Homeಮುಖಪುಟಗಂಡ ಬಲಾತ್ಕರಿಸಿದರೂ ಅತ್ಯಾಚಾರವೇ: ಗುಜರಾತ್‌ ಹೈಕೋರ್ಟ್‌

ಗಂಡ ಬಲಾತ್ಕರಿಸಿದರೂ ಅತ್ಯಾಚಾರವೇ: ಗುಜರಾತ್‌ ಹೈಕೋರ್ಟ್‌

- Advertisement -
- Advertisement -

‘ಸಂತ್ರಸ್ತೆಯ ಪತಿಯಿಂದ ಅತ್ಯಾಚಾರ ನಡೆದರೂ, ಅದು ಅತ್ಯಾಚಾರವೇ’ ಎಂದು ಗುಜರಾತ್ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಭಾರತದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮೌನ ಮುರಿಯಬೇಕಾಗಿದೆ ಎಂದು ಒತ್ತಿ ಹೇಳಿದೆ.

ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ನೈಜ ಘಟನೆಗಳು ಬಹುಶಃ ಡೇಟಾ ಸೂಚಿಸುವುದಕ್ಕಿಂತ ಹೆಚ್ಚಾಗಿವೆ. ಮಹಿಳೆಯರು ಪ್ರತಿ ದಿನ ಕಿರುಕುಳ ಎದುರಿಸುತ್ತಲೇ ಇರುತ್ತಾರೆ. ಕೆಲವೊಬ್ಬರು ತಮ್ಮ ಗಂಡದಿರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾರೆ ಎಂದು ಪ್ರಕರಣವೊಂದರ ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಒಬ್ಬ ಮನುಷ್ಯ ಮನುಷ್ಯನೇ, ಕೃತ್ಯ ಕೃತ್ಯವೇ, ಅದೇ ರೀತಿ ಅತ್ಯಾಚಾರ ಅತ್ಯಾಚಾರವೇ. ಅದು ಗಂಡ ಹೆಂಡಿತಿಯ ಮೇಲೆ ಮಾಡಿದರೂ ಸರಿ ಎಂದು ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಸಮಾಜದಲ್ಲಿ ಮಹಿಳೆಯನ್ನು ಹಿಂಬಾಲಿಸುವುದು, ಮೌಖಿಕ, ದೈಹಿಕ ದಬ್ಬಾಳಿಕೆ ಮಾಡುವುದು ಮತ್ತು ಕಿರುಕುಳದಂತಹ ಕೆಲವು ವಿಚಾರಗಳು ಸಣ್ಣ ಮಟ್ಟದ ಅಪರಾಧಗಳೆಂದು ಗುರುತಿಸಲ್ಪಟ್ಟಿದೆ. ಇದು ಸಾಮಾನ್ಯ ಘಟನೆಯೆಂಬಂತೆ ಪರಿಗಣಿಸಲ್ಪಟ್ಟಿದೆ. ಆದರೆ, ವಾಸ್ತವದಲ್ಲಿ ಹೀಗಾಗಬಾರದು. ಇಂಥ ಘಟನೆಗಳು ಕೂಡ ಹಿಂಸೆಗೆ ಸಮವಾಗಿದೆ ಎಂದು ಕೋರ್ಟ್‌ ತಿಳಿಸಿದೆ. ಲೈಂಗಿಕ ಅಪರಾಧವನ್ನು ಕ್ಷಮಿಸುವ ವರ್ತನೆಗಳು ನೊಂದವರ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಸೊಸೆಗೆ ಕಿರಕುಳ, ಅತ್ತೆಯ ಜಾಮೀನು ಅರ್ಜಿ ತಿರಸ್ಕೃತ

ತನ್ನ ಸೊಸೆಯನ್ನು ಕ್ರೌರ್ಯ ಮತ್ತು ಕ್ರಿಮಿನಲ್ ಬೆದರಿಕೆಗೆ ಒಳಪಡಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ಮಹಿಳೆಯೊಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಮೇಲಿನಂತೆ ಹೇಳಿದೆ. ಆರೋಪಿತ ಮಹಿಳೆ, ತನ್ನ ಪತಿ ಮತ್ತು ಮಗನಿಂದ ಸೊಸೆಯ ಮೇಲೆ ಅತ್ಯಾಚಾರ ಮಾಡಿಸಿ, ಅದರ ವಿಡಿಯೋವನ್ನು ಅಶ್ಲೀಲ ಸೈಟ್‌ಗಳಲ್ಲಿ ಪೋಸ್ಟ್ ಮಾಡಿ ಹಣ ಸಂಪಾದಿಸಲು ಮುಂದಾಗಿದ್ದಳು ಎಂದು ತಿಳಿದು ಬಂದಿದೆ.

ಕೋರ್ಟ್‌ ಆದೇಶದ ಪ್ರಕಾರ, ಈ ವರ್ಷದ ಆಗಸ್ಟ್ 13 ರಂದು ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದರು. ಅಂದೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಭಾರತೀಯ ದಂಡ ಸಂಹಿತೆ (ಐಪಿಸಿ)ಯನ್ನು ಹೆಚ್ಚಾಗಿ ಯುಕೆಯಿಂದ ಅಳವಡಿಸಿಕೊಳ್ಳಲಾಗಿದೆ. ಆ ದೇಶದಲ್ಲೇ ಅತ್ಯಾಚಾರ ಪ್ರಕರಣಗಳಲ್ಲಿ ಗಂಡಂದಿರಿಗೆ ನೀಡಿದ್ದ ವಿನಾಯಿತಿಯನ್ನು ತೆಗೆದು ಹಾಕಲಾಗಿದೆ ಎಂದು ಹೈಕೋರ್ಟ್ ತೀರ್ಪು ಪ್ರಕಟಿಸುವ ವೇಳೆ ತಿಳಿಸಿದೆ.

ಭಾರತದ ಕಾನೂನು ಏನು ಹೇಳುತ್ತದೆ?

ಭಾರತೀಯ ದಂಡ ಸಂಹಿತೆ ಸೆಕ್ಷನ್ 375 ಅತ್ಯಾಚಾರದ ವ್ಯಾಖ್ಯಾನದಿಂದ ಪತಿಗೆ ವಿನಾಯಿತಿ ನೀಡುತ್ತದೆ. ಪುರುಷ 15 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವಲ್ಲ ಎಂದು ಹೇಳುತ್ತದೆ. ಸೆಕ್ಷನ್ 376 ಅತ್ಯಾಚಾರಕ್ಕೆ ಶಿಕ್ಷೆಯನ್ನು ವಿವರಿಸುತ್ತದೆ.

50 ಅಮೆರಿಕನ್ ರಾಜ್ಯಗಳಲ್ಲಿ ವೈವಾಹಿಕ ಅತ್ಯಾಚಾರ ಅಪರಾಧ:

50 ಅಮೆರಿಕನ್ ರಾಜ್ಯಗಳು, ಮೂರು ಆಸ್ಟ್ರೇಲಿಯಾದ ರಾಜ್ಯಗಳು, ನ್ಯೂಜಿಲೆಂಡ್, ಕೆನಡಾ, ಇಸ್ರೇಲ್, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್, ನಾರ್ವೆ, ಸೋವಿಯತ್ ಯೂನಿಯನ್, ಪೋಲೆಂಡ್ ಜೆಕೊಸ್ಲೊವಾಕಿಯಾ ಸೇರಿದಂತೆ ಹಲವಾರು ಇತರ ದೇಶಗಳಲ್ಲಿ ವೈವಾಹಿಕ ಅತ್ಯಾಚಾರ ಕಾನೂನುಬಾಹಿರವಾಗಿದೆ ಎಂದು ಕೋರ್ಟ್ ತಿಳಿಸಿದೆ.

ವೈವಾಹಿಕ ಅತ್ಯಾಚಾರದ ವಿನಾಯಿತಿ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ವೈವಾಹಿಕ ಅತ್ಯಾಚಾರದ ವಿನಾಯಿತಿಯನ್ನು ಪ್ರಶ್ನಿಸಿ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನ ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಅಂತಿಮ ನಿಲುವು ಕೇಳಿದೆ. ಸರ್ಕಾರ ಇನ್ನೂ ಕೋರ್ಟ್‌ಗೆ ಅಂತಿಮ ಅಫಿಡವಿಟ್ ಸಲ್ಲಿಸಿಲ್ಲ. ಆದರೆ, ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ವಿಷಯವು “ಸಾಮಾಜಿಕ ಪರಿಣಾಮಗಳನ್ನು” ಹೊಂದಿರುತ್ತದೆ ಎಂದು ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ಮುಸ್ಲಿಮರ ಐದು ಅರ್ಜಿಗಳು ವಜಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...