Homeಮುಖಪುಟಪೊಲೀಸ್ ದಾಳಿಗೆ ರೈತ ಸಾವು ಆರೋಪ: ಎಫ್‌ಐಆರ್ ದಾಖಲಿಸಲು ಪಟ್ಟು ಹಿಡಿದ ರೈತರು

ಪೊಲೀಸ್ ದಾಳಿಗೆ ರೈತ ಸಾವು ಆರೋಪ: ಎಫ್‌ಐಆರ್ ದಾಖಲಿಸಲು ಪಟ್ಟು ಹಿಡಿದ ರೈತರು

- Advertisement -
- Advertisement -

‘ದೆಹಲಿ ಚಲೋ’ ಪ್ರತಿಭಟನಾ ನಿರತ ಯುವ ರೈತ ಶುಭಕರನ್ ಸಿಂಗ್ ಸಾವಿನ ಸಂಬಂಧ ಎಫ್ಐಆರ್ ದಾಖಲಿಸಲು ರೈತ ಸಂಘಟನೆಗಳು ಪಟ್ಟು ಹಿಡಿದಿವೆ.

ಎಫ್ಐಆರ್ ದಾಖಲಿಸುವವರೆಗೆ ನಾವು ಅಂತ್ಯ ಸಂಸ್ಕಾರ ನಡೆಸುವುದಿಲ್ಲ. ಪಂಜಾಬ್ ಮುಖ್ಯಮಂತ್ರಿ ಘೋಷಿಸಿರುವ 1 ಕೋಟಿ ರೂಪಾಯಿ ಪರಿಹಾರ ಹಣ ಬೇಡ ಎಂದು ಶುಭಕರನ್ ಸಂಬಂಧಿಕರು ಹೇಳಿದ್ದಾರೆ.

ವರದಿಗಳ ಪ್ರಕಾರ ಶುಭಕರನ್ ಸಾವಿಗೆ ಕಾರಣರಾದವರ ವಿರುದ್ದ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಅಧಿಕಾರ ವ್ಯಾಪ್ತಿಯ ಸಮಸ್ಯೆಗಳನ್ನು ಉಲ್ಲೇಖಿಸಿ ಪಂಜಾಬ್ ಪೊಲೀಸರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಖಾಸಗಿ ಮೂಲಗಳನ್ನು ಉಲ್ಲೇಖಿಸಿ ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಶುಭಕರನ್ ಹರಿಯಾಣ ರಾಜ್ಯದ ವ್ಯಾಪ್ತಿಯಲ್ಲಿ ಗಾಯಗೊಂಡಿದ್ದು, ಹಾಗಾಗಿ ನಾವು ಪ್ರಕರಣ ದಾಖಲಿಸುವುದು ಅಸಾಧ್ಯ ಎಂದು ಪಂಜಾಬ್ ಪೊಲೀಸರು ಹೇಳಿದ್ದಾಗಿ ವರದಿ ತಿಳಿಸಿದೆ.

ಫೆಬ್ರವರಿ 21 ರಂದು, ಪಂಜಾಬ್-ಹರಿಯಾಣದ ಗಡಿ ಪ್ರದೇಶ ಖಾನೌರಿಯಲ್ಲಿ ರೈತರು ಮತ್ತು ಹರಿಯಾಣ ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ಈ ವೇಳೆ ಪಂಜಾಬ್‌ನ ಬಟಿಂಡಾದ ಬಲೋಹ್ ಗ್ರಾಮದ 21 ವರ್ಷದ ಪ್ರತಿಭಟನಾಕಾರ ಶುಭಕರನ್ ಸಿಂಗ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ತಲೆಗೆ ಪೆಟ್ಟಾಗಿ ಪಟಿಯಾಲದ ರಾಜೀಂದ್ರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು.

ಹರಿಯಾಣ ಪೊಲೀಸರ ಗುಂಡಿಗೆ ಶುಭಕರನ್ ಬಲಿಯಾಗಿದ್ದಾರೆ. ಅವರ ತಲೆಗೆ ಗುಂಡು ಹಾರಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಯುವ ರೈತನ ಸಾವಿನ ಬೆನ್ನಲ್ಲೇ ಪಟಿಯಾಲದ ರಾಜೀಂದ್ರ ಆಸ್ಪತ್ರೆಯಲ್ಲಿ ಹಾಜರಿದ್ದ ಅವರ ಸಂಬಂಧಿಕರು ಮತ್ತು ರೈತ ಮುಖಂಡರು 1 ಕೋಟಿ ರೂಪಾಯಿ ಪರಿಹಾರ, ಶುಭಕರನ್‌ಗೆ ಹುತಾತ್ಮನ ಸ್ಥಾನಮಾನ ಮತ್ತು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದ್ದರು. ಅವರ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ಸಮಿತಿಯ ಮುಂದೆ ನಡೆಸಬೇಕು ಮತ್ತು ಹರಿಯಾಣ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದರು.

ಅಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಮರಣೋತ್ತರ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು.

ಎರಡೂವರೆ ಎಕರೆ ಜಮೀನು ಹೊಂದಿದ್ದ ಶುಭಕರನ್, ಅವರ ಕುಟುಂಬದ ಏಕೈಕ ಆಧಾರವಾಗಿದ್ದರು ಎಂದು ಅವರ ಚಿಕ್ಕಮ್ಮ ಹರ್‌ಪ್ರೀತ್ ಕೌರ್ ತಿಳಿಸಿದ್ದಾಗಿ ನ್ಯೂಸ್‌ಲಾಂಡ್ರಿ ವರದಿ ಮಾಡಿದೆ. ಮಾನಸಿಕ ಖಾಯಿಲೆ ಹೊಂದಿದ್ದ ತಂದೆ, ಅಜ್ಜಿ ಮತ್ತು ಇಬ್ಬರು ಸಹೋದರಿಯರನ್ನು ಶುಭಕರನ್ ಅಗಲಿದ್ದಾರೆ.

ಫೆಬ್ರವರಿ 23 ರಂದು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು “ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ರೈತರ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಲಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಆದರೆ, ಅಂದು ಸಂಜೆ 5 ಗಂಟೆಯವರೆಗೂ ಹರಿಯಾಣ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂಬ ಬೇಡಿಕೆಗೆ ಅವರು ಸ್ಪಂದಿಸಿರಲಿಲ್ಲ.

ಇಂದಿಗೆ (ಫೆ.24) ಘಟನೆ ನಡೆದು ಮೂರು ದಿನಗಳಾಗಿವೆ. ವರದಿಗಳ ಪ್ರಕಾರ ಶುಭಕರನ್ ಸಾವಿನ ಸಂಬಂಧ  ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಲು ಸಿದ್ದರಿದ್ದರೂ ಅವರಿಗೆ ಪ್ರಾದೇಶಿಕ ಸಮಸ್ಯೆ ಉಂಟಾಗಿದೆ‌.

ಇದನ್ನೂ ಓದಿ : ಹಕ್ಕುಗಳ ಉಲ್ಲಂಘನೆ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...