Homeಮುಖಪುಟಜೈಪುರ ರೈಲಿನಲ್ಲಿ RPF ಪೇದೆ ನಾಲ್ವರನ್ನು ಹತ್ಯೆ ಮಾಡುವಾಗ ಅಡಗಿ ಕುಳಿತಿದ್ದ ಪೇದೆಗಳು: ತಡವಾಗಿ ಕರ್ತವ್ಯದಿಂದ...

ಜೈಪುರ ರೈಲಿನಲ್ಲಿ RPF ಪೇದೆ ನಾಲ್ವರನ್ನು ಹತ್ಯೆ ಮಾಡುವಾಗ ಅಡಗಿ ಕುಳಿತಿದ್ದ ಪೇದೆಗಳು: ತಡವಾಗಿ ಕರ್ತವ್ಯದಿಂದ ವಜಾ

- Advertisement -
- Advertisement -

ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಕಾನ್ಸ್‌ಟೇಬಲ್ ಚೇತನ್‌ಸಿಂಗ್‌  ಚೌಧರಿ ಎಂಬಾತ  ಹಿರಿಯ ಸಹೋದ್ಯೋಗಿ ಮತ್ತು ಮೂವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡವಾಗಿ ಇಬ್ಬರು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಾನ್‌ಸ್ಟೆಬಲ್‌ಗಳನ್ನು ಸೇವೆಯಿಂದ ವಜಾ ಗೊಳಿಸಲಾಗಿದೆ. ಇವರು ಕೃತ್ಯ ನಡೆದ ವೇಳೆ ಪಕ್ಕದಲ್ಲೇ ಇದ್ದು, ಕೃತ್ಯವನ್ನು ಗಮನಿಸಿದರೂ ರಕ್ಷಣೆ ಮಾಡದೆ ಅಡಗಿ ಕುಳಿತಿದ್ದರು ಎನ್ನವುದು ತನಿಖೆಯ ವೇಳೆ ಬಯಲಾಗಿದೆ.

ಶುಕ್ರವಾರ ಪಶ್ಚಿಮ ರೈಲ್ವೇಯ ಮುಂಬೈ ವಿಭಾಗದ ಆರ್‌ಪಿಎಫ್‌ನ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಎಸ್‌ಕೆಎಸ್ ರಾಥೋಡ್ ಅವರು ಕಾನ್‌ಸ್ಟೆಬಲ್‌ಗಳಾದ ಅಮಯ್ ಆಚಾರ್ಯ ಮತ್ತು ನರೇಂದ್ರ ಪರ್ಮಾರ್ ಅವರನ್ನು ವಜಾಗೊಳಿಸಿದ್ದು, ಅಮಾನತುಗೊಂಡ ಪೇದೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಪ್ರಯಾಣಿಕರಿಗೆ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸುವುದು ಕರ್ತವ್ಯದಲ್ಲಿರುವ ಆರೋಪಿ ಕಾನ್‌ಸ್ಟೆಬಲ್‌ಗಳ ಜವಾಬ್ದಾರಿಯಾಗಿತ್ತು, ಆದರೆ, ಅವರು ರಕ್ಷಣೆ ನೀಡಲು ವಿಫಲರಾಗಿದ್ದಾರೆ. ಆರೋಪಿ ಕಾನ್ಸ್‌ಟೇಬಲ್‌ನ ಕೃತ್ಯವು ಪ್ರಯಾಣಿಕರಲ್ಲಿ ಆರ್‌ಪಿಎಫ್‌ನ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ ಮತ್ತು ಶಿಸ್ತಿನ ಬಗ್ಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಅದೇ ರೀತಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು, ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾದ ಕಾನ್ಸ್‌ಟೇಬಲ್‌ಗಳನ್ನು ಪಡೆಯಲ್ಲಿ ಮುಂದುವರಿಸುವುದು ಆರ್‌ಪಿಎಫ್‌ಗೆ ಮಾರಕವಾಗುತ್ತದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆಚಾರ್ಯ ಅವರ ವಜಾ ಆದೇಶದ ಪ್ರಕಾರ, ಅವರು ಘಟನೆಯ ವೇಳೆ ಮಧ್ಯಪ್ರವೇಶಿಸುವ ಬದಲು ಎಸ್ -4 ಕೋಚ್‌ನ ವಾಶ್‌ರೂಮ್‌ನಲ್ಲಿ ಅಡಗಿಕೊಂಡಿದ್ದರು. ಪರ್ಮಾರ್ ಅವರ ವಜಾ ಆದೇಶದ ಪ್ರಕಾರ, ಚೌಧರಿ ತನ್ನ ಮುಂದೆ ಬಂದೂಕು ತೋರಿಸಿ ಒಬ್ಬ ಪ್ರಯಾಣಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಪ್ರಕಾರ ಈ ವೇಳೆ ಪರ್ಮಾರ್ ಮಧ್ಯಪ್ರವೇಶಿಸುವ ಬದಲು ಇತರ ಪ್ರಯಾಣಿಕರ ಹಿಂದೆ ಅಡಗಿಕೊಂಡಿದ್ದನ್ನು ತೋರಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಸೇವೆಯಿಂದ ವಜಾಗೊಂಡಿರುವ ಕೃತ್ಯದ ಆರೋಪಿ ಚೌಧರಿ ಪ್ರಸ್ತುತ ಅಕೋಲಾ ಜೈಲಿನಲ್ಲಿದ್ದಾನೆ. ಈತ ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೂವರು ಪ್ರಯಾಣಿಕರಾದ ಅಬ್ದುಲ್ ಖಾದರ್ ಮೊಹಮ್ಮದ್ ಹುಸೇನ್ ಭಾನಪುರವಾಲಾ, ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಮತ್ತು ಆರ್‌ಪಿಎಫ್ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಟಿಕಾರಾಂ ಮೀನಾ ಅವರನ್ನು ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದ. ಈತನ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಡಿಯೋದಲ್ಲಿ ಗಡ್ಡದಾರಿ ಮುಸ್ಲಿಮರ ಮೇಲೆ ಚೇತನ್‌ ಸಿಂಗ್‌ ಫೈರಿಂಗ್‌ ಮಾಡುವುದು ಸೆರೆಯಾಗಿತ್ತು. ಈತ ವಿಡಿಯೋದಲ್ಲಿ ಮುಸ್ಲಿಮರು ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿದ್ದಾರೆ. ಇದನ್ನು ಮಾದ್ಯಮಗಳು ತೋರಿಸುತ್ತಿರುವುದು. ನೀವು ಭಾರತದಲ್ಲಿ ಬದುಕಲು ಬಯಸುವುದಾದರೆ ಮೋದಿ, ಯೋಗಿ ಹಾಗೂ ನಿಮ್ಮ ಠಾಕ್ರೆಗೆ ಮತ ಚಲಾಯಿಸಿ ಎಂದು ಹೇಳಿರುವುದು ಕೂಡ ವೀಡಿಯೊದಲ್ಲಿ ದಾಖಲಾಗಿದೆ.

ಘಟನೆಯ ನಂತರ ಚೌಧರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಶಸ್ತ್ರಾಸ್ತ್ರ ಕಾಯಿದೆ ಮತ್ತು ಭಾರತೀಯ ರೈಲ್ವೇ ಕಾಯ್ದೆಯ ಸೆಕ್ಷನ್‌ಗಳು ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಘಟನೆಯ ಕುರಿತು ಸಮಗ್ರ ತನಿಖೆಗೆ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರೈಲ್ವೆ ಮಂಡಳಿ ರೂಪಿಸಿತ್ತು. ಉತ್ತರಪ್ರದೇಶದ ಹತ್ರಾಸ್‌ ಮೂಲದ ಚೇತನ್ ಸಿಂಗ್‌ನನ್ನು ಕಳೆದ ಮಾರ್ಚ್‌ನಲ್ಲಿ ಭಾವನಗರ ವಿಭಾಗದಿಂದ ಮುಂಬೈಗೆ ವರ್ಗಾವಣೆ ಮಾಡಲಾಗಿತ್ತು. ಆ ಬಳಿಕ ಹತ್ರಾಸ್‌ಗೆ ಭೇಟಿ ನೀಡಿದ್ದ ದುಷ್ಕರ್ಮಿ ಜು.17ರಂದು ಊರಿಗೆ ಹಿಂದಿರುಗಿದ್ದ. ಈತ ರೈಲಿನಲ್ಲಿ ಕೃತ್ಯದ ಬಳಿಕ ಪರಾರಿಯಾಗಲು ಯತ್ನಿಸಿದ್ದು ರೈಲ್ವೆ ಪೊಲೀಸ್ ಸಿಬ್ಬಂದಿ ಬಂಧಿಸಿದ್ದರು.

ಇದನ್ನು ಓದಿ: ಚುನಾವಣಾ ಆಯುಕ್ತರಾಗಿ ನೇಮಕಾತಿ ವೇಳೆಯೂ ಉದ್ಭವಿಸಿದ್ದ ವಿವಾದ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...