home delivery ಹೋಂ ಡೆಲೆವೆರಿ

ದೇಶಾದ್ಯಂತದ ಮದ್ಯದಂಗಡಿಗಳಲ್ಲಿ ಕನಿಷ್ಠ ಜನಸಂದಣಿಯನ್ನು ಖಚಿತಪಡಿಸಿಕೊಳ್ಳುವ ಮತ್ತು ಸಾಮಾಜಿಕ ಅಂತರ ಕಾಪಾಡುವ ಪ್ರೋಟೋಕಾಲ್‌ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಹೋಂ ಡೆಲೆವರಿ ಅಥವಾ ಪರೋಕ್ಷ ಮಾರಾಟ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಸಲಹೆ ನೀಡಿದೆ.

ಕೊರೊನಾ ಸಮಯದಲ್ಲಿ ಮದ್ಯ ಮಾರಾಟವೂ ಸಾಮಾನ್ಯ ಜನರ ಜೀವನಕ್ಕೆ ಜೀವನಕ್ಕೆ ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿ ಕೋರ್ಟ್ ಮೇಲಿನ ಹೇಳಿಕೆಯನ್ನು ನೀಡಿದೆ. ಪ್ರಕರಣವನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್. ಗವಾಯಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಲಿಸಿದರು.

“ನಾವು ಯಾವುದೇ ಆದೇಶವನ್ನು ಮಾಡುವುದಿಲ್ಲ ಆದರೆ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ರಾಜ್ಯಗಳು ಹೋಂ ಡೆಲೆವರಿ  ಅಥವಾ ಪರೋಕ್ಷ ಮದ್ಯ ಮಾರಾಟವನ್ನು ಪರಿಗಣಿಸಬೇಕು” ಎಂದು ಸುಪ್ರೀಂ ಕೋರ್ಟಿನ ಮೂರು ನ್ಯಾಯಾಧೀಶರ ಪೀಠವು ಅರ್ಜಿಗೆ ಪ್ರತಿಕ್ರಿಯೆಯಾಗಿ ತಿಳಿಸಿದೆ. “ಆಲ್ಕೋಹಾಲ್ ಮನೆ ವಿತರಣೆ ಕುರಿತು ಚರ್ಚೆ ನಡೆಯುತ್ತಿದೆ. ನಾವು ಏನು ಮಾಡಬೇಕೆಂದು ನೀವು ಬಯಸುತ್ತೀರಿ?” ನ್ಯಾಯಮೂರ್ತಿ ಕೌಲ್ ಹೇಳಿದ್ದಾರೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿಯ ಪ್ರಕಾರ, ಆ್ಯಪ್ ಆಧಾರಿತ ಆಹಾರ ವಿತರಣಾ ಕಂಪನಿ ಜೊಮಾಟೊ ಮದ್ಯದ ಡೋರ್ ಡೆಲೆವರಿ ಮಾಡುವ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಮದ್ಯದ ವಿತರಣೆಗೆ ಪ್ರಸ್ತುತ ಯಾವುದೇ ಕಾನೂನು ಅವಕಾಶವಿಲ್ಲ, ಇಂಟರ್ನ್ಯಾಷನಲ್ ಸ್ಪಿರಿಟ್ ಅಂಡ್ ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಐಎಸ್‌ಡಬ್ಲ್ಯುಎಐ), ಜೊಮಾಟೊ ಹಾಗೂ ಇತರರು ಈ ಕಾನೂನಿನ ಬದಲಾವಣೆಗೆ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ದೀಪಕ್ ಸಾಯಿ ಅವರು ಮದ್ಯದಂಗಡಿಗಳಲ್ಲಿ ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳುವುದು ಕಷ್ಟ ಎಂದು ವಾದಿಸಿದರು. ಯಾಕೆಂದರೆ ಸೀಮಿತ ಸಂಖ್ಯೆಯ ಮದ್ಯದ ಅಂಗಡಿಗಳನ್ನು ಮರು ತೆರೆಯಲು ಅವಕಾಶವಿದೆ. ಆದರೆ ಪ್ರತಿಯೊಂದು ಮದ್ಯದ ಅಂಗಡಿಗಳ ಹೊರಗೆ ಜನಸಂದಣಿ ಇದೆ ಎಂದಿದ್ದಾರೆ.

“ಮದ್ಯ ಮಾರಾಟದಿಂದಾಗಿ ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಬಾರದು ಎಂದು ನಾನು ಬಯಸುತ್ತೇನೆ. ಗೃಹ ಸಚಿವಾಲಯ ಮದ್ಯ ಮಾರಾಟದ ಬಗ್ಗೆ ರಾಜ್ಯಗಳಿಗೆ ಸ್ಪಷ್ಟಣೆ ನೀಡಬೇಕು” ಎಂದು ವಕೀಲ ದೀಪಕ್ ಸಾಯಿ ವಾದಿಸಿದರು.

ಮಾರ್ಚ್ 25 ರಂದು ಘೋಷಿಸಿದ್ದ ರಾಷ್ಟ್ರವ್ಯಾಪಿ ಲಾಕ್ ಡೌನ್ ನಂತರ ಮದ್ಯದ ಮಳಿಗೆಗಳನ್ನು ಈ ವಾರ ಮತ್ತೆ ತೆರೆಯಲು ಅನುಮತಿ ನೀಡಿದೆ. ಇದರಿಂದಾಗಿ ಸಾಮಾಜಿಕ ಅಂತರವಿಲ್ಲದೆ ಜನರು ಮದ್ಯದ ಮಳಿಗೆಗಳ ಹೊರಗೆ ಗುಂಪುಗೂಡಿ ಆತಂಕ ಸೃಷ್ಟಿಸಿದರು. ಆದರೆ ಸರ್ಕಾರ ಎಲ್ಲಾ ಅಂಗಡಿಗಳಲ್ಲಿ ಸಾಮಾಜಿಕ ಅಂತರದ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಹಾಗೂ ಯಾವುದೇ ಸಮಯದಲ್ಲಿ ಐದು ಜನರಿಗಿಂತ ಹೆಚ್ಚು ಜನರನ್ನು ಅಂಗಡಿಯೊಳಗೆ ಅನುಮತಿಸದಂತೆ ನೋಡಿಕೊಳ್ಳಬೇಕು ಎಂದಿತ್ತು.

ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಮದ್ಯ ಮಾರಾಟಕ್ಕೆ “ಕೊರೊನಾ ತೆರಿಗೆ” ವಿಧಿಸಿವೆ. ದೆಹಲಿ ಸರ್ಕಾರವು ಮದ್ಯದ ಮೇಲೆ ಶೇ 70 ರಷ್ಟು ಭಾರಿ ತೆರಿಗೆ ವಿಧಿಸಿದೆ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೂಡಾ ಇದೇ ರೀತಿಯ ಕ್ರಮಗಳನ್ನು ಪ್ರಕಟಿಸಿವೆ.


ಇದನ್ನೂ ಓದಿ: ಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು. ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಬರಹ


ನಮ್ಮ ಇಂಗ್ಲಿಷ್ ವೆಬ್ಸೈಟಿಗೆ ಭೇಟಿ ನೀಡಿ


 

LEAVE A REPLY

Please enter your comment!
Please enter your name here