Homeಕರ್ನಾಟಕಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಶೀಟರ್ ತೆರೆಯಲು ಸಿದ್ಧತೆ

ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಶೀಟರ್ ತೆರೆಯಲು ಸಿದ್ಧತೆ

- Advertisement -
- Advertisement -

ಇದ್ರೀಸ್ ಪಾಶ ಕೊಲೆ ಆರೋಪಿ ಪುನೀತ್‌ ಕೆರೆಹಳ್ಳಿ ವಿರುದ್ಧ ರೌಡಿಶೀಟರ್ ತೆರೆಯಲು ನಿರ್ಧರಿಸಿರುವ ಪೊಲೀಸ್ ಇಲಾಖೆಯು ಈ ಕುರಿತು ಪುನೀತ್‌ಗೆ ತಿಳಿವಳಿಕೆಯ ನೋಟಿಸ್‌ ಜಾರಿ ಮಾಡಿದೆ.

ಪುನೀತ್ ಕೆರೆಹಳ್ಳಿ ಗೋರಕ್ಷಣೆ ಹೆಸರಿನಲ್ಲಿ ಕೊಲೆ, ಹಲ್ಲೆ, ಶಾಂತಿಗೆ ಧಕ್ಕೆ, ಜೀವ ಬೆದರಿಕೆ, ದೊಂಬಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರ  ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ, ರಾಮನಗರ ಜಿಲ್ಲೆಯ ಸಾತನೂರು ಠಾಣೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್‌ ಠಾಣೆ ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಪುನೀತ್‌ ವಿರುದ್ಧ ರೌಡಿಪಟ್ಟಿ ತೆರೆಯಲು ನಿರ್ಧರಿಸಲಾಗಿದೆ. ಈ ಸಂಬಂಧ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಪುನೀತ್‌ಗೆ ನೋಟಿಸ್‌ ನೀಡಿದ್ದಾರೆ.

ಇದ್ರಿಸ್ ಪಾಶ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ತಮ್ಮ ವಿರುದ್ಧ ರೌಡಿಪಟ್ಟಿ ತೆರೆಯಲು ಅನುಮತಿ ಕೋರಿ ಚಾಮರಾಜಪೇಟೆ ಠಾಣೆ ಇನ್‌ಸ್ಪೆಕ್ಟರ್‌ ವರದಿ ಸಲ್ಲಿಸಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿಆರೋಪಿಯಾಗಿರುವ ತಮ್ಮನ್ನು ಏಕೆ ರೌಡಿಪಟ್ಟಿಗೆ ಸೇರಿಸಬಾರದು ಎಂಬುದಕ್ಕೆ ವಿವರಣೆ ಸಲ್ಲಿಸಬಹುದು. ಇಲ್ಲದಿದ್ದರೆ, ವಿವರಣೆ ಇಲ್ಲವೆಂದು ಪರಿಗಣಿಸಿ ರೌಡಿಪಟ್ಟಿ ತೆರೆಯಲಾಗುವುದು ಎಂದು ಎಸಿಪಿ ಅವರು ಪುನೀತ್‌ಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿಉಲ್ಲೇಖಿಸಿದ್ದಾರೆ.

ಯಾರು ಈ ಪುನೀತ್ ಕೆರೆಹಳ್ಳಿ

ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬಂದವರಲ್ಲಿ ಪುನೀತ್‌ ಕೆರೆಹಳ್ಳಿ ಕೂಡ ಒಬ್ಬ. ಕಾರಿನಲ್ಲಿ ಕೂತು ಕಾಂಗ್ರೆಸ್‌ ನಾಯಕರನ್ನು ಏಕವಚನದಲ್ಲಿ ನಿಂದಿಸುತ್ತಾ, ಬಾಯಿಗೆ ಬಂದಂತೆ ಮಾತನಾಡುತ್ತಾ ಪ್ರಚಾರ ಪಡೆದ ಈ ಪುನೀತ್ ಮೂಲತಃ ಹಾಸನ ಜಿಲ್ಲೆಯವನು.

ತಾನು ಹಿಂದುತ್ವ ಬೆಂಬಲಿಗ, ಸಂಘಪರಿವಾರದ ಕಾರ್ಯಕರ್ತ ಎಂದು ಹೇಳಿಕೊಂಡು ಮುಂಚೂಣಿಗೆ ಬಂದ ಈತ ಮಾಡಿದ ಅವಾಂತರಗಳಿಗೆ ಲೆಕ್ಕವಿಲ್ಲ. ಮೊದಮೊದಲು ಕಾರಿನಲ್ಲಿ ಕೂತು ಅರಚುತ್ತಿದ್ದ ಈತ ಆಮೇಲೆ ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಳ್ಳಲು ಆರಂಭಿಸಿದನು. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಕಾರುತ್ತಾ ಪ್ರಚಾರ ಪಡೆದನು. “ಈತನಿಗೆ ಒಂದಿಷ್ಟು ಮಂದಿ ಗೂಗಲ್ ಪೇ, ಪೋನ್‌ ಪೇ ಮೂಲಕ ಧನಸಹಾಯ ಮಾಡಿ ಪ್ರೋತ್ಸಾಹಿಸಿದ್ದರಿಂದಲೇ ಕೋಮುದ್ವೇಷದ ಮಾತುಗಳನ್ನು ಹೆಚ್ಚಿಸಿಕೊಂಡ” ಎಂಬ ಆರೋಪಗಳಿವೆ.

ವೇಶ್ಯಾವಾಟಿಕೆಯಲ್ಲಿ ಕೆರೆಹಳ್ಳಿ ಹೆಸರು: 2013ರಲ್ಲಿಯೇ ಪುನಿತ್ ಕೆರೆಹಳ್ಳಿಯ ಹೆಸರು ವೇಶ್ಯಾವಾಟಿಕೆ ಪ್ರಕರಣವೊಂದರಲ್ಲಿ ಸಿಲುಕಿದೆ ಎಂಬುದು ಕಳೆದ ವರ್ಷ ಬಯಲಾಗಿತ್ತು. ಭರತ್ ಶೆಟ್ಟಿ ಎಂಬವರೊಂದಿಗೆ ಪುನೀತ್‌ ನಡೆಸಿದ್ದ ಸಂಭಾಷಣೆಯ ಆಡಿಯೊ ವೈರಲ್ ಆಗಿತ್ತು. 2013ರಲ್ಲಿ ದಾಖಲಾಗಿರುವ ಪ್ರಕರಣ ಇದಾಗಿದ್ದು, 2016ರಲ್ಲಿ ಹೋರಾಟಕ್ಕೆ ನಾನು ಬಂದಿದ್ದೇನೆ ಎಂದು ಪುನೀತ್ ಹೇಳಿಕೊಂಡಿದ್ದ.

ವೇಶ್ಯಾವಾಟಿಕೆಯ ಸಂಬಂಧ ಸುದ್ದಿ ಹರಿದಾಡಿದ್ದಾಗ ಪುನೀತ್‌ಗೆ ಆತನ ಸ್ನೇಹಿತನೊಬ್ಬ ಬುದ್ಧಿವಾದ ಹೇಳಿದ್ದ. ಆದರೆ ಆತನನ್ನೇ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಕೆರೆಹಳ್ಳಿ ವಿರುದ್ಧ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೇಗೂರು ಕೆರೆಗೆ ಕೋಮುವಾದದ ಬಣ್ಣ: ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ 2021ರ ಆಗಸ್ಟ್ 11ರಂದು ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆಯನ್ನು ಅನಾವರಣಗೊಳಿಸಿದ ಆರೋಪದ ಮೇಲೆ ಪುನಿತ್‌ ಕೆರೆಹಳ್ಳಿ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿತ್ತು.

ಬಿಬಿಎಂಪಿಯು ಬೆಂಗಳೂರಿನ ಬೇಗೂರು ಕೆರೆಯ ಮಧ್ಯದಲ್ಲಿ ಪ್ರತಿಮೆಯನ್ನು ನಿರ್ಮಿಸುತ್ತಿರುವುದಕ್ಕೆ ಹೈಕೋರ್ಟ್ 2019 ರ ಆಗಸ್ಟ್‌ನಲ್ಲಿ ತಡೆ ನೀಡಿತ್ತು. ಕೆರೆಯ ಗಾತ್ರವನ್ನು ಕಡಿಮೆ ಮಾಡಲು ಮತ್ತು ಅದರಲ್ಲಿ ದ್ವೀಪಗಳನ್ನು ಮಾಡಲು ಬಿಬಿಎಂಪಿಗೆ ಅಧಿಕಾರವಿಲ್ಲ ಎಂದು ಅದು ಹೇಳಿತ್ತು. ಆದರೆ ಆಗಸ್ಟ್ 1 ರಿಂದ, ಬಿಜೆಪಿ ಬೆಂಬಲಿತ ಸಂಘಪರಿವಾದ ಕಾರ್ಯಕರ್ತರು, ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ‘ಪರಿಸರ ಉಳಿವಿನ ಪ್ರಕರಣವನ್ನು’ ಕೋಮುವಾದಿಕರಣಗೊಳಿಸಲು ನೋಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದರು.

ಶ್ರೀರಂಗಪಟ್ಟಣದಲ್ಲಿ ಕೋಮುದ್ವೇಷ ಹಬ್ಬಿಸಲು ಯತ್ನ: ಶ್ರೀರಂಗಪಟ್ಟಣದ ಜಾಮಿಯ ಮಸೀದಿ ಮೊದಲ ದೇವಾಲಯವಾಗಿತ್ತು ಎಂದು ವಿವಾದ ಸೃಷ್ಟಿಸಲು ಯತ್ನಿಸಿದವರಲ್ಲಿ ಕೆರೆಹಳ್ಳಿ ಕೂಡ ಒಬ್ಬ. ಇತಿಹಾಸವನ್ನು ಸರಿಯಾಗಿ ತಿಳಿಯದೆ ಗೊಂದಲ ಸೃಷ್ಟಿಸಿ, ಶಾಂತಿಯುತವಾಗಿರುವ ಶ್ರೀರಂಗಪಟ್ಟಣದಲ್ಲಿ ಬೆಂಕಿ ಹಚ್ಚಲು ಕೆರೆಹಳ್ಳಿಯಂತಹ ಫ್ರಿಂಜ್‌ಗಳು ಯತ್ನಿಸಿದ್ದರು.

ಟಿಪ್ಪು ಪ್ಲೆಕ್ಸ್‌ ಹರಿದು ರಾದ್ಧಾಂತ: ಸಂವಿಧಾನ ಬಾಹಿರ ಕೃತ್ಯಗಳಲ್ಲಿ ಸಕ್ರಿಯವಾಗಿರುವ ಕೆರೆಹಳ್ಳಿ, 2022ರ ಆಗಸ್ಟ್‌ನಲ್ಲಿ ಟಿಪ್ಪು ಪ್ಲೆಕ್ಸ್ ಹರಿದು ರಾದ್ಧಾಂತ ಮಾಡಿದ್ದನು. ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಭಾಗವಾಗಿ ಬೆಂಗಳೂರಿನಲ್ಲಿ ಅಳವಡಿಸಿದ್ದ ಟಿಪ್ಪು ಸುಲ್ತಾನ್ ಬ್ಯಾನರ್ ಹರಿದು ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದಕ್ಕೆ ಪುನೀತ್ ಕೆರೆಹಳ್ಳಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷವು, ಕಾರ್ಪೋರೇಷನ್, ಹಡ್ಸನ್ ಸರ್ಕಲ್, ನೃಪತುಂಗ ರಸ್ತೆ ಸೇರಿದಂತೆ ಹಲವೆಡೆ ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್, ಫ್ಲೆಕ್ಸ್ ಹಾಕಿತ್ತು. ಮಹಾತ್ಮ ಗಾಂಧೀಜಿ, ನೆಹರೂ, ಟಿಪ್ಪು ಸುಲ್ತಾನ್, ಭಗತ್ ಸಿಂಗ್, ಅಂಬೇಡ್ಕರ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಶನಿವಾರ ರಾತ್ರಿ ಹಡ್ಸನ್ ವೃತ್ತಕ್ಕೆ ನುಗ್ಗಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವರು ಟಿಪ್ಪು ಸುಲ್ತಾನ್ ಫ್ಲೆಕ್ಸ್ ಕಿತ್ತು ವಿಡಿಯೋ ಮಾಡಿ ಹಂಚಿಕೊಂಡಿದ್ದರು.

ಜಟ್ಕಾ ಕಟ್‌, ಹಲಾಲ್‌ ಕಟ್‌ ವಿವಾದ: ಶಾಂತಿಯುತವಾಗಿ ನಡೆಯುತ್ತಿದ್ದ ಹಬ್ಬಗಳಲ್ಲಿ ಗಲಭೆಗಳನ್ನು ಸೃಷ್ಟಿಸಲು ಯತ್ನಿಸಿದವರ ಪೈಕಿ ಪುನೀತ್‌ ಕೆರೆಹಳ್ಳಿಯೂ ಒಬ್ಬ. ಮುಸ್ಲಿಮರ ಬಳಿ ವ್ಯಾಪಾರ ಮಾಡಬೇಡಿ, ಮಾಂಸ ಖರೀದಿ ಮಾಡಬೇಡಿ ಎಂದು ಪ್ರಚಾರ ಮಾಡುತ್ತಾ ಕೋಮುದ್ವೇಷವನ್ನು ಹಬ್ಬಿಸಲು ಯುಗಾದಿ ಸಂದರ್ಭ ಬಂದಾಗಲೆಲ್ಲ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ನಿರಂತರ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಸಾರ್ವಜನಿಕರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಗೋರಕ್ಷಣೆ ಹೆಸರಲ್ಲಿ ಹಣ ವಸೂಲಿ ಆರೋಪ: ರಾಷ್ಟ್ರ ರಕ್ಷಣಾ ಪಡೆ ಎಂಬ ಕೂಟವನ್ನು ರಚಿಸಿಕೊಂಡು ಗೋರಕ್ಷಣೆ ಮಾಡುತ್ತೇನೆ ಎಂದು ಸಕ್ರಿಯವಾಗಿರುವ ಕೆರೆಹಳ್ಳಿ ಮತ್ತು ಸಹಚರರು ಹಲವೆಡೆ ಗೋಸಾಗಣೆದಾರರನ್ನು ತಡೆದು ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವಿದೆ. ಹಣ ಕೊಡದವರಿಗೆ ಸ್ಟನ್‌ಗನ್ ಗಳಿಸಿ ಚಿತ್ರಹಿಂಸೆ ನೀಡಿದ್ದನ್ನು ತಾನೇ ವಿಡಿಯೋ ಮಾಡಿ ಹಂಚಿಕೊಂಡಿದ್ದಾನೆ. ಅದೇ ರೀತಿ ಸಾತನೂರು ಪೊಲೀಸ್ ಸ್ಟೇಷನ್ ಬಳಿ ಗೋಸಾಗಾಟ ಮಾಡುತ್ತಿದ್ದ ಇದ್ರಿಸ್ ಪಾಶ ಎಂಬ ಡ್ರೈವರ್‌ಗೆ ಹಣ ನೀಡುವಂತೆ ಒತ್ತಾಯಿಸಿದ್ದ. ಆದರೆ ಇದ್ರೀಸ್ ಪಾಶ ತಾನು ಕಾನೂನುರೀತ್ಯಾ ಹಸುಗಳನ್ನು ಕೊಂಡಿರುವುದಾಗಿ ದಾಖಲೆ ತೋರಿಸಿದ್ದ. ಆಗ ಅವರ ಮೇಲೆ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದರು. ಆನಂತರ ಇದ್ರೀಸ್ ಪಾಶ ಶವವಾಗಿ ಪತ್ತೆಯಾಗಿದ್ದ. ಈ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಇತರ ನಾಲ್ಕು ಜನರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗೋರಕ್ಷಣೆ ಹೆಸರಿನಲ್ಲಿ ಹಾದಿಬೀದಿಯಲ್ಲಿ ರಕ್ತ ಹರಿಸುವ ದಂಧೆಕೋರರು: ಕೊಲ್ಲುವ ಹಂತಕ್ಕೆ ಬೆಳೆದು ನಿಂತದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಯ್‌ ಬರೇಲಿ, ಅಮೇಥಿ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ: ರಾಹುಲ್‌ ಗಾಂಧಿ, ಕಿಶೋರಿ ಲಾಲ್‌...

0
ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಿಂದ ಮತ್ತು ಅಮೇಥಿ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉತ್ತರಪ್ರದೇಶದ ರಾಯ್‌...