ತಮ್ಮ ಹಿತಾಸಕ್ತಿಗೆ ಪೂರಕವಾಗಿಲ್ಲವೆಂದೆನಿಸಿ ಅವನ್ನು ಕಿತ್ತೊಗೆಯುವಾಗ ಜನರು ತಮ್ಮ ಹಿತಾಸಕ್ತಿಯನ್ನು ಅತ್ಯಂತ ಹೆಚ್ಚು ಮಣ್ಣುಗೂಡಿಸುವ ನಾಯಕರಿಗೆ/ಪಕ್ಷಕ್ಕೆ ಓಟು ಹಾಕಿದಂತೆಯೇ, ಅವರ ಹಿತಾಸಕ್ತಿಗೆ ಅತ್ಯಂತ ವಿರುದ್ಧವಾದ ಮಾಧ್ಯಮದ ಟಿಆರ್‌ಪಿಯನ್ನೂ ಹೆಚ್ಚಿಸುತ್ತಾ ಕೂತಿದ್ದಾರೆ. ಆಳದಲ್ಲಿ ಅಪ್ಪಟ ಮಹಿಳಾ ವಿರೋಧಿಯಾದ ಟಿವಿ ಸೀರಿಯಲ್ಲುಗಳನ್ನು ಮಹಿಳೆಯರೇ ಹೆಚ್ಚು ನೋಡುವುದು ಅದಕ್ಕೆ ಒಂದು ಉದಾಹರಣೆ ಅಷ್ಟೇ. ತಮ್ಮ ವೀಕ್ಷಣೆಯನ್ನೇ ಒಂದು ಸರಕನ್ನಾಗಿ ಬಳಸುವ ಮಾಧ್ಯಮಸಂಸ್ಥೆಯು ತಮ್ಮ ವಿರುದ್ಧ ಸಂಚು ರೂಪಿಸುತ್ತಿರುವುದನ್ನು ಅರಿಯುತ್ತಿಲ್ಲವಷ್ಟೇ ಅಲ್ಲ, ತಾವೂ ಮೊಬೈಲ್ ಸ್ಕ್ರೀನ್‌ಅನ್ನು ಒತ್ತುತ್ತಾ ಆ ಮಾಧ್ಯಮ ಸಂಸ್ಥೆಯ ಉಪಕರಣವಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದನ್ನು ಬದಲಿಸಬೇಕೆಂದರೆ ಅವರವರ ಹಿತಾಸಕ್ತಿಯ ಕುರಿತು ರೀ ಓರಿಯೆಂಟ್‌ ಮಾಡುವ ಅಗತ್ಯ ಇದೆ. ಇದು ಮಾಧ್ಯಮ ಮತ್ತು ರಾಜಕೀಯ ಆಂದೋಲನದ ಜಂಟಿ ಕರ್ತವ್ಯವಾಗಿದೆ.

ಇದರ ಅರ್ಥ ಇಷ್ಟು. ಜನರ ಹಿತಾಸಕ್ತಿಯನ್ನು ಅತ್ಯಂತ ಸರಳ ರೀತಿಯಲ್ಲಿ ಅವರಿಗೇ ಅರ್ಥ ಮಾಡಿಸುವುದು ಒಂದು ಪೂರ್ವಶರತ್ತು. ಎರಡನೆಯದಾಗಿ ಇಂದು ಹೊಸ ಮಾಧ್ಯಮವನ್ನು ಕಟ್ಟುವುದೆಂದರೆ ಅದೊಂದು ಆಂದೋಲನ. ಜನರೇ ಸೃಷ್ಟಿಸುವ ಸುದ್ದಿಗಳನ್ನು ಸತ್ಯದ, ಸಮಾನತೆಯ ಮೌಲ್ಯದ ಮತ್ತು ಪ್ರೀತಿಯ ನೆಲೆಯಲ್ಲಿ ರೀ-ಪ್ಯಾಕೇಜ್ ಮಾಡಿ ಕೊಡುವುದಷ್ಟೇ ಮಾಧ್ಯಮ ಸಂಸ್ಥೆಯ ಕೆಲಸ. ಈ ರೀತಿ ರೀಪ್ಯಾಕೇಜ್‌ ಆದ ತಮ್ಮ ಹಿತಾಸಕ್ತಿಯನ್ನು ಕಾಪಾಡುವ ಸುದ್ದಿಗಳನ್ನು ಹರಡುವ ಕೆಲಸವನ್ನು ಅದೇ ಜನರೇ ಮಾಡುವ ಯಂತ್ರಾಂಗದ ಆರಂಭಿಕ ರಚನೆಗಳನ್ನು ಕಟ್ಟಲು ಒಂದು ತಂಡ ಕೆಲಸ ಮಾಡಬೇಕು. ಇಷ್ಟನ್ನು ಬಿಟ್ಟರೆ ಆಂದೋಲನವನ್ನು ರೂಪಿಸುವುದು ಜನರ ಕೆಲಸವೇ ಹೊರತು ಮಾಧ್ಯಮತಂಡದ್ದಲ್ಲ.

ಅದರ ಜೊತೆಗೆ ಈ ಸದ್ಯದಲ್ಲಿ ಸುಳ್ಳುಗಳನ್ನು ಬಯಲುಗೊಳಿಸುವುದು, ಸುಳ್ಳುಬುರುಕರ ಮುಂದಿನ ನಡೆಗಳನ್ನು ಮೊದಲೇ ಊಹಿಸಿ ಅದಕ್ಕೆ ಬೇಕಾದ ತಯಾರಿ ಮಾಡುವುದು, ಫೇಕ್ ಮಾಧ್ಯಮವನ್ನು ಅಮಾನ್ಯಗೊಳಿಸುವುದು ಮಾಡಬೇಕಾಗುತ್ತದೆ. ಆದರೆ, ಇರುವ ಸವಾಲು ಅದಲ್ಲ; ಸವಾಲಿರುವುದು ಕೋಟಿಗಟ್ಟಲೇ ಜನರಿಗೆ ನಿರಂತರವಾಗಿ ವಿಷಯ ತಲುಪಿಸುವ ಜಾಲವನ್ನು ಕಟ್ಟುವುದು ಹಾಗೂ ಪ್ರತೀ ಮೂಲೆಯಲ್ಲೂ ರೂಪುಗೊಳ್ಳುವ ಮಾಧ್ಯಮ ಕಾರ್ಯಕರ್ತರನ್ನು ನಿಭಾಯಿಸುವುದು. ವ್ಯಕ್ತಿ ಕೇಂದ್ರಿತ ಜಗತ್ತಿನಲ್ಲಿ, ತಮ್ಮ ಮುಖವೇ ಮುಂದೆ ಇರಬೇಕು ಎಂಬ ನಾರ್ಸಿಸಂಅನ್ನು ಸಾಮಾಜಿಕ ಜಾಲತಾಣಗಳೂ ಬೆಳೆಸಿರುವುದರಿಂದ ಅದನ್ನು ಮೀರುವುದು ಸುಲಭವಲ್ಲ. ಇಂತಹ ತಂಡದೊಳಗೇ ಬರುವ ಈಗೋ ಸಮಸ್ಯೆಗಳನ್ನು ನಿಭಾಯಿಸುವುದೂ ದೊಡ್ಡ ಚಾಲೆಂಜ್. ಆ ಸವಾಲನ್ನು ನಾವು ಎದುರಿಸುವುದಾದಲ್ಲಿ ಇಂದಿಗೂ ಬೃಹತ್‌ ಜನ ಮಾಧ್ಯಮವನ್ನು ಕಟ್ಟಲು ಬೇಕಾದ ಜನರು ಈಗಾಗಲೇ ಸಮಾಜದಲ್ಲಿದ್ದಾರೆ.

ಅಮೆರಿಕಾ ಯೂರೋಪ್‌ ಮಾತ್ರವಲ್ಲದೇ, ಲ್ಯಾಟಿನ್‌ ಅಮೆರಿಕಾ ದೇಶಗಳು ಹಾಗೂ ನಮ್ಮ ದೇಶದಲ್ಲೂ ನಡೆಯುತ್ತಿರುವ ಪ್ರಯೋಗಗಳ ಆಧಾರದ ಮೇಲೆ ಹೊಸ ಮಾಧ್ಯಮದ ಪರಿಕಲ್ಪನೆಯ ಈ ಚೌಕಟ್ಟನ್ನು ನಿಮ್ಮ ಮುಂದಿಡಲಾಗಿದೆ.


ಇದನ್ನೂ ಓದಿ:  ಮಾಧ್ಯಮಗಳೇ, ಧರ್ಮವೀರರೇ ಸಾವಿನ ಹೊಣೆಯನ್ನು ನೀವೂ ಹೊರಬೇಕಲ್ಲವೇ?


ಈಗ ಅಂತಹ ಬೃಹತ್‌ (ಹೊಸ) ಮಾಧ್ಯಮ ನೆಟ್ವರ್ಕ್‌ಗೆ ಬೇಕಾದ ಆರಂಭಿಕ ರಚನೆಗಳನ್ನು ಕಟ್ಟುವ, ಸುದ್ದಿಯ ಸಂಸ್ಕರಣೆ ಮತ್ತು ಜನರಿಂದ ಬರುವ ಸುದ್ದಿಗಳನ್ನು ಸಂಸ್ಕರಿಸುವ ಘಟಕವನ್ನು ಕಟ್ಟುವ ಕೆಲಸಕ್ಕೆ ಬೇಕಾದ ಬುನಾದಿಯನ್ನು ಕಟ್ಟಲು ನಾವು ಪ್ರಯತ್ನಿಸುತ್ತಿದ್ದೇವೆ. ಲಕ್ಷಗಟ್ಟಲೇ ಜನರನ್ನು ಒಮ್ಮೆಗೇ ತಲುಪುವ ನೆಟ್‌ವರ್ಕ್ ರೂಪುಗೊಳ್ಳುತ್ತಿದೆ. ವಿಕೇಂದ್ರೀಕೃತವಾಗಿ, ಸ್ವಾಯತ್ತವಾಗಿ ಇದರ ಜೊತೆಗೂಡಬಹುದಾದ ಸಹಯೋಗಿಗಳ ಜೊತೆಗೆ ಒಪ್ಪಂದಗಳು ಆಗುತ್ತಿವೆ. ಕೇಂದ್ರ ತಂಡದ ಜೊತೆಗೆ ಕೆಲಸ ಮಾಡಲು ಸಿದ್ಧವಿರುವವರ ವಾಲಂಟಿಯರ್‌ಗಳ ಹುಡುಕಾಟದಲ್ಲಿದ್ದೇವೆ.

ಈ ಹೊಸ ಮಾಧ್ಯಮದ ಭಾಗವಾಗಿ ನೀವಿರಲು ಸಾಧ್ಯವೇ?

ಈ ಬಗ್ಗೆ ಸಂದೇಹ ಬೇಡ. ಇದನ್ನು ಒಂದು ದೊಡ್ಡ ಆಂದೋಲನವಾಗಿ ಕಟ್ಟಬೇಕಿರುವುದರಿಂದ ಇದಕ್ಕೆ ಎಷ್ಟು ಜನರಿದ್ದರೂ ಸಾಲದು. ಕನಿಷ್ಠ ಶಿಸ್ತು, ವ್ಯಕ್ತಿಗತ ಕನ್ನಡಕಗಳನ್ನು ಪಕ್ಕಕ್ಕಿಟ್ಟು ಬೃಹತ್ ಸವಾಲನ್ನು ಎದುರಿಸುವ ಉದ್ದೇಶಕ್ಕೆ ಬದ್ಧವಾಗಿದ್ದು ಸ್ವಲ್ಪ ಸಮಯ ಕೊಡಬಲ್ಲವರಾಗಿದ್ದರೆ ಇದರ ಜೊತೆಗೂಡಬಹುದು. ಜನರನ್ನಾಧರಿಸಿದ ನಿಜವಾದ ಮಾಧ್ಯಮ ಆಂದೋಲನವೊಂದು ಬೆಳೆದುನಿಂತಾಗ ನಕಲಿ ಮಾಧ್ಯಮಗಳನ್ನು ಓದು/ನೋಡುವವರಿಲ್ಲದೇ ಅಥವಾ ಅತ್ಯಂತ ಸೀಮಿತ ಸಂಖ್ಯೆಯ ಜನರು ಮಾತ್ರ ನೋಡುವುದರೊಂದಿಗೆ ಅವು ಅಪ್ರಸ್ತುತವಾಗುತ್ತವೆ. ಹೊಸ ಮುಖ್ಯವಾಹಿನಿಯೊಂದು ತಯಾರಾಗಿರುತ್ತದೆ. ಹೌದು ಕಟ್ಟಬೇಕಿರುವುದು ಪರ್ಯಾಯ ಮಾಧ್ಯಮವನ್ನಲ್ಲ. ನಿಜವಾದ ಮುಖ್ಯವಾಹಿನಿ ಮಾಧ್ಯಮವನ್ನು.

ಇದಕ್ಕೆ ಸಿದ್ಧರಿರುವುದಾದಲ್ಲಿ, ನಮ್ಮ ನಿರ್ದಿಷ್ಟ ಯೋಜನೆ ಏನು ಎಂಬುದನ್ನು ನಿಮ್ಮೊಡನೆ ಚರ್ಚಿಸಲು ನಾವು ಉತ್ಸುಕರಾಗಿದ್ದೇವೆ. ಹಾಗೆಯೇ ಹೊಸ ಮಾಧ್ಯಮದ ಪರಿಕಲ್ಪನೆಯ ಬೆಳವಣಿಗೆಗೆ ನಿಮ್ಮ ಅನಿಸಿಕೆಗಳನ್ನು ಒಳಗೊಳ್ಳಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ.


ವಿಡಿಯೋ ನೋಡಿ: ದಯವಿಟ್ಟು ಇದನ್ನು ‘ಮೀಡಿಯಾ ವೈರಸ್’ ಎಂದು ಕರೆಯಬೇಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಉತ್ತಮ ಒಳನೋಟಗಳು. ಇದನ್ನು ಇನ್ನಷ್ಟು ಸಾಂದ್ರೀಕರಿಸಬೇಕು ಮತ್ತು ವಿಷದೀಕರಿಸಬೇಕು- ಸರಳವಾಗಿ ಮಾಡಬೇಕಾಗಿರುವುದು ಏನು, ಏಕೆ, ಹೇಗೆ ಎಂಬ ಬಗ್ಗೆ ಪಾಯಿಂಟ್ ಟು ಪಾಯಿಂಟ್ ವಿವರ ಕ್ರೋಢೀಕರಿಸಬೇಕು. ಸ್ವರೂಪ ರೂಪಿಸಲು ನಂತರವಷ್ಟೇ ಸಾಧ್ಯ.

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...