Homeಮುಖಪುಟಅದಾನಿ-ಹಿಂಡೆನ್‌ಬರ್ಗ್ ಪ್ರಕರಣ: ಸೆಬಿ ತನಿಖೆಯಲ್ಲಿ ಹಸ್ತಕ್ಷೇಪಕ್ಕೆ ಸುಪ್ರೀಂಕೋರ್ಟ್ ನಕಾರ

ಅದಾನಿ-ಹಿಂಡೆನ್‌ಬರ್ಗ್ ಪ್ರಕರಣ: ಸೆಬಿ ತನಿಖೆಯಲ್ಲಿ ಹಸ್ತಕ್ಷೇಪಕ್ಕೆ ಸುಪ್ರೀಂಕೋರ್ಟ್ ನಕಾರ

- Advertisement -
- Advertisement -

ಅದಾನಿ ಸಮೂಹದ ಕಂಪನಿಗಳ ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ತಿರುಚುವಿಕೆ ಕುರಿತು ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಹೊರಿಸಲಾದ ಆರೋಪಗಳ ಕುರಿತು ಎಸ್‌ಐಟಿ ತನಿಖೆಗೆ ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಪ್ರಸ್ತುತ ನಡೆಸುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಸೆಬಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೆ ಸೂಕ್ತ ಕಾರಣಗಳಿಲ್ಲ ಎಂದು ಕೋರ್ಟ್ ಹೇಳಿದೆ.

ಅದಾನಿ ಸಮೂಹದ ವಿರುದ್ಧದ 24 ಪ್ರಕರಣಗಳ ಪೈಕಿ 22 ಪ್ರಕರಣಗಳ ತನಿಖೆಯನ್ನು ಸೆಬಿ ಪೂರ್ಣಗೊಳಿಸಿದೆ ಎಂದು ಕೋರ್ಟ್ ಗಮನಿಸಿದೆ. ಸಾಲಿಸಿಟರ್ ಜನರಲ್ ಅವರ ಭರವಸೆಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯವು, ಉಳಿದ 2 ಪ್ರಕರಣಗಳ ತನಿಖೆಯನ್ನು ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೆಬಿಗೆ ಸೂಚಿಸಿದೆ.

ಸೆಬಿ ತನಿಖೆಯನ್ನು ಅನುಮಾನಿಸಿ ಅರ್ಜಿದಾರರು ಪತ್ರಿಕೆಯ ವರದಿಗಳು ಮತ್ತು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಮಾಡುವ ಯೋಜನೆಯ (OCCRP)ವರದಿ ತೋರಿಸಿರುವುದನ್ನು ಮಾನ್ಯ ಮಾಡಲು ನ್ಯಾಯಾಲಯ ನಿರಾಕರಿಸಿದೆ. ಆಧಾರರಹಿತ ಸುದ್ದಿ ವರದಿಗಳು ಮತ್ತು ಮೂರನೇ ಪಕ್ಷದ ಸಂಸ್ಥೆಗಳ ವರದಿಗಳ ಆಧಾರದ ಮೇಲೆ ಶಾಸನಬದ್ಧ ಸಂಸ್ಥೆಯ ತನಿಖೆಯನ್ನು ಅನುಮಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?

ಜನವರಿ 24,2023 ರಂದು, ಯುಎಸ್ ಮೂಲದ ಕಿರು-ಮಾರಾಟ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ತನ್ನ ಸ್ಟಾಕ್ ಬೆಲೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಅವುಗಳನ್ನು ತಿರುಚುತ್ತಿದೆ ಎಂದು ಆರೋಪಿಸಿ ವರದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಯಾಗಿ, ಅದಾನಿ ಸಮೂಹವು 413 ಪುಟಗಳ ಸಮಗ್ರ ಉತ್ತರವನ್ನು ಪ್ರಕಟಿಸುವ ಮೂಲಕ ಆರೋಪಗಳನ್ನು ಕಟುವಾಗಿ ನಿರಾಕರಿಸಿತ್ತು.

ಈ ಬೆನ್ನಲ್ಲೇ ವಕೀಲರಾದ ವಿಶಾಲ್ ತಿವಾರಿ, ಎಂಎಲ್ ಶರ್ಮಾ, ಕಾಂಗ್ರೆಸ್ ನಾಯಕ ಡಾ. ಜಯಾ ಠಾಕೂರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಅನಾಮಿಕಾ ಜೈಸ್ವಾಲ್ ಅವರು ಅದಾನಿ ಸಮೂಹದ ವಂಚನೆಯ ಆರೋಪಗಳ ಕುರಿತು ತನಿಖೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.

ಮಾರ್ಚ್ 2ರಂದು ಈ ವಿಷಯದಲ್ಲಿ ಆದೇಶ ನೀಡಿದ ಸುಪ್ರೀಂ ಕೋರ್ಟ್, ಅದಾನಿ ಸಮೂಹದ ವಿಚಾರವಾಗಿ ಯಾವುದೇ ನಿಯಂತ್ರಕ ವೈಫಲ್ಯವನ್ನು ಹೊಂದಿದ್ದರೆ ತನಿಖೆ ನಡೆಸಲು ಸೆಬಿಯ ತಜ್ಞರ ಸಮಿತಿ ರಚಿಸಿತ್ತು. ತನಿಖಾ ಸಮಿತಿಯು ಒಪಿ ಭಟ್ (ಎಸ್‌ಬಿಐನ ಮಾಜಿ ಅಧ್ಯಕ್ಷ), ನಿವೃತ್ತ ನ್ಯಾಯಮೂರ್ತಿ ಜೆಪಿ ದೇವಧರ್, ಕೆವಿ ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರನ್ ಸುಂದರೇಶನ್ ಅವರನ್ನು ಒಳಗೊಂಡಿದ್ದು, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎಂ ಸಪ್ರೆ ಸಮಿತಿಯ ನೇತೃತ್ವ ವಹಿಸಿದ್ದಾರೆ.

ಮಾರ್ಚ್ 2ರ ಆದೇಶದಂತೆ ಸೆಬಿಗೆ ಸುಪ್ರೀಂ ಕೋರ್ಟ್ ತನಿಖೆ ಪೂರ್ಣಗೊಳಿಸಲು ನೀಡಿದ್ದ ಎರಡು ತಿಂಗಳ ಸಮಯವು ಮೇ 2 ರಂದು ಕೊನೆಗೊಂಡಿತ್ತು. ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸೆಬಿ, ತನಿಖೆಯನ್ನು ಪೂರ್ಣಗೊಳಿಸಲು ಆರು ತಿಂಗಳ ಅವಧಿಯನ್ನು ವಿಸ್ತರಿಸುವಂತೆ ಕೋರಿತ್ತು.

ಪ್ರಕರಣದ ವಹಿವಾಟುಗಳು ಸಂಕೀರ್ಣವಾಗಿವೆ ಮತ್ತು ಪರಿಶೀಲಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಸೆಬಿ ತನ್ನ ಅಫಿಡವಿಟ್‌ನಲ್ಲಿ ಹೇಳಿತ್ತು. ಕನಿಷ್ಠ ಸಾರ್ವಜನಿಕ ಷೇರುದಾರರ (MPS) ನಿಯಮಗಳ ತನಿಖೆಗೆ ಸಂಬಂಧಿಸಿದಂತೆ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಸೆಕ್ಯುರಿಟೀಸ್ ಕಮಿಷನ್ಸ್ (IOSCO) ನೊಂದಿಗೆ ಬಹುಪಕ್ಷೀಯ ತಿಳುವಳಿಕೆ (MMOU) ಅಡಿಯಲ್ಲಿ ಈಗಾಗಲೇ ಹನ್ನೊಂದು ಸಾಗರೋತ್ತರ ನಿಯಂತ್ರಕರನ್ನು ಸಂಪರ್ಕಿಸಿದೆ ಎಂದು ಸೆಬಿ ಸುಪ್ರೀಂ ಕೋರ್ಟ್ ಪೀಠಕ್ಕೆ ತಿಳಿಸಿತ್ತು.

ಸೆಬಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆರಂಭದಲ್ಲಿ ಸಂಪೂರ್ಣ ಆರು ತಿಂಗಳ ಅವಧಿ ವಿಸ್ತರಣೆ ಮಾಡಲು ನಿರಾಕರಿಸಿತ್ತು. ಆಗಸ್ಟ್ 14, 2023ರವರೆಗೆ ಗಡುವನ್ನು ವಿಸ್ತರಿಸಿ, ಮೇ 17 ರಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಆದರೆ, ಆಗಸ್ಟ್ 14ರಂದು ಕೂಡ ತನಿಖಾ ವರದಿ ಸಲ್ಲಿಸಲು ಸೆಬಿ ವಿಫಲವಾಗಿತ್ತು.

ಈ ಹಿನ್ನೆಲೆ ಅರ್ಜಿದಾರರಲ್ಲಿ ಒಬ್ಬರಾದ ವಕೀಲ ವಿಶಾಲ್ ತಿವಾರಿ ಸೆಬಿ ವಿರುದ್ದ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು. ಸೆಬಿಯಿಂದ ತನಿಖೆಯನ್ನು ಎಸ್‌ಐಟಿಗೆ ವರ್ಗಾಯಿಸುವಂತೆ ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌, ಕಳೆದ ವರ್ಷ ನವೆಂಬರ್ 24ರಂದು ಆದೇಶ ಕಾಯ್ದಿರಿಸಿತ್ತು.

ಇದನ್ನೂ ಓದಿ: ಗ್ಯಾರಂಟಿ ಪ್ರಶ್ನಿಸಿ ಅರ್ಜಿ: ವಿಚಾರಣೆ 3 ತಿಂಗಳು ಮುಂದೂಡಿದ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...