Homeಅಂತರಾಷ್ಟ್ರೀಯಗಡಿಗಳ ಕಲ್ಪನೆಯನ್ನು ತಿದ್ದುವ ಪುಸ್ತಕ: 'ಅಕ್ಸಾಯ್ ಚಿನ್' ವಿವಾದದ ಇತಿಹಾಸ.... ಪುಸ್ತಕ ಪರಿಚಯ

ಗಡಿಗಳ ಕಲ್ಪನೆಯನ್ನು ತಿದ್ದುವ ಪುಸ್ತಕ: ‘ಅಕ್ಸಾಯ್ ಚಿನ್’ ವಿವಾದದ ಇತಿಹಾಸ…. ಪುಸ್ತಕ ಪರಿಚಯ

- Advertisement -
- Advertisement -

| ನಿಖಿಲ್ ಕೋಲ್ಪೆ |

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಗಳ ಬಗ್ಗೆ ಯಡೂರ ಮಹಾಬಲ ಅವರು ಬರೆದಿರುವ ‘ಅಕ್ಸಾಯ್ ಚಿನ್’ ವಿವಾದದ ಇತಿಹಾಸ ಮತ್ತು ಪಶ್ಚಿಮ ಮತ್ತು ಮಧ್ಯಮ ಕ್ಷೇತ್ರಗಳಲ್ಲಿ ಭಾರತ ಮತ್ತು ಚೈನಾ ನಡುವಿನ ಗಡಿ ರೇಖೆ ವಿವಾದಗಳು ಎಂಬ ಪುಸ್ತಕ ಕೈಸೇರಿ ಕೆಲದಿನಗಳಾದವು. ಅವರು ಡೋಕ್ಲಾಂ ವಿವಾದದ ಬಗ್ಗೆ ಮತ್ತು ಗಡಿಯಲ್ಲಿಯೇ ಇರುವ ಅರುಣಾಚಲ ಪ್ರದೇಶ ಮತ್ತು ಟಿಬೆಟ್ ಬಗ್ಗೆಯೂ ಕುತೂಹಲಕಾರಿ ಮಾಹಿತಿ ಇರುವ ಪುಸ್ತಕಗಳನ್ನೂ ಬರೆದಿದ್ದಾರೆ. ‘ಚಿಂತನ ಚಿಲುಮೆ’ ಪ್ರಕಟಿಸಿರುವ ಈ ನಾಲ್ಕುನೂರಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಈ ಪುಸ್ತಕ ಗಿರೀಶ ತಾಳಿಕಟ್ಟೆ ಅವರು ರಚಿಸಿರುವ ಸುಂದರ ಮುಖಪುಟವನ್ನು ಹೊಂದಿದೆ.

ಮುಖ್ಯವಾಗಿ ಈ ಪುಸ್ತಕ ನನ್ನಲ್ಲಿ ಕೆಲವು ಪ್ರಶ್ನೆಗಳನ್ನೆಬ್ಬಿಸಿ ಚಿಂತಿಸುವಂತೆ ಮಾಡಿತು. ಪ್ರತಿಯೊಂದು ದೇಶವೂ ಇತಿಹಾಸದ ಉದ್ದಕ್ಕೂ ಗಡಿ ವಿವಾದಗಳ ಕಾರಣದಿಂದ ರಕ್ತದ ಹೊಳೆಯನ್ನೇ ಹರಿಸಿದೆ. ರಾಜ ಪ್ರಭುತ್ವಗಳಲ್ಲಿ ಸಾಮಾನ್ಯ ಪ್ರಜೆಗಳಿಗೆ ಏನೂ ಪ್ರಯೋಜನವಿಲ್ಲದ ಇಂತಹಾ ತಕರಾರು ಮತ್ತು ಯುದ್ಧಗಳು ವಿನಾಶವನ್ನೇ ತಂದಿವೆ. ರಾಜರುಗಳ ಆಕ್ರಮಣಶೀಲತೆ, ವಿಸ್ತರಣಾವಾದ ಮತ್ತು ಕೆಲವೊಮ್ಮೆ ಕ್ಷುಲ್ಲಕ ಕಾರಣಗಳೂ ಇದಕ್ಕೆ ಕಾರಣವಾಗಿದ್ದಿದೆ. ನಾವು ಶಾಲೆಗಳಲ್ಲಿ ಕಲಿತ ಇತಿಹಾಸದಲ್ಲಿ ರಾಜರುಗಳು ಮಾಡಿದ ಯುದ್ಧಗಳು ಮತ್ತು ಗಡಿ ವಿಸ್ತರಣೆಗಳನ್ನು ಮಹಾನ್ ಸಾಧನೆಗಳಂತೆ ಬಿಂಬಿಸಲಾಗಿದೆಯೇ ಹೊರತು, ಅವುಗಳಿಂದ ಸಾಮಾನ್ಯ ಪ್ರಜೆಗಳಿಗೆ ಆದ ಅನ್ಯಾಯ, ಅತ್ಯಾಚಾರಗಳ ಬಗ್ಗೆ ಚಕಾರವಿಲ್ಲ. (ಅಶೋಕನ ಕಾಲದಲ್ಲಿ ಕಳಿಂಗದಲ್ಲಿ ನಡೆದ ವಿನಾಶವನ್ನು ಹೊರತುಪಡಿಸಿ).

ಮುಖ್ಯವಾಗಿ ಭಕ್ತರಿಗೆ ಮಾತ್ರವಲ್ಲ ಸಾಮಾನ್ಯ ಜನರಿಗೂ ಗಡಿಯ ಕಲ್ಪನೆ ಇಲ್ಲ. ಅದು ರಾಮಣ್ಣ-ಭೀಮಣ್ಣರ ಎರಡು ಜಮೀನುಗಳ ಹಾಗೆ ನಡುವೆ ಬೇಲಿ ಹಾಕಿದ ಅಥವಾ ಹಾಕದಿರುವ ಸ್ಥಿತಿಯಲ್ಲಿರುತ್ತದೆಂದು ಹೆಚ್ಚಿನವರ ಕಲ್ಪನೆ. ಆದರೆ, ಕಿಲೋಮೀಟರ್‍ಗಟ್ಟಲೆ ಹರಿದಿರುವ ಹೆಚ್ಚಿನ ಗಡಿಗಳಲ್ಲಿ ಸರಿಯಾದ ಗುರುತುಗಳೂ ಇಲ್ಲ; ಮಾತ್ರವಲ್ಲ ನೂರಾರು ಚದರ ಕಿ.ಮೀ. ಜಾಗಗಳಿಗೆ ಇನ್ನೂ ಮನುಷ್ಯರು ಕಾಲಿಟ್ಟಿಲ್ಲ ಎಂಬುದು ಅವರ ಕಲ್ಪನೆಗೆ ನಿಲುಕುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಹುಲ್ಲು ಕೂಡಾ ಬೆಳೆಯುವುದಿಲ್ಲ! ಕೆಲವು ಪ್ರದೇಶಗಳಿಗೆ ವ್ಯೂಹಾತ್ಮಕ ಮಹತ್ವ ಮಾತ್ರ ಇರುತ್ತದೆ. (ಉದಾಹರಣೆಗೆ ಸಿಯಾಚಿನ್) ಆದರೆ, ದೇಶಗಳು ಗಡಿ ರಕ್ಷಣೆಯ ಹೆಸರಿನಲ್ಲಿ ಹಣ ಖರ್ಚು ಮಾಡುತ್ತವೆ. ಗಡಿ ಎಂಬುದು ಭಾವನಾತ್ಮಕ ವಿಷಯವಾಗಿರುವುದರಿಂದ ಅಧಿಕಾರಲ್ಲಿರುವವರು ಸುಲಭವಾಗಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಜೀವಂತ ಇರಿಸಿ, ಕಗ್ಗಂಟಾಗಿ ಮಾಡಿ ಬೇಕಾದಾಗಲೆಲ್ಲಾ ನಾಟಕವಾಡಿ, ಯುದ್ಧದ ಭ್ರಮೆ ಹುಟ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳುತ್ತಾರೆ.

ಲೇಖಕ ಯಡೂರ ಮಹಾಬಲ

ಈ ಪುಸ್ತಕದಲ್ಲಿ ಲೇಖಕರು ಭಾರತ-ಚೀನಾ ನಡುವಿನ ಪಶ್ಚಿಮ ಮತ್ತು ಮಧ್ಯ ಕ್ಷೇತ್ರಗಳ ಗಡಿ ವಿವಾದವನ್ನು ಕುರಿತು ಬರೆದಿದ್ದಾರೆ. (ಪೂರ್ವದ್ದು ಅವರ ಇತರ ಮೂರು ಪುಸ್ತಕಗಳಲ್ಲಿವೆ.) ಇಲ್ಲಿ ಆಕ್ಸಾಯ್ ಚಿನ್ ವಿವಾದದ ಬಗ್ಗೆ ಮಾತನಾಡುತ್ತಾ, ವಿವಿಧ ರಾಜರುಗಳ ಮತ್ತು ಬ್ರಿಟಿಷರ ಕಾಲದಲ್ಲಿ ನಡೆದ ಸರ್ವೇಗಳ ಬಗ್ಗೆ ವಿವರವಾಗಿ ಬರೆಯುತ್ತಾ, ಹಿಮ ಬೀಳುವ ದುರ್ಗಮ ಪ್ರದೇಶಗಳಲ್ಲಿ, ಕಾಲಾಳುಗಳು ಮತ್ತು ಕೆಲವೇ ಕುದುರೆ ಸವಾರರನ್ನು ಹಿಡಿದುಕೊಂಡು ಕಾಟಾಚಾರಕ್ಕೆ ಮಾಡಲಾದ ಸರ್ವೇಗಳ ಕಷ್ಟವನ್ನು ಅವರು ಕತೆಯೊಂದನ್ನು ಹೇಳುವ ರೀತಿಯಲ್ಲಿ ವಿವರಿಸಿದ್ದಾರೆ. ಕಟ್ಟುಕತೆಯಲ್ಲ; ಲಭ್ಯ ದಾಖಲೆಗಳನ್ನು ಉಲ್ಲೇಖಿಸಿ ಬರೆದ ಕತೆ.

ನಮಗೆ ಭಾರತೀಯರಿಗೆ ಇತಿಹಾಸವನ್ನು ಕತೆಯ ರೀತಿಯಲ್ಲಿ ಓದುವುದು, ಅರ್ಥಮಾಡಿಕೊಳ್ಳುವುದು ಮತ್ತು ಸ್ವೀಕರಿಸುವುದು ಅಭ್ಯಾಸವಾಗಿಬಿಟ್ಟಿದೆ. ಅದಕ್ಕಾಗಿಯೇ ನಾವು ಯಾವುದೇ ದಾಖಲೆಗಳನ್ನು ನೋಡದೆಯೇ, ಆ ರಾಜ ಹಾಗಿದ್ದ, ಈ ಭೋಜ ಹೀಗಿದ್ದ, ಅವನು ಸಾಲು ಮರಗಳನ್ನು ನೆಡಿಸಿದ, ಇವನು ಧರ್ಮಿಷ್ಟನಾಗಿದ್ದ. ಅವನು ಕ್ರೂರಿಯಾಗಿದ್ದ.. ಹಾಗೆ, ಹೀಗೆ ಎಂಬಂತಹ ಕಟ್ಟುಕತೆಗಳನ್ನು ನಂಬಿಬಿಡುತ್ತೇವೆ ಮಾತ್ರವಲ್ಲ; ಅವರನ್ನು ಹೀರೋಗಳನ್ನಾಗಿಯೂ, ವಿಲನ್‍ಗಳಾಗಿಯೋ ಸ್ವೀಕರಿಸಿ, ವೈಭವೀಕರಿಸಿ ಇತಿಹಾಸದ ಹೆಸರಿನಲ್ಲಿ ವರ್ತಮಾನವನ್ನೂ, ಭವಿಷ್ಯವನ್ನೂ ಕದಡುತ್ತಿದ್ದೇವೆ.

ಆದುದರಿಂದ ಕನ್ನಡಿಗರ ಮಟ್ಟಿಗೆ ಈ ಪುಸ್ತಕ ಅಗತ್ಯವಾಗಿದೆ. ಮೇಲೆ ಹೇಳಿದ ಕತೆ ಗಡಿಗಳಿಗೂ ಸಂಬಂಧಿಸಿದೆ. ನಾವು ಯಾವುದೋ ಕಾಲ್ಪನಿಕ ಅಥವಾ ಊಹೆಗೆ ನಿಲುಕದಷ್ಟು ಕಾಲ್ಪನಿಕ ವಿಷಯಗಳನ್ನು ಹಿಡಿದುಕೊಂಡು ನಾವು ಗಡಿ ಪ್ರಶ್ನೆಗಳನ್ನು ಎತ್ತಿ ದೇಶಪ್ರೇಮದ ಅಮಲಿನಲ್ಲಿ ಗಡಿ ಕಾಯುವ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿ ಪೂರ್ವಭಾವಿಯಾಗಿಯೇ ಅವರನ್ನು ಕೊಲ್ಲುತ್ತೇವೆ.

ಈ ಗಡಿಕಾಯುವ ಸೈನಿಕರುಗಳನ್ನು ಕೊಲ್ಲುವ ವಿವಾದಗಳು ಎಷ್ಟು ಕ್ಷುಲ್ಲಕವಾಗಿವೆ; ಆಧಾರರಹಿತವಾಗಿವೆ ಎಂಬುದನ್ನು ವಿವರಿಸಲು ಮತ್ತು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ನೆರವಾಗುತ್ತದೆ.

ಅಕ್ಸಾಯ್ ಚಿನ್ ವಿವಾದಕ್ಕೆ ಸಂಬಂಧಿಸಿದಂತೆ 1864-65ರಲ್ಲಿ ಡಬ್ಲ್ಯೂ. ಎಚ್. ಜಾನ್ಸನ್ ಎಂಬ ಆಕ್ಷೇಪಾರ್ಹ ಅಧಿಕಾರಿಯೊಬ್ಬ ಸರ್ವೇ ಮಾಡಿದ್ದ. ಅಕ್ಸಾಯ್ ಚಿನ್ ವಿವಾದದ ಭ್ರೂಣ ಹುಟ್ಟಿಕೊಂಡದ್ದು ಜಾನ್ಸ್ ಪ್ರಕರಣದಿಂದ ಎಂದು ಲೇಖಕರು ಬರೆಯುತ್ತಾರೆ. ಈ ಕುರಿತು ನೀಡಲಾದ ವಿವರದಲ್ಲಿ ಖ್ಯಾತ ಇಂಡೋ ಚೀನಾ ಸಂಬಂಧಗಳ ತಜ್ಞ ಆಲ್‍ಸ್ಟರ್ ಲ್ಯಾಂಬ್ ಹೀಗೆ ವಿಡಂಬನಾತ್ಮಕವಾಗಿ ಬರೆದಿದ್ದಾರೆ.

ಪ್ರಶ್ನೆ ಮತ್ತು ಉತ್ತರಗಳು
ಪ್ರ: ಜಾನ್ಸನ್ ಅವರು ಆಕ್ಸಾಯ್ ಚಿನ್ ಪ್ರದೇಶದಲ್ಲಿ ಭಾರತೀಯ ಮಗುವಿಗೆ ಜನ್ಮವಿತ್ತ ಭಾರತೀಯ ತಾಯಿಯನ್ನು ಕಂಡರೇ?
ಉ: ಇಲ್ಲ.
ಪ್ರ: ಅವರು ಆಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಿ ಮಗುವಿಗೆ ಜನ್ಮವಿತ್ತ ಚೀನಿ ತಾಯಿಯನ್ನು ಕಂಡರೇ?
ಉ: ಇಲ್ಲ.
ಪ್ರ: ಅವರು ಅಲ್ಲಿ ಭಾರತೀಯ ಜಿರಳೆಯನ್ನು ಕಂಡರೆ?
ಉ:ಇಲ್ಲ.
ಪ್ರ: ಅವರು ಅಲ್ಲಿ ಚೀನಿ ಜಿರಳೆಯನ್ನು ಕಂಡರೆ?
ಉ: ಇಲ್ಲ.
ಪ್ರ: ಏಕೆ?
ಉ: ಸ್ವಾಮಿ. ಅಕ್ಸಾಯ್ ಚಿನ್ ಭಾರತೀಯರು ಮತ್ತು ಚೀನೀಯರು ಬಿಡಿ, ಜಿರಳೆಗಳ ಮಾತೃಭೂಮಿಯೂ ಅಲ್ಲ. ಮೈನಸ್ 20ರಿಂದ 50 ಡಿಗ್ರಿ ಉಷ್ಣಾಂಶದಲ್ಲಿ ಜಿರಳೆಗಳೂ ಬದುಕುವುದಿಲ್ಲ. ಅವುಗಳಿಗೆ ಟಿಬೆಟಿನ ರಗ್ಗುಗಳನ್ನಾಗಲೀ, ಲಡಾಕಿನ ಸ್ವೆಟರ್‍ಗಳನ್ನಾಗಲೀ, ಕಾಶ್ಮೀರಿ ಶಾಲು ಅಥವಾ ಯಾರ್ಕಂಡಿ ಬೂಟುಗಳನ್ನಾಗಲೀ ಯಾರೂ ನೀಡಿರಲಿಲ್ಲ.

ಭಾರತ ಮತ್ತು ಚೀನಾ ಎಂತಹಾ ನಿರುಪಯೋಗಿ ಪ್ರದೇಶಕ್ಕಾಗಿ ಕಚ್ಚಾಡುತ್ತಾ ಗಡಿ ವಿವಾದವನ್ನು ಜೀವಂತ ಇಟ್ಟಿವೆ. ಇದರಿಂದ ಒಂದು ಲಾಭ ಇದೆ. ಭಾರತದ ಮೇಲೆ ಒತ್ತಡ ಹೇರಲು ಚೀನಾ ಗಡಿ ವಿವಾದ ಎಬ್ಬಿಸಿದರೆ, ಇಲ್ಲಿನ ಹುಸಿ ಭೂಪಟ ದೇಶಪ್ರೇಮಿಗಳನ್ನು ಹುಚ್ಚೆಬ್ಬಿಸಿ ಮತ ಪಡೆಯಲು ಭಾರತ ಗಡಿ ವಿವಾದ ಎಬ್ಬಿಸುತ್ತದೆ.

ಪುಸ್ತಕ ದೀರ್ಘವಾಗಿದ್ದು, ಸಾಮಾನ್ಯ ಓದುಗರಿಗೆ ಇಷ್ಟೆಲ್ಲಾ ಓದುವ ತಾಳ್ಮೆ ಇದೆಯೇ ಎಂದು ನನಗನಿಸಿತು. ಆದರೆ, ಇತಿಹಾಸದ ವಾಸ್ತವ ನೆಲೆಗಳನ್ನು ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಇದೊಂದು ಕುತೂಹಲಕಾರಿ ಪುಸ್ತಕ. ಲೇಖಕರು 200ಕ್ಕೂ ಹೆಚ್ಚು ನಕ್ಷೆಗಳು ಮತ್ತು ಫೋಟೋಪ್ರತಿಗಳನ್ನು ನೀಡಿದ್ದಾರೆ. ಇವುಗಳಲ್ಲಿ ಕೆಲವು ಗಡಿಯಷ್ಟೇ ಅಸ್ಪಷ್ಟವಾಗಿರುವುದರಿಂದ ಕೈಬಿಟ್ಟು ಪುಸ್ತಕದ ಭಾರ ಕಡಿಮೆ ಮಾಡಬಹುದಿತ್ತು.

ಒಟ್ಟಿನಲ್ಲಿ ಇದು ಗಡಿಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನೆರವಾಗುತ್ತದೆ. ಆ ಅರ್ಥ ಮತ್ತು ಸತ್ಯ ಒಂದೇ. ಅದೆಂದರೆ, ವಾಸ್ತವವಾಗಿ ಇದೊಂದು ಸಮಸ್ಯೆಯೇ ಅಲ್ಲ. ರಾಜಕೀಯ ಕಾರಣಗಳಿಂದಾಗಿ ಅದನ್ನು ಸಮಸ್ಯೆಯಾಗಿ ಉಳಿಸಿಕೊಳ್ಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...