Homeಮುಖಪುಟನಮ್ಮ ಹೋರಾಟ ಸರ್ಕಾರದ ಜೊತೆಗಲ್ಲ, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕು: ಸಾಕ್ಷಿ

ನಮ್ಮ ಹೋರಾಟ ಸರ್ಕಾರದ ಜೊತೆಗಲ್ಲ, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕು: ಸಾಕ್ಷಿ

- Advertisement -
- Advertisement -

ನಮ್ಮ ಹೋರಾಟ ಸರ್ಕಾರದ ಜೊತೆಗಲ್ಲ, ಮಹಿಳಾ ಕುಸ್ತಿಪಟುಗಳಿಗಾಗಿ ನಾನು ನಿವೃತ್ತಿ ಘೋಷಿಸಿದ್ದು, ಮುಂಬರುವ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕೆಂದು ಬಯಸುತ್ತೇನೆ ಎಂದು ಒಲಂಪಿಕ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಹೇಳಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಹೊತ್ತಿರುವ ಬಿಜೆಪಿ ಸಂಸದ, ಡಬ್ಲ್ಯೂಎಫ್ಐನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆಡರೇಷನ್‌ಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಾಕ್ಷಿ ಮಲ್ಲಿಕ್ ನೋವಿನಿಂದಲೇ ನಿವೃತ್ತಿ ಘೋಷಿಸಿದ್ದರು.

ಒಲಂಪಿಕ್ ಪದಕ ವಿಜೇತೆಯಾಗಿರುವ ಸಾಕ್ಷಿ ಮಲ್ಲಿಕ್, ಬಜರಂಗ ಪುನಿಯಾ ಸೇರಿದಂತೆ ಹಲವು ಅಥ್ಲೀಟ್‌ಗಳ ಅಸಮಾಧಾನ ಹಾಗೂ ಪದ್ಮ ಪ್ರಶಸ್ತಿ ವಾಪಸ್ ನೀಡುವ ಹೇಳಿಕೆ ನಂತರ ಸರ್ಕಾರ ಒತ್ತಡಕ್ಕೆ ಮಣಿದಿದ್ದು, ‘ಕ್ರೀಡಾ ಸಂಹಿತೆ’ಯನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಕೇಂದ್ರ ಕ್ರೀಡಾ ಸಚಿವಾಲಯವು ಭಾರತ ಕುಸ್ತಿ ಫೆಡರೇಷನ್ ನೂತನ ಆಡಳಿತ ಮಂಡಳಿಯನ್ನು ಇಂದು ಅಮಾನತು ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾಕ್ಷಿ, ‘ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಥವಾ ಅದರ ಮುಖ್ಯಸ್ಥ ಸಂಜಯ್ ಸಿಂಗ್ ಅಮಾನತುಗೊಂಡಿರುವ ಬಗ್ಗೆ ಲಿಖಿತವಾಗಿ ನಾನು ಏನನ್ನೂ ನೋಡಿಲ್ಲ. ಮುಖ್ಯವಾಗಿ, ನಮ್ಮ (ಕುಸ್ತಿಪಟುಗಳ) ಹೋರಾಟ ಸರ್ಕಾರದ ಜೊತೆಗಲ್ಲ’ ಎಂದು ಹೇಳಿದ್ದಾರೆ.

ಕೇಂದ್ರದ ನಿರ್ಧಾರವನ್ನು ಶ್ಲಾಘಿಸಿರುವ ಸಾಕ್ಷಿ, ಫೆಡರೇಷನ್ ಆಡಳಿತ ಮಂಡಳಿ ಅಮಾನತುಗೊಳಿಸಿರುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದೇಶದ ಕುರಿತು ನಾನು ಇನ್ನೂ ಬರವಣಿಗೆಯಲ್ಲಿ ಏನನ್ನೂ ನೋಡಿಲ್ಲ. ಸಂಜಯ್ ಸಿಂಗ್ ಅಥವಾ ಇಡೀ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಲಾಗಿದೆಯೇ ಎಂದು ನನಗೆ ತಿಳಿದಿಲ್ಲ. ನಮ್ಮ ಹೋರಾಟ ಸರ್ಕಾರದ ಜೊತೆಗಲ್ಲ, ನಮ್ಮ ಹೋರಾಟ ಮಹಿಳಾ ಕುಸ್ತಿಪಟುಗಳಿಗಾಗಿ, ಅದಕ್ಕಾಗಿಯೇ ನಾನು ನಿವೃತ್ತಿ ಘೋಷಿಸಿದ್ದೇನೆ. ಮುಂಬರುವ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕೆಂದು ಬಯಸುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಸ್ ಪಡೆಯುವ ಬಗ್ಗೆ ಸುಳಿವು ನೀಡಿದ ಸಾಕ್ಷಿ, ‘ಹೊಸದಾಗಿ ರಚನೆಯಾಗುವ ಕುಸ್ತಿ ಫೆಡರೇಶನ್ ನಿರ್ಧಾರದ ನಂತರ ನಾನು ನಿಮಗೆ ಹೇಳುತ್ತೇನೆ’ ಎಂದು ಹೇಳಿದ್ದಾರೆ.

‘ಡಬ್ಲ್ಯುಎಫ್ಐನ ಹೊಸದಾಗಿ ಚುನಾಯಿತ ಕಾರ್ಯನಿರ್ವಾಹಕ ಮಂಡಳಿಯು ಮಾಡಿದ ನಿರ್ಧಾರಗಳು ಸ್ಥಾಪಿತ ಕಾನೂನು ಮತ್ತು ಕಾರ್ಯವಿಧಾನದ ಮಾನದಂಡಗಳ ನಿರ್ಲಕ್ಕ್ಷ್ಯವನ್ನು ಪ್ರದರ್ಶಿಸುತ್ತವೆ. ಡಬ್ಲ್ಯುಎಫ್ಐನ ಸಾಂವಿಧಾನಿಕ ನಿಬಂಧನೆಗಳು ಮತ್ತು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ ಎರಡನ್ನೂ ಉಲ್ಲಂಘಿಸುತ್ತವೆ. ಹೊಸದಾಗಿ ಚುನಾಯಿತ ಸಂಸ್ಥೆಯು ಹಿಂದಿನ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣದಲ್ಲಿದೆ.

ಪದಾಧಿಕಾರಿಗಳು ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಫೆಡರೇಶನ್ನ ವ್ಯವಹಾರವನ್ನು ಮಾಜಿ ಪದಾಧಿಕಾರಿಗಳು ನಿಯಂತ್ರಿಸುತ್ತಿದ್ದ ಆವರಣದಿಂದಲೆ ನಡೆಸಲಾಗುತ್ತಿದೆ’ ಎಂದು ಸಚಿವಾಲಯ ಆರೋಪ ಮಾಡಿ ಅಮಾನತು ಆದೇಶ ಹೊರಡಿಸಿದೆ.

ಇದನ್ನೂ ಓದಿ; ಡಬ್ಲ್ಯುಎಫ್ಐ ಅಮಾನತಿಗೂ ನನಗೂ ಯಾವುದೇ ಸಂಬಂಧವಿಲ್ಲ: ಬ್ರಿಜ್ ಭೂಷಣ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read