Homeಮುಖಪುಟಕಾರ್ಕಳದಲ್ಲಿ ಸ್ಪರ್ಧಿಸುವುದಾಗಿ ಪ್ರಮೋದ್‌ ಮುತಾಲಿಕ್‌ ಘೋಷಣೆ: ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ...

ಕಾರ್ಕಳದಲ್ಲಿ ಸ್ಪರ್ಧಿಸುವುದಾಗಿ ಪ್ರಮೋದ್‌ ಮುತಾಲಿಕ್‌ ಘೋಷಣೆ: ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ…

- Advertisement -
- Advertisement -

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಘೋಷಿಸಿದ್ದಾರೆ.

ಕಾರ್ಕಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್‌ ಮುತಾಲಿಕ್‌, ”ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ. ಯಾರು ಎಷ್ಟೇ ಒತ್ತಡ ಹಾಕಿದರೂ ಕಾರ್ಕಳದಲ್ಲಿ ಸ್ಪರ್ಧಿಸಿಯೇ ತೀರುತ್ತೇನೆ. ಎಷ್ಟೇ ಒತ್ತಡದಲ್ಲಿದ್ದರೂ ಸಾವಿರಾರು ಕಾರ್ಯಕರ್ತರ ನೋವಿನ ಧ್ವನಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ” ಎಂದಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ

ಉಡುಪಿ ಜಿಲ್ಲೆಯ ಘಟ್ಟದ ಮೇಲಿರುವ ಕಾರ್ಕಳ-ಹೆಬ್ರಿ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿ ಬಿರುಬೀಸಾಗಿ ಸಾಗಿದೆ. ತೀರಾ ಸಣ್ಣ ಜಾತಿಯ (ದೇವಾಡಿಗ) ಎಂ.ವೀರಪ್ಪ ಮೊಯ್ಲಿಯವರು ಸತತ ಆರು ಬಾರಿ ಮತ್ತು ಕ್ಷೌರಿಕ ಸಮುದಾಯದ ಗೋಪಾಲಭಾಂಡಾರಿ ಎರಡು ಸಲ ಗೆದ್ದಿದ್ದ ಕಾರ್ಕಳ-ಹೆಬ್ರಿ ಇವತ್ತು ಪ್ರಬಲ ಜಾತಿಯ- ಬಲಾಢ್ಯ ಧರ್ಮದ ಕಟ್ಟರ್ ಹಿಂದುತ್ವವಾದಿಯ ಕಪಿಮುಷ್ಠಿಗೆ ಸಿಲುಕಿರುವುದು ವಿಪರ್ಯಾಸವೆಂದು ಈ ಕ್ಷೇತ್ರದ ನಾಲ್ಕೈದು ದಶಕದ ರಾಜಕಾರಣವನ್ನು ಹತ್ತಿರದಿಂದ ಕಂಡವರು ಆತಂಕದಿಂದ ಹೇಳುತ್ತಾರೆ! ಹತ್ತಿರದ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ-ದತ್ತಪೀಠ ವಿವಾದದ ಮುಂಚೂಣಿಯಲ್ಲಿ ನಿಂತು ಸಂಘಪರಿವಾರದ ಹಿರಿಯರ ಕೃಪಾಶೀರ್ವಾದ ಪಡೆದಿದ್ದ ವಿ.ಸುನೀಲ್‌ಕುಮಾರ್ ತಾನು ಕಾರ್ಕಳದ ಮಣ್ಣಿನ ಮಗ-ಬಹುಸಂಖ್ಯಾತ ಬಿಲ್ಲವರ ಮನೆಮಗನೆಂದು ಹೇಳುತ್ತ 2004ರಲ್ಲಿ ಬಿಜೆಪಿ ಕ್ಯಾಂಡಿಡೇಟಾದ ಘಳಿಗೆಯಿಂದ ಜಾತಿ-ಧರ್ಮದ ವಿಷ ಹೆಚ್ಚು ಏರಿರದ ಕಾರ್ಕಳ-ಹೆಬ್ರಿ ರಾಜಕಾರಣಕ್ಕೆ ಕಡುಕೇಸರಿಯ ಲೇಪವಾಯಿತೆಂಬುದು ಸಾಮಾನ್ಯವಾಗಿ ವ್ಯಕ್ತವಾಗುವ ಅಭಿಪ್ರಾಯ.

ಕಳೆದ ಎಲೆಕ್ಷನ್ ಹೊತ್ತಲ್ಲಿ 1,81,031 ಮತದಾರರಿದ್ದ ಕಾರ್ಕಳ-ಹೆಬ್ರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅಂದಾಜಿನಂತೆ 45 ಸಾವಿರದಷ್ಟು ಬಿಲ್ಲವರು, 40 ಸಾವಿರ ಬಂಟರು, 28 ಸಾವಿರ ಅಲ್ಪಸಂಖ್ಯಾತರು (ಕ್ರೈಸ್ತರು 12 ಸಾವಿರ, ಮುಸ್ಲಿಮರು 10 ಸಾವಿರ ಮತ್ತು ಜೈನರು 6ಸಾವಿರ], ಬ್ರಾಹ್ಮಣರು 10ಸಾವಿರ (ಕೊಂಕಣಿಗಳು 6 ಸಾವಿರ, ಬ್ರಾಹ್ಮಣರು 4 ಸಾವಿರ), ದೇವಾಡಿಗ, ಕುಲಾಲ, ವಿಶ್ವಕರ್ಮ ಮುಂತಾದ ಹಿಂದುಳಿದ ವರ್ಗದವರು 40 ಸಾವಿರ ಮತ್ತು 10ರಿಂದ 12 ಸಾವಿರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಮತದಾರರಿದ್ದಾರೆ. 1952ರಲ್ಲಿ ಬಂಟ ಸಮುದಾಯದ ಎ.ಬಿ.ಶೆಟ್ಟಿ ಕಾರ್ಕಳದ ಪ್ರಥಮ ಶಾಸಕರಾಗಿದ್ದರು. 1957ರಲ್ಲಿ ಗೆಲುವು ಕಂಡಿದ್ದ ಡಾ.ಕೆ.ಕೆ.ಹೆಗ್ಡೆ, ಬಿ.ಡಿ.ಜತ್ತಿ ಮಂತ್ರಿ ಮಂಡಲದಲ್ಲಿ ಆರೋಗ್ಯ ಮಂತ್ರಿಯೂ ಆಗಿದ್ದರು. ಬಿಲ್ಲವ ಜನಾಂಗದ ದಯಾನಂದ ಕಲ್ಲೆ ಪಿಎಸ್‌ಪಿಯಿಂದ 1962ರಲ್ಲಿ ಶಾಸನಸಭೆಗೆ ಆಯ್ಕೆಯಾಗಿದ್ದರು. 1967ರ ಚುನಾವಣೆಯಲ್ಲಿ ಜನಸಂಘದ ಬೋಳ ರಘುರಾಮ ಶೆಟ್ಟಿ ಗೆದ್ದಿದ್ದರು.

ಎಲ್‌ಐಸಿ ಮೊಯ್ಲಿ-ಸಿಎಂ ಮೊಯ್ಲಿ

ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಸಚಿವರಂಥ ಉನ್ನತ ಹುದ್ದೆಗೇರಿದ್ದ ಮೂಡಬಿದರೆ ಬಳಿಯ ಮಾರ್ಪಾಡಿಯ ವೀರಪ್ಪ ಮೊಯ್ಲಿ ಕಾರ್ಕಳದಿಂದ ಸತತ ಆರು ಬಾರಿ ಶಾಸಕರಾಗಿದ್ದರು. ಎಲ್‌ಐಸಿಯಲ್ಲಿ ಕಾರಕೂನರಾಗಿದ್ದ ಬಡ ದೇವಾಡಿಗರ ಕುಟುಂಬದ ಮೊಯ್ಲಿ ಆ ಬಳಿಕ ಕಾನೂನು ವ್ಯಾಸಂಗ ಮಾಡಿಕೊಂಡು ಅಂದು ಖ್ಯಾತ ವಕೀಲರಾಗಿದ್ದ ಶಿರ್ತಾಡಿ ವಿಲಿಯಂ ಪಿಂಟೋ ಬಳಿ ಜೂನಿಯರ್ ಆಗಿ ಸೇರಿಕೊಂಡಿದ್ದರು. ದೇವಸ್ಥಾನಗಳ ಉತ್ಸವ, ಮದುವೆ, ಮುಂಜಿಯಂಥ ಕಾರ್ಯಕ್ರಮಗಳಲ್ಲಿ ವಾಲಗ ಊದುವ ಕಸುಬಿನ ದೇವಾಡಿಗರ ಹುಡುಗ ವೀರಪ್ಪರ ನೊಂದವರ-ಶೋಷಿತರ ಪರ ನಿಲುವು ದೇವರಾಜ ಅರಸರ ಗಮನ ಸೆಳೆದಿತ್ತು. ಹಿಂದುಳಿದ ವರ್ಗದವರನ್ನು ಮುನ್ನಲೆಗೆ ತರುವ ಅರಸರ ’ಸಂಗ್ರಾಮ’ದಲ್ಲಿ ಮೊಯ್ಲಿಗೆ 1972ರಲ್ಲಿ ಕಾರ್ಕಳದ ಕಾಂಗ್ರೆಸ್ ಕ್ಯಾಂಡಿಡೇಟಾಗುವ ಅವಕಾಶ ಸಿಕ್ಕಿತು. ಸುಂದರ್ ಹೆಗ್ಡೆವರನ್ನು ಸೋಲಿಸಿ ಮೊಯ್ಲಿ ಶಾಸನಸಭೆ ಪ್ರವೇಶಿಸಿದರು. ದೇವರಾಜ ಅರಸು ಮೊಯ್ಲಿಯವರನ್ನು ಸಣ್ಣ ಕೈಗಾರಿಕೆ ಮಂತ್ರಿ ಮಾಡಿದ್ದರು. 1978ರ ಚುನಾವಣೆಯಲ್ಲಿ ಜನತಾ ಪಕ್ಷದ ಎಂ.ಕೆ.ವಿಜಯಕುಮಾರ್‌ರನ್ನು 8,956 ಮತದಂತರದಿಂದ ಸೋಲಿಸಿದ ಮೊಯ್ಲಿಯನ್ನು ಅರಸು ಮತ್ತೆ ಮಂತ್ರಿ ಮಾಡಿದ್ದರು. ಗುಂಡೂರಾವ್ ಸರಕಾರದಲ್ಲಿ ಮೊಯ್ಲಿ ಹಣಕಾಸು ಇಲಾಖೆಯ ಮಂತ್ರಿಯಾಗಿದ್ದರು.

1983ರಲ್ಲಿ ಬಿಜೆಪಿ ಹುರಿಯಾಳಾಗಿದ್ದ ಜನಸಂಘ ಮೂಲದ ಎಂ.ಕೆ.ವಿಜಯಕುಮಾರ್‌ರನ್ನು ಮೊಯ್ಲಿ 5,904 ಮತದಂತರದಿಂದ ಸೋಲಿಸಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಜನತಾರಂಗದ ರಾಮಕೃಷ್ಣ ಹೆಗಡೆ ಸರಕಾರ ರಚನೆಯಾಗಿತ್ತು. ಮೊಯ್ಲಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಒಲಿದುಬಂತು. 1985ರ ಮಧ್ಯಂತರ ಚುನಾವಣೆಯಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ ಜೈನ ಸಮುದಾಯದ ವಿಜಯಕುಮಾರ್‌ರನ್ನು ಮಣಿಸಿ ನಾಲ್ಕನೆ ಬಾರಿ ಶಾಸಕರಾದರು. 1989ರ ಎಲೆಕ್ಷನ್‌ನಲ್ಲಿ ವಿಜಯಕುಮಾರ್ ಜನತಾ ದಳದ ಉಮೇದುವಾರರಾಗಿದ್ದರು. 18,780 ಮತಗಳ ದೊಡ್ಡ ಅಂತರದಿಂದ ಗೆದ್ದ ಮೊಯ್ಲಿ ವೀರೇಂದ್ರ ಪಾಟೀಲ್ ಮತ್ತು ಬಂಗಾರಪ್ಪ ಸಂಪುಟದಲ್ಲಿ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು. ಬಂಗಾರಪ್ಪ ಅಂದಿನ ಪಿಎಂ ನರಸಿಂಹರಾವ್ ವಿರುದ್ಧ ಬಂಡೆದ್ದಾಗ ಮೊಯ್ಲಿಗೆ ಸಿಎಂ ಆಗುವ ಅವಕಾಶ (1992-1994) ಸಿಕ್ಕಿತು.

ಸತತ ನಾಲ್ಕು ಬಾರಿ ಮೊಯ್ಲಿ ಎದುರು ಸೋತ ವಿಜಯಕುಮಾರ್ 1994ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಪಿ.ಶೆಣೈಗೂ ಮೊಯ್ಲಿಯನ್ನು ಜಯಿಸಲಾಗಲಿಲ್ಲ. ಆನಂತರ ಮೊಯ್ಲಿ ಪಾರ್ಲಿಮೆಂಟಿಗೆ ಹೋಗುವ ಪ್ರಯತ್ನ ನಡೆಸಿದ್ದರು. ಉಡುಪಿ-ಚಿಕ್ಕಮಗಳೂರು ಮತ್ತು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು. ಚಿಕ್ಕಬಳ್ಳಾಪುರದಿಂದ ಪಾರ್ಲಿಮೆಂಟಿಗೆ ಎರಡು ಬಾರಿ ಆಯ್ಕೆಯಾದ ಮೊಯ್ಲಿ ಮೂರನೆ ಪ್ರಯತ್ನದಲ್ಲಿ ಎಡವಿದರು. ಸಾಹಿತಿ, ಬುದ್ಧಿಜೀವಿ, ಆರ್ಥಿಕ ಪರಿಸ್ಥಿತಿ ವಿಶ್ಲೇಷಕ, ಇಂಗ್ಲಿಷ್-ಕನ್ನಡ ಪತ್ರಿಕೆಗಳ ಅಂಕಣಕಾರರೆಂದು ಗುರುತಿಸಲ್ಪಟ್ಟಿರುವ ಮೊಯ್ಲಿ ಒಕ್ಕೂಟ ಸರಕಾರದಲ್ಲೂ ಕ್ಯಾಬಿನೆಟ್ ಮಂತ್ರಿಯಾಗಿದ್ದರು. ಮೊಯ್ಲಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡಾಗ ಕಾರ್ಕಳ ಕ್ಷೇತ್ರಕ್ಕೆ ತಮ್ಮ ಪಟ್ಟ ಶಿಷ್ಯ ಗೋಪಾಲಭಂಡಾರಿಯನ್ನು ಉತ್ತರಾಧಿಕಾರಿಯಾಗಿ ಮಾಡಿದ್ದರು. ಮಂತ್ರಿ, ಮುಖ್ಯಮಂತ್ರಿ ಮೊಯ್ಲಿಯ ಶಾಸಕ ಕ್ಷೇತ್ರದ ಉಸ್ತುವಾರಿಯಾಗಿ, ಜಿಪಂ ಸದಸ್ಯನಾಗಿ ಜನಾನುರಾಗಿಯಾಗಿದ್ದ ಕೆಲಸಗಾರ-ಸರಳ-ಸಜ್ಜನ ಗೋಪಾಲ ಭಂಡಾರಿ 1999ರಲ್ಲಿ ಬಿಜೆಪಿಯ ಕೆ.ಪಿ.ಶೆಣೈರನ್ನು 20,734 ಮತದಂತರದಿಂದ ಮಣಿಸಿ ಶಾಸಕರಾಗಿದ್ದರು.

ಭಜರಂಗ ದಳದ ಸುನೀಲ್ ಆರಂಗೇಟ್ರಂ

2004ರ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಕ್ಯಾಂಡಿಡೇಟಾಗಿ ಕಾರ್ಕಳಕ್ಕೆ ಸುನೀಲ್‌ಕುಮಾರ್ ಬರುವ ಮೊದಲು ಯಾರಿಗೂ ಅವರ ಪರಿಚಯವೆ ಇರಲಿಲ್ಲ. ಸುನೀಲ್ ಚಿಕ್ಕಮಗಳೂರು ಭಾಗದಲ್ಲಿ ಸಿ.ಟಿ.ರವಿ ಜತೆಗೂಡಿ ಭಜರಂಗ ದಳದ ’ಆಂದೋಲನ’ ನಡೆಸಿ ಚಲಾವಣೆಯಲ್ಲಿದ್ದರು. ಕಾರ್ಕಳದಲ್ಲಿ ಬಹುಸಂಖ್ಯಾತ ಬಿಲ್ಲವರ ಹುಡುಗನೆಂದು ಪರಿಚಯಿಸಿಕೊಂಡು ಧರ್ಮಕಾರಣ ಓಟ್‌ಬ್ಯಾಂಕ್ ದಾಳವನ್ನು ನಾಜೂಕಾಗಿ ಸುನೀಲ್ ಉರುಳಿಸಿದರೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಶಾಸಕ, ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನೀಲ್‌ಕುಮಾರ್ ತಂದೆ ಬ್ರಾಹ್ಮಣ; ತಾಯಿ ಕಾರ್ಕಳದ ಬಿಲ್ಲವ ಸಮುದಾಯದವರು. ’ಕಾರ್ಕಳದಲ್ಲಿ ತಾನು ಬಿಲ್ಲವನೆಂದು ಹೇಳಿಕೊಳ್ಳುವ ಸುನೀಲ್ ಸಂಘಪರಿವಾರದಲ್ಲಿ ಬ್ರಾಹ್ಮಣನೆಂದು ಪರಿಚಯಿಸಿಕೊಂಡಿರುವುದು ವಿಪರ್ಯಾಸ’ ಎಂದು ಹೆಸರು ಹೇಳಲಿಚ್ಛಸದ ಕಾಂಗ್ರೆಸ್‌ನ ಯುವ ಮುಖಂಡರೊಬ್ಬರು ’ನ್ಯಾಯಪಥ’ದ ಮುಂದೆ ವಾದ ಮಂಡಿಸಿದರು. ಸುನೀಲ್ ರಾಜಕಾರಣ ಆರಂಭಿಸಿದ ನಂತರ ಕಾರ್ಕಳ ಜಾತಿ ಮತ್ತು ಧರ್ಮದ ಸ್ಪಿರಿಟ್‌ನ ಆಖಾಡವಾಗಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಮೊದಲ ಪ್ರಯತ್ನದಲ್ಲೆ ಸುನೀಲ್ ಕಾಂಗ್ರೆಸ್‌ನ ಶಾಸಕರಾಗಿದ್ದ ಜನಪರ ಕೆಲಸಗಾರ ಗೋಪಾಲ ಭಂಡಾರಿಯವರನ್ನು 9,795 ಮತದಿಂದ ಸೋಲಿಸಿದರು. ಹಿಂದುತ್ವದ ರಾಜಕಾರಣಕ್ಕೆ ಅಭಿವೃದ್ಧಿ, ಮಾನವೀಯತೆಯ ಹಂಗಿಲ್ಲವೆಂಬುದನ್ನು ಆ ಚುನಾವಣೆ ಸಾಬೀತುಪಡಿಸಿತ್ತೆಂದು ಕಾರ್ಕಳದ ಪ್ರಜ್ಞಾವಂತರು ಹೇಳುತ್ತಾರೆ. 2008ರಲ್ಲಿ ಮತದಾರರು ಸುನೀಲ್‌ಕುಮಾರ್‌ರನ್ನು ತಿರಸ್ಕರಿಸಿ ಗೋಪಾಲ ಭಂಡಾರಿಯವರನ್ನು ಮತ್ತೆ ಆಯ್ಕೆ ಮಾಡಿಕೊಂಡಿದ್ದರು. ಆದರೆ 2013ರ ಚುನಾವಣೆಯಲ್ಲಿ ಅತಿಸಣ್ಣ ಕೆಳಸ್ತರದ ಕ್ಷೌರಿಕ
ಜಾತಿಯವರಾಗಿದ್ದ ಗೋಪಾಲ ಭಂಡಾರಿಯವರಿಗೆ ಚುನಾವಣೆಗೆ ಬೇಕಾದ ಸಂಪನ್ಮೂಲ
ಕ್ರೋಢಿಕರಿಸಲಾಗದ ಕಾರಣ ಮತ್ತು ಬಿಜೆಪಿಯ ಸುನೀಲ್‌ಕುಮಾರ್‌ರ ಪ್ರಬಲ ಬಿಲ್ಲವ ಜಾತಿಕಾರಣ ಮತ್ತು ಧರ್ಮಕಾರಣದ ಅಬ್ಬರ ಎದುರಿಸಲಾಗದೆ ಸೋತರೆಂದು ಜನರು ಹೇಳುತ್ತಾರೆ.

ಸುನೀಲ್ ಸಣ್ಣ ಅಂತರದಲ್ಲಿ (4,254) ಬಚಾವಾಗಿದ್ದರು. 2018ರ ಅಸೆಂಬ್ಲಿ ಎಲೆಕ್ಷನ್ ಸಂದರ್ಭದಲ್ಲಾದ ಹೊನ್ನಾವರದ ಹುಡುಗ ಪರೇಶ್ ಮೇಸ್ತನ ಆಕಸ್ಮಿಕ ಸಾವು ಮತ್ತು ಸುರತ್ಕಲ್‌ನ ಮರಾಠ ಯುವಕ ದೀಪಕ್ ರಾವ್‌ನ ಕೊಲೆಯಿಂದಾದ ಮತ ಧ್ರುವೀಕರಣದ ಹುಚ್ಚು ಮಾರುತಕ್ಕೆ ಗೋಪಾಲ ಭಂಡಾರಿ ತತ್ತರಿಸಿಹೋದರು! ಸೋತರೂ ಜನರ ನಡುವೆಯೆ ಇರುತ್ತಿದ್ದ ಭಂಡಾರಿ ಎರಡು ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾದರು. ಭಂಡಾರಿ ಸಾವಿನ ಬಳಿಕ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾದ ನಿರ್ವಾತ ಹಾಗೆಯೇ ಉಳಿದಿದೆ.

ಬಿಜೆಪಿ ಪರಿಸ್ಥಿತಿ

ಶಾಸಕ ಸುನೀಲ್‌ಕುಮಾರ್ ಬಗ್ಗೆ ಬಿಜೆಪಿಯ ಒಂದು ವರ್ಗಕ್ಕೆ ತೀವ್ರ ಅಸಮಾಧಾನವಿದೆ ಎನ್ನಲಾಗುತ್ತಿದೆ. ಭಜರಂಗದಳ ಮೂಲದ ಶಾಸಕರು ಹಿಂದು ಜಾಗರಣಾ ವೇದಿಕೆಯನ್ನು ಎದುರು ಹಾಕಿಕೊಂಡಿದ್ದಾರೆ. ಭಜರಂಗದಳ ಮತ್ತು ಹಿಂಜಾವೆ ನಡುವೆ ಘನಘೋರ ಕಾಳಗಗಳು ನಡೆಯುತ್ತಿವೆ. ಹಿಂಜಾವೆ ಹಾಲಿ ಶಾಸಕರಿಗೆ ಟಿಕೆಟ್ ಕೊಡಬಾರದೆಂದು ಒತ್ತಾಯಿಸುತ್ತಿದ್ದು, ಅವಕಾಶ ಕೊಟ್ಟರೆ ಸೋಲಿಸುವ ಪ್ರಯತ್ನ ಮಾಡಬೇಕಾಗುತ್ತದೆಂದು ಸಂಘ ಶ್ರೇಷ್ಠರಿಗೆ ತಿಳಿಸಿದೆಯೆನ್ನಲಾಗುತ್ತಿದೆ. ಜತೆಗೆ ಭ್ರಷ್ಠಾಚಾರದ ಆರೋಪಕ್ಕೆ ತುತ್ತಾಗಿರುವ ಶಾಸಕನ ಬಗ್ಗೆ ಜನರಿಗೂ ಬೇಸರ ಬಂದಿದೆ ಎಂಬುದು ಬೈಠಕ್‌ಗಳಲ್ಲಿ ಚರ್ಚೆಯಾಗುತ್ತಿದೆಯಂತೆ. ಹಾಗಾಗಿ ಕರಾವಳಿ ಆರ್‌ಎಸ್‌ಎಸ್‌ನ ಪ್ರಶ್ನಾತೀತ ನಾಯಕ ಹೊಸ ಮುಖವನ್ನು ಆಖಾಡಕ್ಕಿಳಿಸಿದರೆ ಏನಾದಿತೆಂಬ ಲೆಕ್ಕಾಚಾರದಲ್ಲಿದ್ದಾರೆಂಬ ಮಾತೂ ಕೇಳಿಬರುತ್ತಿದೆ. ಒಂದು ಮೂಲದ ಪ್ರಕಾರ ಸಂಘದ ಹಿರಿಯರು ಉಡುಪಿ ಜಿಲ್ಲೆಯ ಐದೂ ಬಿಜೆಪಿ ಶಾಸಕರನ್ನು ಬದಲಿಸುವ ಯೋಚನೆಯಲ್ಲಿದ್ದಾರಂತೆ!

ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು?

ಜನಾನುರಾಗಿಯಾಗಿದ್ದ ಮಾಜಿ ಶಾಸಕ ಗೋಪಾಲ ಭಂಡಾರಿ ಸಾವಿನ ನಂತರ ಕಾರ್ಕಳ ಕಾಂಗ್ರೆಸ್‌ಗೆ ಸರಿಯಾದ ನಾಯಕತ್ವ ಇಲ್ಲದಾಗಿದೆ. ಕಳೆದ ಚುನಾವಣೆ ಹೊತ್ತಲ್ಲಿ ಕ್ಷೇತ್ರದ ದ್ವಿತೀಯ ಬಹುಸಂಖ್ಯಾತ ಬಂಟ ಸಮುದಾಯದ ಮುನಿಯಾಲ ಉದಯಕುಮಾರ್ ಶೆಟ್ಟಿ ಕಾಂಗ್ರೆಸ್ ತನಗೆ ಅಭ್ಯರ್ಥಿ ಮಾಡುತ್ತದೆಂಬ ನಿರೀಕ್ಷೆಯಿಂದ ಹಣ ಖರ್ಚು ಮಾಡಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಆದರಿದು ಮೊಯ್ಲಿಯವರಿಗೆ ಇಷ್ಟವಿರಲಿಲ್ಲ. ತನ್ನ ಮಗ ಹರ್ಷ್ ಮೊಯ್ಲಿಯನ್ನು ಕಾರ್ಕಳದ ಎಮ್ಮೆಲ್ಲೆ ಮಾಡುವ ಪ್ಲಾನು ಹಾಕಿರುವ ಮೊಯ್ಲಿ ಒಮ್ಮೆ ಬಹುಸಂಖ್ಯಾತರ ಕೈಗೆ ಕಾಂಗ್ರೆಸ್ ಶಾಸಕ ಸ್ಥಾನ ಹೋದರೆ ಮರಳಿ ಪಡೆಯಲಾಗದೆಂಬ ಕಾರಣಕ್ಕೆ ಅಡ್ಡಗಾಲು ಹಾಕಿದರೆಂಬ ಆಕ್ರೋಶ ಪಕ್ಷದ ಒಂದು ಬಣಕ್ಕಿದೆ. ವೃತ್ತಿಯಲ್ಲಿ ಕಂಟ್ರಾಕ್ಟರ್ ಆಗಿರುವ ಉದಯಕುಮಾರ್ ಶೆಟ್ಟಿ ತನ್ನ ಮೇಲಾದ ಐಟಿ ರೇಡು ಮತ್ತು ಕಾಂಗ್ರೆಸ್ ಟಿಕೆಟ್ ತಪ್ಪಿದ ಬೇಸರದಿಂದ ರಾಜಕಾರಣದಿಂದ ದೂರಾಗಿದ್ದರು. ಆದರೆ ಈಗವರು ಮತ್ತೆ ಸಕ್ರಿಯರಾಗಿದ್ದು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಇದನ್ನೂ ಓದಿ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವವರಾರು? ಇಲ್ಲಿದೆ ಪೂರ್ಣ ಸಮೀಕ್ಷೆ

ಕುಂದಾಪುರದಲ್ಲಿ ಸಹನಾ ಕನ್‌ವೆನ್‌ಷನ್ ನಡೆಸುತ್ತಿರುವ ಬಂಟ ಜಾತಿಯ ಸುರೇಂದ್ರ ಶೆಟ್ಟಿ ಅಭ್ಯರ್ಥಿಯಾಗುವ ಪ್ರಯತ್ನದಲ್ಲಿದ್ದಾರೆ. ಮೊಯ್ಲಿ ಆಶೀರ್ವಾದ ಇರುವ ಶೆಟ್ಟರಿಗೆ ಡಿಕೆಶಿ ಜತೆಗೂ ವ್ಯಾವಹಾರಿಕ ನಂಟಿದೆಯೆನ್ನಲಾಗುತ್ತಿದೆ. ಆದರೆ ಶೆಟ್ಟರು ಕಾರ್ಕಳದವರಾದರು ಪರಿಚಿತ ಮುಖವಲ್ಲವೆಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮತ್ತು ಮಾಜಿ ಜಿಪಂ ಸದಸ್ಯ ಮಂಜುನಾಥ ಪೂಜಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಲ್ಲವರಾದ ಈ ಇಬ್ಬರಿಂದ ಅದೇ ಸಮುದಾಯದ ಬಿಜೆಪಿ ಸುನೀಲ್‌ಕುಮಾರ್‌ರನ್ನು ಎದುರಿಸಲು ಕಷ್ಟವಾಗುತ್ತದೆಂಬ ವಾದ ಕಾಂಗ್ರೆಸ್‌ನಲ್ಲಿದೆ. ಸಾಮಾಜಿಕ ಕೆಲಸಗಳಿಂದ ಸಾಧಿಸಿರುವ ಜನ ಸಂಪರ್ಕ, ಚುನಾವಣೆ ಎದುರಿಸುವ ಸಂಪನ್ಮೂಲದ ಶಕ್ತಿ ಮತ್ತು ಜಾತಿಬಲದ ಮುನಿಯಾಲ್ ಉದಯ್‌ಕುಮಾರ್ ಶೆಟ್ಟಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಪ್ರಬಲ ಹುರಿಯಾಳೆಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಸುನೀಲ್-ಉದಯ್ ಮುಖಾಮುಖಿಯಾದರೆ ತುರುಸಿನ ಸ್ಪಧೆ ಏರ್ಪಡಲಿದೆಯೆಂಬ ವಿಶ್ಲೇಷಣೆ ಕ್ಷೇತ್ರದ ಜಾತಿಕಾರಣ-ಧರ್ಮಕಾರಣದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ನಿಜಕ್ಕೂ ಸ್ಪರ್ಧಿಸುವರೆ? ಆಗ ಯಾರ ಮತ ಕಬಳಿಸಲಿದ್ದಾರೆ ಎಂಬುದನ್ನೆಲ್ಲ ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಾರ್ಕಳ-ಹೆಬ್ರಿ: ಅಹಿಂಸೆಯ ಜೈನ ಕಾಶಿಯಲ್ಲಿ ಹಿಂಸೋನ್ಮಾದದ ಹಿಂದುತ್ವ ಕಾಳಗ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...