Homeಮುಖಪುಟಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

- Advertisement -
- Advertisement -

ಜನವರಿ 10ರಂದು ನಾನು ಓದಿದ ಹೈಸ್ಕೂಲ್‌ನ ಕಾರ್ಯಕ್ರಮವೊಂದಕ್ಕೆ ಹೋಗಿ, ಅಲ್ಲಿ ಸಮೀಪದ ನನ್ನ ತವರು ಮನೆಗೆ ಹೋಗಿ ಬಂದೆ. ಅಲ್ಲಿ ಏರ್‌ಟೆಲ್ ಸಿಗ್ನಲ್ ಇಲ್ಲ. ಮನೆಗೆ ಹಿಂದಿರುಗಿ ಫೇಸ್ಬುಕ್ ತೆಗೆದು ನೋಡಿದರೆ, ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ತೀರಿಹೋದ ಸುದ್ದಿ. ಸಾರಾ ಅಬೂಬಕ್ಕರ್ ಅವರ ಆರೋಗ್ಯ ಕೆಲವು ತಿಂಗಳಿಂದ ಚೆನ್ನಾಗಿರಲಿಲ್ಲ. ಕಳೆದ ವರ್ಷವೇ ಅವರಿಗೆ ಮರೆವು ಆವರಿಸಿತ್ತು ಎಂದು ತಿಳಿದಿತ್ತು.

ಎರಡು ವರ್ಷಗಳ ಕೆಳಗೆ, ಸಾರಾ ಕನ್ನಡಕ್ಕೆ ಅನುವಾದಿಸಿದ, ಗುಜರಾತ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪೊಲೀಸ್ ಅಧಿಕಾರಿ ಶ್ರೀಕುಮಾರ್ (ಕೆಲವು ತಿಂಗಳ ಕೆಳಗೆ ತೀಸ್ತಾ ಅವರ ಜೊತೆಗೆ ಬಂಧನಕ್ಕೆ ಒಳಪಟ್ಟಿದ್ದರು) ಅವರ ’ಧರ್ಮದ ಹೆಸರಿನಲ್ಲಿ’ ಪುಸ್ತಕದ ಪ್ರತಿಗಳು ಬೇಕು ಎಂದು ಕೇಳಿದ್ದಾಗ, ಈಗ ಮರು ಮುದ್ರಣ ಮಾಡಲು ತಮಗೆ ಕಷ್ಟ ಎಂದಿದ್ದರು. ನವಕರ್ನಾಟಕ ಪ್ರಕಾಶನದವರಿಗೆ ಕೊಟ್ಟರೆ ಪ್ರಕಟಿಸುತ್ತಾರೆ ಅಂದೆ. ಅವರು ಉತ್ಸಾಹ ತೋರಿಸಲಿಲ್ಲ. ಅವರ ಪುಸ್ತಕಗಳಿಗೆ ಅವರೇ ಪ್ರಕಾಶಕರು. ’ಚಂದ್ರಗಿರಿ’ ಅವರ ಪ್ರಕಾಶನ ಸಂಸ್ಥೆಯ ಹೆಸರು. ಪ್ರತಿ ಪುಸ್ತಕದ ಎರಡು ಪ್ರತಿಗಳನ್ನು ಕಳಿಸುತ್ತಿದ್ದರು. ಲೈಬ್ರರಿಗೆ ಮತ್ತು ನನಗೆ. 1984ರಿಂದ ಬರೆಯಲು ತೊಡಗಿದ ಅವರು, ಎಂಟು ಕಾದಂಬರಿಗಳು, ಆರು ಕಥಾ ಸಂಕಲನಗಳು, ಐದು ಭಾಷಾಂತರ ಕೃತಿಗಳು, ಮೂರು ಲೇಖನ ಸಂಗ್ರಹಗಳು, ಒಂದು ಪ್ರವಾಸ ಕಥನ, ಒಂದು ನಾಟಕ ಸಂಕಲನ ಪ್ರಕಟಿಸಿದ್ದಾರೆ. ’ಹೊತ್ತು ಕಂತುವ ಮುನ್ನ’ ಅವರ ಆತ್ಮಚರಿತ್ರೆ, ’ಚಂದ್ರಗಿರಿ’ ಅವರ ಅಭಿನಂದನಾ ಗ್ರಂಥ. ಅವರ ಮೊದಲ ಕಾದಂಬರಿ ’ಚಂದ್ರಗಿರಿ ತೀರದಲ್ಲಿ’ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿದೆ ಮತ್ತು ಚಲನಚಿತ್ರವಾಗಿದೆ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ನಾಡೋಜ ಪ್ರಶಸ್ತಿಯವರೆಗೆ ಹಲವು ಪ್ರಶಸ್ತಿಗಳು, ಗೌರವಗಳು ಅವರಿಗೆ ಲಭಿಸಿವೆ.

ನಮ್ಮ ಕಾಲೇಜಿನ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಲು ಎರಡು ಸಲ ಅವರು ತೀರ್ಥಹಳ್ಳಿಗೆ ಬಂದಿದ್ದರು. ಒಮ್ಮೆ ನಮ್ಮ ಮನೆಗೆ ಬಂದು ಊಟ ಮಾಡಿ ಹೋಗಿದ್ದರು. ಎರಡು ಸಲವೂ ಮಂಗಳೂರಿನಿಂದ ಮಿನಿ ಬಸ್‌ನಲ್ಲಿ ಅವರು ಬಂದಿದ್ದು. ಬಸ್‌ನಲ್ಲಿ ಪ್ರಯಾಣಿಸುವುದನ್ನು ಅವರು ಕೊನೆಯವರೆಗೂ ರೂಢಿಸಿಕೊಂಡಿದ್ದರು. ಅವರ ಜತೆ ನಾಲ್ಕು ಐದು ಸಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ನೆನಪಿದೆ: ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮ, ಗಿರೀಶ ಕಾರ್ನಾಡ ರಂಗಶಂಕರದಲ್ಲಿ ನಡೆಸಿಕೊಟ್ಟ ಲೇಖಕಿಯರ ಪ್ರೋಗ್ರಾಂನಲ್ಲಿ ಹೀಗೆ. ಅರವಿಂದ ಆಶ್ರಮದ ಗೆಸ್ಟ್ ಹೌಸ್‌ನಲ್ಲಿ ಸಾರಾ ಅಬೂಬಕ್ಕರ್ ಜತೆ ಒಂದೇ ಕೋಣೆಯಲ್ಲಿ ಉಳಿದ ಸವಿನೆನಪು. ಅದೇ ಕೊಠಡಿಯಲ್ಲಿ ಕತೆಗಾರ್ತಿ ನಾಗವೇಣಿ ಸಹ ನಮ್ಮ ಜತೆ ಇದ್ದರು. ಈ ಎಲ್ಲ ಸಂದರ್ಭದಲ್ಲಿ ನಾನು ಗಮನಿಸಿದಂತೆ ಸಾರಾ ಅವರು ತುಂಬಾ ಸರಳ ಮತ್ತು ನಿಗರ್ವಿ. ಅವರ ಬರಹದಂತೆ ನೇರ, ತೆರೆದ ಮನಸ್ಸು. ಅವರ ಅಭಿನಂದನಾ ಗ್ರಂಥಕ್ಕೆ ಅವರ ಸಾಹಿತ್ಯ ಕೃತಿಗಳ ಕುರಿತು ಲೇಖನ ಕೇಳಿದಾಗ ಬರೆದುಕೊಟ್ಟ ಸಂತಸ ನನ್ನದಾಗಿತ್ತು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ರಿಫ್ರೆಷರ್ ಕೋರ್ಸ್ ಅಭ್ಯರ್ಥಿಗಳಿಗೆ ಸಾರಾ ಅಬೂಬಕ್ಕರ್ ಅವರ ಎಲ್ಲ ಕೃತಿಗಳ ಕುರಿತು ಉಪನ್ಯಾಸ ನೀಡಿದ್ದೇನೆ. ಸಾರಾ ಅವರ ಕೃತಿಗಳ ಮೂಲಕ ನಮ್ಮ ಜತೆಗೆ ಸದಾ ಉಳಿಯುತ್ತಾರೆ ಮತ್ತು ಸ್ಫೂರ್ತಿಯಾಗುತ್ತಾರೆ.

ಅವರ ಆತ್ಮ ಚರಿತ್ರೆ ’ಹೊತ್ತು ಕಂತುವ ಮುನ್ನ’ ಪುಸ್ತಕದಲ್ಲಿ, ಅವರು ತಮ್ಮ ಕೌಟುಂಬಿಕ ಬದುಕಿನ ಜತೆಗೆ ಬರಹದ ಬದುಕಿನ ಸವಾಲುಗಳನ್ನು ಕುರಿತೂ ಬರೆದಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಸ್ತ್ರೀಯರಿಗಿದ್ದ ಧಾರ್ಮಿಕ ಸ್ವಾತಂತ್ರ್ಯದ ಮಿತಿಗಳನ್ನು ಕುರಿತು ಬರೆದಾಗ ಅವರದೇ ಸಮುದಾಯದ ಜನ ವಿರೋಧಿಸಿದರು. ಬೆಂಗಳೂರಿನ ಲೇಖಕಿ ಒಬ್ಬರು ಸಾರಾ ಅಬೂಬಕ್ಕರ್ ಲೇಖಕಿ ಆದರೆ ನಾನು ಲೇಖಕಿ ಅಲ್ಲ ಅಂದರಂತೆ. ಮೂವತ್ತೈದು ವರ್ಷಗಳ ಹಿಂದಿನ ಮಾತು ಇದು. ಸಾರಾ ಅವರ ಮಾತುಗಳನ್ನು ಅಲ್ಲಲ್ಲೇ ಬಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಬೆಳೆದರು. ಇನ್ನೊಬ್ಬರು ಸಾರಾ ಲಂಕೇಶ್ ಪತ್ರಿಕೆಯಲ್ಲಿ ಬರೆಯುವುದನ್ನು ಇಷ್ಟಪಡದೆ ಟೀಕಿಸಿದರು. ಹೀಗೆ ಹಲವು ಕಹಿಮಾತುಗಳನ್ನು ಕೇಳಿ ಅರಗಿಸಿಕೊಂಡು ಬದುಕಿ ಬರೆದವರು ಸಾರಾ.

ಇದನ್ನೂ ಓದಿ: ಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ’ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

ಸಾರಾ ಅಬೂಬಕ್ಕರ್ ಕೇವಲ ಮುಸ್ಲಿಂ ಜಗತ್ತಿನ ಕುರಿತು ಬರೆದಿಲ್ಲ. ’ತಳ ಒಡೆದ ದೋಣಿಯಲಿ’ ಎಂಬ ಅವರ ಕಾದಂಬರಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಭ್ರಷ್ಟಾಚಾರದ ಕುರಿತ ಚಿತ್ರಣ ಇದೆ. ಒಬ್ಬರು ರಾಜಕಾರಣಿಗೆ ಲಂಚ ತೆಗೆದುಕೊಳ್ಳಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಹಿರಿಯ ಎಂಜಿನಿಯರ್ ಆಗಿದ್ದ ಅವರ ಪತಿ ಅಬೂಬಕ್ಕರ್ ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗುತ್ತದೆ. ನೀರಾವರಿ ಇಲಾಖೆಯ ಭ್ರಷ್ಟಾಚಾರದ ಕತೆಯೇ ’ತಳ ಒಡೆದ ದೋಣಿಯಲಿ’. ಸಾರಾ ಈ ಕಾದಂಬರಿ ಬರೆದಿದ್ದು 1997ರಲ್ಲಿ. ಇವತ್ತು ಕೂಡ ಈ ಎಡದಂಡೆ ಕಾಲುವೆ ರಿಪೇರಿ ಆಗುತ್ತಲೇ ಇದೆ. ಒಡೆದು ಹೋಗುತ್ತಲೇ ಇದೆ. ’ತಳ ಒಡೆದ ದೋಣಿಯಲಿ’ ಒಂದು ಮುಖ್ಯ ಕಾದಂಬರಿ. ಸಾರಾ ತಮ್ಮ ಕೃತಿಗಳಲ್ಲೆಲ್ಲಾ ಸಾಮಾಜಿಕ ಸಮಸ್ಯೆಗಳ ಚಿತ್ರಣಕ್ಕೆ ಒತ್ತು ನೀಡಿ ಬರೆದಿದ್ದಾರೆ.

ಇಪ್ಪತ್ತೈದು ಪುಸ್ತಕಗಳನ್ನು ಬರೆದಿರುವ ಸಾರಾ ಅವರಿಗೆ ಕೇವಲ ಕಲಾತ್ಮಕ ಅಭಿವ್ಯಕ್ತಿ ಮಾತ್ರವೇ ಮುಖ್ಯವಲ್ಲ. ತನ್ನದೇ ಅಂತರಂಗದ ಅಭಿವ್ಯಕ್ತಿ ಅಥವಾ ಆತ್ಮ ನಿವೇದನೆಯೂ ಮುಖ್ಯವಲ್ಲ. ತಾನು ನೋಡಿದ ಅನುಭವಿಸಿದ ಸಂಪ್ರದಾಯದ ನಂಬಿಕೆಗಳು, ಧಾರ್ಮಿಕ ನಂಬಿಕೆಗಳು, ಅದರ ಪರಿಣಾಮವಾಗಿ ನಿರಂತರ ನೋವು ಅನುಭವಿಸುತ್ತಿರುವ ಸ್ತ್ರೀ ಸಮುದಾಯ- ಇವು ನಿರಂತರವಾಗಿ ಲೇಖಕಿಯನ್ನು ಕಾಡಿದ ಸಂಗತಿಗಳು. ಕೇರಳದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಯ ಸುತ್ತಮುತ್ತಲಿನ ಪರಿಸರ ಸಾರಾ ಅವರ ಕಥೆ ಕಾದಂಬರಿಗಳ ಕಾರ್ಯಕ್ಷೇತ್ರ. ಮಲಯಾಳಂನ ಪ್ರಮುಖ ಲೇಖಕರಲ್ಲಿ ಒಬ್ಬರಾದ ವೈಕಂ ಮಹಮ್ಮದ್ ಬಶೀರ್ ಅವರ ಕಥೆ ಕಾದಂಬರಿಗಳಲ್ಲಿ ಚಿತ್ರಿತವಾದ ಮುಸ್ಲಿಂ ಕೌಟುಂಬಿಕ ಪರಿಸರಕ್ಕಿಂತ ಸಾರಾ ಅವರ ಬರವಣಿಗೆ ಭಿನ್ನ. ರವೀಂದ್ರನಾಥ ಟ್ಯಾಗೋರರ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಆದಂತೆ ತನ್ನದೂ ಒಂದು ಕಿರು ಪ್ರಯತ್ನ ಎಂದು ಹೇಳುತ್ತಾರೆ ಅವರು.

ಸಾರಾ ಅಬೂಬಕ್ಕರ್ ಅವರ ಕೃತಿಗಳಲ್ಲಿ ಮತ್ತೊಂದು ಹೆಗ್ಗಳಿಕೆಯೆಂದರೆ, ಮೊದಲ ಬಾರಿಗೆ ಕನ್ನಡ ಲೇಖಕಿಯರ ಕೃತಿಗಳಲ್ಲಿ ಮಾಂಸ, ಮೀನುಗಳ ಅಡಿಗೆಯ ವಿವರ ಬರುವುದು. ನಫೀಸ ಎಂಬ ಎಳೆಯ ಗೃಹಿಣಿ ತೆಳ್ಳನೆಯ ಅಕ್ಕಿ ರೊಟ್ಟಿ ಮಾಡಿ ಕಾಯಿಹಾಲು ಹಚ್ಚಿ ಮಾಡಿದ ರೊಟ್ಟಿಯನ್ನು ಅವಿಭಕ್ತ ಕುಟಂಬದಲ್ಲಿ ಅವಳ ಗಂಡನಿಗೆ ಇನ್ಯಾರೋ ಬಡಿಸುತ್ತಾರೆ. ಅವನು ರುಚಿಯನ್ನು ಮೆಚ್ಚಿ ತಿನ್ನುತ್ತಾನೆ. ಆದರೆ ಅದು ತನ್ನ ಹೆಂಡತಿ ಮಾಡಿದ್ದು ಎಂದು ತಿಳಿಯುವುದಿಲ್ಲ. ಅವಳ ಒಳ್ಳೆಯ ಗುಣಗಳು ಅವಳ ಗಂಡನಿಗೆ ಕೊನೆಗೂ ತಿಳಿಯದೆ ಅವಳ ಬದುಕು ದುರಂತವಾಗುತ್ತದೆ. ತಮ್ಮ ಹೆಚ್ಚಿನ ಕೃತಿಗಳಲ್ಲಿ, ತಲಾಖ್, ಬಹುಪತ್ನಿತ್ವ, ಘೋಶಾದ ತೊಂದರೆಗಳು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮಹತ್ವ ಇಲ್ಲದೆ ಇರುವುದು- ಇವುಗಳನ್ನು ಚಿತ್ರಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ’ಚಂದ್ರಗಿರಿ ತೀರದಲ್ಲಿ’ ಕಾದಂಬರಿಯಲ್ಲಿ ನಾದಿರ ಮಸೀದಿಯ ಕೊಳದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಶಕ್ತವಾಗಿ ಪ್ರತಿಭಟನೆ ಮಾಡಿದ್ದರೆ, ’ನಿಯಮ ನಿಯಮಗಳ ನಡುವೆ’ ಎಂಬ ಕತೆಯಲ್ಲಿ ಪ್ರಕೃತಿ ನಿಯಮ ಮತ್ತು ಮನುಷ್ಯ ನಿರ್ಮಿತ ಧಾರ್ಮಿಕ ನಿಯಮಗಳ ನಡುವೆ ಸಿಲುಕಿ ನಲಗುವ ಹೆಣ್ಣಿನ ಕಥೆಯನ್ನು ಮನಕಲುಕುವಂತೆ ನಿರೂಪಿಸಿದ್ದಾರೆ. ಈ ಕಥೆ ಪಿಯು ತರಗತಿಗೆ ಪಠ್ಯವಾಗಿತ್ತು. ಅಧ್ಯಾಪಕರ ಕಾರ್ಯಾಗಾರ ಒಂದರಲ್ಲಿ ಈ ಕಥೆಯನ್ನು ಕುರಿತು ನಾನು ಮಾತನಾಡಬೇಕಿತ್ತು. ಕಥೆಯ ಕುರಿತು ವಿಶ್ಲೇಷಣೆಗೆ ತೊಡಗಿದಾಗ ಹಲವು ಜನ ಪುರುಷ ಅಧ್ಯಾಪಕರು, ಈ ಕಥೆಯನ್ನು ಪಠ್ಯವಾಗಿರಿಸಿದ್ದರ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿದರು. ಬಸಿರು, ಮುಟ್ಟು ಇತ್ಯಾದಿ ಸಂಗತಿಗಳ ಕುರಿತು ತರಗತಿಯಲ್ಲಿ ಹೇಗೆ ಹೇಳುವುದು, ಇದೆಂತಹ ಕಥೆ ಎಂದು ಕೂಗಾಡಿದರು. ಅವರ ಅಜ್ಞಾನಕ್ಕೆ ಮರುಗಬೇಕಾಯಿತು. ಹೀಗೆ ಸಾರಾ ಪುರುಷ ಅಹಂಗೆ ಹಲವು ರೀತಿಯಲ್ಲಿ ಸವಾಲಾಗಿದ್ದರು. ಹಾಗೆಯೇ ಎಲ್ಲಾ ಧರ್ಮಗಳ ಮೂಲಭೂತವಾದಿಗಳಿಗೂ! ಅವರು ಅನುವಾದಿಸಿದ ’ಧರ್ಮದ ಹೆಸರಿನಲ್ಲಿ’ ಪುಸ್ತಕದ ಕುರಿತು ಮರು ಚರ್ಚೆ ಆಗಬೇಕಿದೆ. ಅದು ಮರುಮುದ್ರಣ ಕಾಣಬೇಕಿದೆ.

ವಾಸ್ತವಕ್ಕೆ ದೂರವಾದ ಕಲ್ಪಿತ ಕಥೆ ಕಾದಂಬರಿಗಳ ಹಿಂಸೆ ಕ್ರೌರ್ಯವನ್ನು ಸಂಪ್ರದಾಯಸ್ಥ ಜನ ಪ್ರಶ್ನಿಸುವುದಿಲ್ಲ. ಆದರೆ ನಿಜವಾಗಿ ಸಮಾಜದಲ್ಲಿರುವ ಹೆಣ್ಣಿನ ಶೋಷಣೆಯನ್ನು ಕುರಿತು ಬರೆದರೆ ಸಂಪ್ರದಾಯಸ್ಥರಿಗೆ ಸಹಿಸಲು ಆಗುವುದಿಲ್ಲ. ಇದು ನಮ್ಮ ಸದ್ಯದ ಸಾಮಾಜಿಕ ಪರಿಸ್ಥಿತಿ. ಸಾರಾ ಅಬೂಬಕ್ಕರ್ ತರಹದ ಲೇಖಕಿಯರು ಮತ್ತೆ ಹುಟ್ಟಿ ಬರಬೇಕು. ಅವರಿಗೆ ಹೃದಯಪೂರ್ವಕ ನಮನಗಳು.

ಡಾ. ಎಲ್.ಸಿ ಸುಮಿತ್ರಾ
ಬರಹಗಾರ್ತಿ, ತೀರ್ಥಹಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...