Homeಮುಖಪುಟಚುನಾವಣಾ ಆಯುಕ್ತ ಅರುಣ್ ಗೋಯಲ್‌ ರಾಜೀನಾಮೆ: ಪ್ರಧಾನಿ ಉತ್ತರಿಸುವಂತೆ ಕಾಂಗ್ರೆಸ್‌ ಆಗ್ರಹ

ಚುನಾವಣಾ ಆಯುಕ್ತ ಅರುಣ್ ಗೋಯಲ್‌ ರಾಜೀನಾಮೆ: ಪ್ರಧಾನಿ ಉತ್ತರಿಸುವಂತೆ ಕಾಂಗ್ರೆಸ್‌ ಆಗ್ರಹ

- Advertisement -
- Advertisement -

ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್‌ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌, ಈ ಕುರಿತು ಪ್ರಧಾನಿ ಮೋದಿ ಉತ್ತರಿಸುವಂತೆ ಆಗ್ರಹಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದೇನು ಚುನಾವಣಾ ಆಯೋಗವೇ ಅಥವಾ ಚುನಾವಣಾ ಲೋಪವೇ?  ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚುನಾವಣಾ ಆಯೋಗದ ಸಮಿತಿಯಲ್ಲಿ ಕೇವಲ ಒಬ್ಬರು ಸದಸ್ಯರಷ್ಟೇ ಇದ್ದಾರೆ.  ಇದು ಏಕೆ? ಎಂದು ಪ್ರಶ್ನಿಸಿದ್ದಾರೆ.

ನಾನು ಈ ಹಿಂದೆಯೇ ಹೇಳಿದಂತೆ, ಸ್ವತಂತ್ರ ಸಂಸ್ಥೆಗಳ ವ್ಯವಸ್ಥಿತ ನಾಶವನ್ನು ನಿಲ್ಲಿಸದಿದ್ದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರಂಕುಶ ಪ್ರಭುತ್ವವು ಅತಿಕ್ರಮಿಸಲಿದೆ. ಕುಸಿಯುತ್ತಿರುವ ಸಾಂವಿಧಾನಿಕ ಸಂಸ್ಥೆಗಳ ಪಟ್ಟಿಗೆ ಇದೀಗ ಚುನಾವಣಾ ಆಯೋಗವೂ ಸೇರ್ಪಡೆಯಾಗಿದೆ. ಚುನಾವಣಾ ಆಯೋಗದ ಸಮಿತಿಯಲ್ಲಿ ಮೂವರು ಸದಸ್ಯರು ಇರಬೇಕು. ಆದರೆ, ಗೋಯಲ್‌ ಅವರು ತಮ್ಮ ಸ್ಥಾನ ತೊರೆದಿರುವುದರಿಂದ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಮಾತ್ರವೇ ಉಳಿದಿದ್ದಾರೆ. ಸಮಿತಿಯಲ್ಲಿದ್ದ ಮತ್ತೊಬ್ಬ ಚುನಾವಣಾ ಆಯುಕ್ತರಾಗಿ ಅನೂಪ್ ಚೌಧರಿ ಪಾಂಡೆ ಅವರು ಫೆಬ್ರುವರಿಯಲ್ಲಿ ನಿವೃತ್ತರಾಗಿದ್ದರು. ಚುನಾವಣಾ ಆಯುಕ್ತರ ನೇಮಕದ ಹೊಸ ಪ್ರಕ್ರಿಯೆ ಆರಂಭವಾದಾಗಿನಿಂದ ಆಡಳಿತ ಪಕ್ಷ ಮತ್ತು ಪ್ರಧಾನಿಗೆ ಪರಿಣಾಮಕಾರಿಯಾದ ಅಧಿಕಾರ ದೊರೆತಿದೆ. ಆದರೂ, ಹಿಂದಿನ ಚುನಾವಣಾ ಆಯುಕ್ತರ ಅವಧಿ ಮುಗಿದ 23 ದಿನಗಳ ನಂತರವೂ ಹೊಸಬರನ್ನು ಏಕೆ ನೇಮಿಸಿಲ್ಲ? ಮೋದಿ ಸರ್ಕಾರ ಇದಕ್ಕೆ ಉತ್ತರಿಸಲೇಬೇಕು. ಸೂಕ್ತ ವಿವರಣೆಯನ್ನೂ ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

ಅರುಣ್‌ ಗೋಯಲ್‌ ಅವರು ರಾಜೀನಾಮೆ ನೀಡಿರುವ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಖಂಡಿತವಾಗಿಯೂ ಪಾರದರ್ಶಕತೆ ಇಲ್ಲ. ಸರ್ಕಾರ ಅವರ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಿಂದ ಕ್ಲೀನ್‌ ಚಿಟ್‌ ನೀಡಲಾಗಿತ್ತು. ಆದರೆ, ಆಗಿನ ಚುನಾವಣಾ ಆಯುಕ್ತ ಅಶೋಕ್‌ ಲಾವಸಾ ಅವರು ಆಯೋಗದ ಕ್ರಮವನ್ನು ವಿರೋಧಿಸಿದ್ದರು. ಅದಾದ ನಂತರ ಲಾವಸಾ ವಿರುದ್ಧ ನಿರಂತರವಾಗಿ ತನಿಖೆಗಳನ್ನು ನಡೆಸಲಾಗಿದೆ. ಸರ್ಕಾರವು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶಪಡಿಸುತ್ತಿರುವುದು ಈ ರೀತಿಯ ಧೋರಣೆಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಉತ್ತರ ಸಿಗಬೇಕು. ಚುನಾವಣಾ ಆಯೋಗವು ಯಾವಾಗಲೂ ಪಕ್ಷಾತೀತವಾಗಿರಬೇಕು ಎಂದು ಕೆಸಿ ವೇಣುಗೋಪಾಲ್‌ ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ನಿನ್ನೆ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿಗಳು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಆದರೆ ಅಧಿಕಾರವಧಿ ಇನ್ನೂ 3 ವರ್ಷಗಳ ಕಾಲ ಇದ್ದರೂ, ಚುನಾವಣೆ ಹೊಸ್ತಿಲಲ್ಲಿ ಅವರು ರಾಜೀನಾಮೆ ನೀಡಿದ್ದೇಕೆ ಎಂಬ ಪ್ರಶ್ನೆಗಳು ವ್ಯಾಪಕವಾಗಿ ಉದ್ಭವಿಸಿದೆ.

ಇದನ್ನು ಓದಿ: ಚುನಾವಣಾ ಆಯುಕ್ತರಾಗಿ ನೇಮಕಾತಿ ವೇಳೆಯೂ ಉದ್ಭವಿಸಿದ್ದ ವಿವಾದ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದೇಕೆ?

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...