ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ ಸಮುದಾಯದ ಯುವ ಮುಖಂಡ ಹಾಗೂ ಸಕ್ರಿಯ ಸಾಮಾಜಿಕ ಕಾರ್ಯಕರ್ತ ಭೂಮಾನಂದ (32) ಅವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ ಸಾರ್ವಜನಿಕ ಮುಖ್ಯರಸ್ತೆಯಲ್ಲಿ ಮಂಗಳವಾರ ಇಳಿ ಸಂಜೆ ಸಂಭವಿಸಿದೆ.
ಮೃತ ಭೂಮಾನಂದ ಅವರು ತಮ್ಮ ಬುಲೆಟ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಸುಂಕೇಶ್ವರಹಾಳ ಗ್ರಾಮದ ರಸ್ತೆಯಲ್ಲಿ ಅವರನ್ನು ಹಠಾತ್ತಾಗಿ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು, ತೀಕ್ಷ್ಣವಾದ ಮಾರಕಾಸ್ತ್ರಗಳಿಂದ ಮನಬಂದಂತೆ ಭೀಕರವಾಗಿ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಭೂಮಾನಂದ ಅವರು ನಡುರಸ್ತೆಯಲ್ಲೇ ಅತಿಯಾದ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು. ಕೃತ್ಯ ಎಸಗಿದ ತಕ್ಷಣವೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಗಬ್ಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣಾಂಗ್ಷು ಗಿರಿ ಅವರು, “ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ವೈಯಕ್ತಿಕ ವೈಷಮ್ಯದ ಕಾರಣಕ್ಕೆ ಈ ಹತ್ಯೆ ನಡೆದಿರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಕೊಲೆಯಾದ ಭೂಮಾನಂದ ಅವರ ಸಹೋದರ ನೀಡುವ ಅಧಿಕೃತ ದೂರಿನ ಆಧಾರದ ಮೇಲೆ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಸಾಮಾಜಿಕ ಬೆಳವಣಿಗೆ ಸಹಿಸದ ಜಾತಿವಾದಿಗಳಿಂದ ಹತ್ಯೆ ಆರೋಪ
ಭೂಮಾನಂದ ಅವರ ಈ ಕಗ್ಗೊಲೆಯು ಸಾಮಾಜಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಭೂಮಾನಂದ ಅವರ ಶರವೇಗದ ಸಾಮಾಜಿಕ ಬೆಳವಣಿಗೆ ಹಾಗೂ ಸಕ್ರಿಯತೆಯನ್ನು ಸಹಿಸದ ಕೆಲವು ಜಾತಿವಾದಿ ಶಕ್ತಿಗಳು ಈ ಹಿಂದೆ ಅವರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದವು ಎಂಬ ಗಂಭೀರ ಮಾಹಿತಿಯೂ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆಗೆ ಕಾರಣರಾದ ಪ್ರಮುಖ ರೂವಾರಿಗಳು ಮತ್ತು ಅಪರಾಧಿಗಳನ್ನು ತಕ್ಷಣವೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ತೀವ್ರ ಖಂಡನೆ
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ (AIBSP) ರಾಜ್ಯ ಸಂಯೋಜಕರಾದ ಆರ್. ಮುನಿಯಪ್ಪ ಅವರು ಈ ಬರ್ಬರ ಕೊಲೆಯನ್ನು ತೀವ್ರವಾಗಿ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ತಾನು ದಲಿತರ ಪರ ಎಂದು ನಿರಂತರವಾಗಿ ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ದಲಿತರಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವ ಮೂಲಭೂತ ಹೊಣೆಗಾರಿಕೆ ಇದೆ. ಆದರೆ ಹೀಗೆ ನಡುರಸ್ತೆಯಲ್ಲೇ ದಲಿತ ಮುಖಂಡನ ಹತ್ಯೆ ನಡೆಯುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸರ್ಕಾರವು ತಕ್ಷಣವೇ ಅಪರಾಧಿಗಳನ್ನು ಹಾಗೂ ಅವರ ಹಿಂದಿರುವ ದಲಿತ ವಿರೋಧಿ ಶಕ್ತಿಗಳನ್ನು ಪತ್ತೆ ಮಾಡಿ ಬಂಧಿಸಬೇಕು. ರಾಜ್ಯದಲ್ಲಿ ದಲಿತ ಮುಖಂಡರಿಗಿರುವ ಪ್ರಾಣಪಾಯದ ಹಿನ್ನೆಲೆಯನ್ನು ಗುರುತಿಸಿ ಅವರಿಗೆ ಅಗತ್ಯ ಪೊಲೀಸ್ ರಕ್ಷಣೆ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ ತಕ್ಷಣವೇ 50 ಲಕ್ಷ ರೂಪಾಯಿ ಪರಿಹಾರ ಧನ, 10 ಎಕರೆ ಜಮೀನು ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕೆಂದು ಆರ್. ಮುನಿಯಪ್ಪ ಒತ್ತಾಯಿಸಿದ್ದಾರೆ.
ಸಿಒಡಿ ತನಿಖೆ ಮತ್ತು ಕಠಿಣ ಶಿಕ್ಷೆಗೆ ವಿವಿಧ ಸಂಘಟನೆಗಳ ಹಕ್ಕೊತ್ತಾಯ
ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ, ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆಗಳು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸಿವೆ. “ದೇವದುರ್ಗ ತಾಲೂಕಿನಲ್ಲಿ ನಡೆದ ಮಾದಿಗ ಯುವಕ ಭೂಮಾನಂದನ ಕೊಲೆ ಪ್ರಕರಣದ ಸತ್ಯಾಸತ್ಯತೆ ಹೊರಬರಲು ತನಿಖೆಯನ್ನು ತಕ್ಷಣವೇ ಸಿಒಡಿ (COD) ಅಥವಾ ಉನ್ನತ ಮಟ್ಟದ ಪೊಲೀಸ್ ತನಿಖೆಗೆ ಒಪ್ಪಿಸಬೇಕು. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು (ಬೇಲ್) ಸಿಗದಂತೆ ಸರ್ಕಾರಿ ವಕೀಲರಿಗೆ ಸಂಸದೀಯ ಹಾಗೂ ಕಾನೂನು ವ್ಯವಹಾರಗಳ ಇಲಾಖೆ ಸೂಕ್ತ ಮಾರ್ಗದರ್ಶನ ನೀಡಬೇಕು” ಎಂದು ಕರಿಯಪ್ಪ ಗುಡಿಮನಿ ಆಗ್ರಹಿಸಿದ್ದಾರೆ.
ಸಂತ್ರಸ್ತ ಕುಟುಂಬದ ರಕ್ಷಣೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಕ್ಷಣವೇ ಧಾವಿಸಿ, ಕುಟುಂಬಕ್ಕೆ ಸೂಕ್ತ ಪೊಲೀಸ್ ಅಭಯ, ಸರ್ಕಾರಿ ನೌಕರಿ, ಪರಿಹಾರ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಜನಪರ ಸಂಘಟನೆಗಳು ಬಲವಾಗಿ ಹಕ್ಕೊತ್ತಾಯ ಮಂಡಿಸಿವೆ.


