Homeಮುಖಪುಟಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ: ಬಿಡುಗಡೆಯಾಗಿದ್ದು 6 ಕಂತು, ಬಂದಿದ್ದು 3 ಕಂತು ಮಾತ್ರ

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ: ಬಿಡುಗಡೆಯಾಗಿದ್ದು 6 ಕಂತು, ಬಂದಿದ್ದು 3 ಕಂತು ಮಾತ್ರ

ಬೆಳೆಗಳಿಗೆ ಸರಿಯಾದ ಧಾರಣೆ ನೀಡಿದರೆ, ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ, ರೈತರ ಸಮಸ್ಯೆಗಳನ್ನು ಪರಿಹರಿಸಿದರೆ ರೈತರಿಗೆ ಯಾವ ಹಣವನ್ನೂ ನೀಡಬೇಕಾದ ಅಗತ್ಯವಿಲ್ಲ.

- Advertisement -
- Advertisement -

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಆರನೇ ಕಂತಿನ ಹಣ ಬಿಡುಗಡೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಕೇವಲ ಮೂರು-ನಾಲ್ಕು ಕಂತಿನ ಹಣ ಮಾತ್ರ ಕೆಲ ರೈತರ ಖಾತೆಗೆ ನೇರ ವರ್ಗಾವಣೆಯಾಗಿದೆ ಎಂದು ರೈತರು ದೂರುತ್ತಿದ್ದಾರೆ. ಈ ಕುರಿತು ಹಲವು ರೈತರನ್ನು ಮಾತನಾಡಿಸಿದಾಗ ಎಲ್ಲಾ ದಾಖಲೆ ಸಲ್ಲಿಸಿದ್ದರೂ ಕೇವಲ 2 ಬಾರಿ ಹಣ ಬಂದಿದ್ದು ನಂತರ ಬಂದಿಲ್ಲ ಎಂದು ಕೆಲವು ರೈತರು ಹೇಳಿದ್ದಾರೆ.

ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯ ಮಹಾತ್ವಾಕಾಂಕ್ಷೆಯ ಯೋಜನೆ ಎನ್ನಲಾಗಿದ್ದು, ಲೋಕಸಭಾ ಚುನಾವಣಾ ಪೂರ್ವದಲ್ಲಿ ಈ ಯೋಜನೆ ಘೋಷಣೆ ಮಾಡಲಾಗಿತ್ತು. ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಜನವರಿ 2, 2019 ರಂದು ನಡೆದ ಬೃಹತ್ ರೈತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರಿ ಮೋದಿ ಮೊದಲ ಕಂತು ಬಿಡುಗಡೆ ಮಾಡಿದ್ದರು. ಬಟನ್ ಒತ್ತುವ ಮೂಲಕ ಫಲನುಭವಿ ರೈತರ ಖಾತೆಗೆ ಹಣ ಜಮಾವಣೆ ಮಾಡಿದ್ದರು. ಆರಂಭದಲ್ಲಿ ಎಲ್ಲರಿಗೂ ಹಣ ಜಮೆಗೊಂಡಿತಾದರೂ ನಂತರ ಹಣ ಬರಲೇ ಇಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಭಾರತೀಯ ರೈತರಿಗೆ ಅಮೇರಿಕಾ-ಭಾರತ ಮುಕ್ತ ವ್ಯಾಪಾರ ಒಪ್ಪಂದ ತಂದೊಡ್ಡುವ ಅಪಾಯಗಳು

ವಾರ್ಷಿಕ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ರೈತರ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತ ಬಂದಿದೆ. ಅರ್ಹ ಫಲನುಭವಿ ರೈತರು ಆಧಾರ್, ಮೊಬೈಲ್ ನಂಬರ್, ಪಹಣಿ, ಬ್ಯಾಂಕ್ ಖಾತೆ ಲಿಂಕ್ ಮಾಡಿದರೆ ಹಣ ಬರುತ್ತದೆ ಎಂದು ಸರ್ಕಾರ ಹೇಳಿತ್ತು. ಅದರಂತೆ ಎಲ್ಲಾ ದಾಖಲೆ ಸಲ್ಲಿಸಿದರೂ ಕೆಲವರಿಗೆ ಬಂದಿಲ್ಲ. ಕೆಲವರಿಗೆ ಎರಡು, ಮತ್ತೆ ಹಲವರಿಗೆ ಮೂರು, ನಾಲ್ಕು ಕಂತಿನ ಹಣ ಮಾತ್ರ ಬಂದಿದೆ. ಉಳಿದ ಕಂತಿನ ಹಣ ಬಂದಿಲ್ಲ. ಇದೇಕೆ ಹೀಗೆ? ಎರಡು ಕಂತಿನ ಹಣಬರುವವರೆಗೆ ದಾಖಲೆಗಳು ಸರಿ ಇದ್ದವು. ನಂತರ ದಾಖಲೆಗಳು ಸರಿ ಇಲ್ಲವೇ ಎಂದು ಹಣ ಬಾರದ ರೈತರು ಪ್ರಶ್ನಿಸಿದ್ದಾರೆ.

ಕಳೆದ ಒಂದು ವರ್ಷ 8 ತಿಂಗಳಲ್ಲಿ 6 ಕಂತುಗಳಲ್ಲಿ ಹಣ ಬಿಡುಗಡೆಯಾಗಿದೆ. ಆಗಸ್ಟ್ 9, 2020ರಂದು ಪ್ರಧಾನಿ ಆರನೇ ಕಂತಿನ ಹಣ ರೈತರ ಖಾತೆಗಳಿಗೆ ವರ್ಗಾಯಿಸಿದರು. ಆ ದಿನದ 17 ಸಾವಿರ ಕೋಟಿ ಸೇರಿ ಒಟ್ಟು ಇದುವರೆಗೆ 75 ಸಾವಿರ ಕೋಟಿ ರೂಪಾಯಿಗಳನ್ನು 8.5 ಕೋಟಿ ಫಲನುಭವಿ ರೈತರಿಗೆ ನೀಡಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ. ವಾಸ್ತವವಾಗಿ ನೋಡಿದರೆ ಕಿಸಾನ್ ಸನ್ಮಾನ್ ನಿಧಿ ಯೋಜನೆ ಘೋಷಣೆಯಾಗಿ 20 ತಿಂಗಳು ಕಳೆದಿವೆ. ಅಂದರೆ ವಾರ್ಷಿಕ ಮೂರು ಕಂತುಗಳಾದರೆ ಒಂದು ವರ್ಷ ಎಂಟು ತಿಂಗಳಿಗೆ 5 ಕಂತುಗಳು ಮಾತ್ರ ಆಗುತ್ತವೆ. ಸರ್ಕಾರದ ಪ್ರಕಾರ ಒಂದು ಕಂತಿನ ಹಣ ಹೆಚ್ಚುವರಿಯಾಗಿ ಬಿಡುಗಡೆಯಾಗಿದೆ.

ಭಾರತ ಕೃಷಿ ಪ್ರಧಾನ ದೇಶ. ಶೇಕಡ 65 ರಷ್ಟು ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಕೃಷಿಯ ಜೊತೆ ಇತರೆ ಉಪಕಸುಬುಗಳಲ್ಲೂ ತೊಡಗಿಸಿಕೊಂಡಿವೆ. ದೇಶಕ್ಕೆ ಅನ್ನ ನೀಡುವ ರೈತ ಕುಟುಂಬಗಳ ದಿಕ್ಕುಗಾಣದೆ ಜೀವನ ನಡೆಸುತ್ತಿವೆ. ಇಂತಹ ಹೊತ್ತಿನಲ್ಲಿ ಸರ್ಕಾರ ಪ್ರತಿಯೊಬ್ಬ ರೈತ ಈ ಯೋಜನೆ ವ್ಯಾಪ್ತಿಗೆ ಬರುವಂತೆ ನೋಡಿಕೊಳ್ಳಬೇಕಿತ್ತು. ಆದರೆ ಅಂತಹ ಕೆಲಸ ಅಗಿಲ್ಲ. ಪಹಣಿ ಇಲ್ಲದ, ಪಾಲುದಾರಿಕೆ ಸರಿಯಾಗಿ ಆಗದೇ ಇರುವಂಥ, ಬಗರ್ ಹುಕುಂ ಸಾಗುವಳಿಯಲ್ಲಿ ತೊಡಗಿರುವಂಥ ರೈತರೂ ಕೃಷಿ ಸಮ್ಮಾನ್ ಯೋಜನೆಯ ಫಲನುಭವಿಗಳು ಆಗಲು ಸಾಧ್ಯವಾಗಿಲ್ಲ. ಎಷ್ಟೋ ಜಮೀನುಗಳು ಇನ್ನೂ ತಾತ-ಮುತ್ತಾತನ ಹೆಸರಿನಲ್ಲೇ ಓಡುತ್ತಿವೆ. ಇಂತಹ ಸಂಕಷ್ಟಗಳು ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವವರಿಗೆ ಕಾಣುತ್ತಿಲ್ಲ.

ಇದನ್ನೂ ಓದಿ: ಹುಲಿಗಳಿಗೆ ಧಾಮ! ರೈತ, ಆದಿವಾಸಿಗಳಿಗೆ ಪಂಗನಾಮ!!

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಅವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಟ್ರಾಕ್ಟರ್ ನಲ್ಲಿ ಒಂದು ಗಂಟೆ ಉಳುಮೆ ಮಾಡಲು 1500 ರೂ ನೀಡಬೇಕು. ರಸಗೊಬ್ಬರ ಖರೀದಿಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ವರ್ಷಕ್ಕೆ 6 ಸಾವಿರ ರೂ ನೀಡಿದರೆ ಯಾವುದಕ್ಕು ಆಗುವುದಿಲ್ಲ. ನಮ್ಮೂರಿನಲ್ಲಿ 300 ರೈತ ಕುಟುಂಬಗಳಿವೆ. ಅವರಲ್ಲಿ ಕೇವಲ 60 ಮಂದಿಗೆ ಮಾತ್ರ ಬಂದಿದೆ. ಅಧಿಕಾರಿಗಳು ರೆಕಾರ್ಡ್ ಮಾತ್ರ ಕೇಳುತ್ತಾರೆ. ಭೂಮಿ ಉಳುವ ಗೇಣಿದಾರನಿಗೆ ಯಾವುದೇ ದಾಖಲೆ ಇಲ್ಲ. ಭೂಮಾಲಿಕರು ಮಾತ್ರ ಕಿಸಾನ್ ಸನ್ಮಾನ್ ಯೋಜನೆಯ ಲಾಭ ಪಡೆಯುತ್ತಾರೆ. ಗೇಣಿದಾರರಿಗೂ ಹಣ ನೀಡಬೇಕು ಎಂಬುದು ನಮ್ಮ ಒತ್ತಾಯ. ದೇಶದಲ್ಲಿ ಬಹುಸಂಖ್ಯಾತರು ರೈತರಾದರೂ ಸರ್ಕಾರದ ನೆರವು ದೊರೆಯುತ್ತಿಲ್ಲ. ಇದು ನೋವಿನ ಸಂಗತಿ” ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್ ವರದಿಯನ್ವಯ ರೈತರು ಮಾಡಿದ ವೆಚ್ಚದ ಒಂದೂವರೆ ಪಟ್ಟು ಹಣ ನೀಡಬೇಕೆಂದು ವ್ಯಾಪಕ ಆಗ್ರಹ ಕೇಳಿಬಂತು. ಇದರ ಒತ್ತಡವನ್ನು ಸಹಿಸದ ಕೇಂದ್ರ ಸರ್ಕಾರ ಅತುರವಾಗಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಜಾರಿಗೆ ತಂದಿತು. ಇದರಿಂದ ನಿಜವಾದ ರೈತರಿಗೆ ಪ್ರಯೋಜನವಿಲ್ಲ. ಇದೊಂದು ನಾಮಕಾವಸ್ತೆ ಮತ್ತು ತೋರಿಕೆಯ ಯೋಜನೆ ಎಂದು ಅವರು ಹೇಳಿದರು.

ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಹೇಳುವಂತೆ, “ಕೇಂದ್ರ ಸರ್ಕಾರ ಕೇವಲ 8.5 ಕೋಟಿ ರೈತರನ್ನು ರೀಚ್ ಆಗಲು ಸಾಧ್ಯವಾಗಿದೆ. ಸರ್ಕಾರ ನೀಡುತ್ತಿರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ರೈತರ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡಿದೆ. ರೈತರ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಇತ್ಯರ್ಥ ಪಡಿಸಿದರೆ, ಬೆಳೆಗಳಿಗೆ ಸರಿಯಾದ ಧಾರಣೆ ನೀಡಿದರೆ, ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ, ರೈತರ ಸಮಸ್ಯೆಗಳನ್ನು ಪರಿಹರಿಸಿದರೆ ರೈತರಿಗೆ ಯಾವ ಹಣವನ್ನೂ ನೀಡಬೇಕಾದ ಅಗತ್ಯವಿಲ್ಲ. ರೈತರ ನಿಜವಾದ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹೊಂಬಾಳೆ – 2: ಕಂದಾಯ ಇಲಾಖೆ ಕೈಯಲ್ಲಿ ರೈತನ ಜುಟ್ಟು – ನಳಿನಿ ಕೋಲಾರ

ಶಿರಾ ತಾಲೂಕಿನ ಗೌಡಗೆರೆ ಗ್ರಾಮದ ಈರಣ್ಣ ನಾನುಗೌರಿ.ಕಾಂ ಜೊತೆ ಮಾತನಾಡಿದರು ‘’ನನಗೆ ಎರಡು ಕಂತು ಬಂತು ಸ್ವಾಮಿ, ಉಳಿದಿದ್ದು ಬಂದಿಲ್ಲ.. ನಮ್ಮ ಚಿಕ್ಕಪ್ಪನ ಮಕ್ಕಳಿಗೆ ಮೂರು ಕಂತು ಬಂತು. ನಾನು, ಅಧಿಕಾರಿಗಳನ್ನು ಕೇಳಿದೆ. ಬೇರೆಯವರಿಗೆ ಮೂರು ಕಂತು ಬಂದೈತೆ. ನನಗೆ ಎರಡೇ ಕಂತು ಬಂದಿರೋದು ಅಂದ್ರೆ ಬರುತ್ತೆ ಹೋಗಿ ಎಂದು ಹೇಳಿಕಳಿಸ್ತಾರೆ. ಇವಾಗ ನೋಡಿದ್ರೆ 6 ಕಂತು ಹಣ ಬಿಡುಗಡೆ ಆಗೈತೆ ಅಂತಾರೆ. ನನಗೇನು ಬಂದಿಲ್ಲ ಸ್ವಾಮಿ” ಎಂದು ಹೇಳಿದರು.

ಪಾವಗಡ ತಾಲೂಕು ರೈತ ಮುದ್ದಪ್ಪ ಅವರನ್ನು ಸಂಪರ್ಕಿಸಿದಾಗ “ನಮಗೆ ಎರಡು ಸಾರಿ ಬಂದೈತೆ. ಎರಡು ಸರಿನು ಬ್ಯಾಂಕ್‌ಗೆ ಹೋಗಿ ಎರಡೆರಡು ಸಾವಿರ ತಂದ್ವಿ. ಈ ತಿಂಗ್ಳಾಗೆ ಒಂದು ಮೆಸೇಜ್ ಬಂದೈತೆ. 2 ಸಾವಿರ ಹಾಕಿದ್ದೀವಿ ಅಂತ. ಇನ್ನೂ ಹೋಗಿಲ್ಲ. ಹೋಗಿ ತರಬೇಕು. ಇದು ಸೇರಿದ್ರೆ ಮೂರು ಸಾರಿ ಬಂದಂಗಾಗ್ತೈತೆ” ಎಂದು ತಿಳಿಸಿದರು.

ಕೇಂದ್ರ ಸರ್ಕಾರ 6 ಸಾವಿರ ಘೋಷಣೆ ಮಾಡುತ್ತಿದ್ದಂತೆಯೇ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ರಾಜ್ಯ ಸರ್ಕಾರವೂ 4 ಸಾವಿರ ಕೊಡುತ್ತದೆ ಎಂದು ಭರವಸೆ ನೀಡಿದರು. 2019 ರ ಸಾಲಿನಲ್ಲಿ ರೈತರಿಗೆ ನೀಡಿದ ಭರವಸೆಯಂತೆ ಕೆಲವರಿಗೆ 4 ಸಾವಿರ ರೂಪಾಯಿ ದೊರೆಯಿತು. ಮತ್ತೆ ಕೆಲವರಿಗೆ 2 ಸಾವಿರ ಮಾತ್ರ ಖಾತೆಗೆ ಬಂತು. 2020 ನೇ ಸಾಲಿನಲ್ಲಿ ಕೊರೊನಾ ಬಂದ ಮೇಲೆ ಹಣವೂ ಇಲ್ಲ. ಅದರ ಬಗ್ಗೆ ಸೊಲ್ಲೂ ಇಲ್ಲ ಅನ್ನುವಂತಾಗಿದೆ.

ಕೇಂದ್ರ ಸರ್ಕಾರದ ಕಿಸಾನ್ ಸನ್ಮಾನ್ ಯೋಜನೆ 8.5 ಕೋಟಿ ರೈತರ ಪೈಕಿ ಬಹುತೇಕರಿಗೆ ಎರಡು, ಮೂರು ಮತ್ತು ನಾಲ್ಕು ಬಾರಿ ಹಣ ಬಂದಿದ್ದರೆ, ಕೆಲವೇ ಮಂದಿ ರೈತರಿಗೆ ಆರು ಕಂತುಗಳು ಬಂದಿವೆ. ಆದರೆ ನಿಜ ರೈತ ಫಲನುಭವಿಗಳು ಈ ಯೋಜನೆಯಿಂದ ಹೊರಗಿದ್ದು ಸೌಲಭ್ಯದಿಂದ ವಂಚಿತರಾಗಿದ್ದಾರೆ.


ಓದಿ: ರೈತರ ಮರಣ ಶಾಸನ ಬರೆಯಲು ಕಳ್ಳದಾರಿ ಹಿಡಿದ ರಾಜ್ಯ ಸರ್ಕಾರ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...