Homeಪುಸ್ತಕ ವಿಮರ್ಶೆಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ'ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

ಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ’ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

- Advertisement -
- Advertisement -

ಉಶಿಗೋಮೆ – ಕಾಗುರಾಜಕದ ಹಾದಿಯಲ್ಲೊಂದು ಓಣಿಯಿತ್ತು. ಅದು ಫ್ಯೂಡಲ್ ಯುಗದ ಪ್ರತಿರೂಪದಂತಿತ್ತು. ಆ ಓಣಿಯಲ್ಲಿನ ಕಟ್ಟಡಗಳ ಮರದ ಬಾಗಿಲುಗಳು ಗಾಜಿಗೆ ಬದಲಾಗಿತ್ತು ಅಷ್ಟೇ. ಅಲ್ಲಿ ಮೂರು ವಠಾರದಂತಹ ಕಟ್ಟಡಗಳಿದ್ದವು. ನನ್ನಣ್ಣ ಉವೇದ್ ಇಲ್ಲಿಯೇ ಒಬ್ಬ ಹೆಂಗಸು ಮತ್ತು ಆಕೆಯ ತಾಯಿಯೊಂದಿಗೆ ಇದ್ದ. ಅನಾರೋಗ್ಯದಿಂದ ಚೇತರಿಸಿಕೊಂಡ ಮೇಲೆ ನಾನಿದ್ದ ಕೋಣೆಯನ್ನು ಖಾಲಿಮಾಡಿ ಅವರೊಂದಿಗೆ ಇರಲು ಹೋದೆ.

ಸಿನಿಮಾ ಪ್ಯಾಲೇಸ್ ಥಿಯೇಟರಿನ ಹಿಂಭಾಗದಲ್ಲಿ ನನ್ನನ್ನು ಮೊದಲ ಸಲ ನೋಡಿ ಅಣ್ಣ ಗಾಬರಿಯಾದ. “ಅಕಿರಾ ಏನಾಯ್ತು? ಹುಷಾರಿಲ್ಲವಾ?” ಗಾಬರಿಯಿಂದ ಕೇಳಿದ. “ಹಾಗೇನಿಲ್ಲ. ಸ್ವಲ್ಪ ಸುಸ್ತಾಗಿದಿನಿ ಅಷ್ಟೇ” ಎಂದೆ. ನನ್ನನ್ನೇ ದಿಟ್ಟಿಸಿ ನೋಡುತ್ತಾ “ಸ್ವಲ್ಪ ಸುಸ್ತಾದ ಹಾಗೆ ಕಾಣ್ತಿಲ್ಲ. ಮನೆಗೆ ನಡಿ” ಅಂದ. ಅಣ್ಣನ ಜೊತೆ ಅವನ ಮನೆಗೆ ಬಂದೆ. ಒಂದು ತಿಂಗಳ ನಂತರ ಅಲ್ಲೇ ಹತ್ತಿರವಿದ್ದ ಮತ್ತೊಂದು ಕೋಣೆಗೆ ವಾಸ್ತವ್ಯ ಬದಲಿಸಿದೆ. ಆದರೂ ಹೆಚ್ಚಿನ ಸಮಯವನ್ನು ಅಣ್ಣನ ಮನೆಯಲ್ಲೇ ಕಳೆಯುತ್ತಿದ್ದೆ. ಮನೆಬಿಟ್ಟು ಬರುವಾಗ ಅಣ್ಣನ ಜೊತೆ ಇರುವೆ ಎಂದು ಅಪ್ಪನಿಗೆ ಸುಳ್ಳು ಹೇಳಿದ್ದೆ. ಈಗ ಆ ಸುಳ್ಳು ನಿಜವಾಗಿತ್ತು.

ಅಣ್ಣನಿದ್ದ ವಠಾರ ಹಾಗೂ ಓಣಿಗಳು ರಾಕುಗೋ (ಜಪಾನಿನ ಕತೆ ಹೇಳುವ ಪ್ರದರ್ಶನಕಲೆ) ಕತೆ ಹೇಳುವವರ ಕತೆಗಳ ಆವಾಸಸ್ಥಾನವಿದ್ದಂತಿತ್ತು. ಅಲ್ಲಿದ್ದ ಒಂದೇ ಬಾವಿಯಿಂದ ಜನ ನೀರು ಸೇದಿಕೊಳ್ಳುತ್ತಿದ್ದರು. ಅಲ್ಲಿನ ನಿವಾಸಿಗಳು ಸಂಪ್ರದಾಯಬದ್ಧವಾದ ಟೋಕಿಯನ್ನರು. ನನ್ನಣ್ಣ ಈ ಪರಿಸರದಲ್ಲಿ ಒಡೆಯನಿಲ್ಲದ ಸಮುರಾಯ್‌ನಂತೆ, ಏಳನೇ ಶತಮಾನದಲ್ಲಿ ಯುದ್ಧಕ್ಕೆ ಹೆದರಿದ ಹೊರಿಬೆ ಯಸುಯಿ ರೀತಿ ಇದ್ದ. ಅವನನ್ನು ಅಲ್ಲಿ ಬಹಳ ಭಕ್ತಿ, ಗೌರವಗಳಿಂದ ಕಾಣುತ್ತಿದ್ದರು.

ಈ ಕಟ್ಟದಲ್ಲಿನ ಪ್ರತಿ ಮನೆಯನ್ನು ಮೂರು ಭಾಗಗಳಾಗಿ ವಿಭಜಿಸಿದ್ದರು. ಪ್ರತಿಯೊಂದು ಮನೆಯ ಮುಂಭಾಗದಲ್ಲಿ 4ಬೈ4 ಅಡಿ ಜಾಗವಿರುತ್ತಿತ್ತು. ಅದಾದ ಮೇಲೆ 12 ಅಡಿ ಜಾಗದಲ್ಲೊಂದು ಕೋಣೆ ಹಾಗೂ ಹಿಂಭಾಗಕ್ಕೆ ಅಡುಗೆಮನೆ, ಬಚ್ಚಲುಮನೆ ಇರುತ್ತಿತ್ತು. ಬಹಳ ಇಕ್ಕಟ್ಟಾದ ಜಾಗ. ಅಣ್ಣ ಅಷ್ಟೊಂದು ಸಂಪಾದಿಸುತ್ತಿದ್ದರೂ ಯಾಕೆ ಇಂತಹ ಸ್ಥಳದಲ್ಲಿದ್ದಾನೆ ಎನ್ನುವುದು ಅರ್ಥವಾಗಿರಲಿಲ್ಲ. ದಿನಕಳೆದಂತೆ ಅಲ್ಲಿನ ಬದುಕಿನ ಶೈಲಿ ಇಷ್ಟವಾಗತೊಡಗಿತು.

ಇದನ್ನೂ ಓದಿ: ಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

ಆ ಪ್ರದೇಶದಲ್ಲಿ ಗಾರೆ ಕೆಲಸಗಾರರು, ಬಡಗಿಗಳು, ಪ್ಲಾಸ್ಟಿಂಗ್ ಮಾಡುವವರು ಹೀಗೆ ವಿವಿಧ ವೃತ್ತಿಯ ಜನರಿದ್ದರು. ಬಹುತೇಕ ಮಂದಿಗೆ ಇಂತಹದ್ದೇ ಎನ್ನುವ ಕೆಲಸವಿರಲಿಲ್ಲ. ನಿರ್ದಿಷ್ಟ ಆದಾಯ ಮೂಲವಿರಲಿಲ್ಲ. ಅದ್ಹೇಗೋ ಅವರೆಲ್ಲ ಒಬ್ಬರೊಂದಿಗೆ ಒಬ್ಬರು ಹಂಚಿಕೊಳ್ಳುತ್ತಾ ಬದುಕುತ್ತಿದ್ದರು. ನರಕವಾಗಬಹುದಾಗಿದ್ದ ಬದುಕನ್ನು ತಮ್ಮ ಹಾಸ್ಯಪ್ರಜ್ಞೆಯಿಂದ ಜೀವಂತವಾಗಿರಿಸಿದ್ದರು. ಸಣ್ಣ ಮಕ್ಕಳು ಕೂಡ ನಗೆಚಟಾಕಿಗಳನ್ನು ಹಾರಿಸುತ್ತಿದ್ದರು.

ದೊಡ್ಡವರ ನಡುವಿನ ಮಾತುಕತೆ ಹೀಗಿರುತ್ತಿತ್ತು- “ಬೆಳಗ್ಗೆ ಮಹಡಿ ಮೇಲೆ ಮಲಗಿದ್ದೆ. ಇದ್ದಕ್ಕಿದ್ದ ಹಾಗೆ ಪಕ್ಕದ ಮನೆ ಕಡೆಯಿಂದ ಸುತ್ತಿದ್ದ ಚಾಪೆ ಹಾರಿಬಂತು. ನೋಡ್ತಿನಿ ಪಕ್ಕದ್ಮನೆಯವನು ಆ ಚಾಪೆ ಮಧ್ಯೆ ಇದ್ದ. ಅವನ ಹೆಂಡತಿ ಮನೆಕ್ಲೀನಿಂಗ್ ಭಯಂಕರ.” ಇದಕ್ಕೆ ಇನ್ನೊಬ್ಬ ಹೇಳುತ್ತಿದ್ದ “ಏ ಹಾಗೇನಿಲ್ಲ. ಗಂಡನಿಗೆ ನೋವಾಗಬಾರದು ಅಂತ ಚಾಪೆಯಲ್ಲಿ ಸುತ್ತಿ ಎಸೆದಿದಾಳೆ ಅಷ್ಟೇ.”

ಮೊದಲೇ ಇಕ್ಕಟ್ಟಾಗಿರೋ ಮನೆಯೊಳಗೆ ಕೋಣೆಗಳನ್ನು ಮಾಡಿ ಅದನ್ನು ಬಾಡಿಗೆಗೆ ಕೊಡುತ್ತಿದ್ದರು. ಅಂತಹದ್ದೇ ಒಂದು ಕೋಣೆಯಲ್ಲಿ ಇದ್ದವನೊಬ್ಬ ಮೀನು ಮಾರುತ್ತಿದ್ದ. ಪ್ರತಿದಿನ ಸೂರ್ಯ ಹುಟ್ಟೋದಕ್ಕೂ ಮುಂಚೆ ನದಿಗೆ ಹೋಗಿ ಮೀನು ಹಿಡಿಯುತ್ತಿದ್ದ. ತಿಂಗಳೆಲ್ಲ ಹೀಗೆ ಮೈಮುರಿದು ಕೆಲಸ ಮಾಡುತ್ತಿದ್ದ. ತಿಂಗಳ ಕೊನೆಯಲ್ಲಿ ಚಂದದ ಬಟ್ಟೆ ಹಾಕಿಕೊಂಡು ಸೂಳೆಯರ ಮನೆಗೆ ಹೋಗುತ್ತಿದ್ದ. ಇಡೀ ತಿಂಗಳು ಅವನು ದುಡಿದಿದ್ದು ಸಾರ್ಥಕವಾಗುವುದು ಹೀಗೆ ಮಾಡಿದಾಗಲೇ ಅಂದುಕೊಂಡಹಾಗಿತ್ತು.

ಇವರುಗಳ ನಡುವೆ ಇದ್ದಾಗ ನನಗೆ ಹದಿನೆಂಟನೆಯ ಶತಮಾನದ ಸಾಂಬಾ, ಕ್ಯೋಡನ್‌ರ ಕತೆಗಳ ಲೋಕದಲ್ಲಿದ್ದಂತೆ ಅನ್ನಿಸೋದು. ಇವರಿಂದ ಬಹಳಷ್ಟನ್ನು ಕಲಿತೆ. ಪಕ್ಕದ ಮನೆಯಲ್ಲಿದ್ದ ಮುದುಕ ಕತೆಹೇಳುವ ಪ್ರದರ್ಶನ ಮಂದಿರದ ಹೊರಗಡೆ ಚಪ್ಪಲಿ ಕಾಯುತ್ತಿದ್ದ ಇಲ್ಲವೇ ಸಿನಿಮಾ ಥಿಯೇಟರುಗಳಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ. ಇಂತಹವರಿಗೆ ಅಲ್ಲಿನ ಪ್ರದರ್ಶನಗಳಿಗೆ ಪಾಸು ಸಿಗುತ್ತದೆ. ಆ ಪಾಸುಗಳನ್ನು ತಮ್ಮ ನೆರೆಹೊರೆಯವರಿಗೆ ಬಾಡಿಗೆಗೆ ಕೊಡುತ್ತಿದ್ದರು. ಈ ತರಹದ ಪಾಸ್ ಪಡೆದು ಪ್ರತಿದಿನ ಬೆಳಗ್ಗೆ, ಸಂಜೆ ಸಿನಿಮಾ ನೋಡುತ್ತಿದ್ದೆ ಇಲ್ಲವೇ ಕತೆಕೇಳಲು ಹೋಗುತ್ತಿದ್ದೆ.

ಆ ಸಮಯದಲ್ಲಿ ಕಾಗುರಾಜಕದಲ್ಲಿ ಎರಡು ಸಿನಿಮಾ ಥಿಯೇಟರ್‌ಗಳಿದ್ದವು. ಉಶಿಗೋಮೆಕಾನಿನಲ್ಲಿ ವಿದೇಶಿ ಚಿತ್ರಗಳು ಹಾಗೂ ಬುನ್ಮೇಕಾನಿನಲ್ಲಿ ಜಪಾನಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಮೂರು ಕತೆಹೇಳುವ ಪ್ರದರ್ಶನ ಮಂದಿರಗಳಿದ್ದವು. ಕಾಗುರಾಜಕ ಎನ್ಬುಜೊ ಅಂತ ಒಂದರ ಹೆಸರು. ಉಳಿದೆರಡರ ಹೆಸರು ನೆನಪಿಲ್ಲ. ಎರಡು ಥಿಯೇಟರುಗಳನ್ನು ಹೊರತುಪಡಿಸಿ ಅಣ್ಣ ಪರಿಚಯಿಸಿದ್ದ ಸ್ನೇಹಿತರ ಥಿಯೇಟರುಗಳಲ್ಲೂ ನನಗಿಷ್ಟವಾಗುವ ಸಿನಿಮಾಗಳನ್ನು ನೋಡುತ್ತಿದ್ದೆ. ಕತೆಹೇಳುವ ಪ್ರದರ್ಶನಗಳು ಅಷ್ಟು ರುಚಿಸಲು ಕಾರಣ ನಾನಿದ್ದ ಪರಿಸರ. ಭವಿಷ್ಯದಲ್ಲಿ ಈ ಕತೆಹೇಳುವ, ಹಾಡುಹೇಳುವ ಕಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎನ್ನುವುದರ ಕಲ್ಪನೆಯೂ ಇಲ್ಲದೆ ಇವುಗಳನ್ನು ಆಸ್ವಾದಿಸುತ್ತಿದ್ದೆ.

ಹೆಸರಾಂತ ಕಲಾವಿದರ ಪ್ರದರ್ಶನಗಳಲ್ಲದೆ ಹಾಸ್ಯಗಾರರ ಪ್ರದರ್ಶನಗಳನ್ನು ಇಲ್ಲಿ ನೋಡಿದ್ದೆ. ಅವರು ಈ ಪ್ರದರ್ಶನ ಮಂದಿರಗಳನ್ನು ಬಾಡಿಗೆಗೆ ಪಡೆದು ತಮ್ಮ ಪ್ರದರ್ಶನಗಳನ್ನು ನೀಡುತ್ತಿದ್ದರು. ಅಂತಹ ಒಂದು ಪ್ರದರ್ಶನ ನೆನಪಿದೆ. “ಮೂರ್ಖನ ಸೂರ್ಯಾಸ್ತ” ಎಂದು ಅದರ ಹೆಸರು. ವ್ಯಕ್ತಿಯೊಬ್ಬ ಮುಳುಗುತ್ತಿರುವ ಸೂರ್ಯ, ಆಕಾಶ, ಗೂಡಿಗೆ ಮರಳುತ್ತಿರುವ ಹಕ್ಕಿಗಳನ್ನು ನೋಡುತ್ತಿರುತ್ತಾನೆ. ಆ ದೃಶ್ಯ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಆ ಪ್ರದರ್ಶನ ನೀಡುತ್ತಿದ್ದ ವ್ಯಕ್ತಿ ಹೊಮ್ಮಿಸುತ್ತಿದ್ದ ಭಾವನೆಗಳನ್ನು ನೋಡಿ ಮನದುಂಬಿತು.

ಇದೇ ಸಮಯದಲ್ಲಿ ಟಾಕಿ ಚಿತ್ರಗಳು ಬರಲಾರಂಭಿಸಿದವು. ಅವುಗಳಲ್ಲಿ ಕೆಲವು ನೆನಪಿದೆ- All Quiet on the Western Front – Lewis Milestone, The Last Company – Curtis Bernhardt, Westfront IQI8 – G. W. Pabst, Hell’s Heroes – William Wyler, Sous les toits de Paris – Rene Clair, The Blue Angel – Josef von Sternberg, The Front Page – Milestone, Street Scene – King Vidor, Morocco, Shanghai Express – von Sternberg, City Lights – Charles Chaplin, The Threepenny Opera – Pabst, Der Kongress tanzt – Erik Charell.

ಟಾಕಿ ಚಿತ್ರಗಳ ಆರಂಭದೊಂದಿಗೆ ಮೂಕಿ ಚಿತ್ರಗಳ ಯುಗ ಅಂತ್ಯಗೊಂಡಿತು. ಅದರೊಂದಿಗೆ ನಿರೂಪಕರ ಅವಶ್ಯಕತೆಯೂ ಮುಗಿಯಿತು. ಅಣ್ಣ ಕೆಲಸ ಕಳೆದುಕೊಂಡ. ಅಲ್ಲಿಯವರೆಗೆ ಅವನ ಜೀವನ ಚೆನ್ನಾಗಿ ಸಾಗುತ್ತಿತ್ತು. ಆ ವೇಳೆಗೆ ಅವನು ನಿರೂಪಕನಾಗಿ ಸಾಕಷ್ಟು ಹೆಸರುವಾಸಿಯಾಗಿದ್ದ. ಕ್ರಮೇಣ ಎಲ್ಲ ಬದಲಾಗಲಾರಂಭಿಸಿತು. ನಾನಷ್ಟು ಇಷ್ಟ ಪಡುತ್ತಿದ್ದ ಓಣಿಯ ಬದುಕಿನ ಕರಾಳ ಮುಖಗಳು ತೆರೆದುಕೊಳ್ಳಲಾರಂಭಿಸಿತು. ಇದು ಮನುಷ್ಯ ಬದುಕಿನ ವಾಸ್ತವ. ಬೆಳಕು ಕತ್ತಲೊಳಗೆ ಕರಗಲಾರಂಭಿಸುತ್ತದೆ. ನನಗದು ಮೊದಲ ಅನುಭವವಾದ್ದರಿಂದ ಆ ಕುರಿತು ಯೋಚಿಸಲಾರಂಭಿಸಿದೆ.

ಇಲ್ಲಿ ಕೂಡ ಎಲ್ಲ ಕಡೆಯಂತೆ ಕೆಟ್ಟ ಸಂಗತಿಗಳು ಘಟಿಸಿದವು. ಮುದುಕನೊಬ್ಬ ತನ್ನ ಮೊಮ್ಮಗಳ ಮೇಲೆ ಅತ್ಯಾಚಾರ ಮಾಡಿದ. ಹೆಂಗಸೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಾಡುತ್ತಾ ಇಡೀ ಕಟ್ಟಡದ ರಾತ್ರಿಗಳ ನೆಮ್ಮದಿ ಹಾಳುಗೆಡವಿದಳು. ಒಂದು ರಾತ್ರಿ ಅವಳು ನೇಣು ಹಾಕಿಕೊಳ್ಳುತ್ತಿ ರುವುದನ್ನು ನೋಡಿದ ಪಕ್ಕದ ಮನೆಯವನು ನಕ್ಕನಂತೆ. ಆಕೆ ಮೌನವಾಗಿ ಬಾವಿಗೆ ಹಾರಿ ಪ್ರಾಣಬಿಟ್ಟಳು. ಮಲಮಕ್ಕಳ ಕತೆಗಳು ಹರಿದಾಡಲಾ ರಂಭಿಸಿದವು. ಇವೆಲ್ಲ ಮನಸ್ಸಿಗೆ ಬೇಸರ ಉಂಟುಮಾಡುತ್ತಿತ್ತು. ಅಂತಹ ಕತೆಯೊಂದನ್ನು ಹೇಳುತ್ತೇನೆ.

ಮಲತಾಯಿ ತನ್ನ ಮಲಮಗುವಿನ ವಿಷಯದಲ್ಲೇಕೆ ಕ್ರೂರಿಯಾಗಿರಬೇಕು? ಅವಳ ಗಂಡನ ಮೊದಲ ಹೆಂಡತಿಯ ಬಗೆಗಿನ ದ್ವೇಷದಿಂದ ಎನ್ನುವುದು ಸಮರ್ಥನೀಯವಲ್ಲ. ಈ ಅಪರಾಧಕ್ಕಿರುವ ಒಂದೇ ವಿವರಣೆ ಅಜ್ಞಾನ. ಅಜ್ಞಾನವೆನ್ನುವುದು ಮನುಷ್ಯ ಪ್ರಾಣಿಯಲ್ಲಿರುವ ಒಂದು ಬಗೆಯ ಹುಚ್ಚು. ದುರ್ಬಲರಾದ ಮಕ್ಕಳನ್ನು ಹಿಂಸಿಸುವವರು ವಾಸ್ತವವಾಗಿ ಹುಚ್ಚರು. ಭಯಂಕರವಾದ ಸಂಗತಿಯೆಂದರೆ ವೈಯಕ್ತಿಕ ನೆಲೆಯಲ್ಲಿ ಹೀಗೆ ಹುಚ್ಚರಾಗಿರುವವರು ಸಾರ್ವಜನಿಕವಾಗಿ ಬಹಳ ಮುಗ್ಧರೆನ್ನುವಂತೆ ಇರುತ್ತಾರೆ.

ಇದನ್ನೂ ಓದಿ: ಸುಸ್ಥಿರ ಕೃಷಿ ಚಿಂತನೆಗೊಂದು ಮೌಲಿಕ ಕೈಪಿಡಿ- “ಬೆಳಕಿನ ಬೇಸಾಯ”

ಹಳೆಯ ಕತೆಯೊಂದರಲ್ಲಿ ಮಲತಾಯಿಯು ಮಲಮಗುವನ್ನು ಸುಡುವುದಕ್ಕಾಗಿ ಬಳಸುವ ವಸ್ತುವನ್ನು ತರಲು ಕಳಿಸುತ್ತಾಳೆ. ಅದು ತನ್ನನ್ನೇ ಸುಡಲು ಎಂದು ಗೊತ್ತಿಲ್ಲದ ಮಗು ಅದನ್ನು ತರಲು ಹೋಗುತ್ತದೆ. ಈ ಕತೆ ನನ್ನನ್ನು ಬಹಳ ಕಾಡಿತ್ತು. ಒಂದು ದಿನ ಅಣ್ಣನ ಮನೆಯಲ್ಲಿದ್ದಾಗ ಪಕ್ಕದಮನೆಯಾಕೆ ಬಿಕ್ಕುತ್ತಾ ಬಂದಳು. ಅವಳು ಅಳುತ್ತಿದ್ದ ರೀತಿಯನ್ನು ನೋಡಿ ಸಹಿಸಲಾಗಲಿಲ್ಲ. ಏನಾಯಿತು ಅಂತ ಕೇಳಿದಾಗ ಅವಳ ಪಕ್ಕದ ಮನೆಯಾಕೆ ಮಲಮಗಳನ್ನು ಹಿಂಸಿಸುತ್ತಿರುವುದಾಗಿ ಹೇಳಿದಳು. ಆ ಹುಡುಗಿ ಅಳುತ್ತಿರುವುದನ್ನು ಕೇಳಿ ತಡೆಯಲಾಗದೆ ಪಕ್ಕದ ಮನೆಯವರ ಅಡುಗೆಮನೆಯಲ್ಲಿ ಇಣುಕಿ ನೋಡಿದ್ದಳು. ಅಲ್ಲಿ ಹುಡುಗಿಯನ್ನು ಕಟ್ಟಿಹಾಕಿ ಆ ಮಲತಾಯಿ ಹುಡುಗಿಯ ಹೊಟ್ಟೆಯನ್ನು ಸುಡುತ್ತಿದ್ದಳಂತೆ. ಅವಳು ಇನ್ನೂ ಏನೋ ಹೇಳುವವಳಿದ್ದಳು. ಹೊರಗೆ ನೋಡಿ ಸುಮ್ಮನಾಗಿಬಿಟ್ಟಳು.

ಅಲಂಕರಿಸಿಕೊಂಡ ಮಹಿಳೆಯೊಬ್ಬಳು ರಸ್ತೆಯಲ್ಲಿ ಹೋಗುತ್ತಿದ್ದಳು. ಆಕೆ ನಮ್ಮನ್ನು ನೋಡಿ ನಸುನಕ್ಕು ವಂದಿಸಿ ಮುಂದೆ ಸಾಗಿದಳು. ಇಷ್ಟು ಹೊತ್ತು ಅಳುತ್ತಿದ್ದ ಹೆಂಗಸು ಅವಳನ್ನೇ ಬೆರಗಿನಿಂದ ನೋಡುತ್ತಾ “ಸ್ವಲ್ಪಹೊತ್ತಿಗೆ ಮುಂಚೆ ರಾಕ್ಷಸಿಯಂತಿದ್ದಳು. ಈಗ ನೋಡಿದರೆ ಕುರಿಮರಿಯಂತಿದ್ದಾಳೆ. ಪಿಶಾಚಿ!” ಅಂದಳು. ಆ ಹುಡುಗಿಯನ್ನು ಹಿಂಸಿಸುತ್ತಿದ್ದ ಮಲತಾಯಿ ಆಗಷ್ಟೇ ಬೀದಿಯಲ್ಲಿ ಹೋದ ಮಹಿಳೆ ಎಂದು ನಂಬಲಾಗಲಿಲ್ಲ. ಪಕ್ಕದಮನೆಯಾಕೆ ನನ್ನತ್ತ ತಿರುಗಿ “ಅಕಿರಾ, ದಯವಿಟ್ಟು ಆ ಹುಡುಗಿಗೆ ಸಹಾಯ ಮಾಡು. ಅವಳನ್ನು ಬಿಡಿಸು” ಎಂದು ಬೇಡಿಕೊಂಡಳು. ಮಾತಿಲ್ಲದೆ, ಅಪನಂಬಿಕೆಯಲ್ಲೇ ಅವಳನ್ನು ಹಿಂಬಾಲಿಸಿದೆ.

ಕಿಟಕಿಯಿಂದ ಇಣುಕಿದಾಗ ಅಲ್ಲಿ ಹುಡುಗಿಯನ್ನು ಕಟ್ಟಿಹಾಕಿರುವುದು ಕಾಣಿಸಿತು. ಕಿಟಕಿ ತೆರೆದಿತ್ತು. ಕಳ್ಳನಂತೆ ಒಳಹೊಕ್ಕೆ. ಕಟ್ಟಿದ್ದ ಕೈಗಳನ್ನು ಬಿಡಿಸುತ್ತಿದ್ದಂತೆ ಅವಳು ಸಿಟ್ಟಿನಿಂದ ನನ್ನ ನೋಡುತ್ತಾ “ಏನ್ಮಾಡ್ತಿದಿಯಾ? ನಿನ್ನ ಯಾರು ಸಹಾಯ ಮಾಡಲು ಕೇಳಿದರು!” ಅಂದಳು. ಆಶ್ಚರ್ಯದಿಂದ ಅವಳತ್ತ ನೋಡಿದೆ. “ಅವಳು ಬರೋ ಹೊತ್ತಿಗೆ ನನ್ನ ಕೈಗಳನ್ನು ಕಟ್ಟಿಹಾಕಿಲ್ಲ ಅಂದರೆ ಮತ್ತೆ ಹಿಂಸಿಸುತ್ತಾಳೆ.” ಕೆನ್ನೆಗೆ ಬಾರಿಸಿದಂತಾಯಿತು. ಅವಳ ಕೈಗಳ ಕಟ್ಟನ್ನು ಬಿಡಿಸಿದರೂ ಆ ಪರಿಸರದಿಂದ ಅವಳಿಗೆ ತಪ್ಪಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಅವಳಿಗೆ ಬೇರೆಯವರ ಕರುಣೆಯಿಂದ ಸಹಾಯಕ್ಕಿಂತ ಅಪಾಯವೇ ಹೆಚ್ಚಿತ್ತು. “ಬೇಗ ನನ್ನ ಕಟ್ಟಿಹಾಕು” ಅಂದಳು. ಅವಳು ಹೇಳಿದಂತೆ ಮಾಡದಿದ್ದರೆ ಕಚ್ಚಿ ಬಿಡ್ತಾಳೇನೋ ಅನ್ನಿಸಿ ಕಟ್ಟಿಹಾಕಿದೆ.

ಅಕಿರಾ ಕುರೋಸಾವಾ
ಜಪಾನಿನ ಖ್ಯಾತ ನಿರ್ದೇಶಕ. ’ರಾಶೋಮಾನ್’, ’ಇಕಿರು’, ’ಸೆವೆನ್ ಸಮುರಾಯ್’ ಅವರ ಪ್ರಖ್ಯಾತ ಸಿನಿಮಾಗಳಲ್ಲಿ ಕೆಲವು. ’ರ್‍ಯಾನ್’ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

(ಕನ್ನಡಕ್ಕೆ): ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ
ಕನ್ನಡದಲ್ಲಿ ಎಂ.ಎ ಮತ್ತು ಪಿ.ಎಚ್‌ಡಿ ಪದವೀಧರೆ. ಅನುವಾದದಲ್ಲಿ ಆಸಕ್ತಿ. ಅಬ್ಬಾಸ್ ಕಿಯರಸ್ತೋಮಿಯ ಕಿರು ಪದ್ಯಗಳ ಅನುವಾದ ಸಂಕಲನ ’ಹೆಸರಿಲ್ಲದ ಹೂ’, ಅನುವಾದಿತ ಲೇಖನಗಳ ಸಂಗ್ರಹ ’ಉರಿವ ಬನದ ಕೋಗಿಲೆಗಳು’ ಪ್ರಕಟವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ: ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

"ಮಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದೆ; ಇದೊಂದು ಐತಿಹಾಸಿಕ ಸಂದರ್ಭ. ರಾಜ್ಯ ಸರ್ಕಾರ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ನಿರ್ಧಾರವನ್ನು...

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...