Homeಮುಖಪುಟಮೋದಿ 'ಭ್ರಷ್ಟಾಚಾರದ ಚಾಂಪಿಯನ್', ಬಿಜೆಪಿ 150ರ ಗಡಿ ದಾಟುವುದಿಲ್ಲ: ರಾಹುಲ್ ಗಾಂಧಿ

ಮೋದಿ ‘ಭ್ರಷ್ಟಾಚಾರದ ಚಾಂಪಿಯನ್’, ಬಿಜೆಪಿ 150ರ ಗಡಿ ದಾಟುವುದಿಲ್ಲ: ರಾಹುಲ್ ಗಾಂಧಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ “ಭ್ರಷ್ಟಾಚಾರದ ಚಾಂಪಿಯನ್”ಆಗಿದ್ದು, ಚುನಾವಣಾ ಬಾಂಡ್ ಯೋಜನೆಯು ವಿಶ್ವದ ಅತಿದೊಡ್ಡ “ಸುಲಿಗೆ ಯೋಜನೆಯಾಗಿದೆ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ಇಂಡಿಯಾ ಬಣದ ಪರವಾಗಿ ಜನರ ಒಲವು ಇದೆ ಮತ್ತು ಬಿಜೆಪಿ 150 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈಗ ರದ್ದುಗೊಂಡಿರುವ ಚುನಾವಣಾ ಬಾಂಡ್‌ಗಳನ್ನು ಟೀಕಿಸಿದ ರಾಹುಲ್‌ ಗಾಂಧಿ, ಚುನಾವಣಾ ನಿಧಿಯಲ್ಲಿ ಪಾರದರ್ಶಕತೆ ತರಲು ಈ ಯೋಜನೆಯನ್ನು ತರಲಾಗಿದೆ ಎಂದು ಪ್ರಧಾನಿ ಹೇಳಿಕೊಳ್ಳುತ್ತಾರೆ ಆಗಿದ್ದರೆ ಅದನ್ನು ಸುಪ್ರೀಂಕೋರ್ಟ್ ಈಗ ಏಕೆ ರದ್ದುಗೊಳಿಸಿದೆ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಯೋಜನೆಯು ವಿಶ್ವದ ಅತಿದೊಡ್ಡ ಸುಲಿಗೆ ಯೋಜನೆಯಾಗಿದೆ. ಭಾರತದ ಉದ್ಯಮಿಗಳಿಗೆ ಅದು ಚೆನ್ನಾಗಿ ತಿಳಿದಿದೆ. ಪ್ರಧಾನಿ ಈ ಬಗ್ಗೆ ಎಷ್ಟೇ ಸ್ಪಷ್ಟಪಡಿಸಿದರೂ ಅದು ಯಾವುದೇ ಪರಿಣಾಮ ಬೀರುವುದಿಲ್ಲ, ಏಕೆಂದರೆ ಪ್ರಧಾನಿ ಭ್ರಷ್ಟಾಚಾರದ ಚಾಂಪಿಯನ್ ಎಂದು ಇಡೀ ರಾಷ್ಟ್ರಕ್ಕೆ ತಿಳಿದಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಒಂದೇ ಬಾರಿಗೆ ಬಡತನವನ್ನು ಕೊನೆಗೊಳಿಸುತ್ತದೆ ಎಂಬ ಮೋದಿಯವರ ಟೀಕೆಗಳ ಕುರಿತು ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು, ಬಡತನವು ಒಂದೇ ಬಾರಿಗೆ ಕೊನೆಗೊಳ್ಳುತ್ತದೆ ಎಂದು ಯಾರೂ ಹೇಳಲಿಲ್ಲ ಆದರೆ ನಾವು ಅದಕ್ಕಾಗಿ ಬಲವಾದ ಪ್ರಯತ್ನಗಳನ್ನು ಮಾಡಬಹುದು ಎಂದು ಹೇಳಿದ್ದಾರೆ.

ಒಂದೆಡೆ, ಆರೆಸ್ಸೆಸ್‌ ಮತ್ತು ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ, ಇಂಡಿಯಾ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಉತ್ತರ ಪ್ರದೇಶದ ಅಮೇಥಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ, ಈ ಬಗ್ಗೆ ತಮ್ಮ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಗಾಜಿಪುರದವರೆಗೆ ಬದಲಾವಣೆಯ ಗಾಳಿ ಬೀಸಲಿದೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭವ್ಯವಾದ ವಿದಾಯ ಹೇಳಲಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಮತವೂ ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ಇದೇ ವೇಳೆ ಅಖಿಲೇಶ್‌ ಯಾದವ್ ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿವೆ. 80 ಲೋಕಸಭಾ ಕ್ಷೇತ್ರ ಇರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಎಸ್‌ಪಿ ಮತ್ತು ಇತರ ಕೆಲವು ಎನ್‌ಡಿಎ ಮಿತ್ರಪಕ್ಷಗಳು ಉಳಿದ 63 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ದೇಶದಲ್ಲಿ ಏಳು ಹಂತದ ಲೋಕಸಭೆ ಚುನಾವಣೆ ಏಪ್ರಿಲ್ 19 ರಂದು ಆರಂಭವಾಗಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಇದನ್ನು ಓದಿ: ಲೋಕಸಭೆ ಚುನಾವಣೆ: ‘ಮೋದಿ ಅಲೆ ಇಲ್ಲ, ಭ್ರಮೆಯಲ್ಲಿರಬೇಡಿ’ ಎಂದ ಬಿಜೆಪಿ ಅಭ್ಯರ್ಥಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...