Homeಅಂಕಣಗಳು’ಪ್ರಾಮಾಣಿಕತೆ’ ಕುಚೋದ್ಯಕ್ಕೆ ಒಳಗಾಗುತ್ತಿರುವ ಕಾಲದಲ್ಲಿ ನೆನೆಯಬೇಕಿರುವ ಬಿ.ಜಿ ಹಾರ್ನಿಮನ್

’ಪ್ರಾಮಾಣಿಕತೆ’ ಕುಚೋದ್ಯಕ್ಕೆ ಒಳಗಾಗುತ್ತಿರುವ ಕಾಲದಲ್ಲಿ ನೆನೆಯಬೇಕಿರುವ ಬಿ.ಜಿ ಹಾರ್ನಿಮನ್

- Advertisement -
- Advertisement -

ಉತ್ತರ ಪ್ರದೇಶದ ಚುನಾವಣೆಯ ಪ್ರಚಾರ-ಅಪಪ್ರಚಾರಗಳು ತೀವ್ರಗೊಳ್ಳುತ್ತಿರುವ ಜತೆಜತೆಗೇ ತಮ್ಮ ನಿಜ ಕೆಲಸವನ್ನು ಮರೆತಿರುವ ಮಾಧ್ಯಮಗಳ, ಮಾಧ್ಯಮ ಪ್ರತಿನಿಧಿಗಳ ಬಣ್ಣ ಬಯಲಾಗುತ್ತಿದೆ. ಮತ್ತೆಮತ್ತೆ ಬಯಲಾಗುತ್ತಿದೆ ಅನ್ನಬಹುದು. ಕೆಲವೇ ದಿನಗಳ ಹಿಂದೆ ಟೈಮ್ಸ್ ನೌ ಎಂಬ ಟಿವಿ ವಾಹಿನಿಯ ಆಂಕರ್ ನಾವಿಕ ಕುಮಾರ್ ಅವರು ತಮ್ಮ ಸಂಸ್ಥೆಯ ’ಎಲೆಕ್ಷನ್ ಕವರೇಜ್ ಬಸ್’ ಚಾಲನೆಗೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಹಸನ್ಮುಖಿಯಾಗಿ ಪೋಸು ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಯಿತು. ಈ ಪತ್ರಕರ್ತೆ ಬಿಜೆಪಿಯ ’ಪ್ರ್ರಾಮಾಣಿಕ ಪ್ರಚಾರಕಿ’ ಎಂದು ಟ್ವಿಟರ್‌ನಲ್ಲಿ ಹಲವರು ವ್ಯಂಗ್ಯವಾಡಿದರು. ತಟಸ್ಥತೆ ಕಾಯ್ದುಕೊಳ್ಳುವುದಕ್ಕೆ ಹಲವು ಮಾರ್ಗಗಳು ಇರುತ್ತವೆ. ರಾಜಕಾರಣಿಗಳಿಂದ ದೂರವುಳಿಯುವುದಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಎಲ್ಲಾ ಪ್ರಮುಖ ಪಕ್ಷಗಳ ಮುಖಂಡರನ್ನು ತಮ್ಮ ಬಸ್ ಚಾಲನೆಗೆ ಆಹ್ವಾನಿಸಬಹುದಿತ್ತು, ಆದರೆ ಯಾವುದೇ ಲಜ್ಜೆಯಿಲ್ಲದೆ ಒಂದು ಪಕ್ಷದ ವಕ್ತಾರಿಕೆಗಾಗಿಯೇ ಇದ್ದೇವೆಂಬಂತೆ ಬಿಂಬಿಸಿಕೊಳ್ಳುವ ಇಂತಹ ಮಾಧ್ಯಮಗಳಿಗೆ ವಿವೇಕದ ಪಾಠ ಹೇಳುವವರು ಯಾರು? ಅದಕ್ಕೂ ಕೆಲವು ದಿನಗಳ ಕೆಳಗೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಖಿಲೇಶ್ ಯಾದವ್, ಆಜ್ ತಕ್ ಎಂಬ ಹಿಂದಿ ಸುದ್ದಿವಾಹಿನಿಯ ಅಂಜನಾ ಓಂ ಕಶ್ಯಪ್ ಅವರಿಗೆ ನೀಡಿದ ಸಂದರ್ಶನದಲ್ಲಿ, ಆಕೆಯನ್ನು ’ಇಮಾನ್‌ದಾರ್’ (ಪ್ರಾಮಾಣಿಕ) ಎಂದು ವ್ಯಂಗ್ಯವಾಗಿ ಪದೇಪದೇ ಸಂಬೋಧಿಸುವ ಮೂಲಕ ಮುಜುಗರಕ್ಕೆ ಒಳಪಡಿಸಿದ್ದರು. ಯಾವುದೇ ಒಬ್ಬ ಪತ್ರಕರ್ತ/ರ್ತೆಯನ್ನು ಮಾತನಾಡಿಸುವಾಗ ರಾಜಕಾರಣಿಯೊಬ್ಬ ಪ್ರಾಮಾಣಿಕ ಉತ್ತರ ನೀಡುವ ಒತ್ತಡ ಅನುಭವಿಸುತ್ತಾನೆ. ಆದರೆ ಈ ಪ್ರಕರಣದಲ್ಲಿ ಆ ಪತ್ರಕರ್ತೆಯೇ ಒತ್ತಡಕ್ಕೆ ಬಿದ್ದರು. ಕಾರಣ? ಬಿಜೆಪಿ ಪಕ್ಷದ ವಕ್ತಾರೆಯಂತೆ ಅವರು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಮತ್ತು ಆ ಸಂದರ್ಶನದಲ್ಲಿಯೂ ಆಡಳಿತ ಪಕ್ಷದ ಸದಸ್ಯೆಯಂತೆ ಪ್ರಶ್ನೆ ಕೇಳಲು ಪ್ರಾರಂಭಿಸಿದ್ದು. ಇದು ಆ ಜರ್ನಲಿಸ್ಟ್‌ನ ಕ್ರೆಡಿಬಿಲಿಟಿಯನ್ನು ಮೂರಾಬಟ್ಟೆ ಮಾಡಿಹಾಕಿತ್ತು. ಇದು ಒಬ್ಬ ರಾಜಕಾರಣಿಗೆ ಅಪ್ಪರ್‌ಹ್ಯಾಂಡ್ ಕೊಟ್ಟಿತ್ತು!

ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸಿ ಸದಾ ಎಚ್ಚರದಲ್ಲಿ ಇಡಬೇಕೆಂಬ ಪತ್ರಿಕೋದ್ಯಮದ ಮೂಲ ಪಾಠಗಳು/ಕಲಿಕೆಗಳು/ಗ್ರಹಿಕೆಗಳು ಮಾಯವಾಗುತ್ತಿರುವ ಸಮಾಜದಲ್ಲಿ ಆ ಮೌಲ್ಯಗಳನ್ನು ಮತ್ತೆ ವ್ಯಾಪಕಗೊಳಿಸಲು ಶಾರ್ಟ್‌ಕಟ್‌ಗಳಿವೆಯೇ? ಮರೆತಿರುವುದನ್ನು ಪುನಃ ನೆನಪಿಸಿ ಮರುಕಳಿಸುವುದು ಖಂಡಿತಾ ತ್ರಾಸದಾಯಕವಾದದ್ದು. ಈ ನಿಟ್ಟಿನಲ್ಲಿ ನಮ್ಮ ನಡುವೆ ಇರುವ, ಇದ್ದು ಹೋದ ಅಂತಹ ದಿಟ್ಟ ಪತ್ರಕರ್ತರನ್ನು ಅವರ ಪತ್ರಿಕೋದ್ಯಮವನ್ನು ನೆನೆಯುವುದು, ಅವರ ಬಗ್ಗೆ ಜನರಿಗೆ ತಿಳಿಯುವಂತೆ ಮಾಡಲು, ಜನಪ್ರಿಯಗೊಳಿಸಲು ಸಾಹಸಪಡುವುದಷ್ಟೇ ಈ ಕ್ಷಣಕ್ಕೆ ನಾವೆಲ್ಲರೂ ಮಾಡಬಹುದಾದ ದೊಡ್ಡ ಕೆಲಸವಾಗಿದೆ.

ನೂರು ವರ್ಷಕ್ಕೂ ಹಿಂದೆ ಭಾರತದಲ್ಲಿ ಸಕ್ರಿಯ ಪತ್ರಿಕೋದ್ಯಮದಲ್ಲಿ ನಿರತರಾಗಿದ್ದ, ಇಂದು ಬಹುತೇಕ ಮರೆತುಹೋಗಿರುವ ಬೆಂಜಮಿನ್ ಗಯ್ ಹಾರ್ನಿಮನ್ ಅವರನ್ನು ಹಲವು ಕಾರಣಗಳಿಗೆ ನಾವಿಂದು ನೆನಪಿಸಿಕೊಳ್ಳಬೇಕಿದೆ. ಸವಾಲುಗಳು, ನಿಷಿದ್ಧಗಳು, ಸೆನ್ಸಾರ್‌ಗಳು ಮತ್ತಿತರ ಅಡ್ಡಿ ಆತಂಕಗಳನ್ನು ಎದುರಿಸಿ ಪತ್ರಿಕೋದ್ಯಮ ಮಾಡಬೇಕಿರುವ ಕೆಲಸಗಳಿಗೆ ಸಾಕ್ಷಿಯಂತೆ ಇದ್ದವರು ಬಿ ಜಿ ಹಾರ್ನಿಮನ್. ಮಹಾತ್ಮ ಗಾಂಧಿ ಹತ್ಯೆಯಾದ ದಿನ ಜನವರಿ 30 ಸನಿಹದಲ್ಲಿದೆ. ಕಳೆದ ಕೆಲವು ದಿನಗಳಿಂದ ಗಾಂಧಿ ಹಂತಕ ಗೋಡ್ಸೆ ಭಜನೆಯನ್ನು ಸಂಘ ಪರಿವಾರದವರು ತಾರಕಕ್ಕೇರಿಸಿದ್ದಾರೆ. ಈ ಮಾಲಿನ್ಯ ಈ ದೇಶವಾಸಿಗಳ ಮೇಲೆ ಉಂಟುಮಾಡಬಹುದಾದ ಭೀಕರ ಪರಿಣಾಮಗಳ ಬಗ್ಗೆ ಸರ್ಕಾರ ಕಿಂಚಿತ್ತೂ ಕನಲಿದಂತಿಲ್ಲ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟು ಹೋರಾಡಿದ ಗಾಂಧಿಯವರನ್ನೆ ಮರೆಸಲು ಒಂದು ಬಣ ಹವಣಿಸುತ್ತಿರುವಾಗ, ಗಾಂಧಿಯವರ ಜತೆಗೆ ಗುರುತಿಸಿಕೊಂಡು, ಬ್ರಿಟಿಷ್ ಪ್ರಜೆಯಾಗಿದ್ದರೂ ತಾನು ಹುಟ್ಟಿದ ದೇಶದ ವಸಾಹತು ಸರ್ಕಾರದ ವಿರುದ್ಧ ನಿಂತು, ಭಾರತ ದೇಶದ ಜನರ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ, ಬ್ರಿಟಿಷ್ ಸರ್ಕಾರದ ದೌರ್ಜನ್ಯಗಳನ್ನು ತಾನು ಸಂಪಾದಿಸುತ್ತಿದ್ದ ಪತ್ರಿಕೆಗಳಲ್ಲಿ ನಿರ್ಭೀತಿಯಿಂದ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಹಾರ್ನಿಮನ್ ಅವರನ್ನು ಇಂದು ಬಹಳ ಮುಖ್ಯವಾಗಿ ನೆನೆಯಬೇಕಿದೆ. ಈ ಹಿಂದೆ ಜಲಿಯನ್ ವಾಲಾಬಾಗ್‌ಅನ್ನು ನವೀಕರಿಸಿದ ಸಮಯದಲ್ಲಿ ಆ ನರಮೇಧವನ್ನು ಬಯಲಿಗೆಳೆಯುವುದಕ್ಕೆ ಹಾರ್ನಿಮನ್ ಅವರ ಕೊಡುಗೆಯನ್ನು ಇಲ್ಲಿ ಸ್ಮರಿಸಲಾಗಿತ್ತು. ಈಗ ಇತಿಹಾಸಕಾರ ರಾಮಚಂದ್ರ ಗುಹಾ ಅವರ ’ರೆಬೆಲ್ಸ್ ಅಗೇನ್ಸ್ಟ್ ದ ರಾಜ್- ವೆಸ್ಟರ್ನ್ ಫೈಟರ್ಸ್ ಫಾರ್ ಇಂಡಿಯನ್ ಫ್ರೀಡಂ’ (ಬ್ರಿಟಿಷ್ ರಾಜ್ ವಿರುದ್ಧ ಬಂಡಾಯಕಾರರು – ಭಾರತದ ಸ್ವಾಂತತ್ರ್ಯಕ್ಕೆ ದುಡಿದ ಪಶ್ಚಿಮದ ಹೋರಾಟಗಾರರು) ಪುಸ್ತಕ ಬಿಡುಗಡೆಯಾಗಿದ್ದು, ಹಾರ್ನಿಮನ್ ಅವರ ಬಗೆಗಿನ ಸುದೀರ್ಘ ಚಿತ್ರಣ ಅದರಲ್ಲಿ ಅಡಗಿದೆ.

1873ರಲ್ಲಿ ಜನಿಸಿದ ಹಾರ್ನಿಮನ್ ಅವರಿಗೆ ಈ ವರ್ಷ 150ನೇ ಜಯಂತಿ. ಬ್ರಿಟಿಷ್ ಆಡಳಿತದ ಪರವಾಗಿದ್ದ, ಕೋಲ್ಕತ್ತಾದಿಂದ ಪ್ರಕಟವಾಗುತ್ತಿದ್ದ ’ದ ಸ್ಟೇಟ್ಸ್‌ಮನ್’ ಪತ್ರಿಕೆಗೆ 1904ರಲ್ಲಿ ಬಂದು ಸೇರುವುದಕ್ಕೆ ಮುಂಚಿತವಾಗಿ ಲಂಡನ್‌ನ ಹಲವು ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಹಾರ್ನಿಮನ್ ದುಡಿದಿದ್ದರು. ಭಾರತೀಯ ದೃಷ್ಟಿಕೋನದ ವರಿಗಾರಿಕೆಗಾಗಿ ಪಾರ್ಸಿ ವಕೀಲ ಪೆರೋಜ್‌ಶಾ ಮೆಹ್ತಾ ಅವರ ಜತೆಗೂಡಿ ಕೆಲವು ಲಿಬರಲ್‌ಗಳು ಪ್ರಾರಂಭಿಸುವ ’ದ ಬಾಂಬೆ ಕ್ರಾನಿಕಲ್’ ಪತ್ರಿಕೆಗೆ ಮೊದಲ ಸಂಪಾದಕರಾಗುತ್ತಾರೆ. ಭಾರತದ ಮತ್ತು ದೇಶದ ಜನರ ಸ್ವಾತಂತ್ರ್ಯಕ್ಕೆ ಮುಖವಾಣಿಯಾಗಿ ಮುಂದುವರೆದು ಇತಿಹಾಸವಾಯ್ತು ಆ ಪತ್ರಿಕೆ.

ಮೊದಲನೇ ವಿಶ್ವಯುದ್ಧ ಆರಂಭವಾದಾಗ ಅಂದಿನ ಬಾಂಬೆ ಗವರ್ನರ್ ಹೇರಿದ ಪ್ರೆಸ್ ಸೆನ್ಸಾರ್‌ಶಿಪ್ ವಿರುದ್ಧ ಸಿಡಿದೆದ್ದ ಹಾರ್ನಿಮನ್, ಕಾರ್ಯನಿರತ ಪತ್ರಕರ್ತರ ಸಂಘವಾದ ’ಪ್ರೆಸ್ ಅಸೋಸಿಯೇಶನ್ ಆಫ್ ಇಂಡಿಯಾ’ ಸ್ಥಾಪಿಸಿ, ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ಕಟಿಬದ್ಧರಾಗಿ ನಿಲ್ಲುತ್ತಾರೆ. ಬ್ರಿಟಿಷ್ ಯೋಧರ ದೌರ್ಜನ್ಯಗಳನ್ನು ಖಂಡಿಸಿ ಸಂಪಾದಕೀಯಗಳನ್ನು ಬರೆಯುತ್ತಾರೆ. ಡಿಫೆನ್ಸ್ ಇಂಡಿಯಾ ಆಕ್ಟ್ ಮೂಲಕ ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಸುವ ಬ್ರಿಟಿಷ್ ಸರ್ಕಾರದ ಮಾತುಗಳಿಗೆ ಜಗ್ಗದೆ ಮುಂದುವರೆಯುತ್ತಾರೆ.

ಅಂದಿನ ಹೋಮ್‌ರೂಲ್ ಚಳವಳಿಯ ಮುಂಚೂಣಿಯಲ್ಲಿದ್ದ ಅನಿ ಬೆಸೆಂಟ್ ಅವರನ್ನು ಡಿಫೆನ್ಸ್ ಇಂಡಿಯಾ ಆಕ್ಟ್‌ನಲ್ಲಿ ಬಂಧಿಸಿದಾಗ ಹಾರ್ನಿಮನ್ ಬರೆಯುವ ಮಾತುಗಳು ಇಂದಿಗೂ ನೆನಪಿಡಬೇಕಾದಂತವು: “ಒಳ್ಳೆಯ ಕೆಲಸಗಳಿಗೆ ಹೋರಾಡುವ ಮುಖಂಡರನ್ನು ನೂರು ಬಾರಿ ನೆಲಕ್ಕುರುಳಿಸಬಹುದು, ಬಂಧಿಸಬಹದು ಅಥವಾ
ಕೈಕೋಳ ಹಾಕಿ ಹಿಡಿದಿಡಬಹುದು, ಆದರೆ ಆ ಹೋರಾಟಗಳು ಜೀವಂತವಾಗಿರುತ್ತವೆ; ಸ್ವಾತಂತ್ರ್ಯದ ಬಾವುಟವನ್ನು ಒಮ್ಮೆ ಹಾರಿಸಿದ ಮೇಲೆ, ಅದು ಮತ್ತೆಮತ್ತೆ ಮಣ್ಣಿಗೆ ಬೀಳುತ್ತಾ ಹೋಗಬಹುದು, ಅದನ್ನು ಹೊಸದಾಗಿ ಮತ್ತೆ ಎತ್ತಲಾಗುತ್ತದೆ, ಧೀರೋದ್ಧಾತ ಹಾಗೂ ಸಿದ್ಧ ಜನ ಅದನ್ನು ಹೊತ್ತು ಮುಂದುವರೆಸುತ್ತಾರೆ”. ಯುಪಿ ರಾಜ್ಯದ ಯೋಗಿ ಆದಿತ್ಯನಾಥ್ ಸರ್ಕಾರ ಹತ್ರಾಸ್ ಅತ್ಯಾಚಾರ ಪ್ರಕರಣದ ಸಮಯದಲ್ಲಿ ವರದಿ ಮಾಡಲು ಹೋಗಿದ್ದ ಸಿದ್ದಿಕ್ ಕಪ್ಪನ್ ಅವರನ್ನು ಬಂಧಿಸಿ ಅವರ ಮೇಲೆ ದೇಶದ್ರೋಹ, ಯುಎಪಿಎ ಪ್ರಕರಣಗಳನ್ನು ದಾಖಲಿಸಿ ಬಂಧಿಸಿಟ್ಟಾಗ ಈ ದೇಶದ ಕೆಲವಾದರೂ ಮಾಧ್ಯಮಗಳು ಅದನ್ನು ವಿರೋಧಿಸಿ ಬರೆದದ್ದು, ಹಾರ್ನಿಮನ್‌ನಂಥವರು ಬಳವಳಿ ನೀಡಿದ ಮೌಲ್ಯಗಳು, ಇಂದು ಸ್ವಲ್ಪವಾದರೂ ಉಳಿದ ಲಕ್ಷಣಗಳಾಗಿ ತೋರುತ್ತದೆ. ಅವು ಜನರ ನಡುವೆ ಅನುರಣನಗೊಳ್ಳುವಂತೆ ಮಾಡುವತ್ತ ಇಂದಿನ ಎಚ್ಚೆತ್ತ ಮನಸ್ಸುಗಳು ಚಿಂತಿಸಬೇಕಿದೆ.

ಅನಿ ಬೆಸೆಂಟ್

1919ರ ಏಪ್ರಿಲ್‌ನಲ್ಲಿ ಜಲಿಯನ್ ವಾಲಾಬಾಗ್ ನರಮೇಧವನ್ನು ವರದಿ ಮಾಡಿದ್ದಕ್ಕೆ, ಕುಪಿತಗೊಳ್ಳುವ ಬ್ರಿಟಿಷ್ ಸರ್ಕಾರ ಅದಾದ ನಂತರ ಕೆಲವೇ ದಿನಗಳಲ್ಲಿ ಹಾರ್ನಿಮನ್ ಅವರನ್ನು ಬ್ರಿಟನ್‌ಗೆ ಗಡಿಪಾರು ಮಾಡುತ್ತದೆ. ದೇಶದಾದ್ಯಂತ ಈ ಗಡಿಪಾರಿನ ವಿರುದ್ಧ ಸಭೆಗಳು ಜರುಗುತ್ತವೆ. ಯಂಗ್ ಇಂಡಿಯಾದಲ್ಲಿ ಗಾಂಧಿಯವರು ಬರೆಯುವುದನ್ನು ಒಳಗೊಂಡಂತೆ, ಹಲವು ಪತ್ರಿಕೆಗಳು ಈ ಗಡಿಪಾರನ್ನು ಖಂಡಿಸಿ ಬರೆಯುತ್ತವೆ. ಬ್ರಿಟನ್‌ನಲ್ಲಿಯೇ ಸಕ್ರಿಯವಾಗುವ ಹಾರ್ನಿಮನ್ ’ಅಮೃತ್‌ಸರ ಅಂಡ್ ಅವರ್ ಡ್ಯೂಟಿ ಟು ಇಂಡಿಯಾ’ ಎಂಬ ಪುಸ್ತಕ ಬರೆದು ಪ್ರಕಟಿಸಿ, ರೌಲತ್ ಆಕ್ಟ್ ಹಾಗೂ ಇನ್ನಿತರ ಕರಾಳ ಕಾಯ್ದೆಗಳ ಮೂಲಕ ಬ್ರಿಟಿಷರು ಭಾರತದಲ್ಲಿ ನಡೆಸಿದ ದೌರ್ಜನ್ಯಗಳನ್ನು ಫೋಟೋಗಳ ಸಮೇತ ಸಾಬೀತುಪಡಿಸುತ್ತಾರೆ. ಇಷ್ಟೆಲ್ಲಾ ಆದರೂ ಅವರ ಮನಸ್ಸು ಭಾರತಕ್ಕೆ ಬರುವುದರತ್ತಲೇ ತುಡಿಯುತ್ತಿರುತ್ತದೆ. ಆದರೆ ಎಲ್ಲ ಬಾರಿಯೂ ವೀಸಾ ನಿರಾಕರಣೆ ಕಟ್ಟಿಟ್ಟಬುತ್ತಿಯಾಗಿರುತ್ತದೆ. ಭಾರತದ ಎಷ್ಟೋ ಮುಖಂಡರು, ವಕೀಲರು, ಬ್ರಿಟನ್ ಲೇಖಕ ಹೆಚ್ ಜಿ ವೆಲ್ಸ್ ಸೇರಿದಂತೆ ಹಲವರ ಮನವಿಗೆ ಬೆಲೆಯೇ ಇಲ್ಲದಾಗುತ್ತದೆ.

ಹಾರ್ನಿಮನ್ ಕೊನೆಗೆ ರಹದಾರಿ ಹುಡುಕಿ, ಶ್ರೀಲಂಕಾ ಪ್ರವೇಶಿಸಿ, ಅಲ್ಲಿಂದ 1926ರಲ್ಲಿ ಮದ್ರಾಸ್‌ಗೆ ಬಂದಿಳಿದು, ನಂತರ ಬಾಂಬೆಗೆ ಬಂದು ಸೇರುತ್ತಾರೆ. ಆನಂತರ ಕೂಡ ತಮ್ಮ ಪತ್ರಿಕೋದ್ಯಮದಲ್ಲಿ ಹಲವು ಏಳುಬೀಳುಗಳನ್ನು ಕಾಣುತ್ತಾರೆ. ’ಇಂಡಿಯನ್ ನ್ಯಾಶನಲ್ ಹೆರಾಲ್ಡ್’ ಎಂಬ ಪತ್ರಿಕೆಯನ್ನು ಹುಟ್ಟುಹಾಕುತ್ತಾರೆ. ಆದರೆ ಅದು ಸ್ವಲ್ಪ ಸಮಯದ ನಂತರ ನಿಂತುಹೋಗುತ್ತದೆ. ’ಬಾಂಬೆ ಸೆಂಟಿನೆಲ್’ ಎಂಬ ಸಂಜೆ ಪತ್ರಿಕೆಯನ್ನು ಹಲವು ವರ್ಷಗಳ ಕಾಲ ಸಂಪಾದಿಸಿ ಅದನ್ನು ಜನಪ್ರಿಯಗೊಳಿಸುತ್ತಾರೆ. ಈ ಎಲ್ಲಾ ಕಾಲದಲ್ಲಿಯೂ ಬ್ರಿಟಿಷ್ ಸರ್ಕಾರದಲ್ಲಿ ದಮನಿತರಾದವರ ಪರವಾದ ನಿಲುವು ತೆಗೆದುಕೊಂಡು ಪತ್ರಿಕೋದ್ಯಮದ ನಿಜ ರೂಪವನ್ನು ಆವಾಹಿಸಿಕೊಂಡು ಅವರು ಕೆಲಸ ಮಾಡಿರುವುದು ಅಚ್ಚರಿಯಂತೆಯೇ ಕಾಣುತ್ತದೆ. ವ್ಯಕ್ತಿ ಸ್ವಾತಂತ್ರ್ಯ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನನ್ನೇ ಮುಡಿಪಾಗಿಸಿಕೊಂಡ ಹಾರ್ನಿಮನ್ ಅವರಿಗೆ ಈ ಶ್ರದ್ಧೆ ಮತ್ತು ಹೋರಾಟದ ವ್ಯಕ್ತಿತ್ವ ಹೇಗೆ ಒಲಿಯಿತು ಎಂಬ ಪ್ರಶ್ನೆ ನಮ್ಮೆಲ್ಲರ ಅಂತಃಕರಣಗಳನ್ನು ಕಾಡಬೇಕಿದೆ.

1932ರಲ್ಲಿ ವಿದ್ಯಾರ್ಥಿಗಳನ್ನು ಕುರಿತು ಸಭೆಯೊಂದರಲ್ಲಿ ಮಾತನಾಡುವ ಹಾರ್ನಿಮನ್ ಅವರ ಮಾತುಗಳು ಜರ್ನಲಿಸಂ ವಿದ್ಯಾರ್ಥಿಗಳಿಗೆ, ಜರ್ನಲಿಸ್ಟ್‌ಗಳಿಗೆ ಇಂದಿಗೂ ಅನ್ವಯವಾಗುತ್ತವೆ: “ಜೀವನದಲ್ಲಿ ಆರ್ಥಿಕವಾಗಿ ಮುಂದುವರೆಯಲು ತೀವ್ರ ಆಕಾಂಕ್ಷೆಯುಳ್ಳವರಿಗೆ ಜರ್ನಲಿಸಂ ವೃತ್ತಿಯಾಗಿ ತೆಗೆದುಕೊಳ್ಳಲು ನಾನೆಂದು ಸಲಹೆ ನೀಡುವುದಿಲ್ಲ” ಎಂದು ಹೇಳಿ ಮುಂದುವರೆದು, “ಎಲ್ಲಾ ವ್ಯವಹಾರಗಳ ಹಿತಾಸಕ್ತಿಗಳಿಂದ, ಅದು ಜಾಹೀರಾತು ಆಗಿರಲಿ ಅಂತಹದ್ದು ಏನೇ ಆಗಿರಲಿ, ಅವುಗಳಿಂದ ಮುಕ್ತವಾಗಿರುವುದೇ ಆದರ್ಶ ದಿನಪತ್ರಿಕೆ” ಎನ್ನುತ್ತಾರೆ.

“ಪ್ರಾಮಾಣಿಕತೆ”ಯನ್ನು ವ್ಯಂಗ್ಯವಾಗಿಸಿಕೊಂಡು, ರಾಜಕಾರಣಿಗಳಿಂದ ಕುಚೋದ್ಯ ಮಾಡಿಸಿಕೊಂಡು ಅವಸಾನದ ಅಂಚಿನಲ್ಲಿರುವ ಭಾರತದ ಪತ್ರಿಕೋದ್ಯಮ ಹಾರ್ನಿಮನ್ ಅವರ ಜೀವನ ಮತ್ತು ಕೆಲಸದಿಂದ ಕಲಿಯುವುದು ಸಾಕಷ್ಟಿದೆ.


ಇದನ್ನೂ ಓದಿ: ಯುಪಿ ಚುನಾವಣೆ: ಸಿಎಂ ಆದಿತ್ಯನಾಥ್ ವಿರುದ್ಧ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ – ಡಾ. ಕಫೀಲ್ ಖಾನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹಾರ್ನಿಮನ್ ಅವರಂತಹ ಪತ್ರಕರ್ತರು ನಮಗಿಂದು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...