Homeಮುಖಪುಟಆತ್ಮಹತ್ಯೆಯೊಂದೇ ನಮಗಿರುವ ದಾರಿ - BSNL ನೌಕರರ ಅಳಲು : ವಿಡಿಯೋ ನೋಡಿ

ಆತ್ಮಹತ್ಯೆಯೊಂದೇ ನಮಗಿರುವ ದಾರಿ – BSNL ನೌಕರರ ಅಳಲು : ವಿಡಿಯೋ ನೋಡಿ

- Advertisement -
- Advertisement -

ದೇಶದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಗಳಲ್ಲೊಂದಾದ ಬಿಎಸ್ಎನ್ಎಲ್ ಮುಳುಗುತ್ತಿರುವ ಟೈಟಾನಿಕ್. ಭಾರತವೆಂಬ ಸಮುದ್ರದಲ್ಲಿ ತೆರಳುತ್ತಿದ್ದಾಗ ಬಂಡವಾಳ ಹಿಂತೆಗೆತವೆಂಬ ಬೃಹತ್ ಹಿಮಗಲ್ಲಿಗೆ ಗುದ್ದಿ, ಆಗಲೋ ಈಗಲೋ ಉಸಿರು ಬಿಡುವಂತಹ ಸ್ಥಿತಿಯಲ್ಲಿದೆ. ಬಿಎಸ್ಎನ್ಎಲ್ ನಿಂದಲೇ ತರಂಗಾಂತರಗಳನ್ನು ಪಡೆದಿರುವ ಖಾಸಗಿ ಟೆಲಿಕಾಂ ಕಂಪನಿ ಜಿಯೋ ಅತ್ಯಂತ ಲಾಭದಲ್ಲಿದೆ. ವರ್ಷದಿಂದ ವರ್ಷಕ್ಕೆ ಅದು ಶೇ.62ರಷ್ಟು ಲಾಭ ಗಳಿಸಿದೆ ಎಂದು ವರದಿಗಳು ತಿಳಿಸುತ್ತವೆ. ಆದರೆ ಸಾರ್ವಜನಿಕ ಉದ್ಯಮ ಭಾರತ್ ಸಂಚಾರ್ ನಿಗಮ ಲಿಮಿಟೆಡ್ ತೀವ್ರ ಸಂಕಷ್ಟಕ್ಕೆ ಗುರಿಯಾಗಲು ಅಧಿಕಾರಿಗಳು ಮತ್ತು ಸರ್ಕಾರದ ಬೇಜವಾಬ್ದಾರಿತನವೇ ಕಾರಣ. ಈ ಸತ್ಯ  ಸರ್ಕಾರಕ್ಕೂ ಗೊತ್ತಿದೆ. ಅಧಿಕಾರಿಗಳಿಗೂ ತಿಳಿದಿದೆ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲಾರದಂತ ಸ್ಥಿತಿ ಅವರದ್ದು.

ಕೇಂದ್ರ ಸರ್ಕಾರದ ನೀತಿಗಳು ಸಾರ್ವಜನಿಕ ಉದ್ದಿಮೆಗಳನ್ನು ಸರ್ವನಾಶ ಮಾಡಲು ಹೊರಟಿವೆ. ಎಚ್.ಎಂ.ಟಿ. ಸೇರಿದಂತೆ ಹಲವು ಉದ್ದಿಮೆಗಳು ಮುಳುಗಿಹೋದವು. ಈಗ ಬಿಎಸ್ಎನ್ಎಲ್ ಕೂಡ ಅದೇ ಹಾದಿ ಹಿಡಿದಿದೆ. 92 ಸಾವಿರ ನೌಕರರ ಸ್ವಯಂ ನಿವೃತ್ತಿಯಾದರು. ವಾಸ್ತವ ಸಂಗತಿ ಏನೆಂದರೆ ಟೆಲಿಕಾಂ ಇಲಾಖೆ ಇದ್ದಾಗಿನಿಂದಲು ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ನೌಕರರ ಪಾಡು ಹೇಳತೀರದಾಗಿದೆ. ಈ ನೌಕರರು ಕಳೆದ ಅರೇಳು ತಿಂಗಳಿನಿಂದ ವೇತನ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಬಿಎಸ್ಎನ್ಎಲ್ ಕೂಡ ಅವನತಿಯ ತುತ್ತ ತುದಿಯಲ್ಲಿದೆ. ಆದ್ದರಿಂದ ಗುತ್ತಿಗೆ ನೌಕರರಿಗೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.

ವಿಡಿಯೋ ನೋಡಿ:

BSNL

6-7 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಆತ್ಮಹತ್ಯೆಯೊಂದೇ ನಮಗಿರುವ ದಾರಿ – BSNL ನೌಕರನ ಅಳಲು…

Posted by Naanu Gauri on Monday, March 2, 2020

‘ದೇಶಾದ್ಯಂತ  ಬಿಎಸ್ಎನ್ಎಲ್ ನಿಗಮದಲ್ಲಿ ಸುಮಾರು 80 ಸಾವಿರಕ್ಕು ಹೆಚ್ಚು ಮಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ಕಳೆದ 8 ತಿಂಗಳಿನಿಂದಲೂ ವೇತನ ಪಾವತಿಯಾಗಿಲ್ಲ. ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೌಸ್ ಕೀಪಿಂಗ್ ಮತ್ತು ವಾಚ್ ಅಂಡ್ ವಾರ್ಡ್ ಎಂಬ ಎರಡು ಬಗೆಯ ವಿಭಾಗಗಳು ಇವೆ. ಈ ಎರಡೂ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಗುತ್ತಿಗೆದಾರರು ವೇತನ ನೀಡುತ್ತಾರೆ. ಬಿಎಸ್ಎನ್ಎಲ್ ಈ ಗುತ್ತಿಗೆದಾರರಿಗೆ ಪ್ರತಿಯೊಬ್ಬ ನೌಕರನಿಗೆ 10 ಸಾವಿರದಂತೆ ಹಣ ನೀಡುತ್ತದೆ. ಅಂದರೆ ದೇಶಾದಾದ್ಯಂತಿ ಇರುವ 80 ಸಾವಿರ ನೌಕರರಿಗೆ ಸುಮಾರು 9.5 ಕೋಟಿ ರೂಪಾಯಿ ಗಳನ್ನು ವೇತನ ಬಾಕಿ ಉಳಿಸಿಕೊಳ್ಳಲಾಗಿದೆ.

ಹೌಸ್ ಕೀಪಿಂಗ್ ವಿಭಾಗದ ನೌಕರರಿಗೆ 8,500 ರೂಪಾಯಿ ತಿಂಗಳ ವೇತನ. ವಾಚ್ ಅಂಡ್ ವಾರ್ಡ್ ವಿಭಾಗದ ನೌಕರರಿಗೆ 10 ಸಾವಿರ ರೂಪಾಯಿ ತಿಂಗಳ ವೇತನ ನಿಗದಿಪಡಿಸಲಾಗಿದೆ. ಬಿಎಸ್ಎಸ್ಎಲ್ ಮಾತ್ರ ಪ್ರತಿಯೊಬ್ಬ ನೌಕರನಿಗೆ 10 ಸಾವಿರ ರೂಪಾಯಿ ಅಂತಲೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿದೆ. ಈಗ ಉದ್ಭವಿಸಿರುವ ಸಮಸ್ಯೆ ಎಂದರೆ ಗುತ್ತಿಗೆದಾರರು ಜಿ.ಎಸ್.ಟಿ ತೆರಿಗೆಯನ್ನು ಪಾವತಿಸಿಲ್ಲ. ಜಿ.ಎಸ್.ಟಿ. ಪಾವತಿಸಿದ ಬಿಲ್ ಗಳನ್ನು ನೀಡಿದರೆ ಮಾತ್ರ ಬಿಎಸ್ಎನ್ಎಲ್ ಹಣ ಬಿಡುಗಡೆ ಮಾಡುತ್ತಾರೆ. ಜಿ.ಎಸ್.ಟಿ. ಪಾವತಿಸಲು ಗುತ್ತಿಗೆದಾರರ ಬಳಿ ಹಣವಿಲ್ಲ. ಇದು ಗುತ್ತಿಗೆ ನೌಕರರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಪ್ರತಿ ತಿಂಗಳು ವೇತನ ಸಿಗದೆ ಗುತ್ತಿಗೆ ನೌಕರರು ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಶುಲ್ಕ ಇತರೆ ವೆಚ್ಚಗಳಿಗೆ ಹಣವಿಲ್ಲ. ಕುಟುಂಬ ನಿರ್ವಹಣೆಗೆ ಸಾಲ ಮಾಡುತ್ತಿದ್ದೇವೆ. ನಾವು ಕೆಲಸವನ್ನು ಮಾತ್ರ ಮಾಡುತ್ತಿದ್ದೇವೆ. ಬಾಕಿ ವೇತನವನ್ನು ನೀಡದಿದ್ದರೆ ಸಂಸಾರ ತೂಗಿಸುವುದು ಕಷ್ಟವಾಗಿದೆ. ಯಾರೂ ಸಾಲವನ್ನೂ ಕೊಡುತ್ತಿಲ್ಲ. ನಮ್ಮ ಭವಿಷ್ಯ ಕರಾಳವಾಗಿದೆ. ಜೀವನ ನಿರ್ವಹಣೆಗೆ ಕಷ್ಟವಾಗಿದ್ದು ಆತ್ಮಹತ್ಯೆ ಹಿಡಿಯುವುದೊಂದೇ ನಮಗೆ ಇರುವ ದಾರಿ. ಹಲವು ವರ್ಷಗಳಿಂದ ದುಡಿದರೂ ನಮ್ಮನ್ನು ಕಾಯಂ ಮಾಡಲಿಲ್ಲ. ಈಗ ನೋಡಿದರೆ 92 ಸಾವಿರ ಕಾಯಂ ನೌಕರರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ನಮಗೆ ವೇತನವೂ ಇಲ್ಲ. ಪಿಎಫ್ ಯಾವುದೂ ಇಲ್ಲ. ಸರ್ಕಾರ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಹೆಸರು ಹೇಳಲಿಚ್ಚಿಸದ ಗುತ್ತಿಗೆ ನೌಕರರು ಅಳಲುತೋಡಿಕೊಂಡರು.

ಒಂದು ಮೂಲದ ಪ್ರಕಾರ ಕಳೆದ ಮಾರ್ಚ್ ತಿಂಗಳಿಂದಲೂ ಗುತ್ತಿಗೆ ನೌಕರರಿಗೆ ವೇತನ ನೀಡಿಲ್ಲ. 80 ಸಾವಿರ ಗುತ್ತಿಗೆ ನೌಕರರು ಮಾನಸಿಕವಾಗಿ ತೊಳಲಾಟಕ್ಕೆ ಸಿಲುಕಿದ್ದಾರೆ. ಮಾನಸಿಕ ಹಿಂಸೆ ತಾಳದೆ ರಾಜ್ಯದಲ್ಲಿ ಒಬ್ಬರು ಹೃದಯಾಘಾತವಾಗಿ ತೀರಿಕೊಂಡಿದ್ದಾರೆ. ಹಲವು ಗುತ್ತಿಗೆ ನೌಕರರು ಮಾನಸಿಕ ಒತ್ತಡದಲ್ಲಿದ್ದು ಕೆಲಸ ನಿರ್ವಹಿಸುವುದು ದುಸ್ತರವಾಗಿದೆ. ಖಾಯಂ ನೌಕರರು ಸ್ವಯಂ ನಿವೃತ್ತಿ ತೆಗೆದುಕೊಂಡ ಮೇಲೆ ಗುತ್ತಿಗೆ ನೌಕರರಿಗೆ ಕೆಲಸದ ಒತ್ತಡವೂ ಹೆಚ್ಚಿದೆ. ಅವರ ಕೆಲಸವೆಲ್ಲವೂ ಗುತ್ತಿಗೆ ನೌಕರರ ಹೆಗಲಿಗೆ ವರ್ಗಾವಣೆಗೊಂಡಿದೆ. ಮೇಲಧಿಕಾರಿಗಳು ಹೇಳುವ ಪ್ರತಿಯೊಂದು ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಾಗಿದೆ. ಇವೆಲ್ಲವುಗಳಿಂದ ಗುತ್ತಿಗೆ ನೌಕರರು ಮಾನಸಿಕ ತೊಳಲಾಟಕ್ಕೆ ಸಿಕ್ಕಿ ಕಂಬನಿ ಮಿಡಿಯುತ್ತಿದ್ದಾರೆ. ಇವರ ಗೋಳು ಅರಣ್ಯರೋಧನವಾಗಿದೆ.

ಬಿಎಸ್ಎನ್ಎಲ್ ನಿಂದಲೇ ತರಂಗಾಂತರಗಳನ್ನು ಪಡೆಯುವ ಜಿಯೋ ಹೆಚ್ಚುಹೆಚ್ಚು ಲಾಭ ಪಡೆಯಲು ಹೇಗೆ ಸಾಧ್ಯವಾಯಿತು? ದೇಶದ ಜನರ ಸಂಪರ್ಕ ಸೇತುವೆಯಾಗಿರುವ ಬಿಎಸ್ಎನ್ಎಲ್ 4ಜಿ ಸೇವೆಯನ್ನು ಯಾಕೆ ಆರಂಭಿಸಲಿಲ್ಲ. ಸಾರ್ವಜನಿಕ ಕಂಪನಿಗಳೊಂದಿಗೆ ಪೈಪೋಟಿ ನೀಡುವಂತಹ ವಾತಾವರಣವನ್ನು ಕೇಂದ್ರ ಸರ್ಕಾರ ಸೃಷ್ಟಿಸದೇ ಇರುವುದರಿಂದ ಎಲ್ಲವೂ ಖಾಸಗಿಯವರ ಪಾಲಾಗುತ್ತಿದೆ. ಬಿಎಸ್ಎನ್ಎಲ್ ಐಸಿಯುನಲ್ಲಿದೆ ಅದು ಯಾವಾಗ ಕಣ್ಣುಮುಚ್ಚುತ್ತದೋ ಎಂಬದನ್ನು ಜನರು ಎದುರು ನೋಡುತ್ತಿದ್ದಾರೆ. ಹೀಗಾಗಿaT ಮುಂದಿನ ದಿನಗಳಲ್ಲಿ ಜಿಯೋ ಸಂಸ್ಥೆ ಸರ್ವಾಧಿಕಾರಿಯಂತೆ ವರ್ತಿಸಿದರೆ ಅಚ್ಚರಿಪಡಬೇಕಾಗಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...