Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭತ್ತದ ಕಣಜ ಸಿಂಧನೂರಲ್ಲಿ ತ್ರಿಕೋನ ಸ್ಪರ್ಧೆ; ಬಿಜೆಪಿಗೆ ಮೊದಲ ಗೆಲುವಿನ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭತ್ತದ ಕಣಜ ಸಿಂಧನೂರಲ್ಲಿ ತ್ರಿಕೋನ ಸ್ಪರ್ಧೆ; ಬಿಜೆಪಿಗೆ ಮೊದಲ ಗೆಲುವಿನ ಬಯಕೆ; ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಕಾದಾಟ

- Advertisement -
- Advertisement -

ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಸಿಂಧನೂರು ತಾಲೂಕು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರದ ವ್ಯಾಪ್ತಿಯ ಬಹುತೇಕ ಭೂಮಿಯು ಕೃಷಿಗೆ ಯೋಗ್ಯವಾದ ಕಪ್ಪುಮಣ್ಣಿನಿಂದ ಕೂಡಿದ್ದು, ಸಿಂಧನೂರು ‘ರಾಯಚೂರಿನ ಭತ್ತದ ಕಣಜ’ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಬೆಳೆಯುವ ಸೋನಾಮಸೂರಿ ಅಕ್ಕಿಯು ವಿದೇಶಗಳಿಗೂ ರಫ್ತಾಗುತ್ತದೆ. ಕೃಷಿ ಚಟುವಟಿಕೆಗಳು ವರ್ಷಪೂರ್ತಿ ನಡೆಯುವುದರಿಂದ ಏಷ್ಯಾದಲ್ಲಿಯೇ ಇಲ್ಲಿ ಅತೀ ಹೆಚ್ಚು ಟ್ರ್ಯಾಕ್ಟರ್ ಮಾರಾಟವಾಗುತ್ತವೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಪಕ್ಕದ ಆಂಧ್ರದಿಂದ ರೈತರು ತಾವು ಬೆಳೆದ ಹತ್ತಿ ಮತ್ತು ಇತರೆ ಸರಕುಗಳು ತಂದು ಇಲ್ಲಿ ಮಾರುತ್ತಾರೆ.

ಇಲ್ಲಿ ಕನ್ನಡ ಜೊತಗೆ ಅನೇಕ ಭಾಷೆಗಳು ಚಾಲ್ತಿಯಲ್ಲಿವೆ. ಈ ಪ್ರದೇಶವು ಆಂಧ್ರದ ಗಡಿಗೆ ಹೊಂದಿಕೊಂಡಿದ್ದು ಇಲ್ಲಿ ಸುಮಾರು 16 ಸಾವಿರ ಆಂಧ್ರ ವಲಸಿಗರಿದ್ದಾರೆ; ಈ ಕಾರಣಕ್ಕಾಗಿಯೂ ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಆಂಧ್ರ ಮೂಲದ ಕೊಲ್ಲ ಶೇಷಗಿರಿರಾವ್ ಸ್ಪರ್ಧಿಸಿದ್ದರು. ಅಲ್ಲದೇ ಬಾಂಗ್ಲಾ ನಿರಾಶ್ರಿತರ 5 ಗ್ರಾಮಗಳಿದ್ದು ಬಂಗಾಲಿ ಭಾಷಿಕರು ಇದ್ದಾರೆ. ರಾಜಸ್ಥಾನಿ ಮಾರ್ವಾಡಿಗಳು ಎಪಿಎಂಸಿ ಮಾರುಕಟ್ಟೆಯಲ್ಲಿ ತಮ್ಮದೇ ಹಿಡಿತವನ್ನು ಸಾಧಿಸಿದ್ದಾರೆ. ರಾಜಸ್ಥಾನಿ, ಉರ್ದು, ಹಿಂದಿ ಸೇರಿ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಇಲ್ಲಿ ಸಿಗುತ್ತಾರೆ. ಸಿಂಧನೂರಿನಲ್ಲಿರುವ ಅಂಬಾದೇವಿಯ ಜಾತ್ರೆ ಪ್ರಸಿದ್ಧಿ ಪಡೆದಿದೆ.

ರಾಜಕೀಯ ಇತಿಹಾಸ

1952ರಿಂದ ಇಲ್ಲಿಯವರೆಗೆ ಕಾಂಗ್ರೆಸ್ 8 ಬಾರಿ ಜಯಗಳಿಸಿದ್ದು ಪಕ್ಷೇತರರು 3 ಬಾರಿ, ಜನತಾದಳ ಮತ್ತು ಜೆಡಿಯು ಒಮ್ಮೊಮ್ಮೆ ಗೆದ್ದಿದ್ದು, ಜೆಡಿ(ಎಸ್) ಎರಡು ಬಾರಿ ಜಯ ಗಳಿಸಿದೆ. ಪ್ರಬಲ ಲಿಂಗಾಯತ ಸಮುದಾಯ ಬಹುಸಂಖ್ಯಾತರಾಗಿರುವ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದ್ದರೆ, ಈ ಕ್ಷೇತ್ರ ಒಮ್ಮೆಯೂ ಬಿಜೆಪಿಗೆ ಅವಕಾಶವನ್ನು ನೀಡಿಲ್ಲ. 1952ರಲ್ಲಿ ಪಕ್ಷೇತರರಾಗಿ ಶಿವಬಸಪ್ಪಗೌಡ ಅವರು ಆಯ್ಕೆಯಾಗುತ್ತಾರೆ. 1957 ಮತ್ತು 1962ರಲ್ಲಿ ಬಸವಂತ ರಾವ್ ಬಸವನಗೌಡ 2 ಬಾರಿ ಜಯ ಗಳಿಸಿದ್ದಾರೆ. ಅಮರೇಗೌಡ ಗದ್ರಟಗಿಯವರು 5 ಬಾರಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದವರು. ಆದರೆ 1967ರಲ್ಲಿ ಮಾತ್ರ (ಪಕ್ಷೇತರ)ರಾಗಿ ಆಯ್ಕೆಯಾಗಿದ್ದರು. 1972ರಲ್ಲಿಯೇ ಸಿಂಧನೂರಿಗೆ ಸರಕಾರಿ ಪದವಿ ಮಹಾವಿದ್ಯಾಲಯ ಹಾಗೂ ಎಪಿಎಂಸಿ ತರುವಲ್ಲಿ ಇವರ ಪರಿಶ್ರಮ ಸ್ಮರಣೀಯ. ಇವರು ನ್ಯಾಯವಾದಿಯಾಗಿದ್ದರು ಹೋರಾಟದ ಹಿನ್ನೆಲೆಯವರಾಗಿದ್ದು ತಳಸಮುದಾಯದ ಜನರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದವರು. 1978ರಲ್ಲಿ ನಾರಾಯಣಪ್ಪ ಹನುಮಂತಪ್ಪ (ಕಾಂಗ್ರೆಸ್), 1983ರಲ್ಲಿ ಎಂ.ಮಲ್ಲಪ್ಪ (ಪಕ್ಷೇತರ), 1985ರಲ್ಲಿ ಆರ್. ನಾರಾಯಣಪ್ಪ

ಅಮರೇಗೌಡ ಗದ್ರಟಗಿ

(ಕಾಂಗ್ರೆಸ್) ಗೆದ್ದಿದ್ದರು. ನಂತರ ಕ್ಷೇತ್ರಕ್ಕೆ ಬಾದರ್ಲಿ ಹಂಪನಗೌಡರ ಪ್ರವೇಶವಾಗುತ್ತದೆ. ಮೊದಲ ಬಾರಿಗೆ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದ ಗೌಡರು ಮೊದಲ ಪ್ರಯತ್ನದಲ್ಲಿಯೇ ಜಯ ಗಳಿಸುತ್ತಾರೆ. ನಂತರ 1994ರಲ್ಲಿ ಕೆ. ವಿರೂಪಾಕ್ಷಪ್ಪನವರು ಕಾಂಗ್ರೆಸ್ ಪಕ್ಷದಿಂದ ಗೆಲ್ಲುತ್ತಾರೆ. 1999ರಲ್ಲಿ ಜೆಡಿಯುನಿಂದ 2004ರಲ್ಲಿ ಕಾಂಗ್ರೆಸ್‌ನಿಂದ ಬಾದರ್ಲಿಯವರು ಸತತ ಎರಡು ಬಾರಿ ಜಯ ಗಳಿಸುತ್ತಾರೆ. 2008ರಲ್ಲಿ ವೆಂಕಟರಾವ್ ನಾಡಗೌಡ ಜೆಡಿಎಸ್‌ನಿಂದ ಗೆಲವು ಪಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಮೂರು ಚುನಾವಣೆಗಳಲ್ಲಿ ಒಮ್ಮೆ ನಾಡಗೌಡರು, ಒಮ್ಮೆ ಹಂಪನಗೌಡ ಬಾದರ್ಲಿ ಗೆಲ್ಲುತ್ತಾ ಬಂದಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಾದರ್ಲಿ ಹಂಪನಗೌಡರು 49,213 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಬಿ.ಎಸ್.ಆರ್.ಕಾಂಗ್ರೆಸ್‌ನ ಕೆ.ಕರಿಯಪ್ಪ ಎರಡನೇ ಸ್ಥಾನ, ಜೆಡಿಎಸ್‌ನ ವೆಂಕಟರಾವ್ ನಾಡಗೌಡರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಬಿಜೆಪಿಯ ಕೊಲ್ಲಾ ಶೇಷಗಿರಿರಾವ್ 10,557 ಮತಗಳನ್ನು ಗಳಿಸಿದ್ದರು. 2018ರಲ್ಲಿ ಜೆಡಿಎಸ್ ಪಕ್ಷದಿಂದ ವೆಂಕಟರಾವ್ ನಾಡಗೌಡ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಕೇವಲ 1597 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ವೆಂಕಟರಾವ್ ನಾಡಗೌಡರು 71,514 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ 69,917 ಮತಗಳನ್ನು ಪಡೆದರು; ಬಿಜೆಪಿ ಅಭ್ಯರ್ಥಿಯಾಗಿದ್ದ ಕೊಲ್ಲಾ ಶೇಷಗಿರಿರಾವ್ ಠೇವಣಿಯನ್ನು ಕಳೆದುಕೊಂಡಿದ್ದರು.

ಜಾತಿವಾರು ಲೆಕ್ಕಾಚಾರ

ಸಿಂಧನೂರು ಲಿಂಗಾಯತ ಸಮುದಾಯ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಎಸ್‌ಸಿ-ಎಸ್‌ಟಿ, ಮುಸ್ಲಿಂ, ಕುರುಬ ಸಮುದಾಯದವರು ಇಲ್ಲಿ ನಿರ್ಣಾಯಕರಾಗಿದ್ದಾರೆ. ಕಳೆದ 70 ವರ್ಷಗಳಿಂದ ಇಲ್ಲಿ ಬಹುತೇಕ ಲಿಂಗಾಯತ ಸಮುದಾಯದ ಪ್ರತಿನಿಧಿಗಳೇ ಆಯ್ಕೆಯಾಗುತ್ತಾ ಬಂದಿದ್ದಾರೆ. 1985ರಲ್ಲಿ ಈಡಿಗ ಸಮುದಾಯದ ಆರ್.ನಾರಾಯಣಪ್ಪ, 1999ರಲ್ಲಿ ಕುರುಬ ಸಮುದಾಯದ ಕೆ.ವಿರೂಪಾಕ್ಷಪ್ಪ ಅವರು ಅಚ್ಚರಿಯ ರೀತಿಯಲ್ಲಿ ಜಯ ಗಳಿಸಿದ್ದರು. ಕ್ಷೇತ್ರದಲ್ಲಿ ಅಂದಾಜು 2,36,946 ಮತದಾರರಿದ್ದು, ಲಿಂಗಾಯತರು 55 ಸಾವಿರ, ಎಸ್ಸಿ-ಎಸ್ಟಿ 47 ಸಾವಿರ, ಕುರುಬರು 35 ಸಾವಿರ, ಮುಸ್ಲಿಂ 36 ಸಾವಿರ, ಆಂಧ್ರ ವಲಸಿಗರು 16 ಸಾವಿರ, ಬಂಗಾಲಿಗಳು 13 ಸಾವಿರ ಮತ್ತು ಉಳಿದ ಸಣ್ಣ ಸಂಖ್ಯೆಯ ಸಮುದಾಯದ 25 ಸಾವಿರ ಮತದಾರರಿದ್ದಾರೆ. ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದು, 10 ಹೋಬಳಿ ಕೇಂದ್ರಗಳನ್ನು ಒಳಗೊಂಡಿದೆ.

ಕೆ. ವಿರೂಪಾಕ್ಷಪ್ಪ

 

ಬಾದರ್ಲಿ ಕುಟುಂಬದ ಪ್ರಾಬಲ್ಯ

ಕಳೆದ ಮೂವತ್ತು ವರ್ಷಗಳಿಂದ ಲಿಂಗಾಯತ ಸಮುದಾಯದ ಹಂಪನಗೌಡ ಬಾದರ್ಲಿ ಅವರ ಕುಟುಂಬ ತಮ್ಮ ಕ್ಷೇತ್ರವಷ್ಟೆ ಅಲ್ಲದೇ ರಾಯಚೂರು ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಆದ ಹಿಡಿತ ಹೊಂದಿದೆ. ಹಂಪನಗೌಡ ಅವರ ಅಣ್ಣನ ಮಕ್ಕಳು ರಾಜಕೀಯವಾಗಿ ಗಮನ ಸೆಳೆದಿದ್ದಾರೆ. ಪಂಪನಗೌಡ ಬಾದರ್ಲಿ ಒಮ್ಮೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಲ್ಲದೆ ಅನೇಕ ವರ್ಷಗಳ ಕಾಲ ಆರ್.ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಅವರ ಇನ್ನೊಬ್ಬ ಅಣ್ಣನ ಮಗ ಬಾಬುಗೌಡ ಅವರು ಈಗ ಬಾದರ್ಲಿ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದರು. ಕುಟುಂಬ ರಾಜಕಾರಣದ ಆರೋಪ ಇವರ ಮೇಲಿದೆ. ಅಲ್ಲದೆ ಪಕ್ಕದ ಮಸ್ಕಿ ಕ್ಷೇತ್ರದ ಮೇಲೂ ಹಿಡಿತ ಹೊಂದಿರುವ ಹಂಪನಗೌಡರು ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಬಸವನಗೌಡ ತುರ್ವಿಹಾಳ್ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುನಗುಂದದಲ್ಲಿ ಕೈ-ಕಮಲ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿ

ತಾತ ಮೊಮ್ಮಗನ ನಡುವೆ ಜಿದ್ದಾಜಿದ್ದಿ

2017ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಸವನಗೌಡ ಬಾದರ್ಲಿಯವರು ರಾಹುಲ್ ಗಾಂಧಿಯವರಿಗೆ ಅತ್ಯಾಪ್ತರಾಗಿದ್ದರು. ಮೊದಮೊದಲು ಕೊಪ್ಪಳ ಲೋಕಸಭೆಯಿಂದ ಎಂಪಿ ಸ್ಥಾನಕ್ಕೆ ಕಣ್ಣಿಟ್ಟಿದ್ದರು. ಅದು ಸಾಧ್ಯವಾಗದ ಕಾರಣ ರಾಜ್ಯ ರಾಜಕಾರಣದತ್ತ ತಮ್ಮ ಒಲುವು ತೋರಿದರು. ಅಲ್ಲದೇ ತಮ್ಮ ತಾತನವರಾದ ಹಂಪನಗೌಡ ಬಾದರ್ಲಿಯವರಿಗೇ ಎದುರಾಳಿಯಾದರು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಾಗಿನಿಂದ ಇಲ್ಲಿಯವರೆಗೆ ಕ್ಷೇತ್ರದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಜೊತೆಗೆ ಪ್ರತಿ ಹಂತದಲ್ಲಿ ಹಂಪನಗೌಡರಿಗೆ ಪೈಪೋಟಿ ನೀಡುತ್ತಾ ಬಂದಿದ್ದಾರೆ. ಕೊನೆಗೆ ಸಿಂಧನೂರು ಟಿಕೆಟ್‌ಗೆ ಪ್ರಬಲ ಪೈಪೋಟಿ ನೀಡಿ ಸಿಗದಿದ್ದಾಗ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ರಾಜ್ಯ ಯುವ ಘಟಕದ ಅಧ್ಯಕ್ಷ ಮಹ್ಮದ್ ನಲಪಾಡ್ ಅವರು ಸಿಂಧನೂರಿಗೆ ಬಂದು ಬಸವನಗೌಡ ಅವರನ್ನು ಮನವೊಲಿಸಿದ ನಂತರ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆ ಟಿಕೆಟ್ ಮತ್ತು ಮಂತ್ರಿಮಂಡಲಕ್ಕೆ ಸಮಾನದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 50% ಬಸವನಗೌಡ ಬೆಂಬಲಿಗರಿಗೆ ಟಿಕೆಟ್ ನೀಡುವ ಭರವಸೆಯನ್ನು ರಾಜ್ಯ ಉಸ್ತುವಾರಿ ಸುರ್ಜೆವಾಲ ನೀಡಿದ್ದಾರೆ ಎನ್ನಲಾಗುತ್ತಿದೆ. ಇಷ್ಟಾಗಿಯೂ ಬಸವನಗೌಡರು ಹಂಪನಗೌಡರಿಗೆ ಎಷ್ಟರಮಟ್ಟಿಗೆ ಸಹಕರಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಬಸವನಗೌಡ ಬಾದರ್ಲಿ

 

ಜೆಡಿಎಸ್

ಜೆಡಿಎಸ್ ಪಕ್ಷದ ವೆಂಕಟರಾವ್ ನಾಡಗೌಡರು ಮೂಲತಃ ಜವಳಗೇರ ಸಂಸ್ಥಾನಕ್ಕೆ ಸೇರಿದ ರಾಜಮನೆತನದವರು. ಇವರು 2008ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ 14,874 ಮತಗಳ ಅಂತರದಿಂದ ಗೆದ್ದು, ಮೊದಲ ಬಾರಿಗೆ ಜೆಡಿಎಸ್ ಖಾತೆ ತೆರೆದಿದ್ದರು. ನಂತರ ನಡೆದ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಜಾರುತ್ತಾರೆ. 2018 ಚುನಾವಣೆಯಲ್ಲಿ 1,597 ಮತಗಳ ಅಂತರದಲ್ಲಿ ಜಯಗಳಿಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವರಾದರು. ತಾಲೂಕಿನ ಇತಿಹಾಸದಲ್ಲೇ ಮೊದಲ ಮಂತ್ರಿ ಎಂಬ ಹೆಗ್ಗಳಿಕೆ ಇವರದ್ದು. ಪ್ರಸ್ತುತ ಹಾಲಿ ಶಾಸಕರಾಗಿರುವ ನಾಡಗೌಡರಿಗೆ ಆಡಳಿತ ವಿರೋಧಿ ಅಲೆ ಇದೆ. ಇವರು ಗೆದ್ದು ಒಂದು ವರ್ಷದಲ್ಲೇ ಸಿಂಧನೂರು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುತ್ತದೆ. ನಾಡಗೌಡರ ಮಗನ ವಿವಾದಗಳು ಅವರಿಗೆ ತಲೆನೋವಾಗಿವೆ.

ಬಿಜೆಪಿ

ಸಿಂಧನೂರಿನ ಮತದಾರರು ಇಲ್ಲಿಯವರೆಗೆ ಒಮ್ಮೆಯೂ ಬಿಜೆಪಿಗೆ ಅವಕಾಶವನ್ನೇ ನೀಡಿಲ್ಲ. ನಡೆದಿರುವ ಬಹುತೇಕ ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದರೂ, ಅನೇಕ ಬಾರಿ ಠೇವಣಿಯೂ ಬಂದಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆ. ಕರಿಯಪ್ಪನವರು ಕಾಂಗ್ರೆಸ್ ತೊರೆದು ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಕೆ. ಕರಿಯಪ್ಪನವರು 2018ರ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದರು. ತಾಲೂಕಿನಲ್ಲಿ ಕುರುಬ ಸಮುದಾಯವು ಕೆ.ಕರಿಯಪ್ಪನವರ ಬೆಂಬಲಕ್ಕಿದ್ದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಇವರೊಂದಿಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಟಿಕೆಟ್ ವಂಚಿತ ಶಿವನಗೌಡ ಗೊರೆಬಾಳ್ ಕಾಂಗ್ರೆಸ್ ಪಾಳಯಕ್ಕೆ ಸೇರಿದ್ದಾರೆ. ಬಿಜೆಪಿಯಲ್ಲಿರುವ ಕೆಲ ಲಿಂಗಾಯತ ಮುಖಂಡರು ಪರೋಕ್ಷವಾಗಿ ಹಂಪನಗೌಡರ ಬೆಂಬಲಕ್ಕೆ ಇದ್ದಾರೆ ಎಂದು ಹೇಳಲಾಗುತ್ತಿದ್ದರೂ, ಒಟ್ಟಾರೆಯಾಗಿ ಇಲ್ಲಿಯವರೆಗೆ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಿದ್ದ ಬಿಜೆಪಿ, ಸಿಂಧನೂರು ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪೈಪೋಟಿ ಒಡ್ಡುತ್ತಿದೆ.

ಕ್ಷೇತ್ರದ ಸಮಸ್ಯೆಗಳು

ಸಿಂಧನೂರು ಕ್ಷೇತ್ರವು ಆರ್ಥಿಕವಾಗಿ ಅಧಿಕ ವೇಗದಲ್ಲಿ ಬೆಳೆಯುತ್ತಿದೆ. ಆದರೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಹರಿಸಿದರೂ ಅಂಚಿನಲ್ಲಿರುವ ರೈತರ ಜಮೀನುಗಳಿಗೆ ನೀರು ಸಿಗುತ್ತಿಲ್ಲ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಅಧಿಕ ಪಿ.ಯು. ಕಾಲೇಜುಗಳು ಮತ್ತು 15ಕ್ಕೂ ಹೆಚ್ಚು ಪದವಿ ಕಾಲೇಜುಗಳಿದ್ದರೂ ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆ ಎದ್ದು ಕಾಣುತ್ತಿದೆ. ಮೆಡಿಕಲ್, ಇಂಜಿನಿಯರಿಂಗ್, ಕಾನೂನು ಕಾಲೇಜುಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ. ಎಷ್ಟೇ ಶಿಕ್ಷಣ ಸಂಸ್ಥೆಗಳು ಇದ್ದರೂ ಇಲ್ಲಿನ ವಿದ್ಯಾವಂತರು ದೂರದ ಬೆಂಗಳೂರಿಗೆ ಕೆಲಸ ಅರಸಿ ಅಲೆಯುವುದು ತಪ್ಪಿಲ್ಲ.

ಗೆಲುವಿನ ಲೆಕ್ಕಾಚಾರ

ಕಾಂಗ್ರೆಸ್‌ನಲ್ಲಿದ್ದ ಕೆ. ಕರಿಯಪ್ಪನವರು ಬಿಜೆಪಿ ಸೇರಿ, ‘ನನಗೆ ಒಂದು ಅವಕಾಶ ಕೊಡಿ’ ಎಂದು ಕೇಳುತ್ತಿದ್ದಾರೆ. ಜೆಡಿಎಸ್‌ನ ವೆಂಕಟರಾವ್ ನಾಡಗೌಡರು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದು, ಜೆಡಿಎಸ್‌ನ ಪ್ರಣಾಳಿಕೆಯ ಮೇಲೆ ಭರವಸೆಯಿಟ್ಟಿದ್ದಾರೆ. ಈ ಬಾರಿಯೂ ನಾನೇ ಗೆಲ್ಲೋದು ಅಂತ ಹೇಳುತ್ತಿದ್ದಾರೆ. ಜೆಡಿ(ಎಸ್) ಕೆಳೆದ ಎರಡು ಮೂರು ತಿಂಗಳಿಂದ ಅಬ್ಬರದ ಪ್ರಚಾರ ಕೂಡ ಮಾಡುತ್ತಿದೆ. ತಾತ ಮೊಮ್ಮಗನ ನಡುವೆ ಟಿಕೆಟ್ ಕಾದಾಟ ಮುಗಿದಿದ್ದು ಬಸವನಗೌಡ ಬಾದರ್ಲಿಯವರು, ಇಷ್ಟು ದಿನ ಪ್ರತಿಸ್ಪರ್ಧಿಯಾಗಿದ್ದ ಅವರ ತಾತ ಹಂಪನಗೌಡ ಬಾದರ್ಲಿ ಅವರ ಪರ ಪ್ರಚಾರಕ್ಕೆ ಹೋಗುತ್ತಾರಾ ಎಂಬ ಕುತೂಹಲ ಹೆಚ್ಚಿದೆ. ಒಟ್ಟಾರೆಯಾಗಿ ಈ ಬಾರಿ ತ್ರಿಕೋನ ಸ್ಪರ್ಧೆ ನಿಚ್ಚಳವಾಗಿದ್ದು, ಬಿಜೆಪಿ ಮೋದಿಯವರನ್ನು ಸಿಂಧನೂರು ಕ್ಷೇತ್ರಕ್ಕೆ ಕರೆಸಿ ಅಬ್ಬರದ ಪ್ರಚಾರದ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದೆ

ಪ್ರಬಲ ಲಿಂಗಾಯತ ಸಮುದಾಯದ ವೋಟ್ ಬ್ಯಾಂಕ್, ರಾಜ್ಯ ಸರ್ಕಾರದ ಎಸ್.ಟಿ/ಎಸ್.ಸಿ ಮೀಸಲಾತಿ ಗೊಂದಲದ ನಿರ್ಣಯಗಳು, ಅಲ್ಪಸಂಖ್ಯಾತರ ಮೀಸಲಾತಿ ರದ್ದು ಮಾಡಿರುವುದು, ಬಸವನಗೌಡ ಬಾದರ್ಲಿ ಕಣದಿಂದ ಹಿಂದೆ ಸರಿದಿರುವುದು, ಈ ಎಲ್ಲ ಸಂಗತಿಗಳಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿರುವಂತೆ ಕಾಣುತ್ತದೆ.

ಕೃಷ್ಣ ಎಸ್.ಬಾದರ್ಲಿ

ಕೃಷ್ಣ ಎಸ್.ಬಾದರ್ಲಿ
ಗ್ರಾಫಿಕ್ ಡಿಸೈನರ್ ನ್ಯಾಯಪಥ ವಾರಪತ್ರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...