Homeಮುಖಪುಟದೆಹಲಿ ಗಡಿಯಲ್ಲಿ 50,000 ಪೊಲೀಸರ ನಿಯೋಜನೆ - ಸಂಯಮ ಕಾಪಾಡಿ ಎಂದ ವಿಶ್ವಸಂಸ್ಥೆ

ದೆಹಲಿ ಗಡಿಯಲ್ಲಿ 50,000 ಪೊಲೀಸರ ನಿಯೋಜನೆ – ಸಂಯಮ ಕಾಪಾಡಿ ಎಂದ ವಿಶ್ವಸಂಸ್ಥೆ

ದೆಹಲಿಯ ಸುತ್ತಮುತ್ತಲಿನ ಮೂರು ಪ್ರಮುಖ ಪ್ರತಿಭಟನಾ ಸ್ಥಳಗಳಲ್ಲಿ (ಸಿಂಘು, ಟಿಕ್ರಿ ಮತ್ತು ಗಾಜಿಪುರ) ಇಂಟರ್ನೆಟ್ ಸೇವೆಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ.

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಮತ್ತು ಕನಿಷ್ಟ ಬೆಂಬಲ ಬೆಲೆಯ ಭರವಸೆ ನೀಡುವಂತೆ ಒತ್ತಾಯಿಸಿ ಕಳೆದ 2 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ದಿನದ ಅಹಿತಕರ ಘಟನೆಯ ನಂತರ ರಾಕೇಶ್ ಟಿಕಾಯತ್ ಭಾವನಾತ್ಮಕ ಭಾಷಣ ಮಾಡಿದ್ದರು. ಇದು ಉತ್ತರ ಭಾರತದ ರಾಜ್ಯಗಳ ರೈತರನ್ನು ಕೆರಳಿಸಿತ್ತು. ಇದರಿಂದ ಪ್ರಚೋದಿತಗೊಂಡ ಲಕ್ಷಾಂತರ ರೈತ ಬೆಂಬಲಿಗರು ಪ್ರತಿ ಹಳ್ಳಿಯಲ್ಲೂ ಮಹಾಪಂಚಾಯತ್ ನಡೆಸಿ ದೆಹಲಿಯಲ್ಲಿ ಕುಳಿತಿರುವ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

ಇದರ ಬೆನ್ನಲ್ಲೇ ರೈತ ಹೋರಾಟವನ್ನು ತೀವ್ರಗೊಳಿಸುವ ಸಲುವಾಗಿ ರೈತ ಮುಖಂಡ ರಾಕೇಶ್ ಟಿಕಾಯತ್ ಇಂದು (ಫೆಬ್ರವರಿ 6) ರಾಷ್ಟ್ರದಾದ್ಯಂತ ರಸ್ತೆ ತಡೆ (ಚಕ್ಕಾ ಜಾಮ್) ಪ್ರತಿಭಟನೆಯನ್ನು ನಡೆಸಲು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಸುಮಾರು 50,000 ಕ್ಕೂ ಹೆಚ್ಚು ಪೊಲೀಸರು, ಅರೆ ಸೈನಿಕರು ಮತ್ತು ಮೀಸಲು ಪಡೆಯನ್ನು ದೆಹಲಿಯ ಗಡಿಗಳಲ್ಲಿ ನಿಯೋಜನೆ ಮಾಡಿದೆ.

ಇದನ್ನೂ ಓದಿ: ಆಂತರಿಕ ವ್ಯವಹಾರಗಳಿಗೆ ತಲೆ ಹಾಕಬೇಡಿ: ಭಾರತಕ್ಕೆ ಮೀನಾ ಹ್ಯಾರಿಸ್ ನೀಡಿದ ಪ್ರತ್ಯುತ್ತರ ಏನು ಗೊತ್ತಾ?

ಮೂರು ವಿವಾದಾತ್ಮಕ ಕೇಂದ್ರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಸಮ್ಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆ ನೀಡಿರುವ ಚಕ್ಕಾ ಜಾಮ್ ಇಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗಲಿದ್ದು, ದೇಶದ ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು 3 ಗಂಟೆಯವರೆಗೆ ನಿರ್ಬಂಧಿಸಲಾಗುವುದು.

“ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಾಳೆ ಯಾವುದೇ ರಸ್ತೆ ತಡೆ ಇಲ್ಲ; ದೆಹಲಿಯನ್ನು ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸಲಾಗುವುದು” ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕೇವಲ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಮಾತ್ರ ತಡೆಯಲಾಗುತ್ತಿದ್ದು, ದೆಹಲಿಯಲ್ಲಿ ಯಾವುದೇ ಪ್ರತಿಭಟನೆ ಇರುವುದಿಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸಿದ್ದರೂ, 50,000 ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಅಂತರಾಷ್ಟ್ರೀಯ ಗಣ್ಯರ ವಿರುದ್ಧ ತೆಂಡೂಲ್ಕರ್ ಅನ್ನು ಕಣಕ್ಕಿಳಿಸಿದ ಕೇಂದ್ರ – ಶಿವಾನಂದ್ ತಿವಾರಿ

ಎಲ್ಲ ತುರ್ತು ಹಾಗೂ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದ್ದು, ಈ ಪ್ರತಿಭಟನೆ ಸಂಪೂರ್ಣ ಅಹಿಂಸಾತ್ಮಕ ಹಾಗೂ ಶಾಂತಿಯುತವಾಗಿರುತ್ತವೆ ಎಂದು ರೈತ ಮುಖಂಡರು ಹೇಳಿದ್ದಾರೆ. ಆದರೆ ಗಣರಾಜ್ಯೋತ್ಸವ ದಿನದ ಅಹಿತಕರ ಘಟನೆ ಮರುಕಳಿಸದಂತೆ ಪೊಲೀಸರು ಬಿಗಿಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದಾರೆ.

ರಾಜಧಾನಿಯ ವಿವಿಧೆಡೆ ಬಾಂಬ್ ಹಾಗೂ ಶ್ವಾನದಳವನ್ನು ನಿಯೋಜಿಸಲಾಗಿದೆ. ಮಾರುಕಟ್ಟೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹಾಗೂ ಐತಿಹಾಸಿಕ ಮಹತ್ವದ ಸ್ಥಳಗಳಾದ ಕೆಂಪು ಕೋಟೆ, ಇಂಡಿಯಾ ಗೇಟ್ ಮತ್ತು ಸಂಸತ್ ಭವನದ ರಸ್ತೆಗಳ ಮೇಲೆ ಹೆಚ್ಚಿನ ಕಣ್ಗಾವಲು ವ್ಯವಸ್ಥೆಗೊಳಿಸಲಾಗಿದೆ. ರಾಜಧಾನಿಯತ್ತ ಬರುವ ಕಚ್ಚಾ ರಸ್ತೆಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಸಾವಿರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಇದನ್ನು ಕೇಂದ್ರೀಯ ಸಿ4ಐ ನಿಯಂತ್ರಣ ಕೊಠಡಿಗಳಿಂದ ವೀಕ್ಷಿಸಲಾಗುತ್ತಿದೆ.

“ವದಂತಿ ಹರಡುವವರನ್ನು ಪತ್ತೆಹಚ್ಚಲು ಅಥವಾ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ನಾವು ಇತರ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ದೆಹಲಿ ಪೊಲೀಸ್ ವಕ್ತಾರ ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಮುಂಬರುವ ಉಪಚುನಾವಣೆಗಳಲ್ಲಿಯೂ ಗೆಲ್ಲುವುದಷ್ಟೇ ಅಲ್ಲ…! – ಸಿದ್ದುಗೆ ಸವಾಲ್ ಹಾಕಿದ ಬಿಎಸ್‌ವೈ

ದೆಹಲಿಯ ಸುತ್ತಮುತ್ತಲಿನ ಮೂರು ಪ್ರಮುಖ ಪ್ರತಿಭಟನಾ ಸ್ಥಳಗಳಲ್ಲಿ (ಸಿಂಘು, ಟಿಕ್ರಿ ಮತ್ತು ಗಾಜಿಪುರ) ಇಂಟರ್ನೆಟ್ ಸೇವೆಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ.

ಇನ್ನು ಈ ಕುರಿತು ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗ, “ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾನಿರತ ರೈತರು ಸಂಯಮ ಕಾಪಾಡುವಂತೆ ಮನವಿ ಮಾಡುತ್ತಿದ್ದೇವೆ. ಶಾಂತಿಯುತವಾಗಿ ಸೇರುವುದು ಹಾಗೂ ಅಭಿವ್ಯಕ್ತಿಯ ಹಕ್ಕನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಸಂರಕ್ಷಿಸಬೇಕು. ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವ ರೀತಿಯಲ್ಲಿ ಸಮಾನ ಪರಿಹಾರವನ್ನು ಕಂಡುಹಿಡಿಯುವುದು ಅಗತ್ಯ” ಎಂದು ಮನವಿ ಮಾಡಿದೆ.


ಇದನ್ನೂ ಓದಿ: ಬಂಗಾಳ: ಬಿಜೆಪಿಯ ರಥಯಾತ್ರೆಯಂದು, ಅದೇ ಜಿಲ್ಲೆಯಲ್ಲಿ ಬೈಕ್ ರ್‍ಯಾಲಿ ನಡೆಸಲಿರುವ ಟಿಎಂಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...