ಕನ್ನಡದಲ್ಲಿ ಹಾಸ್ಯ ಬರವಣಿಗೆಯ ಒಂದು ಸಂಪ್ರದಾಯವಿದೆ. ಇದು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇಂದಿಗೂ ಜನಪ್ರಿಯವಾಗಿದೆ. ತಮಾಷೆಗೆ ಒಳಗಾಗುವವರು ದಡ್ಡ, ಪೆದ್ದ ಅಥವಾ ಸಮಾಜದ ಕೆಳವರ್ಗದವರೇ ಆಗಿರುತ್ತಾರೆ. ಸಿದ್ಧಲಿಂಗಯ್ಯ ಅವರ ಸಾಹಿತ್ಯಕ್ಕೆ ಬಂದರೆ, ಬಡವರ ಮೇಲೆ ಪ್ರಯೋಗ ಮಾಡುವ ಕ್ರೂರ ಹಾಸ್ಯ ಎಲ್ಲೂ ಕಾಣುವುದಿಲ್ಲ. ಎಷ್ಟೋ ಕಡೆ ಅದು ಉಳ್ಳವರನ್ನು ಎಚ್ಚರಿಸುವ ಹಾಸ್ಯವಾಗಿರುತ್ತದೆ. ಅದರಲ್ಲಿ ಚಾಪ್ಲಿನ್ ಮಾಡುವಂತಹ ಹಾಸ್ಯ ಸಿನಿಮಾದ ಒಂದು ಗುಣವಿದೆ. ಅನ್ಯಾಯವನ್ನು ಎತ್ತಿತೋರಿಸಲು ನಗುವನ್ನೇ ಅಸ್ತ್ರವಾಗಿಸಿಕೊಳ್ಳುವುದು ಅವರ ವಿಧಾನ ಎಂದು ತೋರುತ್ತದೆ.

ಅವರ ಬಾಲ್ಯದ ಘಟನೆ ಒಂದು ಹೇಳುತ್ತಾರೆ. ಒಂದು ದಿನ ಅವರು ಶಾಲೆಗೆ ಹೊರಡುವಾಗ ತಡವಾಯಿತು ಎಂದು ಅವರ ಅಕ್ಕ ನಡುದಾರಿಯಲ್ಲಿ ಬಂದು ಮುದ್ದೆಯನ್ನು ಕೊಡುತ್ತಾರೆ. ಅದನ್ನು ತಮ್ಮ ಚೀಲದಲ್ಲಿ ಹಾಕಿಕೊಂಡು ಶಾಲೆಗೆ ಹೋಗುತ್ತಾರೆ. ಆದರೆ ಶಾಲೆಯಲ್ಲಿ ಯಾರೋ ಹುಡುಗ ತನ್ನ ಪೆನ್ಸಿಲ್ ಕಳೆದುಹೋಯಿತು ಎಂದು ಶಿಕ್ಷಕರಿಗೆ ದೂರು ಕೊಟ್ಟಿರುತ್ತಾನೆ. ಆಗ ಟೀಚರ್ ಎಲ್ಲ ಮಕ್ಕಳ ಶಾಲಾಚೀಲಗಳನ್ನು ಹುಡುಕಲು ಶುರು ಮಾಡುತ್ತಾರೆ. ಸಿದ್ಧಲಿಂಗಯ್ಯ ಅವರು ಮಾತ್ರ ತನ್ನ ಚೀಲವನ್ನು ಪರಿಶೀಲಿಸಲು ಬಿಡುವುದಿಲ್ಲ. ಕೊನೆಗೆ ಶಿಕ್ಷಕರು ಬಲವಂತವಾಗಿ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ಪೆನ್ಸಿಲ್ ಸಿಗದೆ ಮುದ್ದೆ ಸಿಗುತ್ತದೆ. ಅದನ್ನು ನೋಡಿ ಮಕ್ಕಳು ’ಮುದ್ದೆ, ಮುದ್ದೆ’ ಎಂದು ಅವರನ್ನು ಅಣಕಿಸಲು ಪ್ರಾರಂಭಿಸುತ್ತಾರೆ. ಹೀಗೆ ಮಕ್ಕಳಿಂದ ಹಿಡಿದು ಇಡೀ ಸಮುದಾಯದಲ್ಲಿ ಯಾವ ರೀತಿಯಲ್ಲಿ ಅಸೂಕ್ಷ್ಮತೆ ಇರುತ್ತದೆ ಎಂಬುದನ್ನು ಅವರು ತೋರುತ್ತಾ ಹೋಗುತ್ತಾರೆ.

ಚಾರ್ಲಿ ಚಾಪ್ಲಿನ್ ತನ್ನ ಆತ್ಮ ಚರಿತ್ರೆಯಲ್ಲಿ ಹೇಳುತ್ತಾನೆ : “ಬಾಲ್ಕನಿಯಿಂದ ಬಿದ್ದ ವಸ್ತುವೊಂದು ಬಡವನ ತಲೆ ಮೇಲೆ ಬಿದ್ದರೆ ಅದು ಹಾಸ್ಯವಲ್ಲ, ಯಾರೂ ನಗುವುದಿಲ್ಲ. ಆದರೆ ದರ್ಪದಿಂದ ಮೆರೆಯುವ ಸಾಹುಕಾರನ ತಲೆ ಮೇಲೆ ಬಿದ್ದರೆ ಅದು ತುಂಬಾ ತಮಾಷೆಯಾಗಿ ಕಾಣುತ್ತದೇ” ಎಂದು. ಸಿದ್ಧಲಿಂಗಯ್ಯ ಅವರು ಹಾಸ್ಯ ಸಾಹಿತ್ಯವನ್ನು ಇದೇ ರೀತಿ ಮರುವ್ಯಾಖ್ಯಾನಿಸುತ್ತಾರೆ. ಏನೂ ತಿಳಿಯದವರನ್ನು, ಏನೂ ಇಲ್ಲದವರನ್ನು ಆಡಿಕೊಳ್ಳುವುದು ಏಕೆ ತಪ್ಪು ಎಂದು ಸಿದ್ಧಲಿಂಗಯ್ಯ ಅವರು ತಮ್ಮ ಬರಹಗಳ ಮೂಲಕ ತೋರಿಸಿಕೊಡುತ್ತಾರೆ.

’ಇಕ್ರಲಾ, ವದೀರ್‍ಲಾ’ ತುಂಬಾ ಹೆಸರು ಮಾಡಿದ ಪದ್ಯ. ಅದನ್ನು ಹೇಗೆ ಬರೆದಿದ್ದು ಎಂದು ಅವರು ಒಮ್ಮೆ ಹೇಳಿದ್ದರು. ಐಎಎಂನ ಕೆಲವರು, ದಲಿತರು ಹೇಗೆ ಬದುಕುತ್ತಾರೆ ಎಂದು ತಿಳಿಯಲು ತಮಿಳುನಾಡಿನ ದಲಿತರ ಕೇರಿಯಲ್ಲಿ 15 ದಿನಗಳು ಉಳಿದ ಪ್ರಸಂಗ ನಡೆಯಿತಂತೆ. ಅದಾದ ನಂತರ ಅಲ್ಲಿನ ಜನರು ತುಂಬಾ ನೋವಿನಿಂದ ಸಿದ್ಧಲಿಂಗಯ್ಯ ಅವರೊಂದಿಗೆ ಅದರ ಬಗ್ಗೆ ಹೇಳಿಕೊಳ್ಳುತ್ತಾರೆ. ಆಗ ಆ ಪದ್ಯ ಬರೆದಿದ್ದು ಎಂದು ಅವರು ಹೇಳಿಕೊಂಡಿದ್ದಾರೆ. ಜನರ ಅಸೂಕ್ಷ್ಮತೆ ಹೇಗಿರುತ್ತದೆ ಎಂಬುದನ್ನು ನೋಡಿ ರೊಚ್ಚಿನಿಂದ ಅವರು ಬರೆದ ಪದ್ಯ ಅದು. ಮೊದಲೆಲ್ಲಾ ರೋಷದಲ್ಲಿ ಬರೆಯುತ್ತಿದ್ದ ಅವರ ವರಸೆ ಬರಬರುತ್ತ ಸೌಮ್ಯವಾಗಿ ಬದಲಾಯಿತು. ಅವರ ಆತ್ಮಕಥನದಲ್ಲಿ ಸಮಾನತೆಯ ಬಗೆಗಿನ ಚಿಂತನೆ, ಮೂಢನಂಬಿಕೆ ವಿರುದ್ಧದ ಚಿಂತನೆಯನ್ನು ನಾವು ಕಾಣಬಹುದು, ಆದರೆ ಮೊದಲಿನ ಆಕ್ರೋಶ ಅಲ್ಲಿಲ್ಲ.

ಒಬ್ಬ ಸ್ವಾಮೀಜಿ ಪತ್ರಿಕೆಯಲ್ಲಿ ’ನಾನು ದೇವರನ್ನು ತೋರಿಸುತ್ತೇನೆ’ ಎಂದು ಜಾಹಿರಾತು ನೀಡುತ್ತಾನೆ. ಸಿದ್ಧಲಿಂಗಯ್ಯ ಮೂರ್ನಾಲ್ಕು ಸ್ನೇಹಿತ ಜೊತೆಗೂಡಿ ಅಲ್ಲಿಗೆ ತೆರಳುತ್ತಾರೆ. ದೇವರನ್ನು ತೋರಿಸಿ ಎಂದು ಹೇಳುತ್ತಾರೆ. ಆಗ ಸ್ವಾಮೀಜಿ ’ನಾನೇ ದೇವರು’ ಎಂದು ಹೇಳುತ್ತಾನೆ. ’ಯಾವ ದೇವರು?’ ಎಂದು ಕೇಳಿದಾಗ ’ಶಿವ’ ಎಂದು ಹೇಳುತ್ತಾನೆ. ಆಗ ಸಿದ್ದಲಿಂಗಯ್ಯ ಅವರು, ’ನೀವೊಂದು ಕೊಲೆ ಮಾಡಿದ್ದೀರಿ’ ಎನ್ನುತ್ತಾರೆ. ಸ್ವಾಮೀಜಿ ತಬ್ಬಿಬ್ಬಾದಾಗ, ’ನೀವು ದೊಡ್ಡದಾಗಿ ಕಣ್ಣು ಬಿಟ್ಟು ಆ ಮನ್ಮಥನನ್ನ ಕೊಲೆ ಮಾಡಿದ್ದೀರಾ,’ ಎಂದು ಹೇಳುತ್ತಾರೆ. ಆಗ ಸ್ವಾಮೀಜಿ ಹೇಳೋದು: ’ಹೋ ಹೌದು ಅವನು ತುಂಬಾ ತಲೆಹರಟೆ ಮಾಡುತ್ತಿದ್ದ. ಅದಕ್ಕೆ ಹಾಗೆ ಮಾಡಿದೆ.’ ’ತಮ್ಮ ವಾಸ ಎಲ್ಲಿ ಅಂದರೆ ಕೈಲಾಸ ಪರ್ವತ ಎಂದು ಹೇಳುತ್ತಾನೆ. ಅದಕ್ಕೆ ಸಿದ್ಧಲಿಂಗಯ್ಯ ಅವರು, ’ಚೀನಾದವರು ದಾಳಿ ಮಾಡಿದರಲ್ಲ ನೀವ್ಯಾಕೆ ತಡೆಯಲಿಲ್ಲ?’ ಎಂದು ಕೇಳುತ್ತಾರೆ.
’ಇಂಡಿಯಾದವರಿಗೆ ನನ್ನ ಮೇಲೆ ಭಕ್ತಿ ಕಡಿಮೆಯಾಗಿತ್ತು, ಅವರಿಗೆ ಸ್ವಲ್ಪ ಬುದ್ಧಿ ಕಲಿಸೋಣ ಎಂದು ನಾನೇ ಅವರನ್ನು ಛೂ ಬಿಟ್ಟೆ,’ ಎಂದು ಸ್ವಾಮೀಜಿ ಹೇಳುತ್ತಾರೆ.

ಹೀಗೆ ಸಿದ್ಧಲಿಂಗಯ್ಯ ಅವರ ಜೀವನದುದ್ದಕ್ಕೂ ತುಂಟತನದಿಂದ ಸತ್ಯವನ್ನು ಬಯಲು ಮಾಡುವಂತಹ ಸುಮಾರು ಘಟನೆ ನಡೆದಿದೆ. ಅವರು ದೇವರನ್ನು ನಂಬಲ್ಲ ಎಂದು ಕೊನೆಯವರೆಗೂ ಹೇಳುತ್ತಿದ್ದರು. ಮೂಢನಂಬಿಕೆಗಳ ವಿರುದ್ಧ ಇದ್ದರು. ಪ್ರತಿನಿತ್ಯ ನಡೆಯುವ ಘಟನೆಯನ್ನು ತುಂಟತನದಿಂದಲೆ ನೋಡುತ್ತಿದ್ದರು. ಅವರ ಸುತ್ತಮುತ್ತಲು ಇರುವವರನ್ನು ಯಾವ ರೀತಿಯಲ್ಲಿ ನಗಿಸುತ್ತಿದ್ದರೆಂದರೆ ಗಂಭೀರ ಮುಖ ಹಾಕಿಕೊಂಡು ಕೂರುವುದು ಕಷ್ಟವಾಗಿರುತ್ತಿತ್ತು. ಒಮ್ಮೆ ಜೋಗ ಜಲಪಾತ ನೋಡಿ ಮೂರು ನಾಲ್ಕು ಜನ ಹೆಗ್ಗೋಡಿಗೆ ಹಿಂತಿರುಗಿದ್ದೆವು. ತಕ್ಷಣ ಒಳಗಡೆ ಹೋಗಿ ಮುಸುಕು ಹಾಕಿ ಮಲಗಿಬಿಟ್ಟರು. ’ನಾವಿನ್ನೂ ಒಳಗಡೆ ಕಾಲಿಟ್ಟಿದ್ದಷ್ಟೇ, ಅಷ್ಟರೊಳಗೆ ಮಲಗಿಬಿಟ್ಟಿದ್ದೀರಲ್ಲ?’ ಎಂದು ಅಚ್ಚರಿಯಿಂದ ಕೇಳಿದೆ. ಅದಕ್ಕೆ ಅವರು, ’ನೋಡಿ ನಾನು ಹೇಗೆಂದರೆ, ಸಮಯ ವೇಸ್ಟ್ ಮಾಡುವುದಿಲ್ಲ. ಐದು ನಿಮಿಷ ಸಿಕ್ಕರೂ ಮಲಗಿ ನಿದ್ದೆಮಾಡಿಬಿಡುತ್ತೇನೆ,’ ಎಂದು ಹೇಳಿದ್ದರು.

ದಲಿತ ಸಂಘರ್ಷ ಸಮಿತಿ ಹೇಗೆ ಕಟ್ಟಿದ್ದು ಎಂದು ಕೂಡ ಅವರು ಬರೆದುಕೊಂಡಿದ್ದಾರೆ. ಕೊನೆಗೆ ಅವರು ಬಿಜೆಪಿ ಜೊತೆಗಿನ ಸಂಪರ್ಕ ಮತ್ತು ಅಮಿತ್ ಷಾ ಅವರನ್ನು ಭೇಟಿಯಾಗಿದ್ದರ ಬಗ್ಗೆ ತುಂಬಾ ಟೀಕೆಗಳು ಬಂದವು. ಆದರೆ ತಮ್ಮ ರಾಜಕೀಯ ನಿಲುವನ್ನು ಬದಲಾಯಿಸಿಲ್ಲ ಎಂದೇ ಹೇಳುತ್ತಿದ್ದರು. ’ನಾನಿನ್ನೂ ನಾಸ್ತಿಕನಾಗಿಯೆ ಇದ್ದೇನೆ. ದಲಿತರ ಪರವಾಗಿ, ಕನ್ನಡದ ಪರವಾಗಿ, ಇರುವ ಬೇಡಿಕೆಯನ್ನು ಇಟ್ಟು ಒತ್ತಾಯ ಮಾಡಿದೆ,’ ಎಂದು ಹೇಳುತ್ತಿದ್ದರು. ಈ ನಿಲುವನ್ನು ಅನುಮಾನದಿಂದಲೇ ಅವರ ಹೋರಾಟದ ಜೊತೆಗಾರರು ಕಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಅವರಿಗೆ ಎಲ್ಲೆಡೆ ಸ್ನೇಹಿತರಿದ್ದರು ಎನ್ನುವುದಂತೂ ನಿಜ. ಯಡಿಯೂರಪ್ಪ ಅವರನ್ನು ಕೊಂಡಾಡಿ ಬಸವಣ್ಣ ಎಂದು ಪರಾಕು ಹಾಕಿದರು ಎಂಬ ಆಪಾದನೆ ಅವರ ಮೇಲೆ ಇತ್ತು. ಅದು ತಪ್ಪಾಗಿ ವರದಿಯಾಗಿದೆ ಎಂದು ಅವರು ಹೇಳಿದ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಬಹುದು.

ಆತ್ಮಚರಿತ್ರೆ ಸಾಮಾನ್ಯವಾಗಿ ಇಂತಹ ಜಾಗದಲ್ಲಿ ಹುಟ್ಟಿದೆ, ಇಲ್ಲಿ ಬೆಳೆದೆ ಎಂಬ ರೀತಿ ಬರೆಯುತ್ತಾರೆ. ಆದರೆ ಸಿದ್ಧಲಿಂಗಯ್ಯನವರು ಅದಕ್ಕೆ ಬದಲಾಗಿ ಪ್ರಸಂಗಗಳ ಮೂಲಕ ತಮ್ಮ ಜೀವನದ ಕತೆಯನ್ನು ಹೇಳುತ್ತಾರೆ. ಅವರ ಆತ್ಮಚರಿತ್ರೆಯನ್ನು ಓದಿದಾಗ ಅವರು ತಮ್ಮ ಬಗ್ಗೆ ಬರೆಯುವುದಕ್ಕಿಂತ, ತಮ್ಮ ಸುತ್ತಮುತ್ತಲಿನ ಜನರ ಬಣ್ಣ ಬಣ್ಣದ ಬದುಕನ್ನು ಚಿತ್ರಿಸುವುದೇ ಹೆಚ್ಚಾಗಿದೆ. ಹಾಗಾಗಿ ಆತ್ಮ ಚರಿತ್ರೆ ಅನ್ನುವುದನ್ನೂ ಅವರು ಕನ್ನಡ ಸಂದಂರ್ಭದಲ್ಲಿ ಮರುವ್ಯಾಖ್ಯಾನಿಸಿದರು. ಆ ಪ್ರಕಾರವನ್ನು ಹೀಗೂ ಬರೆಯಬಹುದು ಎಂದು ತೋರಿಸಿಕೊಟ್ಟವರು ಅವರೇ ಆಗಿದ್ದಾರೆ. ನನಗೆ ಗೊತ್ತಿದ್ದ ಮಟ್ಟಿಗೆ ಆ ರೀತಿಯಾದ ಆತ್ಮ ಚರಿತ್ರೆಗಳು ಯಾವುದೂ ಇಲ್ಲ.

ಅವರ ಕಾವ್ಯದ ಎರಡು ಮಗ್ಗುಲನ್ನು ಎಲ್ಲರೂ ಗುರುತಿಸುತ್ತಾರೆ. ಮೊದಲಿನದು ರೊಚ್ಚಿನ, ಆಕ್ರೋಶದ ಕಾವ್ಯ, ಮತ್ತು ಎರಡನೆಯದ್ದು ನವಿರು ಪ್ರೇಮ ಕಾವ್ಯ. ’ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಥರದ ಹಾಡುಗಳು ಸಮುದಾಯ ಗೀತೆಗಳೂ, ಹೋರಾಟ ಗೀತೆಗಳೂ, ಸೊಗಸೆನಿಸುವ ಕಾವ್ಯವೂ ಒಟ್ಟೊಟ್ಟಿಗೆ ಆಗಿವೆ. ಅವರು ಎರಡನೆ ಹಂತದಲ್ಲಿ ಬರೆದಂತಹ ಪ್ರೇಮ ಗೀತೆಗಳ ಬಗ್ಗೆ ಬಂದ ಟೀಕೆಯ ಬಗ್ಗೆಯೂ ತಮಾಷೆಯಾಗೇ ಮಾತಾಡುತ್ತಿದ್ದರು. ಮದರಾಸಿಗೆ ಹೋಗಿ ಸಿನಿಮಾ ಹಾಡು ಬರೆದು ಬಂದ ಅನುಭವವನ್ನೂ ಕೀಟಲೆ ಮಾಡಿಕೊಂಡು ಹೇಳಿಕೊಳ್ಳುತ್ತಿದ್ದರು.

ಕನ್ನಡ ಕಾವ್ಯದಲ್ಲಿ ಪ್ರತಿಭಟನೆಯ ಅಂಶ ಮೊದಲಿನಿಂದಲೂ ಇದ್ದರೂ, ಸಿದ್ಧಲಿಂಗಯ್ಯ ಅವರ ಬರಹದ ಭಾಷೆ ಹೊಸದಾಗಿದೆ. ಈ ಹಿಂದೆ ಶಿಷ್ಟ ಭಾಷೆ ಎಂದು ಯಾವುದು ಅನ್ನಿಸಿಕೊಂಡಿತ್ತೋ ಅದಕ್ಕೆ ಎದುರಾಗುವಂತಹ ಹಾಗೂ ಅದನ್ನು ಮೀರಿದ ತೀವ್ರತೆ ತೋರಿಸುವ ಭಾಷೆಯನ್ನು ಅವರು ಬಳಸಿದರು. ಬಹಳ ಜನ ಸ್ನೇಹಿತರ ಜೊತೆಗೂಡಿ ಚಳುವಳಿಗಳನ್ನು ಹುಟ್ಟುಹಾಕುವುದರಲ್ಲಿ, ಅದಕ್ಕೊಂದು ಸೈದ್ಧಾಂತಿಕ ದಿಕ್ಕು ತೋರುವ ನಿಟ್ಟಿನಲ್ಲಿ ಮಾಡಿದ ಕೆಲಸವನ್ನು ಸ್ವಲ್ಪ ಕಡಿಮೆಯೇ ಬರೆದುಕೊಂಡಿದ್ದಾರೆ. ಡಿ.ಆರ್. ನಾಗರಾಜ್ ಮತ್ತು ಅವರ ಸಂಬಂಧ ಬಹಳ ಸ್ನೇಹದ ಮತ್ತು ತುಂಟತನದ ಸಂಬಂಧವಾಗಿತ್ತು. ಅವರು ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಂಡೇ ಇರುತ್ತಿದ್ದರು.

ನಗುವನ್ನು ಕಠೋರ ಜಗತ್ತಿನ ಎದುರು ಹೇಗೆ ಗುರಾಣಿಯಾಗಿ ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಂತೆಯೇ, ಪ್ರತಿಭಟನೆಯ ಹೊಸ ದನಿಯೊಂದನ್ನು ಅವರು ಕನ್ನಡ ಸಾರಸ್ವತ ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ.

(ಬರಹ ರೂಪಕ್ಕೆ): ಬಾಪು ಅಮ್ಮೆಂಬಳ

ಎಸ್ ಆರ್ ರಾಮಕೃಷ್ಣ

ಎಸ್ ಆರ್ ರಾಮಕೃಷ್ಣ
ಹಿರಿಯ ಪತ್ರಕರ್ತ ಮತ್ತು ಸಂಗೀತ ನಿರ್ದೇಶಕ. ಸಿದ್ಧಲಿಂಗಯ್ಯವನವರ ಆತ್ಮಕತೆ ’ಊರುಕೇರಿ’, ಅನಂತಮೂರ್ತಿಯವರ ಆತ್ಮಕತೆ ’ಸುರಗಿ’ಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಗಿರೀಶ್ ಕಾಸರವಳ್ಳಿಯವರ ’ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ‘ಜೈಲನ್ನು ತೋರಿಸಿ ನಮ್ಮನ್ನು ಬೆದರಿಸಲಾಗದು’ – ಬಿಡುಗಡೆಗೊಂಡ ವಿದ್ಯಾರ್ಥಿ ಹೋರಾಟಗಾರರ ಘೋಷಣೆಗಳಿವು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಎಸ್ ಆರ್ ರಾಮಕೃಷ್ಣ

LEAVE A REPLY

Please enter your comment!
Please enter your name here