Homeಮುಖಪುಟಕನ್ನಡದ ಕಣ್ಮಣಿ ಸಾರಾ

ಕನ್ನಡದ ಕಣ್ಮಣಿ ಸಾರಾ

- Advertisement -
- Advertisement -

ಸಾರಾ ಇನ್ನಿಲ್ಲ ಎನ್ನುವ ಸುದ್ದಿ ತಲುಪಿ ಕೆಲವೇ ಗಂಟೆಗಳಲ್ಲಿ ಅವರ ಮನೆಯಲ್ಲಿ ಅವರ ಕೊನೆಯ ದರ್ಶನಕ್ಕೆ ಗೆಳತಿಯರೊಂದಿಗೆ ತೆರಳಿದ್ದೆ. ಹೀಗೆ ಅವರ ಮನೆಯಲ್ಲಿ ಸೇರುವುದು ಇದು ಮೊದಲೇನಲ್ಲ. ಇತ್ತೀಚೆಗೆ ಅವರಿಗೆ ಬರಗೂರು ಸಾಹಿತ್ಯ ಪ್ರಶಸ್ತಿ ಬಂದಿದ್ದಾಗಲೂ ನಾವು ಕೆಲವು ಗೆಳತಿಯರು ಅಲ್ಲಿದ್ದೆವು. ಮಗು ಮನಸ್ಸಿನ ಮುಗ್ಧತೆಯೊಂದಿಗೆ ಚಂದದ ಸೀರೆ ಉಟ್ಟುಕೊಂಡು ವೀಲ್ ಚೇರಿನಲ್ಲಿ ಕುಳಿತು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಲೇಖಕಿಯ ಜೊತೆ ನಾವೂ ಸಂಭ್ರಮಿಸಿದ್ದೆವು. ನಮ್ಮ ನಡುವಿನ ಸಾಕ್ಷಿಪ್ರಜ್ಞೆಯಾಗಿ ಇಷ್ಟು ದಿನ ನಮ್ಮೊಡನೆ ಇದ್ದ ಸಾರಾ ಅವರ ಕೊನೆಯ ಭೇಟಿ ನಮ್ಮೊಳಗಿನ ದುಗುಡವನ್ನು ಉಲ್ಬಣಿಸಿತ್ತು. ಹೌದು ಕಳೆದೊಂದು ವರ್ಷಗಳಿಂದ ಅವರಿಗೆ ಬದುಕು ಕಷ್ಟವೇ ಆಗಿತ್ತು.

ಸದಾ ಚಟುವಟಿಕೆಯಿಂದಿರುತ್ತ, ಬಾಯಿ ತುಂಬಾ ಮಾತನಾಡುತ್ತಿದ್ದ ಸಾರಾರನ್ನು ಅಸಹಾಯಕ ಸ್ಥಿತಿಯಲ್ಲಿ ನೋಡುವಾಗ ನಮಗೂ ಕಷ್ಟವಾಗುತ್ತಿತ್ತು. ಅವರು ನಮ್ಮ ಒಡನಾಟ ಬಯಸುತ್ತಿದ್ದರಾದರೂ ಅವರಿಗೆ ನಾವು ಯಾರು ಎಂದು ಗುರುತು ಹಚ್ಚಲು ಕಷ್ಟವಾಗುತ್ತಿತ್ತು. ನಾವು ಅವರ ಕರಾವಳಿಯ ಗೆಳತಿಯರು ಎಂದ ಕ್ಷಣ ಅವರ ಮುಖದಲ್ಲಿ ನಗು ಅರಳುತ್ತಿತ್ತು. ಕುಳಿತುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಬಂದವರಿಗೆ ಬಾಯಾರಿಕೆ ಕೊಡುವಂತೆ ಸೊಸೆಯಂದಿರಿಗೆ ಆಜ್ಞಾಪಿಸುತ್ತಿದ್ದರು. ಅವರನ್ನು ಆವರಿಸಿದ್ದ ವಿಸ್ಮೃತಿಯಲ್ಲೂ ನಮ್ಮ ಹೆಸರನ್ನು ಮತ್ತೆಮತ್ತೆ ಕೇಳಿ ಪುನರುಚ್ಚರಿಸುತ್ತಿದ್ದರು.

ಸಾರಾ ಬರೆದಂತೆ ಬದುಕಿದವರು. ದೊಡ್ಡ ಲೇಖಕಿ ಎನ್ನುವ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಕಿರಿಯರನ್ನು ಒಳಗೊಳ್ಳುವ, ಬರೆಯುವಂತೆ ಪ್ರೇರೇಪಿಸುವ ಅವರ ಸರಳತೆ, ಸಜ್ಜನಿಕೆ ನನ್ನನ್ನು ಅವರ ಹತ್ತಿರ ಸೆಳೆದಿತ್ತು. ಬೆರಗುಗಣ್ಣುಗಳಿಂದ ಅವರನ್ನು ನೋಡುತ್ತ ಅವರ ಸಾಹಿತ್ಯವನ್ನಷ್ಟೂ ಓದುವ ಅವಕಾಶ ನನಗೆ ಲಭ್ಯವಾದದ್ದು ಸ್ವಪ್ನ ಬುಕ್ ಹೌಸ್‌ಗಾಗಿ ಕರ್ನಾಟಕ ಲೇಖಕಿಯರ ಸಂಘದ ಶ್ರೀಮತಿ ಇಂದಿರಾ ಶಿವಣ್ಣ ಅವರ ಮೂಲಕ ಸಾರಾ ಅವರ ಬಗ್ಗೆ ಬರೆಯುವ ಅವಕಾಶ ಒದಗಿಬಂದಾಗ. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಆಗಿನ ಅಧ್ಯಕ್ಷರಾಗಿದ್ದ ಖ್ಯಾತ ಲೇಖಕಿ ಶ್ರೀಮತಿ ಚಂದ್ರಕಲಾ ನಂದಾವರ ಅವರು ನನಗೆ ಬರೆದುಕೊಡುವಂತೆ ಹೇಳಿದ್ದರು. ’ಅಪರಿಚಿತರು ನನ್ನ ಬಗ್ಗೆ ಬರೆಯುವುದು ಯಾಕೆ, ನನ್ನ ಜೊತೆ ನಿತ್ಯ ಒಡನಾಡುವವರು, ನನ್ನ ಅಂತರಂಗ ತಿಳಿದವರು ಬರೆಯಬೇಕು’ ಎಂದು ಪಟ್ಟುಹಿಡಿದಿದ್ದರು ಸಾರಾ. ಕನ್ನಡ ಸಾಹಿತ್ಯ ಲೋಕದಲ್ಲಿ ಅಪರಿಚಿತಳಾಗಿದ್ದ ನನ್ನನ್ನು ತನ್ನ ಆಪ್ತ ಬಳಗಕ್ಕೆ ಸೇರಿಸಿಕೊಂಡು ತನ್ನ ಬಗ್ಗೆ ಬರೆಯುವುದಕ್ಕೆ ಹಚ್ಚಿದರು. ಈ ಮೂಲಕ ನನಗೆ ಆಪ್ತರಾದರು. ಅವರ ಬರಹಗಳನ್ನಷ್ಟು ಓದಿ ಭಟ್ಟಿ ಇಳಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ ಅವರೊಳಗಿನ ಅಪ್ಪಟ ಗೃಹಿಣಿಯೊಬ್ಬಳು ನನ್ನೊಳಗೆ ಇಳಿದಿದ್ದಳು. ಬರಹ ಬೇರೆ ಬದುಕು ಬೇರೆ ಎಂದು ಭಾವಿಸಿದವರಲ್ಲ ಸಾರಾ. ಈ ಕಾರಣಕ್ಕೆ ಅವರ ಕೃತಿಗಳು ನಮಗೆ ಆಪ್ತವಾಗುತ್ತವೆ. ಅವರೇ ಹೇಳುವಂತೆ, ’ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ನಾಯಕಿ ನಾದಿರಾ ಅವರ ಬಾಲ್ಯಕಾಲದ ಸಖಿ; ಅವಳ ತಂದೆ ಇರಬಹುದು, ಗಂಡ ರಶೀದನಿರಬಹುದು- ಅವರೆಲ್ಲಾ ಜೀವನದಲ್ಲಿ ಒಡನಾಡಿದ ಪಾತ್ರಗಳೇ, ಆದ್ದರಿಂದ ಇವು ನಮ್ಮ ಅಂತರಂಗಕ್ಕೆ ಆಪ್ತವಾಗುವುದು. ಮಾನವೀಯತೆಗಾಗಿ, ಇಲ್ಲಿರುವ ಜೀವಪರ ದನಿಗಾಗಿ ಪ್ರಸಿದ್ಧವಾಗಿರುವ ’ಚಂದ್ರಗಿರಿಯ ತೀರದಲ್ಲಿ’ ಕೃತಿ ಮಲಯಾಳಂ, ತಮಿಳು, ತೆಲುಗು, ಮರಾಠಿ, ಒರಿಯ, ಹಿಂದಿ ಭಾಷೆಗಳಿಗೆ ಭಾಷಾಂತರವಾಗಿದೆ. ಈ ಕೃತಿಯನ್ನು ಬೆಂಗಳೂರು ವಿವಿ, ಮಂಗಳೂರು ವಿವಿ, ಕುವೆಂಪು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕವಾಗಿಯೂ ಕಿರಿಯರು ಓದಿದ್ದಾರೆ. ’ಸಹನ’, ’ವಜ್ರಗಳು’, ’ಕದನ ವಿರಾಮ’, ’ಸುಳಿಯಲ್ಲಿ ಸಿಕ್ಕವರು’, ’ತಳ ಒಡೆದ ದೋಣಿಯಲ್ಲಿ’, ’ಪ್ರವಾಹ ಸುಳಿ’, ’ಪಂಜರ’, ’ಇಳಿಜಾರು’, ’ಕಾಣಿಕೆ’ ಇವರ ಇತರ ಕಾದಂಬರಿಗಳು.

’ಧರ್ಮ ಬಲೆ ಬೀಸಿದಾಗ’, ’ನಿಯಮ ನಿಯಮಗಳ ನಡುವೆ’ ಮತ್ತು ’ಚಪ್ಪಲಿಗಳು’ ಸಾರಾ ಅವರ ಸ್ತ್ರೀಪರ ಸಂವೇದನೆ ಇರುವ ಕಥೆಗಳಾಗಿ ನಮ್ಮನ್ನು ಸದಾ ಕಾಡುತ್ತವೆ. ಪುರುಷರ ಅಹಂಕಾರವನ್ನು ಪ್ರಶ್ನಿಸುವುದರ ಜೊತೆಗೆ ಎಲ್ಲಾ ಸಮುದಾಯದೊಳಗೂ ಸ್ತ್ರೀಪರ ಸಂವೇದನೆ ಇರಬಹುದಾದ ಪುರುಷರನ್ನೂ ಇವು ಪರಿಚಯಿಸುತ್ತವೆ. ’ಚಪ್ಪಲಿಗಳು’, ’ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು’, ’ಖೆಡ್ಡ’, ’ಸುಮಯ್ಯ’, ’ಗಗನಸಖಿ’ ಸಾರಾ ಅವರ ಕಥಾ ಸಂಕಲನಗಳು

ಮಲೆಯಾಳಿಯಿಂದ ’ಮನೋಮಿ’ (ಕಮಲಾ ದಾಸ್), ’ಬಲೆ’ (ಬಿ.ಎಂ. ಸುಹಾರ), ’ನಾನಿನ್ನು ನಿದ್ರಿಸುವೆ’ (ಪಿ ಕೆ ಬಾಲಕೃಷ್ಣನ್), ’ತುರ್ತು ಪರಿಸ್ಥಿತಿಯ ಕರಾಳ ಮುಖ’ (ಈಚರ ವಾರಿಯರ್), ’ಧರ್ಮದ ಹೆಸರಿನಲ್ಲಿ’ ( ಆರ್.ಬಿ. ಶ್ರೀಕುಮಾರ್), ’ವೈಕಂ ಮಹಮದ್ ಬಶೀರ್’ (ಎಂ ಎನ್. ಕಾರಶೇಂ), ’ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ (ಸೈಯದ್ ಮೆಹಬೂಬ್ ಶಾ ಖಾದ್ರಿ) ಹೀಗೆ ಹಲವಾರು ಪ್ರಸಿದ್ಧ ಲೇಖಕರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಸಾರಾ ಅವರು ’ತೇಲಾಡುವ ಮೋಡಗಳು’ ಎಂಬ ನಾಟಕವನ್ನು, ’ಐಷಾರಾಮದ ಆಳದಲ್ಲಿ’ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ.

ಮುಸ್ಲಿಂ ಸಮುದಾಯದೊಳಗೆ ಸಾಕಷ್ಟು ಸಂಚಲನ ಉಂಟುಮಾಡಿದ ಸಾರಾ ಅವರ ಕೃತಿ ’ಚಂದ್ರಗಿರಿಯ ತೀರದಲ್ಲಿ’ ತಮಿಳು ಭಾಷೆಯಲ್ಲಿ ’ಜಮೀಲ’ ಹೆಸರಿನಲ್ಲಿ ಚಲನಚಿತ್ರವಾಗಿಯೂ ತೆರೆಕಂಡಿದೆ. ಈ ಕೃತಿ ಸಾರ ಅವರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟದ್ದು ಮಾತ್ರವಲ್ಲದೆ, ತಮ್ಮದೇ ಸಮುದಾಯದ ಮೂಲಭೂತವಾದಿಗಳಿಂದ ವಿರೋಧವನ್ನು ಅವರು ಎದುರಿಸುವಂತಾಯಿತು. ಆದರೆ ಈ ವಿರೋಧವನ್ನು ಅವರು ದಿಟ್ಟವಾಗಿ ಎದುರಿಸಿದ್ದು ಬಹಳ ಮುಖ್ಯವಾದ ಸಂಗತಿಯಾಗಿ ಉಳಿಯುತ್ತದೆ.

ಇದನ್ನೂ ಓದಿ: ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ಕನ್ನಡಕ್ಕೊಬ್ಬರೇ ಸಾರಾ ಎನ್ನುವಂತೆ ಬದುಕಿದ ಲೇಖಕಿ ಬಿಟ್ಟುಹೋದ ನಿರ್ವಾತ ದೊಡ್ಡದು. 30.6.1936ರಲ್ಲಿ ಕೇರಳದ ಕಾಸರಗೋಡಿನ ಪುದಿಯಾಪುರ ತರವಾಡು ಮನೆಯಲ್ಲಿ ಪಿ.ಅಹಮದ್ ಹಾಗೂ ಜೈನಾಭಿ ದಂಪತಿಗಳ ಆರು ಗಂಡು ಮಕ್ಕಳ ನಡುವೆ ಮುದ್ದಿನ ಮಗಳಾಗಿ ಜನಿಸಿದವರು ಸಾರಾ. ಮಲೆಯಾಳಂ ಮನೆ ಮಾತಾಗಿದ್ದರೂ ವಕೀಲಿ ವೃತ್ತಿಯಲ್ಲಿದ್ದ ತಂದೆಯ ಪ್ರೇರಣೆಯಿಂದ ಕಾಸರಗೋಡಿನ ಕನ್ನಡ ಶಾಲೆಗೆ ಸೇರಿಕೊಂಡು ಎಸ್.ಎಸ್.ಎಲ್.ಸಿ ಮುಗಿಸಿದರು.

ಇಂಜಿನಿಯರ್ ಪದವೀಧರರಾಗಿ ಸರಕಾರಿ ಕೆಲಸದಲ್ಲಿದ್ದ ಎಂ. ಅಬೂಬಕ್ಕರ್ ಅವರನ್ನು ಮದುವೆಯಾಗಿ ಮಂಗಳೂರು ಸೇರಿದ ಸಾರಾ ಅವರು ತಮ್ಮ ಬಾಲ್ಯದಿಂದಲೂ ಅಭ್ಯಾಸವಾಗಿದ್ದ ವರ್ತಮಾನ ಪತ್ರಿಕೆಯನ್ನು ಓದಲು ಗಂಡನ ಮನೆಯಲ್ಲಿ ಪರದಾಡಬೇಕಾಯಿತು. ಮನೆಯ ಪುರುಷರೆಲ್ಲ ಓದಿ ಎಸೆಯುತ್ತಿದ್ದ ದಿನಪತ್ರಿಕೆಯನ್ನು ಜೋಪಾನ ಕಾದಿಟ್ಟು ನಿತ್ಯದ ಕೆಲಸ ಮುಗಿಸಿ ಬಿಡುವಿನಲ್ಲಿ ಓದುತ್ತಿದ್ದರು. ನಂತರ ಗಂಡನ ವೃತ್ತಿ ಸಂಬಂಧ ಬೇರೆಬೇರೆ ಊರುಗಳಿಗೆ ಹೋದಂತೆಲ್ಲಾ ಬುರ್ಖಾದೊಳಗೆ ಬಂಧಿಯಾಗದೆ ಮನೆ ಕೆಲಸದ ಜೊತೆಜೊತೆಗೆ ಸಾರ್ವಜನಿಕ ವಾಚನಾಲಯದ ಸದಸ್ಯರಾದರು. ತಮ್ಮ ಓದುವ ಅಭಿರುಚಿಗೆ ಆಹಾರ ಒದಗಿಸಿಕೊಂಡರು. ಮಹಿಳಾ ಮಂಡಲದ ಸದಸ್ಯೆಯಾಗಿ, ಅಧ್ಯಕ್ಷರಾಗಿ ಲೋಕದ ವಿದ್ಯಾಮಾನಗಳಿಗೆ ಮುಖಾಮುಖಿಯಾದರು. ಸಾರಾ ಅವರ ಕಥಾ ಪಾತ್ರಗಳಾದರೂ ಅವರೇ ಒಡನಾಡಿದ ವ್ಯಕ್ತಿ ಚಿತ್ರಗಳು. ’ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಲಂಕೇಶ್ ಪತ್ರಿಕೆಯಲ್ಲಿ ಮೊದಲು ಬೆಳಕು ಕಂಡ ಅವರ ಆತ್ಮಕಥನದ ತುಣುಕು. ಸಾರಾ ಅವರು ಮುಸ್ಲಿಂ ಸಮುದಾಯದೊಳಗಿನ ಶೋಷಿತ, ದಮನಿತ ಮಹಿಳೆಯರ ಪರವಾಗಿ ಬರೆದರು.

ತಮ್ಮ ಬರಹಗಳು ಮುಸ್ಲಿಂ ಸಮುದಾಯದೊಳಗೆ ಬದಲಾವಣೆಗೆ ಕಾರಣವಾಗುತ್ತದೆ ಎಂದು ಸಾರಾ ನಂಬಿದ್ದರು. 40ರ ಹರೆಯದಲ್ಲಿ ಬರೆಯತೊಡಗಿದವರು ಸಾರಾ, “ಅಣೆಕಟ್ಟೆಯಲ್ಲಿ ಬಂಧಿಯಾದ ಜಲರಾಶಿ ಗೇಟ್ ಎತ್ತಿದೊಡನೆ ಧುಮ್ಮಿಕ್ಕಿ ಹರಿಯುವಂತೆ ನನ್ನೊಳಗೆ ಹೊಗೆಯಾಡುತ್ತಾ ನನಗೆ ಉಸಿರುಗಟ್ಟಿಸುತ್ತಿದ್ದ ನನ್ನ ಭಾವನೆಗಳು ನನ್ನ ಲೇಖನಿಯ ಮೂಲಕ ಸರಾಗವಾಗಿ ಹರಿಯಲಾರಂಭಿಸಿತು” ಎನ್ನುವ ಸಾರಾ, ತಮ್ಮ ಬರವಣಿಗೆಯ ಮೂಲಕ ಅಲ್ಲಿಯವರೆಗೆ ಅಂಧಕಾರದಲ್ಲಿದ್ದ ಮುಸ್ಲಿಂ ಮಹಿಳಾ ಜಗತ್ತನ್ನು ಅನಾವರಣ ಮಾಡಿ ಸದ್ದುಮಾಡಿದರು. ಸಾರಾ ಅವರ ಪ್ರಬಂಧಗಳು ಮತ್ತು ಲೇಖನ ಗುಚ್ಚ, ’ಅನಾವರಣ’, ’ಸಾಹಿತ್ಯ ಸಂಸ್ಕೃತಿ ಮತ್ತು ಮಹಿಳೆ’, ’ಚಿಂತೆ-ಚಿಂತನೆ’. ತಾನು ನಂಬಿದ ಮೌಲ್ಯಗಳಿಗೆ ಬದ್ಧವಾಗಿದ್ದುಕೊಂಡು ಅವುಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಬರೆದವರು ಸಾರಾ.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಬಿರುದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಾರಾ ಅವರನ್ನು ಡಾ.ಬಿ.ಎ. ವಿವೇಕ ರೈ ಗುರುತಿಸಿರುವುದು ಹೀಗೆ “ಧೈರ್ಯ, ಆತ್ಮವಿಶ್ವಾಸ, ಸತ್ವ ಮತ್ತು ಸತ್ಯದ ಪರವಾಗಿ ಹೋರಾಡುವ ಛಲದ ಬೆಂಕಿ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡವರು ಸಾರಾ.”

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಹುಟ್ಟು ಮತ್ತು ಬೆಳವಣಿಗೆಯ ವಿವಿಧ ಹಂತಗಳಲ್ಲಿ ಜೊತೆಜೊತೆಯಾಗಿದ್ದುಕೊಂಡು ಸಂಘದ ಅಧ್ಯಕ್ಷರೂ ಆಗಿ ದುಡಿದು ಸಂಘಕ್ಕೊಂದು ಸ್ವಂತ ಕಟ್ಟಡವಾಗಬೇಕೆಂದು ಪರಿಶ್ರಮಪಟ್ಟವರಲ್ಲಿ ಸಾರಾ ಅವರೂ ಒಬ್ಬರು. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರನ್ನು ಅರಸಿ ಬಂದದ್ದು 1995ರಲ್ಲಿ.

ಬಹುತ್ವ ಭಾರತದ ಜಾತ್ಯತೀತ ಪ್ರಜ್ಞೆಯಾಗಿ ಬದುಕಿದ್ದ ಸಾರಾ ಇಂದು ನಮ್ಮೊಡನಿಲ್ಲ ಎನ್ನುವುದು ಅರಗಿಸಿಕೊಳ್ಳಲಾಗದ ಸತ್ಯ. ಸಮಕಾಲೀನ ವೈಚಾರಿಕ ಪ್ರಜ್ಞೆಯಾಗಿರುವ ಜಿ. ರಾಮಕೃಷ್ಣ ಅವರು ಹೇಳುವಂತೆ, “ಎಲ್ಲಾ ಧರ್ಮಗಳ ಮತ್ತು ಮತಧರ್ಮೀಯರ ಅಂತರಂಗದ ಮೇಲೆ ಬೆಳಕು ಚೆಲ್ಲಿ ಅಲ್ಲಿ ಬಿತ್ತಲಾದ ವಿಷಬೀಜವನ್ನು ಕಿತ್ತೆಸೆಯಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಆದ್ದರಿಂದ ಸಾರಾ ಮತ್ತು ಅವರಂಥವರು ಹರಿಸುವ ಬೆಳಕು ಇನ್ನೂ ಪ್ರಖರವಾಗಬೇಕಾಗಿದೆ ಮತ್ತು ಅಂಧಕಾರವನ್ನು ತೊಲಗಿಸಬೇಕಾಗಿದೆ”. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ದೂರದರ್ಶನದ ಪ್ರಿವ್ಯೂ ಸಮಿತಿ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಸಲಹಾ ಸಮಿತಿಯ ಸದಸ್ಯೆಯಾಗಿಯೂ ದುಡಿದವರು ಸಾರಾ.

ಒಟ್ಟಿನಲ್ಲಿ ಸಾರಾ ನಮ್ಮ ನಡುವಿನ ಬೆಳಕಾಗಿದ್ದವರು. ಧರ್ಮದ ಮೇಲಿನ ಶ್ರದ್ಧೆ ಎಂದೂ ಅಂಧಶ್ರದ್ಧೆ ಆಗಬಾರದು; ಜೀವಕ್ಕಿಂತ ಜೀವನ ದೊಡ್ಡದು ಎಂದು ನಂಬಿದವರು ಮತ್ತು ಅದರಂತೆ ಬದುಕಿದವರು ಅವರು.

ದೇವಿಕಾ ನಾಗೇಶ್
ಬರಹಗಾರ್ತಿ ಮಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...