ರಷ್ಯಾದ ದಾಳಿಯಲ್ಲಿ 198 ಜನರು ಸಾವನ್ನಪ್ಪಿದ್ದಾರೆ ಮತ್ತು 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಆರೋಗ್ಯ ಸಚಿವರು ಹೇಳುತ್ತಾರೆ.
ಮೃತಪಟ್ಟವರಲ್ಲಿ ಮೂವರು ಮಕ್ಕಳಿದ್ದಾರೆ ಎಂದು ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಶನಿವಾರ ಹೇಳಿದ್ದಾರೆ. ಗುರುವಾರ ಆರಂಭವಾದ ರಷ್ಯಾದ ಆಕ್ರಮಣದಲ್ಲಿ 33 ಮಕ್ಕಳು ಸೇರಿದಂತೆ ಇನ್ನೂ 1,115 ಜನರು ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಹೋರಾಟ ಮುಂದುವರಿದಿದೆ.
ಆಕ್ರಮಣಕಾರಿ ರಷ್ಯಾದ ಪಡೆಗಳು ಶನಿವಾರ ಉಕ್ರೇನ್‌ನ ರಾಜಧಾನಿಯತ್ತ ನುಗ್ಗುತ್ತಿದ್ದಂತೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಸೈನ್ಯಕ್ಕೆ ಕರೆ ನೀಡಿದ್ದಾರೆಂಬ ವದಂತಿ ಹಬ್ಬಿತ್ತು. ಅದಕ್ಕೆ ಸ್ಪಷ್ಟನೆ ನೀಡಿರುವ ಅಧ್ಯಕ್ಷ, “ಇದು ನಮ್ಮ ಭೂಮಿ, ನಮ್ಮ ದೇಶ, ನಮ್ಮ ಮಕ್ಕಳು. ನಾವು ಎಲ್ಲವನ್ನೂ ರಕ್ಷಣೆ ಮಾಡಿಕೊಳ್ಳುತ್ತೇವೆ” ಎಂದು ಅವರು ಕಿರು ವಿಡಿಯೊದಲ್ಲಿ ಹೇಳಿದರು.
ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ನಿಲ್ಲಿಸಬೇಕು. ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ವಿರುದ್ಧವಾಗಿ ರಷ್ಯಾ ವೀಟೋ ಹಕ್ಕು ಚಲಾಯಿಸಿದೆ. ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಸಂಘರ್ಷದಿಂದ ದೂರ ಉಳಿದಿವೆ.
ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಏರ್ ಇಂಡಿಯಾ ವಿಮಾನವು ರೊಮೇನಿಯಾದಿಂದ ಹೊರಟು ಸಂಜೆ 4 ಗಂಟೆಗೆ ಮುಂಬೈಗೆ ಆಗಮಿಸಲಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಬುಕಾರೆಸ್ಟ್ ಮತ್ತು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ಗೆ ಹೆಚ್ಚಿನ ವಿಮಾನಗಳನ್ನು ಏರ್ ಇಂಡಿಯಾ ಕಳುಹಿಸಿದೆ.
ಉಕ್ರೇನಿಯನ್ ರಕ್ಷಣಾ ಪಡೆಗಳು, ರಷ್ಯಾದ ಆಕ್ರಮಣಕ್ಕೆ ಉಗ್ರ ಪ್ರತಿರೋಧವನ್ನು ನೀಡುತ್ತಿವೆ. ರಾಜಧಾನಿ ಕೀವ್ ಮತ್ತು ದೇಶದ ಇತರ ನಗರಗಳ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಉಕ್ರೇನ್ ರಕ್ಷಣಾ ಪಡೆಗಳು ಹೋರಾಡುತ್ತಿವೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ಟ್ವಿಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಸುಳ್ಳು ವರದಿಗಳನ್ನು ನಂಬಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Не вірте фейкам. pic.twitter.com/wiLqmCuz1p
— Володимир Зеленський (@ZelenskyyUa) February 26, 2022
“ನಾನು ಬದುಕಿದ್ದೇನೆ. ಕೀವ್ ನಗರ ದ್ವಂಸವಾಗಿಲ್ಲ. ಉಕ್ರೇನ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಯಾವುದೇ ವರದಿಗಳು ಸುಳ್ಳು” ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.
“ನಾನು ಇಲ್ಲಿದ್ದೇನೆ. ನಾವು ಯಾವುದೇ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಿಲ್ಲ. ನಾವು ನಮ್ಮ ದೇಶವನ್ನು ರಕ್ಷಿಸುತ್ತೇವೆ, ಏಕೆಂದರೆ ನಮ್ಮ ಶಸ್ತ್ರಾಸ್ತ್ರಗಳು ನಮ್ಮ ಸತ್ಯ. ಸತ್ಯವೆಂದರೆ ಇದು ನಮ್ಮ ನಾಡು, ನಮ್ಮ ದೇಶ, ನಮ್ಮ ಮಕ್ಕಳು ಮತ್ತು ನಾವು ಅವರೆಲ್ಲರನ್ನೂ ರಕ್ಷಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ರಷ್ಯಾದ ಆಕ್ರಮಣದ ಮಧ್ಯೆ ಕೀವ್ ನಗರದ ಮೇಯರ್ ಕರ್ಫ್ಯೂ ವಿಧಿಸಿದ್ದಾರೆ. ರಷ್ಯಾದ ಪಡೆಗಳು ನಗರದ ಮೇಲೆ ಒತ್ತಡ ತರುತ್ತಿರುವುದು ತೀವ್ರವಾದ ಬಳಿಕ ಕರ್ಫ್ಯೂ ವಿಸ್ತರಿಸಿದ್ದಾರೆ.
“ಸಂಜೆ 5 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ” ಎಂದು ಮೇಯರ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ತಿಳಿಸಿದ್ದು, “ಕರ್ಫ್ಯೂ ಸಮಯದಲ್ಲಿ ಹೊರಗೆ ತಿರುಗಾಡುವ ಎಲ್ಲಾ ನಾಗರಿಕರನ್ನು ಶತ್ರುಗಳೆಂದು ಪರಿಗಣಿಸಲಾಗುತ್ತದೆ” ಎಂದು ಕ್ಲಿಟ್ಸ್ಕೊ ತಿಳಿಸಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೀವ್‌ಗೆ ಸುಮಾರು 30 ಕಿಮೀ ದೂರದಲ್ಲಿ ಬಹುಪಾಲು ರಷ್ಯಾ ಪಡೆ ಬಂದು ನಿಂತಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.
ರಷ್ಯಾದ ಪಡೆಗಳು ಆಗ್ನೇಯ ನಗರವಾದ ಮೆಲಿಟೊಪೋಲ್ ಅನ್ನು ವಶಪಡಿಸಿಕೊಂಡಿವೆ ಎಂಬ ರಷ್ಯಾದ ವರದಿಗಳನ್ನು ಮೊದಲು ಆಲಿಸಿದ ಬ್ರಿಟನ್, ಉಕ್ರೇನಿಯನ್ ಮಿಲಿಟರಿ ದೇಶಾದ್ಯಂತ ಬಲವಾದ ಪ್ರತಿರೋಧವನ್ನು ಮುಂದುವರೆಸುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿರಿ: ಭಾರತೀಯರು ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ಹೋಗುವುದೇಕೆ?