Homeಅಂತರಾಷ್ಟ್ರೀಯಗಾಝಾದಲ್ಲಿ ಭಾರತೀಯ ಸೇನಾ ನಿವೃತ್ತ ಅಧಿಕಾರಿಯನ್ನು ಹತ್ಯೆ ಮಾಡಿದ ಇಸ್ರೇಲ್‌

ಗಾಝಾದಲ್ಲಿ ಭಾರತೀಯ ಸೇನಾ ನಿವೃತ್ತ ಅಧಿಕಾರಿಯನ್ನು ಹತ್ಯೆ ಮಾಡಿದ ಇಸ್ರೇಲ್‌

- Advertisement -
- Advertisement -

ರಫಾದಲ್ಲಿ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಭಾರತೀಯ ಸೇನಾ ನಿವೃತ್ತ ಅಧಿಕಾರಿ ಕರ್ನಲ್ ವೈಭವ್ ಅನಿಲ್ ಕಾಳೆ ಮೃತಪಟ್ಟಿದ್ದು, ಇಸ್ರೇಲ್‌ ಗಾಝಾದಲ್ಲಿ ನಡೆಸುತ್ತಿರುವ ಹತ್ಯಾಕಾಂಡಕ್ಕೆ ಮೊದಲ ಬಾರಿಗೆ ಭಾರತೀಯನೋರ್ವ ಬಲಿಯಾಗಿದ್ದಾರೆ.

ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ನಿವೃತ್ತ ಕರ್ನಲ್ ವೈಭವ್ ಅನಿಲ್ ಕಾಳೆ (46) ಮೃತರು. ಇವರು ವಿಶ್ವಸಂಸ್ಥೆಯ ವಾಹನದಲ್ಲಿ ರಾಫಾದಲ್ಲಿರುವ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ಯುನೈಟೆಡ್ ನೇಷನ್ಸ್ ಡಿಪಾರ್ಟ್ಮೆಂಟ್ ಆಫ್ ಸೇಫ್ಟಿ ಅಂಡ್ ಸೆಕ್ಯುರಿಟಿ (ಡಿಎಸ್ಎಸ್) ನ ಸಿಬ್ಬಂದಿ ಸದಸ್ಯರಾಗಿರುವ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಕುಟುಂಬ ಪುಣೆಯಲ್ಲಿ ವಾಸಿಸುತ್ತಿದೆ. ಘಟನೆಯಲ್ಲಿ ಕಾಳೆ ಜತೆಗಿದ್ದ ಮತ್ತೋರ್ವ ಡಿಎಸ್‌ಎಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

2022ರಲ್ಲಿ ಸೈನ್ಯದಿಂದ ನಿವೃತ್ತರಾದ ಅನಿಲ್ ಕಾಳೆ ಎರಡು ತಿಂಗಳ ಹಿಂದೆ ಯುಎನ್‌ಡಿಎಸ್‌ಎಸ್‌ಗೆ ಭದ್ರತಾ ಸಮನ್ವಯ ಅಧಿಕಾರಿಯಾಗಿ ಸೇರಿಕೊಂಡಿದ್ದರು ಮತ್ತು ಒಂದು ತಿಂಗಳ ಹಿಂದೆ ಗಾಝಾಗೆ ತೆರಳಿದ್ದರು. ವಿಶ್ವಸಂಸ್ಥೆಯ ವಾಹನದಲ್ಲಿ ನಾಮಫಲಕವಿದ್ದರೂ ದಾಳಿ ನಡೆಸಲಾಗಿದೆ. ಹಮಾಸ್-ಇಸ್ರೇಲ್ ಯುದ್ಧ ಘೋಷಣೆ ಬಳಿಕ ಸಂಭವಿಸಿದ ಜಾಗತಿಕ ಸಂಸ್ಥೆಯ ಮೊಟ್ಟಮೊದಲ ಅಂತರಾಷ್ಟ್ರೀಯ ಯೋಧನ ಸಾವು ಇದಾಗಿದೆ.

ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್, ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಮಾನವೀಯ ಕಾರ್ಯಕರ್ತರನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.

ಅನಿಲ್ ಕಾಳೆ ಎರಡು ದಶಕಗಳಿಗೂ ಹೆಚ್ಚು ಕಾಲ ಮಿಲಿಟರಿ ಪಡೆಯಲ್ಲಿ ಕೆಲಸ ನಿರ್ವಹಿಸಿದ್ದರು. ಭಾರತೀಯ ಸೇನಾ ಅಕಾಡೆಮಿಯಲ್ಲಿ ಉತ್ತೀರ್ಣರಾದ ಬಳಿಕ 11 ಜಮ್ಮು & ಕಾಶ್ಮೀರ ರೈಫಲ್‌ನಲ್ಲಿ ನಿಯೋಜಿತರಾದ ಕಾಳೆ, ಕಾಶ್ಮೀರ ಮತ್ತು ಈಶಾನ್ಯ ಭಾರತ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದರು. 2022ರಲ್ಲಿ ಅವಧಿಪೂರ್ವ ನಿವೃತ್ತಿ ಪಡೆದಿದ್ದರು.

ಇಸ್ರೇಲ್‌- ಗಾಝಾ ಮೇಲೆ ಕಳೆದ 8 ತಿಂಗಳಿನಿಂದ ದಾಳಿಯನ್ನು ನಡೆಸುತ್ತಿದ್ದು, ಮೃತರ ಸಂಖ್ಯೆ 35,000 ದಾಟಿದೆ. ಗಾಝಾದಲ್ಲಿ ಹತ್ಯಾಕಾಂಡ ಮುಂದುವರಿಸಿರುವ ಇಸ್ರೇಲ್‌, ಗಾಝಾದ ನಿರಾಶ್ರಿತರು ಆಶ್ರಯವನ್ನು ಪಡೆದುಕೊಂಡಿರುವ ರಫಾ ಮೇಲೆ ದಾಳಿಯನ್ನು ನಡೆಸುತ್ತಿದೆ. ಗಾಝಾದ ಉತ್ತರ ಪ್ರಾಂತವನ್ನು ಮರಳಿ ವಶಪಡಿಸಿಕೊಳ್ಳುವ ಜೊತೆಗೆ ದಕ್ಷಿಣ ಗಾಝಾದ ರಫಾ ನಗರದ ಮೇಲೆ ಆಕ್ರಮಣ ನಡೆಸುವ ಜಂಟಿ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ.

ರಫಾ ನಗರವನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಇಸ್ರೇಲ್‍ನ ಯುದ್ಧಟ್ಯಾಂಕ್‌ಗಳಿದ್ದು, ಇಸ್ರೇಲ್‌ ಆಕ್ರಮಣ ಮುಂದುವರಿಯುತ್ತಿದೆ ಎಂದು ವರದಿ ಹೇಳಿದೆ. ಗಾಝಾದ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸಾವಿರಾರು ಫೆಲೆಸ್ತೀನಿಯರು ಅತಂತ್ರ ಸ್ಥಿತಿಯಲ್ಲಿದ್ದು ಮಾನವೀಯ ಬಿಕ್ಕಟ್ಟು ಮತ್ತಷ್ಟು ಹದಗೆಡಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿವೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...