Homeಮುಖಪುಟಜೂನ್ ಪ್ರೈಡ್ ಮಂಥ್; ಕ್ವಿಯರ್ ಆವರಣ ಮತ್ತು ಪುರಾಣಗಳ ಶೋಧ

ಜೂನ್ ಪ್ರೈಡ್ ಮಂಥ್; ಕ್ವಿಯರ್ ಆವರಣ ಮತ್ತು ಪುರಾಣಗಳ ಶೋಧ

- Advertisement -
- Advertisement -

’ನೀವು ಕ್ವಿಯರ್ ಮತ್ತು ಟ್ರಾನ್ಸ್ ಸಮುದಾಯದವರು ಬರಿ ನಿಮ್ಮದೇ ಏನೋ ಒಂದನ್ನ ಕಟ್ಟೋದಕ್ಕೆ ಹೊರಡ್ತೀರಾ. ನಿಮಗೆ ನಮ್ಮೆಲ್ಲರ ಜೊತೆ ಸಹಜೀವನ ನಡೆಸೋದಕ್ಕೆ ಬರಲ್ಲ- ನಾನು ಎದುರಾಗುವ ಹತ್ತು ಜನರಲ್ಲಿ ಐವರು ನನ್ನ ಬಳಿ ಇಂತಹ ಮಾತುಗಳನ್ನ ಆಡುತ್ತಲೇ ಇರುತ್ತಾರೆ. ಹಾಗೆ ಮಾತನಾಡುವಾಗ ನನ್ನ ಗಮನ ಹೆಚ್ಚು ಸೆಳೆದಿದ್ದು ’ಸಹಜೀವನ’ ಎನ್ನುವ ಪದದಲ್ಲಿ! ಹಾಗಾದರೆ ನಾವು ಇಲ್ಲಿಯವರೆಗೂ ಮುಖ್ಯವಾಹಿನಿಯ ಜೊತೆ ನಿರ್ವಹಿಸಿಕೊಂಡು ಬರ್ತಾ ಇರೋದು ಏನು? ಸಹಜೀವನವೇ ಅಲ್ಲವೇ? ಇನ್ನೊಂದು ಮುಖ್ಯ ಪ್ರಶ್ನೆ ಅಂದರೆ ’ನಾವು ನಿಜವಾಗಿಯೂ ಸಹಜೀವನ ಮಾಡ್ತಾ ಇದೀವಿ; ಆದರೆ ಮುಖ್ಯವಾಹಿನಿ ನಮ್ಮ ಜೊತೆ ಸಹಜೀವನ ನಡೆಸುತ್ತಿದೆಯೇ?’ ’ಇವರು ಹೇಳುತ್ತಿರುವ ಸಹಜೀವನದ ಅರ್ಥವಾದರೂ ಏನು?’ ಅದಕ್ಕಿಂತ ಮುಖ್ಯ ಪ್ರಶ್ನೆ, ’ನಾವು ಜೀವಿಸುವುದಕ್ಕೆ, ನಮ್ಮ ಅಸ್ಮಿತೆಗಳನ್ನು ಧೈರ್ಯದಿಂದ ಘೋಷಿಸಿಕೊಂಡು ಘನತೆಯಿಂದ ಬದುಕುವುದಕ್ಕೆ ಒಂದು ಸಹಿಷ್ಣುವಾದ ಆವರಣ ಮತ್ತು ವಾತಾವರಣ ಈ ಮೊದಲಿನಿಂದಲೂ ಇತ್ತೇ?’ ಇದ್ದಿದ್ದರೆ ಸ್ಟೋನ್‌ವಾಲ್‌ನಂತಹ ಘಟನೆಗಳು ನಡೆಯುತ್ತಿದ್ದವೇ?

ಬಿಡಿ, ಅಲ್ಲಿಂದ ಇವತ್ತಿಗೆ ತುಂಬಾ ದೂರ ಸಾಗಿ ಬಂದಿದ್ದೀವಿ ಅಂದುಕೊಳ್ಳೋಣ. ಈಗ ವರ್ಷಕ್ಕೊಮ್ಮೆ ದೇಶದ ಮುಖ್ಯ ನಗರಗಳಲ್ಲಿ ಕ್ವಿಯರ್ ಪ್ರೈಡ್ ಮಾರ್ಚ್‌ಗಳು ನಡೆಯುತ್ತವೆ. ಜೂನ್ ತಿಂಗಳನ್ನ ನಾವು ಪ್ರೈಡ್ ತಿಂಗಳೆಂದು ಆಚರಿಸುತ್ತೇವೆ. ಬೆಂಗಳೂರಿನಲ್ಲೇ ಕ್ವಿಯರ್ ಫಿಲಂ ಫೆಸ್ಟಿವಲ್‌ಗಳು ನಡೆಯುತ್ತವೆ. ಸಬರಂಗ್, ಗುಡ್ ಆಸ್ ಯು, ಸಮರ, ಲೆಸ್ಬಿಟ್, ಪಯಣ, ಜೀವಾ ಮುಂತಾದ ಅದೆಷ್ಟೋ ಕ್ವಿಯರ್ ಸಮುದಾಯದ ಗುಂಪುಗಳಿವೆ. ಇವೆಲ್ಲವೂ ಒಂದೊಂದು ಧ್ಯೇಯವನ್ನು ಇಟ್ಟುಕೊಂಡು ಸಮುದಾಯದ ಬೆಂಬಲಕ್ಕೆ ದುಡಿಯುತ್ತಿವೆ. LGBTQIA ಪ್ಲಸ್‌ನಲ್ಲಿ ಬರುವ ಪ್ರತಿಯೊಂದು ಅಸ್ಮಿತೆಯವರು ಕೂಡ ತಮ್ಮತಮ್ಮ ಚಿಕ್ಕಚಿಕ್ಕ ಬೆಂಬಲ ಗುಂಪುಗಳನ್ನು ಕಟ್ಟಿಕೊಂಡಿದ್ದಾರೆ. ಇದು ಅವರು ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಭೇಟಿಯಾಗಿ ಅವರ ಕಷ್ಟಸುಖ ನೋವುನಲಿವು ಗೊಂದಲ-ಆತಂಕಗಳನ್ನು ಹಂಚಿಕೊಂಡು ಹಗುರಾಗುವ ಗುಂಪುಗಳಾಗಿಯೂ ಬೆಳೆದಿವೆ. ಇವೆಲ್ಲವನ್ನೂ ನಾನು ಹೇಳುತ್ತಿರುವುದು ಸೀಕ್ರೆಟ್ ಗುಂಪುಗಳ ಬಗ್ಗೆ. ಆದರೆ ಬಡವಾಗಿದ್ದು ಕ್ವಿಯರ್ ಆಗಿರುವ ಜನ; ದಲಿತ ಮುಸ್ಲಿಂ ಮಹಿಳೆ ಹೀಗೆಯೇ ಈಗಾಗಲೇ ಸಮಾಜದ ಅಂಚಿನಲ್ಲಿದ್ದು, ಅದರ ಮೇಲೆ ಕ್ವಿಯರ್ ಎಂದು ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳುವ ಜನರಿಗೆ, ಅವರು ಅವರಾಗಿ ನಡೆಯಲು ಬೇಕಾಗಿರುವ ಆವರಣಗಳನ್ನು ನಮ್ಮ ಸಮಾಜದಲ್ಲಿ ಕಟ್ಟಿದ್ದೇವೆಯೇ? ಹೀಗಿರದೇ ಹೋದಲ್ಲಿ ಸಮಾಜದ ಉನ್ನತ ವರ್ಗದವರೇ ಕಟ್ಟಿಕೊಳ್ಳುವ, ಆಕ್ರಮಿಸಿಕೊಳ್ಳುವ ಜಾಗಗಳಲ್ಲಿ ಅವರ ಸರ್ವೆಲೆನ್ಸ್ ರೂಲುಗಳಲ್ಲಿ ಕ್ವಿಯರ್ ಅಸ್ಮಿತೆಗಳು ನಲುಗಿ ಹೋಗುವುದಿಲ್ಲವೇ?

ಒಂದು ಸರಳವಾದ ಉದಾಹರಣೆಯೆಂದರೆ ಜಾಗಿಂಗ್ ಪಾರ್ಕುಗಳಲ್ಲಿ ಜೆಂಡರ್ ಡಿಸ್ಪೊರಿಯ ಇರುವ ವ್ಯಕ್ತಿಯೊಬ್ಬ ಆರಾಮಾಗಿ ಲೈಂಗಿಕ ಸಾಮಾನ್ಯತೆಯ ನಿಯಮದ (Heteronormative construct) ಧಿರಿಸಿನಲ್ಲೇ ಮತ್ತೆ ನಡೆಯಬೇಕಾಗುವುದಲ್ಲವೇ? ದಿನದ ಇಪ್ಪತ್ತನಾಲ್ಕು ಗಂಟೆ ಲೈಂಗಿಕ ಸಾಮಾನ್ಯತೆಯ ನಿಯಮದ (Heteronormative construct) ನಡಾವಳಿಗಳ ವಿಜೃಂಭಣೆ ಇರುವಾಗ ಆ ಅವರು ಬಳಸುವ ’ಸಹ’ ಅನ್ನುವ ಪದದ ಒಳಗೆ ಜಗತ್ತಿನ ಕಟ್ಟಕಡೆಯ ವ್ಯಕ್ತಿಯ ಅಸ್ಮಿತೆಗಳನ್ನು ಗುರುತಿಸುವಿಕೆ, ಮನಗಾಣುವಿಕೆ ನಡೆದಿರುತ್ತದೆಯೇ? ಇಂತಹ ಪ್ರಶ್ನೆಗಳು ಕಾಡುವಾಗಲೆಲ್ಲ, ನನಗೆ ಮತ್ತು ನಮ್ಮ ಸಮುದಾಯದವರಿಗೆ ಬೆಂಬಲವಾಗಿ ನಿಂತಿದ್ದೆ ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ. ಆ ಸಂವಿಧಾನವನ್ನು ಹಿಡಿದುಕೊಂಡೆ ನನ್ನ ಇಷ್ಟು ದಿನದ ಹೋರಾಟ ಜೀವನದಲ್ಲಿ ಮುಂದುವರಿದಿದ್ದು. ನನಗೆ ಪ್ರತಿ ಕ್ರೈಸಿಸ್‌ನಲ್ಲಿ ಮತ್ತು ಪ್ರತಿ ಕೇಸನ್ನು ಪೊಲೀಸ್ ಸ್ಟೇಷನ್ನುಗಳಲ್ಲಿ ನಿಭಾಯಿಸಲು ನನ್ನ ನೆರವಿಗೆ ಬಂದದ್ದು ಸಂವಿಧಾನವೇ. ತೀರ್ಪು ಸಮುದಾಯದ ಪರವಾಗಿ ಬರದೇ ಇರುವ ಹೊತ್ತಿನಲ್ಲಿ ಪೊಲೀಸರ ಎದುರಿಗೆ ನಮ್ಮ ಹಕ್ಕುಗಳ ಪರವಾಗಿ ಹೋರಾಡಲು ಸಹಾಯ ಮಾಡಿದ್ದೂ ನಮ್ಮ ಬಾಬಾಸಾಹೇಬರ ಸಂವಿಧಾನ.

ನಾವು ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈಗೀಗ ಪ್ರಾತಿನಿಧ್ಯದ ಮಾತುಗಳನ್ನು, ಬಹುತ್ವದ ಮಾತುಗಳನ್ನು ಆಡುತ್ತಿದ್ದೀವಿ. ಆ ಪ್ರಶ್ನೆಗಳು ಈಗೀಗ ಹೆಚ್ಚು ಚಾಲ್ತಿಗೆ ಬರುತ್ತಿವೆ. ಅದರಲ್ಲೂ ಕೆಲವು ಲೇಖಕರು ’ಪ್ರತಿಭೆಯೇ ಮುಖ್ಯ ಅಂತ ಮಾತನಾಡುತ್ತಾರೆ. ಸಾಮಾಜಿಕ ಜೀವನದಲ್ಲಿ ಅತಿ ಬೇಗ ಅಕ್ಷರಕ್ಕೆ ತೆರೆದುಕೊಂಡು ಪ್ರತಿಭೆ ಸಂಪಾದಿಸೋದಕ್ಕೆ ಅವರ ಸಾಮಾಜಿಕ ಜೀವನ, ಅವರ ಜಾತಿ, ಹಣ ಎಲ್ಲಾ ಕಾರಣ ಆಗಿರತ್ತೆ ಅನ್ನೋದನ್ನ ಮರೆತೇಬಿಡುತ್ತಾರೆ. ಕೆಲವು ವಿಮರ್ಶಕರಂತೂ ಕಲಾತ್ಮಕತೆಯ ಪ್ರಶ್ನೆ ಎತ್ತಿ ನಾವು ಬರೆದುದನ್ನ ಪಕ್ಕಕ್ಕೆ ಇಡುತ್ತಾರೆ. ಆದರೆ ಕನ್ನಡ ಲೋಕ ನಿಧಾನವಾಗಿಯಾದರೂ ಕ್ವಿಯರ್ ಸಂವೇದನೆಗೆ ತೆರೆದುಕೊಳ್ಳುತ್ತಿದೆ ಎನ್ನುವುದೇ ಒಂದು ಆಶಾದಾಯಕ ಬೆಳವಣಿಗೆ.

ಇಲ್ಲಿಂದ ನಾನು, ನಮಗೆ ಅಂತ ಒಂದು ಇತಿಹಾಸ ಇದೆಯೇ, ಪುರಾಣದ ಉಲ್ಲೇಖಗಳು ಇವೆಯೇ? ಅಥವಾ ನಾವೇ ಅವುಗಳನ್ನು ಕಟ್ಟಬೇಕೇ? ಎನ್ನುವ ವಿಷಯಗಳಿಗೆ ತಿರುಗಿಕೊಳ್ಳುವೆ. ಲೈಂಗಿಕ ಅಸ್ಮಿತೆಯ ಈ ಹೋರಾಟದಲ್ಲಿ ಮೊದಲಿಗೆ ಸಮಾಜ ಗುರುತಿಸಿದ್ದು ಟ್ರಾನ್ಸ್ ಮಹಿಳೆಯರನ್ನ! ಅಲ್ಲಿ ಅದಕ್ಕೊಂದು ದೈವಿಕತೆಯ ಕೋನವೂ ಸೇರಿರುತ್ತದೆ ಎನ್ನುವುದನ್ನು ನಾವು ಗಮನಿಸಬೇಕು. ಇಲ್ಲಿ ನಾನು ವಿಶೇಷವಾಗಿ ರಾಮಾಯಣದ ಕತೆಯೊಂದನ್ನು ಹೇಳಬಯಸುವೆ. ರಾಮ ಕಾಡಿಗೆ ಹೋಗುವಾಗ ಒಮ್ಮೆ ಹಿಂತಿರುಗಿ ನೋಡಿದನಂತೆ. ಆಗ ರಾಜ್ಯದ ಎಲ್ಲ ಪ್ರಜೆಗಳು ರಾಮನನ್ನು ಬೀಳ್ಕೊಡಲು ಬಂದಿದ್ದರಂತೆ. ಆಗ ರಾಮ ಎಲ್ಲರಿಗೂ ಕೈಮುಗಿದು ದಯವಿಟ್ಟು ಎಲ್ಲ ಗಂಡಸರು ಮತ್ತು ಹೆಂಗಸರು ಹಿಂತಿರುಗಿ ಹೋಗಿ ಎಂದು ಕಾಡಿಗೆ ಹೋದನಂತೆ. ಪಾಪ, ರಾಮ ಸುಮ್ಮನೆ ಜನ ಎಂದು ಸಂಬೋಧಿಸಿದ್ದರೆ ನಡೆಯುತ್ತಿತ್ತು. ರಾಮ ಹಾಗೆ ಹೇಳಲಿಲ್ಲ. ರಾಮನಿಗೆ ಕಂಡಿದ್ದು ಗಂಡು ಹೆಣ್ಣು ಎಂಬ ಬೈನರಿ ಮಾತ್ರ. ಅದಕ್ಕಾಗಿಯೇ ಎರಡೂ ಅಲ್ಲದ ಹಿಜ್ರಾಗಳು ಅಲ್ಲಿಯೇ ನಿಂತರಂತೆ. ರಾಮ ವನವಾಸ ಮುಗಿಸಿ ವಾಪಾಸ್ ಬರುವಾಗ ನಿಂತಿದ್ದ ಹಿಜ್ರಾಗಳನ್ನು ನೋಡಿ ಕಾರಣ ಕೇಳಿದ್ದಕ್ಕೆ ’ನಾವು ನಿನ್ನ ಕಣ್ಣಿಗೆ ಕಾಣದೆ ಹೋದೆವಲ್ಲ ರಾಮ! ನಮ್ಮನ್ನು ಗುರುತಿಸದಾದೆಯಾ ರಾಮ,’ ಎಂದರಂತೆ. ಆಗ ಅವನು ಅವರಿಗೆ ’ನಿಮ್ಮ ಮುಖ ನೋಡಿದವರಿಗೆಲ್ಲ ಮಂಗಳವಾಗಲಿ’ ಎನ್ನುವ ವರ ಕೊಟ್ಟು ತನ್ನ ತಪ್ಪನ್ನು ತಿದ್ದಿಕೊಂಡನಂತೆ. ಸರಿ, ಇದೊಂದು ಪುರಾಣದ ಕತೆ. ಇದನ್ನ ಟ್ರಾನ್ಸ್ ಮಹಿಳಾ ಸಮುದಾಯ ತನ್ನ ಕತೆ ಎಂದು ಹೇಳಿಕೊಳ್ಳುತ್ತದೆ. ಹಾಗಾದರೆ ಉಳಿದ ಅಸ್ಮಿತೆಗಳ ಕತೆ ಏನು? ಬೇರೆ ಧರ್ಮದಲ್ಲಿ ಹುಟ್ಟಿದ ಜನರ ಪುರಾಣ? ಇತಿಹಾಸದ ಕತೆ? ನಮ್ಮಲ್ಲಿ ಪುರಾಣ ಮತ್ತು ಇತಿಹಾಸಗಳ ನಡುವಣ ವ್ಯತ್ಯಾಸವೇ ಗೊತ್ತಿಲ್ಲದ ಜನರು ಇರುವಾಗ, ಆಳುವ ಸರ್ಕಾರಗಳು ಹಾಗೆ ನಂಬಿಸುವಾಗ ನಮ್ಮ ದಾರಿ ಯಾವುದಾಗಿರಬೇಕು?

ಮೊದಲಿಗೆ ನಾವು ಹಿಜ್ರಾಗಳ ಇತಿಹಾಸ ಅಂತ ಬರೆಯುವಾಗ ಅಂತರ್ಜಾಲದಲ್ಲಿ ತಡಕಾಡಿದಾಗ ಕೆಲವೊಂದು ಹಮಾಮುಗಳು, ಜೋಗತಿ ಇತಿಹಾಸ, ಮೊಘಲರ ಕಾಲದ ಕೆಲವು ಉಲ್ಲೇಖಗಳು ಸಿಗುತ್ತವೆಯಾದರು ಅವುಗಳು ಸಾಕಾಗುವುದಿಲ್ಲ. ಇತಿಹಾಸ ಅಂತ ಬರುವಾಗ ನಾವು ಮತ್ತೆಮತ್ತೆ ಯುದ್ಧಗಳಲ್ಲೇ ಹುಡುಕಬೇಕೆ? ಪ್ರೀತಿಯಲ್ಲಿ ಹುಡುಕಲು ಸಾಧ್ಯವಿಲ್ಲವೇ? ಹಾಗಾಗಿ ನನಗನಿಸುತ್ತದೆ; ನಮ್ಮ ಪುರಾಣಗಳನ್ನು ನಾವೇ ಕಟ್ಟಿಕೊಳ್ಳಬೇಕು. ನಮಗೆ ಇತಿಹಾಸವಿಲ್ಲ. ಆದರೆ ನೆನಪುಗಳಿವೆ. ನಮ್ಮ ನೋವು, ಹತಾಶೆ, ಅವಮಾನ, ಹೋರಾಟ ಎಲ್ಲ ಅಡಗಿರುವುದು ಕೂಡ ನೆನಪುಗಳಲ್ಲೇ! ಹಾಗಾಗಿ ನಮ್ಮ ಪುರಾಣಗಳನ್ನು, ಇತಿಹಾಸವನ್ನು ನಾವೇ ಕಟ್ಟಿಕೊಳ್ಳುವ ಅವಶ್ಯಕತೆಯಂತೂ ಇದೆ. ಹಾಗೆ ಮಾಡುವಾಗ ಎಲ್ಲ ಅಸ್ಮಿತೆಗಳನ್ನು ಒಳಗೊಳ್ಳುವ ಬಗ್ಗೆ, ಮನುಷ್ಯ ಘನತೆಯ ಬಗ್ಗೆ, ಬಾಬಾಸಾಹೇಬ್ ಅಂಬೇಡ್ಕರ್ ಕಂಡ ಸಮ ಸಮಾಜದ ಕನಸಿನ ಬಗ್ಗೆ ಆಳವಾದ ಎಚ್ಚರ ನಮ್ಮೊಳಗೆ ಇದ್ದೆ ಇರುತ್ತದೆ.

ದಾದಾಪೀರ್ ಜೈಮನ್

ನಿರೂಪಣೆ: ದಾದಾಪೀರ್ ಜೈಮನ್
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇಕ್ಬಾಲುನ್ನೀಸಾ ಹುಸೇನ್ ಅವರ ’ಪರ್ದಾ & ಪಾಲಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಕಥಾಸಂಕಲನ. ’ನೀಲಕುರಿಂಜಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವಪುರಸ್ಕಾರ 2022, ಮಾಸ್ತಿ ಕಥಾ ಪುರಸ್ಕಾರ 2022 ಲಭಿಸಿದೆ.

 

 

ರೂಮಿ ಹರೀಶ್

ರೂಮಿ ಹರೀಶ್
ರೂಮಿ ಹರೀಶ್ ಒಬ್ಬ ಟ್ರಾನ್ಸ್ ಜೆಂಡರ್ ಮ್ಯಾನ್ (ಹೆಣ್ಣಾಗಿ ಹುಟ್ಟಿ ಶಸ್ತ್ರ ಚಿಕಿತ್ಸೆಯಿಂದ ಗಂಡಸಾಗಿರುವವರು). ಅವರು ತಮ್ಮ 47ನೇ ವಯಸ್ಸಿಗೆ ಈ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಹಿಂದುಸ್ಥಾನಿ ಗಾಯಕ. ಸಂಗೀತ ಸಂಯೋಜನೆ, ಚಿತ್ರ ಬಿಡಿಸುವುದು, ಕಥೆ, ಕವಿತೆ, ನಾಟಕ, ಅಂಕಣಬರಹದಲ್ಲಿ ಇವರು ಕೃಷಿ ಮಾಡುತ್ತಿದ್ದಾರೆ. ಲೈಂಗಿಕತೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಜೊತೆ ಅವರ ಸಾಮಾಜಿಕ ನ್ಯಾಯಕ್ಕಾಗಿ ಕಳೆದ 22 ವರ್ಷಗಳಿಂದ ಸತತವಾಗಿ ಕೆಲಸ ಮಾಡುತ್ತಿದ್ದು, ಈಚೆಗೆ ಕ್ವಿಯರ್ ಮತ್ತು ಟ್ರಾನ್ಸ್ ಸಮುದಾಯದ ಕಲೆಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. There is no end to this LGBTQIA problem. Basically there are only two sexes, male and female; hizda or eunach is an abnormality and not a separate sex. There are a few born eunuchs but many are made eunuchs. LGBTQIA+ how many? There is no end. Some days ago I came across someone mentioning 70+. The variation in perversions is identified as a seperate sex!!!??? It goes somewhere parallel to variants of Corona virus. In fact LGBTQIA is a pandemic worse than the artificial corona pandemic.
    There must be some social initiative to treat these people as diseased, perverted. We must know that this is planned thing by the evil elements to the family structure and the society and our cultures.

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...