Homeಮುಖಪುಟಲೋಕಸಭಾ ಚುನಾವಣೆಗೆ ತಯಾರಿ: ಕನೌಜ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಅಖಿಲೇಶ್ ಯಾದವ್

ಲೋಕಸಭಾ ಚುನಾವಣೆಗೆ ತಯಾರಿ: ಕನೌಜ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಅಖಿಲೇಶ್ ಯಾದವ್

- Advertisement -
- Advertisement -

ದೇಶದಲ್ಲಿಯೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು (80) ಹೊಂದಿರುವ ಉತ್ತರ ಪ್ರದೇಶದಲ್ಲಿ ಚುನಾವಣಾ ಚಟುವಟಿಕೆಗಳು ಆರಂಭವಾಗಿವೆ. ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ ಪರಾಕ್ರಮ ಮೆರೆದಿದೆ. ಈ ಹಿಂದೆ ಇಲ್ಲಿ ಪ್ರಬಲವಾಗಿದ್ದ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಕುಸಿದಿವೆ. 2024ರ ಚುನಾವಣೆಯಲ್ಲಿ ಮತ್ತೆ ತಮ್ಮ ಅಸ್ತಿತ್ವ ಸಾರಲು ಮುಂದಾಗಿವೆ. ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅಖಿಲೇಶ್ ಯಾದವ್ ತಯಾರಿ ಆರಂಭಿಸಿದ್ದಾರೆ. ಸದ್ಯಕ್ಕೆ ಕರ್ಹಾಲ್ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿರುವ ಅವರು ಮುಂದಿನ ವರ್ಷದ ಸಂಸತ್ ಚುನಾವಣೆಯಲ್ಲಿ ತಮ್ಮ ಕುಟುಂಬದ ಭದ್ರನೆಲೆಯಾದ ಮತ್ತು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದ ಕನೌಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಕನೌಜ್ ಸಮಾಜವಾದಿಗಳ ನೆಲೆ. ಈ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ (1967) ಸಮಾಜವಾದಿ ಹೋರಾಟಗಾರ ರಾಮಮನೋಹರ ಲೋಹಿಯಾರವರು ಸ್ಪರ್ಧಿಸಿ ಗೆಲುವು ಕಂಡಿದ್ದರು. ಅಖಿಲೇಶ್ ಯಾದವರ್‌ರವರು ಲೋಹಿಯಾರವರ ಅನುಯಾಯಿಯಾಗಿದ್ದಾರೆ. ಹಾಗಾಗಿ ಪಕ್ಷ ನಿರ್ಧರಿಸಿದರೆ ಅಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.

1999ರಲ್ಲಿ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್‌ರವರು ಕನೌಜ್‌ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ 2000 ನೇ ಇಸವಿಯಲ್ಲಿ ಅವರು ಸಂಭಾಲ್‌ಗೆ ಹೋಗಿ ತಮ್ಮ ಪುತ್ರ ಅಖಿಲೇಶ್‌ ಯಾದವ್ ಕನೌಜ್‌ನಿಂದ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದ್ದರು. ಮೊದಲ ಯತ್ನದಲ್ಲಿಯೇ ಅಖಿಲೇಶ್ ಯಾದವ್ ಅಲ್ಲಿ ಜಯ ಗಳಿಸಿದ್ದರು. ಆನಂತರ 2004 ಮತ್ತು 2008ರಲ್ಲಿಯೂ ಗೆದ್ದು ಬಂದರು. 2014ರಲ್ಲಿ ಅವರ ಪತ್ನಿ ಡಿಂಪಲ್ ಯಾದವ್ ಅಲ್ಲಿಂದ ಸ್ಪರ್ಧಿಸಿ ಜಯ ಗಳಿಸಿದರು. 2019ರ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅಜಂಘರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆದರೆ 2019ರಲ್ಲಿ ಡಿಂಪಲ್ ಯಾದವ್ ಕನೌಜ್‌ನಲ್ಲಿ ಬಿಜೆಪಿಯ ಸುಬ್ರಾತ್ ಪಾಠಕ್ ಎದುರು ಸೋಲು ಕಂಡರು. ಆನಂತರ ಮುಲಾಯಂ ಸಿಂಗ್ ಯಾದವ್‌ ನಿಧನದ ನಂತರ ತೆರವಾದ ಮೈನ್‌ಪುರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

2022ರಲ್ಲಿ ಅಖಿಲೇಶ್ ಯಾದವ್ ಕರ್ಹಾಲ್ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಕಾರಣ ಅಜಂಘರ್ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಸಹೋದರ ಸಂಬಂಧಿ ಧರ್ಮೇಂದ್ರ ಯಾದವ್ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ಕನೌಜ್ ಕ್ಷೇತ್ರದಲ್ಲಿ ಮುಸ್ಲಿಮರು, ದಲಿತರು ಮತ್ತು ಯಾದವರು ಪ್ರಾಬಲ್ಯ ಹೊಂದಿದ್ದಾರೆ. ಮೂರು ಲಕ್ಷ ಮುಸ್ಲಿಂ ಮತದಾರರಿದ್ದರೆ, ದಲಿತ ಮತದಾರರು ಸುಮಾರು 2.8 ಲಕ್ಷ ಮತ್ತು ಯಾದವರು 2.5 ಲಕ್ಷದಷ್ಟಿದ್ದಾರೆ. ಕಳೆದ ಬಾರಿ ಯಾದವ ಮತ್ತು ದಲಿತ ಮತದಾರರು ತಮ್ಮ ನಿಷ್ಠೆಯನ್ನು ಬಿಜೆಪಿಗೆ ಬದಲಾಯಿಸಿದ ಪರಿಣಾಮ ಸಮಾಜವಾದಿ ಪಕ್ಷ ಸೋಲಬೇಕಾಯಿತು.

ಅಖಿಲೇಶ್ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಕನೌಜ್‌ನಿಂದ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದೇವೆ. ಜೂನ್ 1 ರಿಂದ ಪಕ್ಷವು ಬೂತ್ ಸಮಿತಿಗಳ ಪುನರ್ ರಚನೆಯನ್ನು ಪ್ರಾರಂಭಿಸುತ್ತದೆ. ಜಿಲ್ಲಾ ಸಮಿತಿಯನ್ನು ಸಹ ರಚಿಸಲಾಗುವುದು ಎಂದು ಸಮಾಜವಾದಿ ಪಕ್ಷದ ಕನೌಜ್ ಜಿಲ್ಲಾ ಘಟಕದ ಅಧ್ಯಕ್ಷ ಕಲೀಂ ಖಾನ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸಮಾಜವಾದಿ ಪಕ್ಷ ಉತ್ತಮ ಸಾಧನೆ ಮಾಡಿಲ್ಲ. 5 ಮುನಿಸಿಪಲ್‌ಗಳಲ್ಲಿ ಒಂದರಲ್ಲಿ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಹಾಗಾಗಿ ಅಖಿಲೇಶ್ ಯಾದವ್‌ರವರ ಸ್ಪರ್ಧೆಯಿಂದ ಪಕ್ಷಕ್ಕೆ ಬಲ ಬರುತ್ತದೆ ಎಂದು ಸ್ಥಳೀಯ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಪಕ್ಷಗಳ ಒಗ್ಗಟ್ಟು ಯತ್ನ: ಖರ್ಗೆ, ರಾಹುಲ್ ಭೇಟಿಯಾಗಲಿರುವ ನಿತೀಶ್ ಕುಮಾರ್, ತೇಜಸ್ವಿ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read