Homeಮುಖಪುಟಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಸಂಸದ ಡ್ಯಾನಿಶ್ ಅಲೀ ಕಾಂಗ್ರೆಸ್ ಸೇರ್ಪಡೆ

ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಸಂಸದ ಡ್ಯಾನಿಶ್ ಅಲೀ ಕಾಂಗ್ರೆಸ್ ಸೇರ್ಪಡೆ

- Advertisement -
- Advertisement -

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಯಿಂದ ಉಚ್ಚಾಟನೆಗೊಂಡಿದ್ದ ಲೋಕಸಭೆ ಸಂಸದ ಡ್ಯಾನಿಶ್‌ ಅಲೀ ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಲೀ, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದರು.

ಮಣಿಪುರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಅಲೀ ಅವರು ಕಾಂಗ್ರೆಸ್ ಸೇರುವ ಮುನ್ಸೂಚನೆ ನೀಡಿದ್ದರು. ಭಾರತ್ ಜೋಡೋ ಯಾತ್ರೆ ವೇಳೆ ತೌಬಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದ ಅಲೀ, “ರಾಜಕಾರಣಿಯಾಗಿ ‘ಏಕತೆ ಮತ್ತು ನ್ಯಾಯಕ್ಕಾಗಿ’ ನಡೆಯುತ್ತಿರುವ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವುದು ನನ್ನ ಕರ್ತವ್ಯ” ಎಂದಿದ್ದರು.

ತನ್ನ ಕ್ಷೇತ್ರದ ಅಮ್ರೋಹದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಉಸ್ತುವಾರಿಯನ್ನು ಸ್ವತಃ ಅಲೀ ಅವರೇ ವಹಿಸಿದ್ದರು. ಈ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟಿಸಲಾಗಿತ್ತು.

ಅಲೀ ಅವರು 2018 ರವರೆಗೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜಾತ್ಯಾತೀತ ಜನತಾದಳದ (ಜೆಡಿಎಸ್) ಜೊತೆ ಗುರುತಿಸಿಕೊಂಡಿದ್ದರು. 2018ರ ಕರ್ನಾಟಕ ಚುನಾವಣೆಯಲ್ಲಿ ಅಲೀ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಿಎಸ್ಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿ ಹಿನ್ನೆಲೆ, ದೇವೇಗೌಡರ ಶಿಫಾರಸಿನ ಮೇರೆಗೆ ಅಲೀ ಅವರನ್ನು ಬಿಎಸ್ಪಿ ಅಮ್ರೋಹಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಕಳೆದ ವರ್ಷ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆಯಿಂದ ಅನರ್ಹಗೊಂಡಾಗ ಇಂಡಿಯಾ ಒಕ್ಕೂಟ ಸಂಸತ್ ಬಳಿ ಪ್ರತಿಭಟನೆ ನಡೆಸಿತ್ತು. ಬಿಎಸ್ಪಿ ಇಂಡಿಯಾ ಒಕ್ಕೂಟ ಸೇರದಿದ್ದರೂ, ಅಂದಿನ ಪ್ರತಿಭಟನೆಯಲ್ಲಿ ಡ್ಯಾನಿಶ್ ಅಲೀ ಪಾಲ್ಗೊಂಡಿದ್ದರು.

ಕಳೆದ ವರ್ಷದ ಸೆಪ್ಟೆಂಬರ್‌ 21ರಂದು ಲೋಕಸಭೆಯಲ್ಲಿ ಚಂದ್ರಯಾನ ಮಿಷನ್‌-3ರ ಯಶಸ್ಸಿನ ಕುರಿತ ಚರ್ಚೆಯ ವೇಳೆ ಬಿಜೆಪಿ ಸಂಸದ ರಮೇಶ್ ಬಿಧುರಿ ಡ್ಯಾನಿಶ್ ಅಲೀ ಅವರನ್ನು ಗುರಿಯಾಗಿಸಿ, ಭದ್ವಾ (ಪಿಂಪ್), ಕತ್ವಾ (ಮುಂಜಿ ಮಾಡಿಸಿಕೊಂಡವರು) ಮುಲ್ಲಾ ಉಗ್ರವಾದಿ (ಮುಸ್ಲಿಂ ಭಯೋತ್ಪಾದಕ), ಅತಂಕವಾದಿ (ಭಯೋತ್ಪಾದಕ) ಇತ್ಯಾದಿ ಅಸಂಸದೀಯ ಪದಗಳನ್ನು ಬಳಸಿ ನಿಂದಿಸಿದ್ದರು. ಕೋಮುವಾದಿ ಭಾಷಣ ಮಾಡಿದ್ದರು. ಇದಕ್ಕೆ ದೇಶದಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು.

ಬಿಧುರಿ ಹೇಳಿಕೆಗೆ ಲೋಕಸಭೆಯಲ್ಲಿ ಅಂದೇ ವಿಷಾದ ವ್ಯಕ್ತಪಡಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದರ ಹೇಳಿಕೆಯಿಂದ ಪ್ರತಿಪಕ್ಷದ ಸದಸ್ಯರ ಮನಸ್ಸಿಗೆ ನೋವಾಗಿದ್ದರೆ ಸಂಸದ ಹೇಳಿಕೆಯನ್ನು ಕಡತಗಳಿಂದ ತೆಗೆದು ಹಾಕಲು ನಾನು ಸ್ಪೀಕರ್‌ಗೆ ಆಗ್ರಹಿಸುತ್ತೇನೆ ಎಂದಿದ್ದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಮೇಜು ತಟ್ಟಿ ಬೆಂಬಲ ವ್ಯಕ್ತಪಡಿಸಿದ್ದರು.

ಬಳಿಕ ರಮೇಶ್ ಬಿಧುರಿ ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿ ಮುಂದೆ ಕ್ಷಮೆ ಯಾಚಿಸಿದ್ದರು. ಅಲ್ಲಿಗೆ ಪ್ರಕರಣ ಇತ್ಯರ್ಥಗೊಂಡಿತ್ತು.

ಇದನ್ನೂ ಓದಿ : ನಿನ್ನೆ ತೆಲಂಗಾಣ ಗವರ್ನರ್ ಸ್ಥಾನಕ್ಕೆ ರಾಜೀನಾಮೆ; ಇಂದು ಪುನಃ ಬಿಜೆಪಿ ಸೇರಿದ ತಮಿಳಿಸೈ ಸೌಂದರರಾಜನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...