Homeಕ್ರೀಡೆಕ್ರಿಕೆಟ್ಒಂದು ನೋಬಾಲ್ ಕಥೆ: ಕೊಹ್ಲಿ ಫ್ರೀ ಹಿಟ್ ಬಾಲ್‌ನಲ್ಲಿ ಬೌಲ್ಡ್ ಆಗಿ ಬೈಸ್ ರನ್ ಪಡೆದುದರ...

ಒಂದು ನೋಬಾಲ್ ಕಥೆ: ಕೊಹ್ಲಿ ಫ್ರೀ ಹಿಟ್ ಬಾಲ್‌ನಲ್ಲಿ ಬೌಲ್ಡ್ ಆಗಿ ಬೈಸ್ ರನ್ ಪಡೆದುದರ ಕುರಿತು ಮುಗಿಯದ ಚರ್ಚೆ

- Advertisement -
- Advertisement -

ಮಳೆ ನಿಂತರೂ ಹನಿ ನಿಂತಿಲ್ಲ ಎಂಬ ಗಾದೆ ಮಾತಿನಂತೆ ಟಿ20 ವಿಶ್ವಕಪ್ ಕ್ರಿಕೆಟ್‌ನ ಭಾರತ-ಪಾಕಿಸ್ತಾನ ಎದುರಿನ ಸೂಪರ್ 12 ಹಂತದ ಪಂದ್ಯ ಮುಗಿದರೂ ಅದರ ಕುರಿತ ಚರ್ಚೆಗಳು ಮಾತ್ರ ನಿಂತಿಲ್ಲ. ತೀವ್ರ ಕೂತೂಹಲಕ್ಕೆ ಕಾರಣವಾಗಿದ್ದ ಆ ಪಂದ್ಯ ಕೊನೆಯ ಓವರ್‌ನ ಕೊನೆಯ ಬಾಲ್‌ವರೆಗೂ ಸಾಗಿ ಅಂತಿಮವಾಗಿ ಭಾರತ ತಂಡ ಗೆಲುವಿನ ನಗೆ ಬೀರಿತು. ಕೊನೆಯ ಓವರ್‌ನಲ್ಲಿ ಮೊಹಮ್ಮದ್ ನವಾಜ್ ಎಸೆದ ನೋಬಾಲ್ ಒಂದು ಇಡೀ ಪಂದ್ಯದ ದಿಕ್ಕು ಬದಲಿಸಿಬಿಟ್ಟಿತು. ಆದರೆ ಪಾಕಿಸ್ತಾನ ತಂಡವು ಅದು ನೋಬಾಲ್ ಅಲ್ಲವೆಂದು ವಾದಿಸಿತು. ಅಷ್ಟು ಮಾತ್ರವಲ್ಲದೆ ನೋಬಾಲ್ ಕಾರಣಕ್ಕೆ ನೀಡಲಾದ ಫ್ರೀ ಹಿಟ್‌ನಲ್ಲಿ ಕೊಹ್ಲಿ ಬೌಲ್ಡ್ ಆದ ನಂತರ ಬೈಸ್ ರೂಪದಲ್ಲಿ ಮೂರು ರನ್ ಓಡಿದರು. ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಬೇಕು ಮತ್ತು ಬೈಸ್‌ ರನ್ ನೀಡಬಾರದು ಎಂದು ಪಾಕ್ ಆಟಗಾರರು ವಾದಿಸಿದರೂ ಅಂಪೈರ್ ಪುರಸ್ಕರಿಸಲಿಲ್ಲ. ಈ ಕುರಿತು ಚರ್ಚೆಗಳು ಮುಂದುವರೆದಿವೆ.

ನಿಯಮಗಳ ಪ್ರಕಾರ ಫ್ರಿಹಿಟ್ ಬಾಲ್‌ನಲ್ಲಿ ರನ್‌ ಔಟ್ ಹೊರತುಪಡಿಸಿ ಉಳಿದ ಔಟ್‌ಗಳಿಗೆ ಅವಕಾಶವಿಲ್ಲ. ಅದೇ ರೀತಿ ಬೌಲ್ಡ್ ಆದಾಗ ಬಾಲ್ ಚಲನೆಯಲ್ಲಿರುವವರೆಗೂ ರನ್ ಗಳಿಸುವ ಅವಕಾಶವಿದೆ ಎಂದು ಐಸಿಸಿ ನಿಯಮಗಳು ಹೇಳುತ್ತವೆ. ಈ ವಿಷಯದ ಕುರಿತು ತಜ್ಞ ಅಂಪೈರ್ ಎಂದು ಖ್ಯಾತಿ ಪಡೆದ ಸೈಮನ್ ಟಫೆಲ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ರಾತ್ರಿ ಎಂಸಿಜಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ರೋಚಕ ಕ್ಲೈಮ್ಯಾಕ್ಸ್ ನಂತರ “ಕೊಹ್ಲಿ ಫ್ರೀ ಹಿಟ್‌ನಲ್ಲಿ ಬೌಲ್ಡ್ ಆದಾಗ ಭಾರತ ಗಳಿಸಿದ ಬೈಸ್ ರನ್‌ಗಳ ಕುರಿತು ವಿವರಿಸಲು ಅನೇಕರು ನನ್ನನ್ನು ಕೇಳಿದ್ದಾರೆ” ಎಂದು ಸೈಮನ್ ಟೌಫೆಲ್ ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ.

“ಐಸಿಸಿ ನಿಯಮಗಳ ಪ್ರಕಾರ ಆ ಪಂದ್ಯದಲ್ಲಿ ಸ್ಟಂಪ್‌ಗೆ ಬಡಿದ ಬಾಲ್ ಥರ್ಡ್ ಮ್ಯಾನ್‌ ಕಡೆ ಚಲಿಸಿತು. ಆಗ ಬ್ಯಾಟರ್‌ಗಳು ಮೂರು ರನ್ ಗಳಿಸಿದಾಗ ಬೈ ಸಿಗ್ನಲ್ ನೀಡಿದ ಅಂಪೈರ್ ನಿರ್ಧಾರ ಸರಿಯಾಗಿದೆ. ಫ್ರೀ ಹಿಟ್‌ ಬಾಲ್‌ನಲ್ಲಿ ಸ್ಟ್ರೈಕರ್ ಬೌಲ್ಡ್ ಆಗಲು ಸಾಧ್ಯವಿಲ್ಲ. ಆದ್ದರಿಂದ ಅದು ಡೆಡ್ ಬಾಲ್ ಅಲ್ಲ. ಬಾಲ್ ಇನ್ನೂ ಆಟದಲ್ಲಿದ್ದರಿಮದ ಬೈಸ್‌ ನೀಡುವುದು ನಿಯಮಗಳ ಅಡಿ ಸರಿಯಾದ ಕ್ರಮವಾಗಿದೆ” ಎಂದು ಅವರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ಆ ಒಂದು ನೋಬಾಲ್‌ನಿಂದಾಗಿ ಸಾಕಷ್ಟು ಚರ್ಚೆಗಳು ನಡೆದವು ಮತ್ತು ಪಾಕ್ ಆ ಪಂದ್ಯವನ್ನು ಕಳೆದುಕೊಂಡಿತು. ಇಲ್ಲದಿದ್ದಲ್ಲಿ ವಿರಾಟ್ ಕೊಹ್ಲಿಯವರು ಬೌಲ್ಡ್ ಆದದ್ದು ಆನಂತರ ಮೂರು ರನ್ ಬೈಸ್ ರೂಪದಲ್ಲಿ ಸಿಕ್ಕಿದ್ದು ಸಾಧ್ಯವಾಗುತ್ತಿರಲಿಲ್ಲ. ಒಟ್ಟಿನಲ್ಲಿ ಆ ಪಂದ್ಯ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು. ಹಾಗಾಗಿಯೇ ಆಸ್ಟ್ರೇಲಿಯಾದ ಆಟಗಾರ ಮಿಷೆಲ್ ಮಾರ್ಶ್ “ಇಲ್ಲಿಗೆ ವಿಶ್ವಕಪ್ ಟೂರ್ನಿ ನಿಲ್ಲಿಸಿ ಬಿಡೋಣ. ಏಕೆಂದರೆ ಪಾಕ್-ಭಾರತ ಪಂದ್ಯಕ್ಕಿಂತ ಹೆಚ್ಚಿನ ಮನರಂಜನೆ ನೀಡಲು ಸಾಧ್ಯವಿಲ್ಲ” ಎಂದಿದ್ದರು.

ಇದನ್ನೂ ಓದಿ: ಟಿ20 ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಪಾಕ್ ವಿರುದ್ಧ ರೋಚಕ ಗೆಲುವು ತಂದುಕೊಟ್ಟ ಕೊನೆಯ 8 ಎಸೆತಗಳು ಹೀಗಿದ್ದವು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read