Homeಕರ್ನಾಟಕನಮ್ಮ ಸಚಿವರಿವರು; ಸರಳ ರಾಜಕಾರಣಿ ರಹೀಂ ಖಾನ್ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ

ನಮ್ಮ ಸಚಿವರಿವರು; ಸರಳ ರಾಜಕಾರಣಿ ರಹೀಂ ಖಾನ್ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ

- Advertisement -
- Advertisement -

ಗಡಿ ಜಿಲ್ಲೆ, ಕರ್ನಾಟಕದ ಕಿರೀಟ ಎಂದೇ ಖ್ಯಾತವಾದ ಬೀದರ್‌ಗೆ ಎರಡೆರಡು ಸಚಿವ ಸ್ಥಾನ ನೀಡಲಾಗಿದೆ. ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಬೀದರ್ ಶಾಸಕ ರಹೀಂ ಖಾನ್ ಇವರಿಬ್ಬರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ರಹೀಂ ಖಾನ್ ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಿದ ವಿದ್ಯಮಾನ ಬಹಳ ಕುತೂಹಲಕಾರಿಯಾದದ್ದು. ಏಕೆಂದರೆ ಬೀದರ್ ಹಾಗೂ ಕಲಬುರಗಿ ಭಾಗದ ಮುಸ್ಲಿಂ ಸಮುದಾಯ ಹೈದರಾಬಾದ್‌ನತ್ತ ಹೆಚ್ಚು ಒಲವು ಹೊಂದಿರುತ್ತಾರೆ. ಆ ಭಾಗದ ಜನರಿಗೆ ಬೆಂಗಳೂರಿಗಿಂತ ಹೈದರಾಬಾದ್ ಜೊತೆಗೆ ನಿಕಟ ಸಂಪರ್ಕವಿರುತ್ತದೆ. ಹಾಗಾಗಿ ವ್ಯಾಪಾರ-ವಹಿವಾಟುಗಳಿಗೆ ಆ ನಗರಕ್ಕೆ ಅವರ ಹೆಚ್ಚು ಅವಲಂಬನೆ. ಆದರೆ ರಹೀಂ ಖಾನ್ ಅವರ ತಂದೆಯ ಸೋದರ ಸಂಬಂಧಿಯೊಬ್ಬರು ಮಾತ್ರ ಬೆಂಗಳೂರಿನತ್ತ ಮುಖ ಮಾಡಿದ್ದರು. ಅವರು ವಿಧಾನಸೌಧದಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದರು. ಆ ವೇಳೆ ತನ್ನ ಸಂಬಂಧಿಗಳಿಗೆ ಕಾಲೇಜು ತೆರೆಯಲು ಸರ್ಕಾರದ ಮಟ್ಟದಲ್ಲಿ ಸಹಾಯ ಮಾಡಿದ್ದರು. ಆಗಲೇ ರಹೀಂ ಖಾನ್ ಹಾಗೂ ಅವರ ತಂದೆ ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು.

ಆ ಬಳಿಕ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರ ಸಂಪರ್ಕದೊಂದಿಗೆ ರಹೀಂ ಖಾನ್ ಅವರು ಹತ್ತಾರು ಕಾಲೇಜುಗಳನ್ನು ಸ್ಥಾಪನೆ ಮಾಡಿದರು. ಬೆಂಗಳೂರು, ಕಲಬುರಗಿ ಹಾಗೂ ಬೀದರ ಜಿಲ್ಲೆಗಳಲ್ಲಿ ಕಾಲೇಜುಗಳನ್ನು ತೆರೆದರು. ಅತಿ ಹೆಚ್ಚು ನರ್ಸಿಂಗ್ ಕಾಲೇಜುಗಳನ್ನು ತೆರೆದು, ಈ ಶಿಕ್ಷಣ ಸಂಸ್ಥೆಗಳನ್ನೇ ತಮ್ಮ ಆದಾಯದ ಮೂಲ ಮಾಡಿಕೊಂಡ ರಹೀಂ ಖಾನ್ ಆರ್ಥಿಕವಾಗಿ ಪ್ರಬಲರಾದರು.

ಈಶ್ವರ ಖಂಡ್ರೆ

ರಹೀಂ ಖಾನ್ ಅವರು ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಓದಿದ್ದಾರೆ. ಶೈಕ್ಷಣಿಕವಾಗಿ ಯಾವುದೇ ಪದವಿ ಗಳಿಸಿಲ್ಲವಾದರೂ ರೂಹಿ ಹೆಸರಿನಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಇವರಿಗೆ ಇಬ್ಬರು ಪತ್ನಿಯರು ಹಾಗೂ ಆರು ಮಕ್ಕಳು ಇದ್ದಾರೆ.

ಆರ್ಥಿಕವಾಗಿ ಸಾಕಷ್ಟು ಬಲಾಢ್ಯರಾಗಿ ಬೆಳೆದ ರಹೀಂ ಖಾನ್ ಅವರು ರಾಜಕೀಯದತ್ತ ಮುಖ ಮಾಡಿದರು. ಕಲ್ಯಾಣ ಕರ್ನಾಟಕ ಭಾಗದ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಿಂದ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಎರಡನೇ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೂ ಅವರಿಗೆ ಯುವಜನ ಮತ್ತು ಕ್ರೀಡಾ ಇಲಾಖೆ ಖಾತೆ ಕೊಡಲಾಗಿತ್ತು. ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೆ ಸಚಿವರಾಗಿದ್ದು ಪೌರಾಡಳಿತ ಇಲಾಖೆ ಮತ್ತು ಹಜ್ ಮುಖ್ಯಸ್ಥರನ್ನಾಗಿ ಮಾಡಲಾಗಿದೆ.

ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ರಹೀಂ ಖಾನ್ ಅವರು ಗೆದ್ದಿದ್ದು ಪಕ್ಷದ ವರ್ಚಸ್ಸಿಗಿಂತ ಅವರ ಸ್ವಂತ ವರ್ಚಿಸ್ಸಿನ ಮೇಲೆ ಎಂದು ಹೇಳಬಹುದು. ಏಕೆಂದರೆ ಅವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡವರು. ಎದುರಾಳಿ ಪಕ್ಷಗಳ ಮುಖಂಡರು ಅವರನ್ನು ಎಷ್ಟು ಕಟುವಾಗಿ ಟೀಕಿಸಿದರೂ ಅವರು ಎಂದಿಗೂ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಯೆ ನೀಡಿದವರಲ್ಲ; ವಿವಾದಗಳಿಂದ ಯಾವಾಗಲೂ ದೂರವುಳಿಯುವ ರಹೀಂ ಖಾನ್, ರಾಜಕೀಯ ವಿರೋಧಿಗಳ ಜೊತೆ ಎಂದಿಗೂ ವೈರತ್ವ ಕಟ್ಟಿಕೊಂಡಿಲ್ಲ. ಹೀಗಾಗಿ, ಸಹಜವಾಗಿ ಅವರು ಕ್ಷೇತ್ರದಲ್ಲಿ ಬಹಳ ವರ್ಚಸ್ವಿ ನಾಯಕರಾಗಿ ಬೆಳೆದಿದ್ದಾರೆ.

ಜಿಲ್ಲಾ ಕೇಂದ್ರ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2,20,000 ಮತದಾರರಿದ್ದು ಅವರಲ್ಲಿ 80,000ದಷ್ಟು ಮುಸ್ಲಿಂ ಮತದಾರರಿದ್ದಾರೆ. ರಹೀಂ ಖಾನ್ ಅವರು ಕೇವಲ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡು ಯಾವತ್ತೂ ರಾಜಕಾರಣ ಮಾಡಿದವರಲ್ಲ. ಅವರು ತಮ್ಮ ಸಮುದಾಯದ ಜನಗಳ ಜೊತೆಗಿರುವಷ್ಟೇ ಬಹುಸಂಖ್ಯಾತ ಹಿಂದೂಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗೆಯೇ ಸಾರ್ವಜನಿಕವಾಗಿ ಧಾರ್ಮಿಕ ಆಚರಣೆಗಳಿಂದಲೂ ದೂರ ಉಳಿಯುವುದರಿಂದ, ಕೆಲವು ಸಂಪ್ರದಾಯವಾದಿ ಮುಸ್ಲಿಮರ ಟೀಕೆಗೆ ಗುರಿಯಾಗಿದ್ದೂ ಇದೆ. ಕ್ಷೇತ್ರದಲ್ಲಿ ಈ ಹಿಂದೆ ಕೋಮು ಗಲಭೆಗಳು ಘಟಿಸಿದ ಸಂದರ್ಭದಲ್ಲಿ ರಹೀಂ ಖಾನ್ ಅವರು ಎಂದಿಗೂ ಒಂದು ಧರ್ಮದ ಪಕ್ಷ ವಹಿಸಿದವರಲ್ಲ; ಬದಲಿಗೆ ಅಧಿಕಾರಿಗಳಿಗೆ ಪೂರ್ತಿ ಜವಾಬ್ದಾರಿ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಕ್ರಮಗಳನ್ನು ಹೆಚ್ಚು ನೆಚ್ಚಿಕೊಳ್ಳುತ್ತಿದ್ದರು ಎಂಬ ಮಾತು ಸಾಮಾನ್ಯವಾಗಿದೆ. ಈ ನಿಟ್ಟನಲ್ಲಿ ಅವರು ಎಲ್ಲಾ ಸಮುದಾಯಗಳಿಗೂ ಸಲ್ಲುವ ನಾಯಕರಾಗಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಮುಂದಾದ ಕೇಂದ್ರ: ಪ್ರತಿಭಟನಾ ಪತ್ರ ಬರೆಯುವ ಎಚ್ಚರಿಕೆ ನೀಡಿದ ಸಿಎಂ…

ಕ್ಷೇತ್ರದಲ್ಲಿ ಯಾರೇ ಹಣಕಾಸಿನ ಸಹಾಯ ಕೇಳಿ ಬಂದರೂ ಅವರನ್ನು ರಹೀಂ ಖಾನ್ ಬರಿಗೈಯಿಂದ ಮರಳಿ ಕಳುಹಿಸಿದ ಉದಾಹರಣೆಗಳಿಲ್ಲ ಎಂಬ ಮಾತಿದೆ. ಹಿಂದೆ ಈ ಭಾಗದಲ್ಲಿ ಬರಗಾಲ ಬಂದಾಗ ಕ್ಷೇತ್ರದ ಅನೇಕ ಹಳ್ಳಿಗಳಿಗೆ ತಮ್ಮ ಜಮೀನಿನಲ್ಲಿನ ಬಾವಿಗಳಿಂದ ನೀರು ತುಂಬಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿ ಈಗಲೂ ಅಲ್ಲಿಯ ಜನರು ರಹೀಂ ಖಾನ್ ಅವರನ್ನು ನೆನೆಯುತ್ತಾರೆ.

ಈ ಹಿಂದೆ ಬೀದರ್ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತಾ ಅವರು 4,000 ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದ್ದರು. ಆ ಸಂದರ್ಭದಲ್ಲಿ ಜನರು ಬೃಹತ್ ಪ್ರತಿಭಟನೆ ನಡೆಸಿದ್ದರು. ಆದರೂ ರಹೀಂ ಖಾನ್ ಹರ್ಷ ಗುಪ್ತಾ ಅವರಿಗೆ ಪ್ರಶ್ನೆ ಮಾಡಲಿಲ್ಲ, ನಿಮಗೆ ಸರಿ ಅನಿಸಿದ್ದನ್ನು ಮಾಡಿ ಎಂದು ಹೇಳಿದರು. ಹೀಗೆ ಅಧಿಕಾರಿಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಾರೆ ಎನ್ನುತ್ತಾರೆ ಜನ. ಈ ಕಾರಣಕ್ಕಾಗಿ ರಹೀಂ ಖಾನ್ ಅವರ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನದ ಅಭಿಪ್ರಾಯವೂ ಇದೆ.

ರಾಜಕೀಯ ಹಾದಿ

2008ರಲ್ಲಿ ಬೀದರ್ ಉತ್ತರ ಮತಕ್ಷೇತ್ರದಲ್ಲಿ ರಹೀಂ ಖಾನ್ ಅವರು ಬಿಎಸ್‌ಪಿಯಿಂದ ಸ್ಪರ್ಧೆ ಮಾಡಿದ್ದರು. ಅವರ ಎದುರಾಳಿಯಾಗಿ ಸ್ಪರ್ಧಿಸಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು.

2009ರಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೀದರ್ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗ 2009ರಲ್ಲಿ ಉಪ ಚುನಾವಣೆಯಲ್ಲಿ ರಹೀಂ ಖಾನ್ ಅವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

2013ರಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಅವರು ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ರಹೀಂ ಖಾನ್ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸೋಲು ಕಂಡರು.

ಗುರುಪಾದಪ್ಪ ನಾಗಮಾರಪಳ್ಳಿ

2013ರಲ್ಲಿ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅಕಾಲಿಕವಾಗಿ ನಿಧನರಾದರು. ಆಗ ನಡೆದ ಉಪಚುನಾವಣೆಯಲ್ಲಿ ರಹೀಂ ಖಾನ್ ಅವರು ಗೆಲುವು ಕಂಡರು.

2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತ್ತೆ ರಹೀಂ ಖಾನ್ ಶಾಸಕರಾಗಿ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿ ರಹೀಮ್ ಖಾನ್ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ರಹೀಂ ಖಾನ್ ಅವರು ಡಿಸೆಂಬರ್ 22, 2018ರಿಂದ ಜುಲೈ 8, 2019ರವರೆಗೆ ಕರ್ನಾಟಕದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.

27 ಮೇ 2023ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಹೀಂ ಖಾನ್, ಪೌರಾಡಳಿತ ಇಲಾಖೆ ಮತ್ತು ಹಜ್ ಮುಖ್ಯಸ್ಥರಾಗಿ ನೇತೃತ್ವ ವಹಿಸಿಕೊಂಡಿದ್ದಾರೆ.

ಹಜ್ ಮುಖ್ಯಸ್ಥರಾಗಿರುವ ರಹೀಂ ಖಾನ್ ಅವರು ಈಗ ತಮ್ಮ ಸಮುದಾಯಕ್ಕೆ ಯಾವೆಲ್ಲಾ ಕೊಡುಗೆ ನೀಡುತ್ತಾರೆ ಎನ್ನುವ ಪ್ರಶ್ನೆಗಳನ್ನು ಮುಸ್ಲಿಂ ಸಮುದಾಯದವರೇ ಕೇಳುತ್ತಿದ್ದಾರೆ. ಹಿಂದೂಗಳ ಮತಗಳಿಸಲು ತಮ್ಮ ಮುಸ್ಲಿಂ ಐಡೆಂಟಿಟಿಯನ್ನು ರಹೀಂ ಖಾನ್ ಮರೆಮಾಚುತ್ತಾರೆ ಎನ್ನುವ ಟೀಕೆಗಳನ್ನು ಕೆಲವು ಮುಸ್ಲಿಂ ನಾಯಕರು ಆಗಾಗ ಮಾಡುತ್ತಿರುತ್ತಾರೆ. ಏಕಕಾಲಕ್ಕೆ ಟೀಕೆ ಮತ್ತು ಹೊಗಳಿಕೆ ಎರಡನ್ನೂ ಪಡೆಯುವ ರಹೀಂ ಖಾನ್ ಅವರು ಈಗ ತಮ್ಮ ಮೇಲಿರುವ ಎರಡೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read