Homeಅಂತರಾಷ್ಟ್ರೀಯನಿರಾಶ್ರಿತರು ಮತ್ತು ಹೊಣೆಗಾರಿಕೆಗಳ ಹಸ್ತಾಂತರ; ರುವಾಂಡಾಗೆ ಗಡಿಪಾರು ಮಾಡುವ ಇಂಗ್ಲೆಂಡಿನ ಪ್ರಸ್ತಾವಿತ ನೀತಿ

ನಿರಾಶ್ರಿತರು ಮತ್ತು ಹೊಣೆಗಾರಿಕೆಗಳ ಹಸ್ತಾಂತರ; ರುವಾಂಡಾಗೆ ಗಡಿಪಾರು ಮಾಡುವ ಇಂಗ್ಲೆಂಡಿನ ಪ್ರಸ್ತಾವಿತ ನೀತಿ

- Advertisement -
- Advertisement -

2022ರ ಜೂನ್ ತಿಂಗಳಲ್ಲಿ ಇಂಗ್ಲೆಂಡಿನ ಸರಕಾರವು ತನ್ನ ನೆಲದಲ್ಲಿ ಆಶ್ರಯ ಕೋರಿದ್ದ ಅನೇಕ ನಿರಾಶ್ರಿತರನ್ನು ರುವಾಂಡಾಗೆ ಗಡಿಪಾರು ಮಾಡುವ ಮೊದಲ ಸರಣಿಯನ್ನು ಶುರುಮಾಡಲು ಪ್ರಯತ್ನಿಸಿತು. ಈ ನಿರಾಶ್ರಿತರು ವಿಶ್ವದ ಬೇರೆ ಬೇರೆ ಭಾಗಗಳಿಂದ ಬಂದಿರುವವರು ಆದರೆ ಯುಕೆಯು ರುವಾಂಡಾದ ಸರಕಾರದೊಂದಿಗೆ 150 ಮಿಲಿಯನ್ ಡಾಲರ್‌ಗಳ ಬದಲಿಗೆ ನಿರಾಶ್ರಿತರನ್ನು ತೆಗೆದುಕೊಳ್ಳಬೇಕು ಎಂಬ ಒಪ್ಪಂದ ಕುದುರಿಸಿದೆ. ಈ ಒಪ್ಪಂದವನ್ನು ಅತ್ಯಂತ ಕ್ರೂರ ಮತ್ತು ಯುಕೆಯಲ್ಲಿ ಆಶ್ರಯ ಪಡೆಯಲು ಬಯಸಿದ್ದವರಿಗೆ ಆಘಾತಕಾರಿಯಾಗಿದೆ ಎಂದು ಕರೆಯಲಾಗಿದೆ.

ಈ ಗಡಿಪಾರಿನ ಮೊದಲ ಸುತ್ತನ್ನು ಪ್ರಾರಂಭಿಸಿದಾಗ, ಈ ನಡೆ ತಮ್ಮ ಘನತೆಗೆ ಧಕ್ಕೆ ತರುತ್ತದೆಂದು ವಾದಿಸಿ ನಿರಾಶ್ರಿತರು ವೈಯಕ್ತಿಕ ನೆಲೆಯಲ್ಲಿ ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿದರು. ಇಂಗ್ಲೆಂಡಿನ ಕೋರ್ಟ್ ಆಫ್ ಅಪೀಲ್ ಈ ಪ್ರಕರಣವನ್ನು ತಿರಸ್ಕರಿಸಿತು. 2022ರ ಜೂನ್ 14ರಂದು ಮೊದಲ ಗಡಿಪಾರು ಪ್ರಕ್ರಿಯೆ ನಡೆಯಬೇಕಿತ್ತು. ಆಗ ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯವು ಒಂದು ತಡೆಯಾಜ್ಞೆ ನೀಡಿ, ನಿರಾಶ್ರಿತರನ್ನು ಕೊಂಡೊಯ್ಯಬೇಕಿದ್ದ ವಿಮಾನವು ಹೊರಡದಂತೆ ತಡೆಯಿತು. ಇದು ಕೊನೆಯ ಗಳಿಗೆಯಲ್ಲಿ ಆದ ಹಸ್ತಕ್ಷೇಪವಾಗಿತ್ತು, ಅದರಿಂದ ಯುಕೆಯಲ್ಲಿ ಆಶ್ರಯ ಬಯಸಿದ್ದ 7 ಜನರು ಅಲ್ಲಿಂದ ಹೊರಡದಂತೆ ತಡೆದಂತಾಯಿತು.

ನಿರಾಶ್ರಿತರನ್ನು ಸ್ಥಳಾಂತರಿಸುವುದು ಏಕೆ?

ಬೋರಿಸ್ ಜಾನ್ಸನ್‌ರ ಪ್ರಿಮಿಯರ್‌ಶಿಪ್ ವಿದೇಶಿಯರ ಭೀತಿಯ ಮೇಲೆಯೇ ಸವಾರಿ ನಡೆಸಿತ್ತು. 14ನೆಯ ಏಪ್ರಿಲ್ 2022ರಂದು ಬೋರಿಸ್ ಜಾನ್ಸನ್ ತಮ್ಮ ಒಂದು ಭಾಷಣದಲ್ಲಿ ’ಇಲ್ಲೀಗಲ್’ ವಲಸೆಯನ್ನು ನಿಲ್ಲಿಸುವುದಾಗಿ ಹೇಳಿದ್ದರು. ದೇಶದ ಕಲ್ಯಾಣ ಸೇವೆಗಳ ಮೇಲೆ ವಲಸೆಯು ಒತ್ತಡ ತರುತ್ತಿದೆ ಎಂದು ಪ್ರತಿಪಾದಿಸಿದರು. ಮಾನವ ಕಳ್ಳಸಾಗಾಣಿಕೆಯ ಪರಿಣಾಮವಾಗಿ ’ಅನಧಿಕೃತ’ ವಲಸೆ ನಡೆಯುತ್ತಿದೆ ಎಂದು ಪ್ರತಿಪಾದಿಸಿ, ಅದನ್ನು ನಿಲ್ಲಿಸಲು ಇರುವ ಒಂದೇ ಮಾರ್ಗೋಪಾಯ ಎಂದರೆ ಮಾನವ ಕಳ್ಳಸಾಗಾಣಿಕೆಯಾಗಿರುವವರಿಗೆ ಹೆಚ್ಚಿನ ಅವಧಿಯ ಶಿಕ್ಷೆಯನ್ನು ನೀಡುವುದು ಎಂದರು. ಹಾಗೂ ಸುಮಾರು 500 ಮಿಲಿಯನ್‌ನಷ್ಟು ಹಣವನ್ನು ಕಣ್ಗಾವಲು ತಂತ್ರಜ್ಞಾನ ಮತ್ತು ಮಿಲಿಟರಿ ಸಿಬ್ಬಂದಿಗಳ ಮೇಲೆ ತಮ್ಮ ಸರಕಾರ ವಿನಿಯೋಗ ಮಾಡುವುದೆಂದು, ಅದರಿಂದ ಸಮುದ್ರಮಾರ್ಗದಿಂದ ವಲಸಿಗರು ಬರುವುದನ್ನು ತಡೆಗಟ್ಟಬಹುದು ಹಾಗೂ ವಲಸಿಗರನ್ನು ತೆಗೆದುಕೊಳ್ಳುವಂತೆ ರುವಾಂಡಾ ದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಘೋಷಿಸಿದರು. ಈ ಒಪ್ಪಂದದ ಪರಿಣಾಮವಾಗಿ ಭವಿಷ್ಯದಲ್ಲಿ ವಲಸಿಗರು ಇಂಗ್ಲಿಷ್ ಕಾಲುವೆಯನ್ನು ಬಳಸಿಕೊಂಡು ಯುಕೆಗೆ ಪ್ರವೇಶಿಸುವ ಅತ್ಯಂತ ಅಪಾಯಕಾರಿಯಾದ ವಲಸೆಯನ್ನು ತಡೆಯುತ್ತದೆ ಎಂದು ಹೇಳಿದರು.

ವಿಶ್ವಸಂಸ್ಥೆಯ ನಿರಾಶ್ರಿತರ ಎಜೆನ್ಸಿಯು ಈ ನಡೆಯನ್ನು ಟೀಕಿಸಿದೆ. ಇಂಗ್ಲೆಂಡ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಹಾಗೂ ರುವಾಂಡಾ ದೇಶವು ಮಾನವ ಹಕ್ಕುಗಳ ಬಗ್ಗೆ ಉತ್ತಮವಾದ ಇತಿಹಾಸವನ್ನು ಹೊಂದಿಲ್ಲ ಎಂದು ಅದು ಹೇಳಿದೆ. ಈ ಒಪ್ಪಂದವು ಶ್ರಿಮಂತ ದೇಶಗಳು ನಿರಾಶ್ರಿತರ ಬಗ್ಗೆ ತಮಗೆ ಇರುವ ಜವಾಬ್ದಾರಿಯನ್ನು ಬಡದೇಶಗಳಿಗೆ ಹಸ್ತಾಂತರಿಸುವ ಒಂದು ಕೆಟ್ಟ ರೂಢಿಯನ್ನು ಶುರುಮಾಡುತ್ತದೆ.

ರುವಾಂಡ ದೇಶವು, ಮಾನವ ಹಕ್ಕುಗಳ ಉಲ್ಲಂಘನೆಯ ಇತಿಹಾಸದ ಬಗ್ಗೆ ಮಾಡಲಾದ ಆರೋಪಗಳು ಆಧಾರರಹಿತವಾಗಿವೆ ಎಂದು ಈ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ. ಈ ದೇಶವು ಆಶ್ರಯಬಯಸುವವರಿಗೆ 5 ವರ್ಷಗಳ ವಾಸ ಹಾಗೂ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ. 2014ರಲ್ಲಿ ರುವಾಂಡವು ಇಸ್ರೇಲ್ ದೇಶದೊಂದಿಗೆ ಇಂಥದ್ದೇ ಒಂದು ಒಪ್ಪಂದ ಮಾಡಲು ಪ್ರಯತ್ನಿಸಿತು, ಆಗ ಇಸ್ರೇಲ್ ಪ್ರತಿ ನಿರಾಶ್ರಿತರಿಗೆ 5,000 ಯುಎಸ್ ಡಾಲರ್‌ನಷ್ಟು ಹಣವನ್ನು ರುವಾಂಡ ಸರಕಾರಕ್ಕೆ ನೀಡಿತ್ತು. ಈ ನಿರಾಶ್ರಿತರು ಪ್ರಮುಖವಾಗಿ ಸುಡಾನ್ ಮತ್ತು ಎರಿಟ್ರಿಯಾ ದೇಶದಿಂದ ಬಂದಿದ್ದರು. ಇಸ್ರೇಲ್ ಸುಮಾರು 4,000 ನಿರಾಶ್ರಿತರನ್ನು ರುವಾಂಡಾಗೆ ಕಳುಹಿಸಿತ್ತು. ಈ ಯೋಜನೆ ಸಂಪೂರ್ಣವಾಗಿ ವಿಫಲವಾಯಿತು. ಇಸ್ರೇಲಿನಲ್ಲಿಯೇ ಉಳಿಯಲು ಪ್ರಯತ್ನಿಸಿದವರನ್ನು ಬಂಧನಕ್ಕೆ ಒಳಪಡಿಸಲಾಯಿತು. ರುವಾಂಡಾಗೆ ಹೋದ ನಿರಾಶ್ರಿತರಿಗೆ ಸೂಕ್ತ ದಾಖಲೆಗಳನ್ನು ನೀಡಲಿಲ್ಲ ಹಾಗೂ ಅವರು ಅಲ್ಲಿ ಉಳಿಯಲು ಆಗಲಿಲ್ಲ. ಅವರಲ್ಲಿ ಹೆಚ್ಚಿನವರು ದೇಶದಿಂದ ತಪ್ಪಿಸಿಕೊಂಡು ಹೋದರು ಹಾಗೂ ಅತ್ಯಂತ ಅಪಾಯಕಾರಿಯಾಗಿ ಹಲವಾರು ದೇಶಗಳ ಮೂಲಕ ಪ್ರಯಾಣ ಮಾಡಿದರು.

ರುವಾಂಡಾದಲ್ಲಿ ಈಗಾಗಲೇ ಆಫ್ರಿಕಾದ ನೆರೆಯ ರಾಷ್ಟ್ರಗಳಿಂದ ಬಂದ 1,30,000 ನಿರಾಶ್ರಿತರು ವಾಸಿಸುತ್ತಿದ್ದಾರೆ.

ಈ ನಿರಾಶ್ರಿತರು ಅಥವಾ ರೆಫ್ಯೂಜಿ ಎಂದರೇನು?

ಯುಎನ್‌ಎಚ್‌ಸಿಆರ್ ಪ್ರಕಾರ, ಜನಾಂಗ, ಧರ್ಮ, ಒಂದು ನಿರ್ದಿಷ್ಟ ಸಾಮಾಜಿಕ ಗುಂಪು ಅಥವಾ ರಾಜಕೀಯ ಅಭಿಪ್ರಾಯ ಅಥವಾ ರಾಷ್ಟ್ರೀಯತೆಯ ಕಾರಣದಿಂದ ಶಿಕ್ಷಿಸಲಾಗುವುದು ಎಂಬ ಆಧಾರಸಹಿತವಾದ ಆತಂಕದ ಕಾರಣದಿಂದ ತಮ್ಮ ರಾಷ್ಟ್ರೀಯತೆಯ ದೇಶದ ಹೊರಗಿರುವವರು, ಭಯದ ಕಾರಣದಿಂದ ತನ್ನ ದೇಶದೊಳಗೇ ರಕ್ಷಣೆಯನ್ನು ಪಡೆಯಲು ನಿರಾಕರಿಸುವ, ತಮ್ಮ ರಾಷ್ಟ್ರೀಯತೆಯನ್ನು ಕಳೆದುಕೊಂಡಿರುವ, ಅಥವಾ ಭಯದ ಕಾರಣದಿಂದ ತನ್ನ ರಾಷ್ಟ್ರೀಯತೆಯ ದೇಶಕ್ಕೆ ಹೋಗಲು ಸಾಧ್ಯವಾಗದೇ ಇರುವ ಅಥವಾ ನಿರಾಕರಿಸುವ ವ್ಯಕ್ತಿಗಳಿಗೆ ನಿರಾಶ್ರಿತರು ಎನ್ನಲಾಗಿದೆ. ಹಾಗೂ ಸಾರ್ವಜನಿಕ ಸುವ್ಯವಸ್ಥೆ ಭಂಗವಾಗುವುದರಿಂದ ಹಿಂಸೆ ಅನುಭವಿಸುವ ಅಥವಾ ಅದರ ಅಪಾಯದ ಆತಂಕ ಹೊಂದಿರುವ ಕಾರಣದಿಂದ ತಮ್ಮ ರಾಷ್ಟ್ರೀಯತೆಯ ದೇಶದ ಅಥವಾ ರೂಢಿಗತ ವಾಸಸ್ಥಳದಿಂದ ಹೊರಗೆ ಇರುವವರನ್ನೂ ನಿರಾಶ್ರಿತರು ಎಂದು ಕರೆಯಬಹುದಾಗಿದೆ.

ಯುನೈಟೆಡ್ ಕಿಂಗ್‌ಡಂ ಅಂದರೆ ಇಂಗ್ಲೆಂಡ್ ದೇಶವು 2021ರಲ್ಲಿ ಆಶ್ರಯ ಕೋರಿ 50,000 ಅರ್ಜಿಗಳನ್ನು ಸ್ವೀಕರಿಸಿದೆ. ಅದರಲ್ಲಿ ಇರಾನ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು 10,000 ಅರ್ಜಿಗಳು ಬಂದಿವೆ. ಎರಿಟ್ರೆಯಾ, ಅಲ್ಬೆನಿಯ, ಇರಾಕ್ ಹಾಗೂ ಸಿರಿಯಾ ಒಳಗೊಂಡು ಇನ್ನಿತರ ದೇಶಗಳಿಂದ ಅರ್ಜಿ ಬಂದಿವೆ. ಯುಕೆಯಲ್ಲಿ ಸದ್ಯಕ್ಕೆ 80,000 ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಇವೆ. ಯುಕೆಯಲ್ಲಿ 1,00,000ಕ್ಕೂ ಹೆಚ್ಚು ಆಶ್ರಯಕೋರುವ ಜನರು ವಾಸಿಸುತ್ತಿದ್ದಾರೆ.

ಹೆಚ್ಚಿನ ಸೂಕ್ತ ಮಾಹಿತಿ ಇಲ್ಲದೇ ಇರುವ ಕಾರಣಕ್ಕಾಗಿ, ಪ್ರತಿಕೂಲ ಸರಕಾರ ಹಾಗೂ ಸಂಕಷ್ಟದ ಪರಿಸ್ಥಿತಿಗಳ ಕಾರಣದಿಂದ ನಿರಾಶ್ರಿತರನ್ನು ಅನೌಪಚಾರಿಕ ವಲಯಗಳಿಗೆ ಬಲವಂತವಾಗಿ ದೂಡಲಾಗುತ್ತದೆ. ಅಲ್ಲಿ ಅವರು ಕಡಿಮೆ ಆದಾಯ ಪಡೆದು ದುಡಿಯುತ್ತಾರೆ ಹಾಗೂ ಅಲ್ಲಿ ಅವರಿಗೆ ಪ್ರತಿಕೂಲವಾಗಿರುವ ಸರಕಾರ ಮತ್ತು ಜನರಿಂದ ಭಯಭೀತಿಯ ಪರಿಸ್ಥಿತಿ ಒದಗುವ ಸಾಧ್ಯತೆಯಿದೆ. ವಿದ್ವಾಂಸರು ಗಮನಿಸಿದ್ದೇನೆಂದರೆ, ದಾಖಲೆಗಳನ್ನು ಹೊಂದಿರದ ಇಂತಹ ವಲಸಿಗರ ಕೆಲಸ ಮತ್ತು ಸೇವೆಯನ್ನು ಅಗ್ಗವಾಗಿಸಲು ಅಪರಾಧೀಕರಿಸಲಾಗುತ್ತದೆ, ಈ ವಿದ್ಯಮಾನವನ್ನು ಕ್ರಿಮಿಗೇಷನ್ ಎಂದು ಕರೆಯಲಾಗಿದೆ. ದಾಖಲೆರಹಿತ ವಲಸಿಗರ ಮೇಲೆ ಅತ್ಯಂತ ಕಠೋರ ದಂಡವನ್ನು ವಿಧಿಸುವುದರ ಮೂಲಕ, ಕೆಲಸಗಾರರಿಗೆ ಅತ್ಯಂತ ಕಡಿಮೆ ವೇತನವನ್ನು ನೀಡಲಾಗುತ್ತದೆ. ಇದರಿಂದ ದೊಡ್ಡದೊಡ್ಡ ವ್ಯಾಪಾರಗಳಿಗೆ ಅನುಕೂಲವಾಗುತ್ತದೆ ಹಾಗೂ ಸ್ಥಳೀಯ ಹೋರಾಟಗಳಿಂದ ಪಡೆದುಕೊಂಡ ಹಕ್ಕುಗಳನ್ನು ಬೈಪಾಸ್ ಮಾಡಲಾಗುತ್ತದೆ. ರಾಜಕಾರಣಿಗಳು ಕೂಡ ನಿರಾಶ್ರಿತರ ಭಯವನ್ನು ಬಳಸಿ, ಸ್ಥಳೀಯ ದುಡಿಯುವ ವರ್ಗದ ಜನರನ್ನು ನಿರಾಶ್ರಿತರ ವಿರುದ್ಧ ಎತ್ತಿಕಟ್ಟುತ್ತಾರೆ.

ವಿಶ್ವದಲ್ಲಿ ಈಗ ಸುಮಾರು ಎರಡೂವರೆ ಕೋಟಿ ನಿರಾಶ್ರಿತರಿದ್ದಾರೆ. ಅದರಲ್ಲಿ ಬಹುತೇಕರು ತಮ್ಮ ಮೂಲ ದೇಶದ ನೆರೆಹೊರೆಯ ರಾಷ್ಟ್ರಗಳಲ್ಲಿ ಆಶ್ರಯ ಕೋರುತ್ತಾರೆ. ಬಹುತೇಕ ನಿರಾಶ್ರಿತರು ಅವರಿಗೆ ಆಶ್ರಯ ಸಿಗುವ ತನಕ ಸತತವಾಗಿ ವಲಸೆ ಹೋಗುತ್ತಿರುತ್ತಾರೆ. ಅದರಲ್ಲಿ ಹೆಚ್ಚಿನವರಿಗೆ ಜೀವ ಬೆದರಿಕೆ ಇರುತ್ತದೆ ಹಾಗೂ ತಮ್ಮ ಸಮುದಾಯ ಹೆಚ್ಚಿರುವ ಕಡೆ ಅವರು ವಲಸೆ ಹೋಗುತ್ತಾರೆ. ಆಶ್ರಯ ಕೋರುವವರಿಗೆ ಸಾಮಾನ್ಯವಾಗಿ ವಲಸೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು ಇರುವುದಿಲ್ಲ ಹಾಗೂ ಅವರು ತಮಗೆ ಕೆಲಸ ಮಾಡುವ ಹಕ್ಕು ಇರದ ದೇಶಗಳಲ್ಲಿ ವಾಸಿಸುತ್ತಾರೆ ಹಾಗಾಗಿ ಅವರನ್ನು ಅನೌಪಚಾರಿಕ ಆರ್ಥಿಕತೆಯ ಭಾಗವಾಗುವಂತೆ ಮಾಡಲಾಗುತ್ತದೆ ಹಾಗೂ ಅಲ್ಲಿ ಅವರನ್ನು ಗುರಿ ಮಾಡಲಾಗುತ್ತದೆ.

ವಿಶ್ವಾದ್ಯಂತ ದೇಶಗಳು ನಿರಾಶ್ರಿತರ ಮೇಲೆ ಇಂತಹ ಕ್ರಮಗಳನ್ನು ಏಕೆ ಕೈಗೊಳ್ಳುತ್ತಿವೆ?

ಎರಡನೆಯ ವಿಶ್ವಯುದ್ಧದ ನಂತರ, ಜಗತ್ತಿನ ಹೆಚ್ಚಿನ ದೇಶಗಳು ವಲಸೆಗೆ ತಮ್ಮ ಬಾಗಿಲು ತೆರೆದಿಟ್ಟಿದ್ದವು. ಶೀತಲಸಮರದ ಸಮಯದಲ್ಲಿ ತಾವು ಎಷ್ಟು ವೈವಿಧ್ಯತೆಗೆ ತೆರೆದುಕೊಂಡಿದ್ದೇವೆ ಹಾಗೂ ಎಷ್ಟು ಮುಕ್ತವಾಗಿದ್ದೇವೆ ಎಂದು ತೋರಿಸಿ ತಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಲು ಪ್ರಯತ್ನಿಸಿದವು.

ಬೋರಿಸ್ ಜಾನ್ಸನ್

ತಾವು ಇಡೀ ವಿಶ್ವವನ್ನು ಪ್ರತಿನಿಧಿಸುತ್ತೇವೆ ಎಂದು ಬಿಂಬಿಸಿದವು. ಆದರೆ 1970ರ ನಂತರದಿಂದ, ಈ ನೀತಿಗಳನ್ನು ಹಿಂಪಡೆಯಲಾರಂಭಿಸಿದವು. 70ರ ದಶಕದಿಂದ ತಾವು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರತಿಪಾದಿಸಿದವು. ರಾಜಕಾರಣಿಗಳು ಭಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲಾರಂಭಿಸಿದರು. ಅವರುಗಳು, ಭಯೋತ್ಪಾದನೆಗೆ, ಸಂಘಟಿತ ಅಪರಾಧಕ್ಕೆ ಮತ್ತು ಮಾದಕ ವಸ್ತುಗಳಿಗೆ ವಲಸೆ ಬಂದಿರುವ ಜನಸಮೂಹವನ್ನು ದೂರಲು ಶುರು ಮಾಡಿದರು. ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದ ದಾಖಲೆರಹಿತ ವಲಸಿಗರು ಸುಲಭವಾದ ಗುರಿಗಳಾದರು ಹಾಗೂ ಅವರಿಗೆ ಧ್ವನಿ ಎತ್ತಲು ಅವಕಾಶಗಳಿರಲಿಲ್ಲ. ಭಾರತದಲ್ಲೂ ಅದೇ ಪರಿಸ್ಥಿತಿ ಇದೆ. 80ರ ದಶಕದಿಂದ ವಲಸೆಯ ನೀತಿಗಳು ಮತ್ತು ಆತಂಕ ಹುಟ್ಟಿಸುವ ಅನೌಪಚಾರಿಕ ವಲಯದ ಪರಿಸ್ಥಿತಿಯಿಂದ ಅಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರನ್ನು ಅತ್ಯಂತ ಕಷ್ಟಕರ ಪರಿಸ್ಥಿತಿಗೆ ದೂಡಲಾಗಿದೆ.

ಬೋರಿಸ್ ಜಾನ್ಸನ್ ಎಷ್ಟೇ ಖಡಾಖಂಡಿತವಾಗಿ ಮಾತನಾಡಿದರೂ, ನಿರಾಶ್ರಿತರನ್ನು ಸ್ಥಳಾಂತರಿಸುವ
ಯೋಜನೆ ಎಷ್ಟು ಪರಿಣಾಮಕಾರಿಯಾಗಬಲ್ಲದು ಎಂಬುದರ ಬಗ್ಗೆ ತಜ್ಞರಿಗೆ ಖಾತ್ರಿ ಇಲ್ಲ. ನಿರಾಶ್ರಿತರಿಗೆ ದಾಖಲೆಗಳ ಸಮಸ್ಯೆ ಇದೆ. ನಿರಾಶ್ರಿತರನ್ನು ಹಿಡಿದು ಅವರನ್ನು ಅಜ್ಞಾತ ಭವಿಷ್ಯಕ್ಕೆ ದೂಡಲಾಗುತ್ತದೆ ಎಂಬ ಆತಂಕದ ವಾತಾವರಣವನ್ನು ಮಾತ್ರ ಈ ನೀತಿ ಸೃಷ್ಟಿಸಲಿದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ರುವಾಂಡ ರೀತಿಯ ನರಮೇಧ ಭಾರತದಲ್ಲೂ ನಡೆಯಲಿದೆಯೇ?; ತಜ್ಞರ ಎಚ್ಚರಿಕೆ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...