Homeಕರ್ನಾಟಕಕಾರವಾರದ ಕಾಳಿ ನದಿ ದಂಡೆ ಮತ್ತು ಕಡಲ ತೀರದಲ್ಲಿ ಹಿಮಾಲಯದ ವಲಸೆ ಹಕ್ಕಿಗಳ ಹಾಡು

ಕಾರವಾರದ ಕಾಳಿ ನದಿ ದಂಡೆ ಮತ್ತು ಕಡಲ ತೀರದಲ್ಲಿ ಹಿಮಾಲಯದ ವಲಸೆ ಹಕ್ಕಿಗಳ ಹಾಡು

- Advertisement -
- Advertisement -

ಚಳಿಗಾಲದಲ್ಲಿ ವಲಸೆ ಬರುವ ದೂರದ ಹಿಮಾಲಯ ಮತ್ತು ಹಲವು ಕಡೆಯ ಹಕ್ಕಿಗಳ ಹಾಡು ಕಾರವಾರದ ಕಾಳಿ ನದಿಯ ಇಕ್ಕೆಲ ಮತ್ತು ಅರಬ್ಭೀ ಸಮುದ್ರದ ದಂಡೆಯಲ್ಲಿ ಕೇಳಿ ಬರಲಾರಂಭಿಸಿದ್ದು ಪಕ್ಷಿ ಪ್ರಿಯರನ್ನು ಖುಷಿ ಪಡಿಸುತ್ತಿದೆ. ನದಿಯ ಎರಡೂ ಕಡೆಯ ಜವುಗು, ಹುಲ್ಲುಗಾವಲು, ಅಳಿವೆ ಹಾಗೂ ಕಡಲಂಚಿಗೆ ಉತ್ತರ ಗೋಲಾರ್ಧದ ತುತ್ತತುದಿಯ ಹಿಮಚ್ಛಾದಿತ ಪ್ರದೇಶದಿಂದ ವಲಸೆ ಬಂದಿರುವ ವಿವಿಧ ಬಗೆಯ ಹಕ್ಕಿಗಳು ಮತ್ತವುಗಳ ಚಲನವಲನಗಳನ್ನು ಕೈಗಾ ಬರ್ಡರ್ಸ್ ತಂಡ ಸೆರೆಹಿಡಿದಿದೆ.

ಕೋವಿಡ್ ಹಾವಳಿಯಿಂದಾಗಿ ಕಳೆದೆರಡು ವರ್ಷದಿಂದ ಕ್ಷೇತ್ರ ಕಾರ್ಯ ಮಾಡಲಾಗದ ಬೇಸರದಲ್ಲಿದ್ದ ಕೈಗಾ ಬರ್ಡರ್ಸ್ ತಂಡವೀಗ ವಲಸೆ ಹಕ್ಕಿಗಳ ಕಲರವ, ಹಾರಾಟ, ಸಂತಾನೋತ್ಪತ್ತಿಯೇ ಮುಂತಾದ ಚಟುವಟಿಕೆಗಳ ದಾಖಲೆಯಲ್ಲಿ ತೊಡಗಿದೆ. ಶಕ್ತಿ ಮೂಲಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಅವೈಜ್ಞಾನಿಕ ಬಳಕೆಯಿಂದ ಭೂಮಂಡಲದ ತಾಪಮಾನ ಏರುಗತಿಯಲ್ಲಿರುವ ಈ ವಿಷಮ ಕಾಲಘಟ್ಟದಲ್ಲಿ ಋತು ಮಾನಗಳ ಬದಲಾವಣೆಯ ಬಹುಮೂಲ್ಯವಾದ ಸೂಚಕಗಳಾದ ಪಕ್ಷಿಗಳ ಸಂರಕ್ಷಣೆಯ ಅರಿವು ಜನರಲ್ಲಿ ಮೂಡಬೇಕಾದ ಅನಿವಾರ್ಯತೆ ಎದುರಾಗಿದೆಯೆಂದು ತಂಡದ ಹಿರಿಯ ಪಕ್ಷಿ ತಜ್ಞ ಜಲೀಲ್ ಬಾರ್ಗಿರ್ ಹೇಳುತ್ತಾರೆ.

ಉತ್ತರ ಯುರೋಪ್, ಸೈಬಿರಿಯಾ, ಫಿನ್ಲ್ಯಾಂಡ್, ಮೆಡಿಟೆರಿಯನ್ ಸಮುದ್ರ, ಲಡಾಕ್, ಟಿಬೆಟ್‌ಗಳಿಂದ ಸಾವಿರಾರು ಕಿಮೀ ದೂರದ ಕಾರವಾರ ನದಿ-ಕಡಲು ದಂಡೆಗೆ ಹಾರಿ ಬಂದಿರುವ ಪಕ್ಷಿಗಳ ಅಪರೂಪದ ಚಿತ್ರ ಕೈಗಾ ಬರ್ಡರ್ಸ್ ಬಳಗ ತೆಗೆದಿದೆ. ಕಿತ್ತಳೆ ಕಾಲಿನ ಕಡಲಹಕ್ಕಿ [RUDDY TURNSTONE], ನೀಲಕತ್ತಿನ ಉಲ್ಲಂಕಿ [Ruff], ಕಡಲ ಉಲ್ಲಂಕಿ [Great Knot], ಬೂದು ಬೆನ್ನಿನ ಕಡಲಕ್ಕಿ [Heuglin’s Gull], ಕೆಂಪು ಕಾಲಿನ ಚಾಣ [Amur Falcon], ಪಟ್ಟೆರೆಕ್ಕೆಯ ಸೆಳೆವ [Montagu’s Harrier], ಪಟ್ಟೆತಲೆ ಹೆಬ್ಬಾತು [Bar Headed Geese] ಮತ್ತು ಬಿಳಿಕತ್ತಿನ ಉಲಿಯಕ್ಕಿ [Lesser Whltethroat] ಕಾರವಾರದ ಸುತ್ತಮುತ್ತ ಕಂಡುಬಂದಿವೆ. ಉತ್ತರ ಗೋಲಾರ್ಧದ ಹಿಮಾವೃತ ಪ್ರದೇಶಗಳ ಅತ್ಯುಗ್ರ ಛಳಿಗಾಲ ತಾಳಲಾಗದೆ ಸ್ವಲ್ಪ ಬೆಚ್ಚಗಿರವ ದಕ್ಷಿಣದತ್ತ ಹಕ್ಕಿಗಳು ವಲಸೆ ಬರುವುದು ಸಾಮಾನ್ಯ.

ಹಿಮ ಪ್ರದೇಶದ ಹಕ್ಕಿಗಳ ಜತೆ ಸ್ಥಳೀಯ ಅಳಿವಿನಂಚಿನ ವಲಸಿಗ ಬಿಳಿ ರಣ ಹದ್ದು [Egyptian Vulture] ಹಾಗೂ ಹಿಮಾಲಯದ ದೊಡ್ಡ ರಣ ಹದ್ದು [Himalayan Griffon Vulture] ಸಹ ಕಂಡುಬಂದಿದೆಯೆಂದು ಕೈಗಾ ಬರ್ಡ್‌ರ್ಸ್ ಬಳಗದವರು ಹೇಳುತ್ತಾರೆ. ಬಿಳಿರಣಹದ್ದು ತರುಣಾವಸ್ಥೆಯಲ್ಲಿ ಕಂಡುಬಂದಿರುವುದು ಅವುಗಳ ಸಂತಾನ ಹತ್ತಿರದಲ್ಲೆ ಆಗಿರುವುದನ್ನು ದೃಢಪಡಿಸುವಂತಿದೆ. ಸತ್ತ ಜಾನುವಾರುಗಳ ಕಳೆಬರದ [ಆಹಾರದ] ಕೊರತೆ, ಪಶುವೈದ್ಯಕೀಯದಲ್ಲಿ ನಿಷೇದಿತ ಔಷಧಿಗಳ ಮಿತಿಮಿಮೀರಿದ ಬಳಕೆ ಮತ್ತು ವಾಸಸ್ಥಳಗಳ ಒತ್ತುವರಿಯಿಂದ ಅಳಿವಿನಂಚಿನಲ್ಲಿರುವ ಬಿಳಿ ರಣಹದ್ದು, ಹಿಮಾಲಯದ ಬೃಹತ್ ಹದ್ದು ಮತ್ತು ಕಡಲ ಉಲ್ಲಂಕಿ ಪ್ರಬೇಧಗಳು ಕಾರವಾರದ ಆಚೀಚೆ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಅಪಾಯದಂಚಿನಲ್ಲಿರುವ ರಣ ಹದ್ದುಗಳ ಸಂರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಪಶುಸಂದೋಪನಾ ಇಲಾಖೆಗಳು ಒಂದಾಗಿ ಪ್ರಯತ್ನ ನಡೆಸಬೇಕೆಂದು ಕೈಗಾ ಬರ್ಡರ್ಸ್ ತಂಡದ ಸಂಯೋಜಕ ಮೋಹನದಾಸ್ ಸರ್ಕಾರಕ್ಕೆ ಪತ್ರ ಬರೆದು ಮನವಿಮಾಡಿದ್ದಾರೆ.


ಇದನ್ನೂ ಓದಿ: ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...