Homeಮುಖಪುಟಲೋಕಸಭಾ ಚುನಾವಣೆ: ಮಹಾರಾಷ್ಟ್ರದ ಸಿಎಂ ಶಿಂಧೆ ಬಣಕ್ಕೆ ಹಿನ್ನಡೆಯಾಗುವ ಆತಂಕದಲ್ಲಿ ಬಿಜೆಪಿ

ಲೋಕಸಭಾ ಚುನಾವಣೆ: ಮಹಾರಾಷ್ಟ್ರದ ಸಿಎಂ ಶಿಂಧೆ ಬಣಕ್ಕೆ ಹಿನ್ನಡೆಯಾಗುವ ಆತಂಕದಲ್ಲಿ ಬಿಜೆಪಿ

- Advertisement -
- Advertisement -

2024ರ ಲೋಕಸಭಾ ಚುನಾವಣೆಗೆ ಒಂದು ವರ್ಷವಷ್ಟೇ ಬಾಕಿ ಇದ್ದು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಯಾರಿಯನ್ನು ಆರಂಭಿಸಿವೆ. ದೇಶದಲ್ಲಿಯೇ ಅತಿ ಹೆಚ್ಚಿನ ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶದ ನಂತರದ ಎರಡನೇ ಸ್ಥಾನವನ್ನು ಹೊಂದಿರುವ (48) ಮಹಾರಾಷ್ಟ್ರದಲ್ಲಿ ಐದು ಪಕ್ಷಗಳು ಮೈತ್ರಿ ಮತ್ತು ಸೀಟು ಹಂಚಿಕೆ ಕುರಿತು ಲೆಕ್ಕಾಚಾರದಲ್ಲಿ ತೊಡಗಿವೆ. ಇದೇ ಸಂದರ್ಭದಲ್ಲಿ ಶಿವಸೇನೆಯನ್ನು ಇಬ್ಭಾಗ ಮಾಡಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಸಿಎಂ ಆಗಿರುವ ಏಕನಾಥ್ ಶಿಂಧೆ ಬಣದೊಂದಿಗೆ ಚುನಾವಣೆ ಎದುರಿಸಬೇಕಾಗಿರುವ ಬಿಜೆಪಿ ಪಕ್ಷವು ಹಿನ್ನಡೆ ಅನುಭವಿಸುವ ಆತಂಕದಲ್ಲಿದೆ.

2019ರ ಕಳೆದ ಚುನಾವಣೆಯಲ್ಲಿ ಬಿಜೆಪಿಯು ಶಿವಸೇನೆ ಜೊತೆಗಿನ ಮೈತ್ರಿಯೊಂದಿಗ ಚುನಾವಣೆ ಎದುರಿಸಿ 48 ಕ್ಷೇತ್ರಗಳಲ್ಲಿ 41 ಕ್ಷೇತ್ರಗಳನ್ನು ಗೆದ್ದುಕೊಳ್ಳುವಲ್ಲಿ ಸಫಲವಾಗಿದ್ದವು. ಅದರಲ್ಲಿ ಬಿಜೆಪಿ 23 ಸ್ಥಾನಗಳನ್ನು ಪಡೆದರೆ, ಶಿವಸೇನೆ 18 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಮತ್ತೊಂದು ಮೈತ್ರಿಕೂಟ ಎನ್‌ಸಿಪಿ 4 ಸ್ಥಾನ ಗೆದ್ದರೆ ಕಾಂಗ್ರೆಸ್ ಒಂದು ಸ್ಥಾನಕ್ಕೆ ಕುಸಿದಿತ್ತು. AIMIM 1 ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

ಬಿಜೆಪಿ ಪಕ್ಷವು 2019ರಲ್ಲಿ ನೀಡಿದ ಅಭೂತಪೂರ್ವ ಯಶಸ್ಸನ್ನು ಮರುಗಳಿಸಲು ಬಯಸುತ್ತಿದೆ. ಆದರೆ ಆಗ ತನ್ನೊಂದಿಗೆ ಇದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಇಬ್ಭಾಗವಾಗಿದ್ದು, ಉದ್ಧವ್ ಬಣ ವಿರೋಧಿ ಮಹಾವಿಕಾಸ್ ಅಘಾಡಿ (ಎನ್‌ಸಿಪಿ, ಕಾಂಗ್ರೆಸ್, ಶಿವಸೇನೆ) ಪಾಳಯ ಸೇರಿದೆ. ಬದಲಿಗೆ ಏಕನಾಥ್ ಶಿಂಧೆಯ ಶಿವಸೇನೆ ಬಣ ಬಿಜೆಪಿ ಜೊತೆಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷಕ್ಕೆ ಹೆಚ್ಚಿನ ಮತಗಳು ಬರುವುದು ಕಷ್ಟ. ಹಾಗಾದಲ್ಲಿ ಬಿಜೆಪಿ ಗೆಲ್ಲುವುದು ಸಹ ಕಷ್ಟ ಎಂದು ಬಿಜೆಪಿ ಚಿಂತಿಸುತ್ತಿದೆ.

ಮೇ ಮಧ್ಯಭಾಗದಲ್ಲಿ ಲೋಕಸಭಾ ಚುನಾವಣೆಯ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಸಭೆ ನಡೆಸಿದರು. ಅಲ್ಲಿ ಶಿಂಧೆ ಬಣದ ಶಿವಸೇನೆಯು ಕೂಡಲೇ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಬೇಕು. ಲೋಕಸಭಾ ಚುನಾವಣೆಗೆ ತಯಾರಿ ನಡೆಸಬೇಕು. ಪಕ್ಷ ಎಲ್ಲೆಲ್ಲಿ ಪ್ರಭಾವ ಬೀರಬಹುದು ಎಂಬುದರ ಸಮೀಕ್ಷೆ ನಡೆಸಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ. ಇದಾರಿಂದಾಗಿ ಸಿಎಂ ಏಕನಾಥ್ ಶಿಂಧೆ ತಮ್ಮ ಪಕ್ಷದ ಮುಖಂಡರಿಗೆ ಪ್ರಚಾರ ಸಭೆಗಳನ್ನು ಏರ್ಪಡಿಸಲು ಮತ್ತು ಸರ್ಕಾರದ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದಾರೆ.

ಇನ್ನೊಂದೆಡೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟವೂ ಈಗಾಗಲೇ ಸೀಟು ಹಂಚಿಕೆಯ ಕುರಿತು ಮಾತುಕತೆ ನಡೆಸುತ್ತಿದೆ. ಪಕ್ಕದ ಕರ್ನಾಟಕದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಿರುವುದು ಅವರಿಗೆ ಆತ್ಮ ವಿಶ್ವಾಸ ತುಂಬಿದೆ. ಉದ್ಧವ್ ಠಾಕ್ರೆ ಬಣ ಚುನಾವಣೆಯಲ್ಲಿ ಗೆದ್ದು ಶಿಂಧೆ ಬಣದ ಎದುರು ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿದೆ. ಒಟ್ಟು 48 ಸೀಟುಗಳಲ್ಲಿ ಮೂರು ಪಕ್ಷಗಳು ತಲಾ 16 ಸೀಟುಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಳೆದ ಬಾರಿ ಬಿಜೆಪಿಯ ಹಿಂದುತ್ವ ಮತ್ತು ಶಿವಸೇನೆಯ ಪ್ರಾದೇಶಿಕ ಹಿರಿಮೆ ಕೆಲಸ ಮಾಡಿತ್ತು. ಆದರೆ ಈಗ ಶಿವಸೇನೆ ಇಬ್ಭಾಗವಾಗಿರುವುದರಿಂದ ಏಕನಾಥ್ ಶಿಂಧೆ ಬಣವು ಅಧಿಕಾರಕ್ಕಾಗಿ ಬಿಜೆಪಿ ಜೊತೆಗೆ ಕೈಜೋಡಿಸಿ ಬಾಳಸಾಹೇಬ್ ಠಾಕ್ರೆ ಕುಟುಂಬಕ್ಕೆ ದ್ರೋಹವೆಸಗಿಸಿದೆ ಎಂಬ ಕಥನ ಬಿತ್ತಲು ಉದ್ಧವ್ ಬಣ ಯತ್ನಿಸುತ್ತಿದೆ. ಇನ್ನೊಂದೆಡೆ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸುವ ಮೂಲಕ ಉದ್ಧವ್ ಠಾಕ್ರೆ ಬಾಳಾ ಸಾಹೇಬ್ ಠಾಕ್ರೆಯವರ ಹಿಂದುತ್ವದ ಸಿದ್ದಾಂತಕ್ಕೆ ಉದ್ಧವ್ ಠಾಕ್ರೆ ದ್ರೋಹವೆಸಗಿದರು ಎಂದು ಶಿಂಧೆ ಬಣ ಆರೋಪಿಸುತ್ತಿದೆ. ಇಬ್ಬರಲ್ಲಿ ಜನ ಯಾರ ಮಾತಿಗೆ ಬೆಲೆ ಕೊಡುತ್ತಾರೆ ಎಂಬುದು ಮುಂದಿನ ಮಹಾಚುನಾವಣೆಯಲ್ಲಿ ತಿಳಿಯಲಿದೆ.

ಇದನ್ನೂ ಓದಿ: ಸುಪ್ರೀಂ ತೀರ್ಪು ವಿರೋಧಿಸಿ ಕೇಂದ್ರ ಸುಗ್ರೀವಾಜ್ಞೆ; ಎಎಪಿ ಪರ ನಿಲ್ಲುವುದೇ ಕಾಂಗ್ರೆಸ್? ಮುಖಂಡರ ಸಭೆಗೆ ಖರ್ಗೆ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ನವೀಕರಿಸಿದ ಅಂಕಿ ಅಂಶ: 4 ಹಂತಗಳಲ್ಲಿ 1.07 ಕೋಟಿ ಮತಗಳಲ್ಲಿ ವ್ಯತ್ಯಾಸ!

0
2024ರ ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳ ಮತದಾನದ ಪ್ರತಿ ರಾತ್ರಿ ಚುನಾವಣಾ ಆಯೋಗ ನೀಡಿದ ಮತದಾನದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 1.07 ಕೋಟಿ ಮತಗಳ ವ್ಯತ್ಯಾಸವನ್ನು...