Homeಮುಖಪುಟಬಹು ಜನಾಂಗೀಯ ಸಮಾಜ, ಹೆಚ್ಚುತ್ತಿರುವ ಆಕಾಂಕ್ಷೆಗಳು ಮತ್ತು ಪಲಾಯನವಾದಿ ಆಡಳಿತ; ಮಣಿಪುರದಲ್ಲಿ 2023ರ ಕುಕಿ-ಮೈತ್‌ಯಿ ಘರ್ಷಣೆಗಳು

ಬಹು ಜನಾಂಗೀಯ ಸಮಾಜ, ಹೆಚ್ಚುತ್ತಿರುವ ಆಕಾಂಕ್ಷೆಗಳು ಮತ್ತು ಪಲಾಯನವಾದಿ ಆಡಳಿತ; ಮಣಿಪುರದಲ್ಲಿ 2023ರ ಕುಕಿ-ಮೈತ್‌ಯಿ ಘರ್ಷಣೆಗಳು

- Advertisement -
- Advertisement -

ಮೇ2023ರಲ್ಲಿ ಮಣಿಪುರದಲ್ಲಿ ಕುಕಿಗಳು ಮತ್ತು ಮೈತ್‌ಯಿಯರು ಪರಸ್ಪರ ಹೊಡೆದಾಡಿಕೊಂಡದ್ದು ದುರದೃಷ್ಟಕರ ಸರಣಿ ಘಟನೆಗಳಾಗಿವೆ. ಆದರೂ, ಇದಕ್ಕೆ ಮುನ್ನುಡಿ ಬರೆದ ರಾಜಕೀಯ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳು, ಕೆಸರೆರಚಾಟಗಳೆಲ್ಲವೂ ಮುಂದುವರಿಯುತ್ತಲೇ ಇವೆ. ಈ ರೀತಿಯ ಸಂದರ್ಭದಲ್ಲಿ, ನಡೆದದ್ದೇನು ಹಾಗೂ ಇವೆಲ್ಲದರ ಒಟ್ಟು ಪರಿಣಾಮವೇನು ಎಂಬುದು ಸಾಮಾನ್ಯವಾಗಿ ನಮ್ಮ ತಿಳಿವಳಿಕೆಯನ್ನು ರೂಪಿಸುತ್ತದೆಯಾದರೂ, ಪ್ರಸ್ತುತ ಬಿಕ್ಕಟ್ಟನ್ನು ಅರ್ಥೈಸಿ ವಿವರಿಸಲು ಇಂತಹ ವಿಧಾನಗಳು ಸೂಕ್ತವಲ್ಲ ಎಂದು ನಾನು ದೃಢವಾಗಿ ನಂಬಿದ್ದೇನೆ. ಇದಕ್ಕಾಗಿ ನಾವು ಹಿಂದಿನ ಕೆಲವು ದಶಕಗಳಲ್ಲಿ ಜನಾಂಗೀಯತೆಗಳು ರೂಪುಗೊಂಡ ಬಗೆ, ಎಲ್ಲಾ ಜನಾಂಗಗಳಲ್ಲಿನ ಜನರಲ್ಲಿ ರೂಪಿತವಾಗಿರುವ ಹೊಸ ಬೆಸುಗೆ ಭಾವಗಳು, ಪ್ರತಿ ಜನಾಂಗದ ಸಂಖ್ಯಾಬಲಗಳು ಹಾಗೂ ಅವುಗಳ ಗುಣಾತ್ಮಕ ಏರಿಳಿತಗಳು ಹಾಗೂ ಒಟ್ಟಾರೆಯಾಗಿ ಆರ್ಥಿಕತೆ ಮತ್ತು ಸಮಾಜದಲ್ಲಿ ಉಂಟಾಗುತ್ತಿರುವ ಪಲ್ಲಟಗಳನ್ನು ಗಮನಿಸಿದರೆ ಮಾತ್ರ ಇದನ್ನು ಸರಿಯಾಗಿ ಅರ್ಥೈಸಬಹುದಾಗಿದೆ.

ಮಣಿಪುರದ ಉಚ್ಚ ನ್ಯಾಯಾಲಯವು, ಮೈತ್‌ಯಿ ಸಮುದಾಯವನ್ನು ಭಾರತದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವಂತೆ ಸರ್ಕಾರಕ್ಕೆ ನೀಡಿದ ಆದೇಶದಾಚೆಗೆ ಮಣಿಪುರದಲ್ಲಿ ನಡೆದ ಘಟನಾವಳಿಗಳನ್ನು ದೂರದೃಷ್ಟಿ ಮತ್ತು ಸಮಗ್ರತೆಯೊಂದಿಗೆ ವಿಶ್ಲೇಷಿಸಲು ಬಯಸುತ್ತೇನೆ. ಮೈತ್‌ಯಿ ಸಮುದಾಯವನ್ನು ಭಾರತದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಯ ಮತ್ತು ಅದಕ್ಕೆ ಪೂರಕವಾದ ಉಚ್ಚ ನ್ಯಾಯಾಲಯದ ಆದೇಶ ಮಾತ್ರವೇ ಇತ್ತೀಚಿನ ಘರ್ಷಣೆಗಳಿಗೆ ಕಾರಣವಲ್ಲ.

ಆದ್ದರಿಂದ, ಇದಕ್ಕೆ ಎಡೆ ಮಾಡಿಕೊಡಬಹುದಾದ ಸಂಭವನೀಯ ಕಾರಣಗಳನ್ನು ಗಮನಿಸೋಣ. ಕಳೆದ ಎರಡು ದಶಕಗಳಲ್ಲಿ, ಕುಕಿಗಳಲ್ಲಿನ ಆರೋಗ್ಯಪೂರ್ಣ, ಸಕಾರಾತ್ಮಕ ಸಾಮಾಜಿಕ ಶಕ್ತಿಯು ಜನರ ಕಣ್ಣುಗಳನ್ನು ಸೆಳೆದಿವೆ. ಕುಕಿ ಯುವಕರು ಮತ್ತು ಕುಕಿ ಯುವತಿಯರನ್ನು ಶೈಕ್ಷಣಿಕ ಕೋರ್ಸುಗಳಿಂದ ಹಿಡಿದು ವೃತ್ತಿಪರ ಪದವಿಗಳವರೆಗೆ ಎಲ್ಲಾ ಕಡೆಗಳಲ್ಲಿಯೂ ನಾವಿಂದು ಹೆಚ್ಚಾಗಿ ಕಾಣುತ್ತಿದ್ದೇವೆ. ಇದು ಅವರ ಸಮುದಾಯದ ಸಾಮಾಜಿಕ ಆಕಾಂಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಪ್ರಕ್ರಿಯೆಯು ಖಂಡಿತವಾಗಿಯೂ ಅವರ ನಡವಳಿಕೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸಿರಬೇಕು. ಅಲೆಮಾರಿ ಸಮುದಾಯವಾಗಿದ್ದ ಕುಕಿಗಳು ಕಳೆದ ಮೂವತ್ತು/ನಲವತ್ತು ವರ್ಷಗಳಲ್ಲಿ, ತಮ್ಮ ಹಿಂದಿನ ಜೀವನಶೈಲಿ ಮತ್ತು ಸಾಮಾಜಿಕ ಪದ್ಧತಿಗಿಂತ ಭಿನ್ನವಾದ ರೀತಿಯಲ್ಲಿ ಅಂದರೆ ಶಾಶ್ವತವಾಗಿ ಒಂದು ಸ್ಥಳದಲ್ಲಿ ನೆಲೆಸಲು ಆದ್ಯತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ನಾವು ಗಮನಿಸಬಹುದು. ನೆಲೆಯನ್ನು ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿನ ಗಣನೀಯ ಕುಸಿತವು ಅವರ ಗಮನವನ್ನು ಸರ್ಕಾರದತ್ತ ಸೆಳೆದಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳ ಭೌಗೋಳಿಕ ಗಾತ್ರವು ಈ ಹಿಂದೆಯಂತೆಯೇ, ಇಂದೂ ಕೂಡ ಹೆಚ್ಚುಕಮ್ಮಿ ಒಂದೇ ಆಗಿದ್ದರೂ, ಅಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಮರಗಳು ಅಧಿಕಾರಗಳ ಮತ್ತು ಮೇಲಧಿಕಾರಿಗಳ ಸ್ವಾರ್ಥಕ್ಕೆ ಸುಲಭ ಗುರಿಗಳಾಗಿವೆ. ಆದ್ದರಿಂದ ಕುಕಿಗಳು ಈ ಪ್ರದೇಶಗಳಲ್ಲಿ ನೆಲೆಗೊಳ್ಳಲು ತಮ್ಮ ಆದ್ಯತೆಯನ್ನು ವ್ಯಕ್ತಪಡಿಸಿದಾಗ, ಅದನ್ನು ನಿರಾಕರಿಸುವ ನೈತಿಕ ನೆಲೆಯು ಸ್ವಾಭಾವಿಕವಾಗಿ ದುರ್ಬಲವಾಗಿರುತ್ತದೆ.

ಇದನ್ನೂ ಓದಿ: ಎಲ್ಲ ವಿಷಯಗಳಲ್ಲಿ ಕೇಂದ್ರ ಮೂಗು ತೂರಿಸುವಂತಿಲ್ಲ; ದೆಹಲಿ ಸರ್ಕಾರದ ಪರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ಸ್ಥಾಪನೆಯೂ ಕೂಡ ಈ ವಾಸ್ತವತೆಯೊಂದಿಗೆ ಬೆಸೆದುಕೊಂಡಿದೆ. ಗಡಿಯ ಎರಡೂ ಕಡೆಗಳಲ್ಲಿ ನೆಲೆಸಿರುವ ಕುಕಿಗಳು ಚೀನಾದ ಉತ್ತೇಜನದೊಂದಿಗೆ ತಮ್ಮ ನಡುವಿನ ಸಂವಹನವನ್ನು ಗಟ್ಟಿಗೊಳಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂಬ ಸೂಚನೆಗಳೂ ಸಿಗುತ್ತಲಿವೆ. ಇಲ್ಲಿನ ಗಡಿಗಳು ಭದ್ರವಿಲ್ಲದ ಕಾರಣಕ್ಕೆ ಹಾಗೂ ಮಹತ್ವದ ರಾಜಕೀಯ ಬೆಳವಣಿಗೆಗಳು ಗಡಿಯುದ್ದಕ್ಕೂ ನಡೆಯುತ್ತಿರುವ ಹಿನ್ನಲೆಯಲ್ಲಿ, ಭಾರತವು ಈಶಾನ್ಯ ರಾಜ್ಯಗಳು ಹಾಗೂ ಅದರಲ್ಲೂ ವಿಶೇಷವಾಗಿ ಮಣಿಪುರವನ್ನು ಗಮನದಲ್ಲಿರಿಸಿ ಮ್ಯಾನ್ಮಾರ್‌ನೊಂದಿಗೆ ವ್ಯವಹರಿಸಲು ನೀತಿಯೊಂದನ್ನು ಹೊಂದುವುದು ಅತ್ಯಂತ ಅನಿವಾರ್ಯವೆನಿಸಿದೆ. ಆದರೆ, ಮ್ಯಾನ್ಮಾರಿನೊಟ್ಟಿಗೆ ವ್ಯವಹರಿಸಲು ಸೂಕ್ತವಾದ ನೀತಿಯೊಂದನ್ನು ಭಾರತವು ಹೊಂದಿದೆಯೇ? ಇಲ್ಲ.

ಮಣಿಪುರದ ಸಮಾಜವನ್ನು ರಚಿಸುವ ವಿಭಿನ್ನ ಜನಾಂಗೀಯ ಗುಂಪುಗಳೊಂದಿಗೆ ಮತ್ತು ಅಂತರ-ಜನಾಂಗೀಯ ಸಂಖ್ಯಾಬಲಗಳು ಮತ್ತು ಈ ಜನಾಂಗಗಳ ಗುಣಾತ್ಮಕ ಆಯಾಮಗಳು ಗಮನಾರ್ಹವಾಗಿ ಬದಲಾಗುತ್ತಿರುವುದರಿಂದ, ದೇಶೀಯ ಮತ್ತು ಅಂತಾರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಮನದಲ್ಲಿರಿಸಿಕೊಂಡು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳನ್ನು ಪ್ರತಿಬಿಂಬಿಸುವಂತಹ ಜನಸಂಖ್ಯಾ (ಜನಸಂಖ್ಯೆ) ನೀತಿಯನ್ನು ರೂಪಿಸಿಕೊಳ್ಳುವುದು ಈ ಕಾಲದ ತುರ್ತಾಗಿದೆ. ಹಾಗಾದರೆ, ಭಾರತವಾಗಲೀ, ಮಣಿಪುರವಾಗಲೀ ಈ ರೀತಿಯ ನೀತಿಯೊಂದನ್ನು ಹೊಂದಿದೆಯೇ? ಇಲ್ಲ.

ವಿವಿಧ ಆಸ್ತಿ-ಹಕ್ಕುಗಳ ಆಡಳಿತ ವ್ಯವಸ್ಥೆಗಳಿರುವ ಮಣಿಪುರದಂತಹ ರಾಜ್ಯಗಳು ಸಣ್ಣ ಪ್ರದೇಶದಲ್ಲಿ ವಿವಿಧ ಜನಾಂಗಗಳ ಹಿತಾಸಕ್ತಿಗಳನ್ನು ಕಾಪಾಡಿ ಎಲ್ಲರಿಗೂ ನ್ಯಾಯಸಮ್ಮತ ಎನಿಸುವಂತಹ ಭೂನೀತಿಯನ್ನು ರೂಪಿಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ. ಹಾಗಾದರೆ, ಮಣಿಪುರವು ತನ್ನದೇ ಆದ ಭೂ ನೀತಿಯನ್ನು ಹೊಂದಿದೆಯೇ? ಇಲ್ಲ.

ಕುಕಿಗಳು ಮಣಿಪುರದ ಸಾಮಾಜಿಕ ಸಂರಚನೆಯೊಂದಿಗೆ ಬಹಳ ಹಿಂದಿನಿಂದಲೂ ಬೆಸೆದುಕೊಂಡಿರುವ ಕಾರಣಕ್ಕೆ ಮಣಿಪುರದೊಂದಿಗಿನ ಕುಕಿಗಳ ಸಾಮಾಜಿಕ ಭಾಗವಹಿಸುವಿಕೆ ಹಾಗೂ ಮೈತ್ರಿಯು ಇತರೆಡೆಗಳಿಗಿಂತ ಬಲಿಷ್ಟವಾಗಿದೆ.

ಜನಾಂಗೀಯತೆಯನ್ನೇ ಹೆಚ್ಚಾಗಿ ಆಧರಿಸಿದ ಸಮಾಜದಲ್ಲಿ, ಇತ್ತೀಚಿನ ದಿನಗಳಲ್ಲಿ ಧರ್ಮಾಧಾರಿತ ರಾಜಕೀಯ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿದೆ.

ಈ ಪ್ರಕ್ರಿಯೆಗಳೆಲ್ಲವೂ ನಡೆಯುತ್ತಿರುವುದು ಅಭಿವೃದ್ಧಿಯ ಬಗ್ಗೆ ಯಾವುದೇ ದೀರ್ಘಕಾಲೀನ ಚಿಂತನೆಗಳೇ ಇಲ್ಲದಿರುವಾಗ. ಅಭಿವೃದ್ಧಿಯ ಲಾಭವು ಎಲ್ಲರೊಂದಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವ ಸಾಮಾಜಿಕ-ರಾಜಕೀಯ ಪ್ರಯತ್ನಗಳೇ ಕಾಣಸಿಗದಂತಹ ಸಂದರ್ಭದಲ್ಲಿ. ವಿವಿಧ ಗುಂಪುಗಳು, ಅವುಗಳ ನಾಯಕರುಗಳು ತಮ್ಮ ಹಿತಾಸಕ್ತಿಗಾಗಿ, ತಮ್ಮೊಬ್ಬರ ಉನ್ನತಿಗಾಗಿ ಕಸರತ್ತು ನಡೆಸಲು ಇದು ಅನುಕೂಲಕರ ವಾತಾವರಣವಾಗಿದೆ. ಕಳೆದ ಕೆಲವು ತಿಂಗಳುಗಳಿಂದಲೂ, ವಿವಿಧ ಜನಾಂಗೀಯ ಗುಂಪುಗಳಿಂದಲೂ – ಅದು ಕುಕಿಗಳೇ ಇರಬಹುದು ಅಥವಾ ಮೈತ್‌ಯಿಗಳೇ ಇರಬಹುದು – ಪ್ರಚೋದನೆಗೆ ಎಡೆಮಾಡಿಕೊಡುವ ಹೇಳಿಕೆಗಳು ಬಹಳವಾಗಿಯೇ ಕೇಳಿಬರುತ್ತಿತ್ತು. ಆಡಳಿತಾಂಗವು ಮಧ್ಯಪ್ರವೇಶಿಸಿ ಅಪೇಕ್ಷಿತ ಕ್ರಮಗಳನ್ನು ಕೈಗೊಳ್ಳಲಿಕ್ಕೆ ಇದು ಸೂಕ್ತ ಸಮಯವಾಗಿದೆ. ಸರಕಾರ ಆಧಿಕಾರ ವಹಿಸಿರುವಾಗಲೂ ಆಡಳಿತ ಮಾತ್ರ ಕಾಣಿಸುತ್ತಲೇ ಇಲ್ಲ.

ಹೀಗಾಗಿ, ಅತ್ಯಗತ್ಯವೆನಿಸುವ ನೀತಿಗಳು ಮತ್ತು ಆಡಳಿತ ವ್ಯವಸ್ಥೆ; ಇವೆರಡರ ಅನುಪಸ್ಥಿತಿಯು ಮಣಿಪುರದಲ್ಲಿ ಅಂತರ-ಜನಾಂಗೀಯ ಸಂಘರ್ಷದ ಬಿಕ್ಕಟ್ಟಿಗೆ ಕಾರಣವಾಗಿದೆ. ಆದರೂ ಅತಿಸಹಜವಾಗಿ ಜನರ ರಕ್ತದಲ್ಲಿಯೇ ಹರಿದುಬಂದಿರುವ ಜನಾಂಗೀಯತೆಗಳನ್ನೂ ಮೀರಿ ಬೆರೆಯುವ – ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳುವ ಹಾಗೂ ಹಂಚಿ ತಿನ್ನುವ ಗುಣಗಳು ಸುಸ್ಥಿರತೆಯನ್ನು ತನ್ನ ಒಡಲಿನಲ್ಲಿಯೇ ಅಡಗಿಸಿಕೊಂಡಿದೆ.

ಕನ್ನಡಕ್ಕೆ : ಶಶಾಂಕ್

ಪ್ರೊ. ಅಮರ್ ಯುಮ್ನಮ್

ಪ್ರೊ. ಅಮರ್ ಯುಮ್ನಮ್
ಫೆಲೋ/ ವಿಸಿಟಿಂಗ್ ಪ್ರಾಧ್ಯಾಪಕರು, ಸೆಂಟರ್ ಫಾರ್ ಇಕನಾಮಿಕ್ ಮತ್ತು ಸೋಶಿಯಲ್ ಸ್ಟಡೀಸ್.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...