Homeಕರ್ನಾಟಕಪ್ರವೀಣ್ ಪತ್ನಿ ಉದ್ಯೋಗ ರದ್ದಾಗುವುದರಲ್ಲಿ ನಮ್ಮ ಸರ್ಕಾರದ ಹಸ್ತಕ್ಷೇಪವಿಲ್ಲ, ಮರು ನೇಮಕ ಮಾಡಲಾಗುವುದು: ಸಿದ್ದರಾಮಯ್ಯ

ಪ್ರವೀಣ್ ಪತ್ನಿ ಉದ್ಯೋಗ ರದ್ದಾಗುವುದರಲ್ಲಿ ನಮ್ಮ ಸರ್ಕಾರದ ಹಸ್ತಕ್ಷೇಪವಿಲ್ಲ, ಮರು ನೇಮಕ ಮಾಡಲಾಗುವುದು: ಸಿದ್ದರಾಮಯ್ಯ

- Advertisement -
- Advertisement -

ಪ್ರವೀಣ್ ನೆಟ್ಟಾರು ಪತ್ನಿ ಉದ್ಯೋಗ ರದ್ದಾಗುವುದರಲ್ಲಿ ನಮ್ಮ ಸರ್ಕಾರದ ಹಸ್ತಕ್ಷೇಪವಿಲ್ಲ. ಅವರನ್ನು ಮರು ನೇಮಕ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಕೀಳು ಮಟ್ಟದ ರಾಜಕೀಯ – ಪದ್ಮರಾಜ್ ಕಿಡಿ

ಬಿಜೆಪಿ ಸರ್ಕಾರ ಕೀಳುಮಟ್ಟದ ರಾಜಕೀಯ, ನಾಟಕ ಮಾಡುವುದನ್ನು ನಿಲ್ಲಿಸಲಿ. ಸಾಮಾನ್ಯ ಜನರಿಗೆ ಬಿಜೆಪಿಯವರ ಕಪಟ ನಾಟಕದ ಬಗ್ಗೆ ತಿಳಿದಿದೆ. ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ ಎಂಬ ಬಗ್ಗೆ ಬಿಜೆಪಿಯ ಶಾಸಕರು, ಸಂಸದರಿಗೆ ಸಾಮಾನ್ಯ ತಿಳಿವಳಿಕೆಯೂ ಇಲ್ಲವೆ? ಇದ್ದರೂ ಏಕೆ ತಾತ್ಕಾಲಿಕ ಹುದ್ದೆ ನೀಡಲಾಯಿತು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪ್ರಶ್ನಿಸಿದ್ದಾರೆ.

“ಇದೆಲ್ಲ ಅರಿತಿದ್ದರೂ ಕೂಡಾ ಪ್ರವೀಣ್ ನೆಟ್ಟಾರ್ ಅವರ ಪತ್ನಿಗೆ ಮುಖ್ಯಮಂತ್ರಿಯವರ ವಿಶೇಷ ಅಧಿಕಾರ ಬಳಸಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿದ್ದಾರೆ. ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ. ಅದೇ ರೀತಿ ನೂತನ ಕುಮಾರಿ ಅವರ ಕೆಲಸ ರದ್ದಾಗಿದೆ. ಬಿಜೆಪಿಗೆ ಪ್ರವೀಣ ನೆಟ್ಟಾರು ಹಾಗೂ ಅವರ ಪತ್ನಿ ಮೇಲೆ ಕರುಣೆ ಇದ್ದರೆ ಅಭಿಮಾನ ಇದ್ದಿದ್ದರೆ ಈ ಮೊದಲೇ ಅವರಿಗೆ ಯಾಕೆ ಶಾಶ್ವತ ಉದ್ಯೋಗ ನೀಡಲಿಲ್ಲ. ಶಾಶ್ವತ ಉದ್ಯೋಗ ಮಾಡಿಸಿಕೊಡಲು ಯಾಕೆ ಪ್ರಯತ್ನಿಸಿಲ್ಲ” ಎಂದು ಅವರು ಕಿಡಿಕಾರಿದ್ದಾರೆ.

“ಬಿಜೆಪಿ ಸರ್ಕಾರ ಇಷ್ಟು ದಿನ ಮಾಡಿದೆಲ್ಲ ನಾಟಕ ಎಂಬುದು ಈ ವಿಚಾರದಿಂದ ಬಹಿರಂಗವಾಗಿದೆ. ನೂತನರವರಿಗೆ ಉದ್ಯೋಗ ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಈಗಾಗಲೇ ನೂತನ ಅವರ ಜೊತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಮಾತುಕತೆ ನಡೆಸಿದ್ದೇವೆ. ಅವರಿಗೆ ಕೂಡಲೇ ಉದ್ಯೋಗ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಈ ನಡುವೆ ಪ್ರವೀಣ್ ನೆಟ್ಟಾರು ಪತ್ನಿ ನೂತನ್ ಕುಮಾರಿಯವರಿಗೆ ಕೇಂದ್ರ ಸರ್ಕಾರದ ಉದ್ಯೋಗ ಕೊಡಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಕರಾವಳಿ ಕೋಮುಹತ್ಯೆಗಳ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ್ ರೈ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read