Homeಮುಖಪುಟನೀವು ಜೈ ಶ್ರೀರಾಮ್ ಘೋಷಣೆ ಕೂಗಬೇಕು, ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಬಯಸುತ್ತಾರೆ: ರಾಹುಲ್‌ ಗಾಂಧಿ ವಾಗ್ಧಾಳಿ

ನೀವು ಜೈ ಶ್ರೀರಾಮ್ ಘೋಷಣೆ ಕೂಗಬೇಕು, ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಬಯಸುತ್ತಾರೆ: ರಾಹುಲ್‌ ಗಾಂಧಿ ವಾಗ್ಧಾಳಿ

- Advertisement -
- Advertisement -

ರಾಹುಲ್ ಗಾಂಧಿ ನೇತೃತ್ವದ ಭಾರತ್‌ ಜೋಡೋ ನ್ಯಾಯ ಯಾತ್ರೆ ಮಧ್ಯಪ್ರದೇಶದಲ್ಲಿ ಮುಂದುವರಿದಿದ್ದು, ಯಾತ್ರೆಯುದ್ದಕ್ಕೂ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರನ್ನು ಕಾರ್ಯಕರ್ತರು ಸ್ವಾಗತಿಸಿದ್ದಾರೆ.

ಯಾತ್ರೆಯ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೇಶದಲ್ಲಿ ನಿರುದ್ಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಧಾನಿ ಮೋದಿ ನಿಮ್ಮಲ್ಲಿ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಬೇಕೆಂದು ಬಯಸುತ್ತಾರೆ ಮತ್ತು ಹಸಿವಿನಿಂದ ಸಾಯಬೇಕೆಂದು ಬಯಸುತ್ತಾರೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಸಾರಂಗ್‌ಪುರದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುವಾಗ ರಾಹುಲ್‌ ಗಾಂಧಿ ಎದುರು ಬಿಜೆಪಿ ಕಾರ್ಯಕರ್ತರು “ಮೋದಿ, ಮೋದಿ” ಮತ್ತು “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, ನಿರುದ್ಯೋಗದ ಸಮಸ್ಯೆ ಬಗ್ಗೆ ಪ್ರಧಾನಿಯನ್ನು ಟೀಕಿಸಿದ್ದಾರೆ, ಯುವ ನಿರುದ್ಯೋಗಿಗಳು ದಿನವಿಡೀ ರೀಲ್ಸ್‌ಗಳನ್ನು (ಸಾಮಾಜಿಕ ಮಾಧ್ಯಮಗಳಲ್ಲಿ) ನೋಡುತ್ತಿರುತ್ತಾರೆ. ನೀವು ದಿನವಿಡೀ ನಿಮ್ಮ ಫೋನ್‌ಗಳನ್ನು ನೋಡಬೇಕು, ಜೈ ಶ್ರೀ ರಾಮ್ ಎಂದು ಜಪಿಸಬೇಕು ಮತ್ತು ನಂತರ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಬಯಸುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆ ಕುರಿತು ಮಾತನಾಡಿದ ರಾಹುಲ್‌ ಗಾಂಧಿ, ಹಿಂದೆ, ಸಶಸ್ತ್ರ ಪಡೆಗಳು ಯುವಕರಿಗೆ ಒಂದೆರಡು ಗ್ಯಾರಂಟಿ ನೀಡುತ್ತಿದ್ದರು, ಮೊದಲು, ಯುವಕರಿಗೆ ಪಿಂಚಣಿ ನೀಡಲಾಗುವುದು ಮತ್ತು ಎರಡನೆಯದಾಗಿ ಅವರು ಪ್ರಾಣ ಕಳೆದುಕೊಂಡರೆ ಗೌರವ ನೀಡುವುದಾಗಿದೆ. ಈಗ, ಅಗ್ನಿವೀರ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ನಾಲ್ಕು ವರ್ಗಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ನಾಲ್ವರಲ್ಲಿ ಮೂವರನ್ನು ಬಿಡುಗಡೆ ಮಾಡಲಾಗುತ್ತದೆ, ಅವರು SC, ST ಮತ್ತು OBC ಆಗಿರುತ್ತಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಮೂರು ದಿನಗಳಲ್ಲಿ ಇದು ಎರಡನೇ ಬಾರಿಗೆ ರಾಹುಲ್ ಗಾಂಧಿ ನಿರುದ್ಯೋಗದ ಬಗ್ಗೆ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾನುವಾರ ಗ್ವಾಲಿಯರ್‌ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಮಧ್ಯೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗ ದುಪ್ಪಟ್ಟು ಇದೆ. ಇಲ್ಲಿ  ನಿರುದ್ಯೋಗದ ದರ 23 ಶೇಕಡಾ ಆಗಿದ್ದು, ಅಲ್ಲಿ 12ಶೇ. ಆಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಬಾಂಗ್ಲಾದೇಶ ಮತ್ತು ಭೂತಾನ್‌ಗಿಂತ ಹೆಚ್ಚಿದೆ ಮತ್ತು ಭಾರತದ ನಿರುದ್ಯೋಗ ದರವು 40 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಜನವರಿ 14ರಂದು ಹಿಂಸಾಚಾರ ಪೀಡಿತ ಮಣಿಪುರದಿಂದ ಆರಂಭವಾದ ಭಾರತ್‌ ಜೋಡೋ ನ್ಯಾಯ ಯಾತ್ರೆಯು 14 ರಾಜ್ಯಗಳ ಒಟ್ಟು 85 ಜಿಲ್ಲೆಗಳಲ್ಲಿ 6,700 ಕಿ.ಮೀ. ಕ್ರಮಿಸಲಿದೆ ಮತ್ತು ಮಹಾರಾಷ್ಟ್ರದಲ್ಲಿ ಯಾತ್ರೆಯು ತೆರೆ ಕಾಣಲಿದೆ.

ಇದನ್ನು ಓದಿ: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ ಸರಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read