Homeಮುಖಪುಟಪರಿಹಾರ ಬಿಡುಗಡೆ ಮಾಡದೆ ವಿಳಂಬ: ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು ಸರಕಾರ

ಪರಿಹಾರ ಬಿಡುಗಡೆ ಮಾಡದೆ ವಿಳಂಬ: ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು ಸರಕಾರ

- Advertisement -
- Advertisement -

ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಂಬಂಧಿಸಿದ ಪರಿಹಾರ ಧನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ತಮಿಳುನಾಡು ಸರ್ಕಾರವು, ಇತ್ತೀಚಿನ ಪ್ರವಾಹ ಮತ್ತು ಮೈಚುಂಗ್ ಚಂಡಮಾರುತದಿಂದ ಉಂಟಾದ ಹಾನಿಗಳಿಗೆ ಪರಿಹಾರವಾಗಿ 37,000 ಕೋಟಿಗೂ ಹೆಚ್ಚು ಪರಿಹಾರ ಧನವನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ನ್ಯಾಯಾಲಕ್ಕೆ ಮೂಲ ದಾವೆಯಾಗಿ ಸಲ್ಲಿಸಿದ ತನ್ನ ಮನವಿಯಲ್ಲಿ ಆಗ್ರಹಿಸಿದೆ.

ಹಣ ಬಿಡುಗಡೆಯಲ್ಲಿ ವಿಳಂಬ ಮಾಡುವುದರ ಬಗ್ಗೆ ಯಾವುದೇ ಸಮರ್ಥನೆ ಇಲ್ಲ. ಇತರ ರಾಜ್ಯಗಳಿಗೆ ಹೋಲಿಸಿದರೆ ಹಣ ಬಿಡುಗಡೆಯಲ್ಲಿನ ವ್ಯತ್ಯಾಸವು ತಾರತಮ್ಯಕ್ಕೆ ಸಮಾನವಾಗಿದೆ. ಇದು ವಿಪತ್ತುಗಳಿಂದ ಬಳಲುತ್ತಿರುವ ಮತ್ತು ಹೆಚ್ಚಿನ ಸಂಕಷ್ಟಗಳನ್ನು ಎದುರಿಸಿದ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ರೀತಿಯ ಮಲತಾಯಿ ಧೋರಣೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪರಿಹಾರ ಧನ ಬಿಡುಗಡೆ ಮಾಡಲು ಹಲವು ಬಾರಿ ಮನವಿ ಮಾಡಿದರೂ ಕೇಂದ್ರ ಸರಕಾರ ಮಣಿದಿಲ್ಲ ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.

2023ರ ಡಿಸೆಂಬರ್‌ನಲ್ಲಿ ಮೈಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಗೆ ಹಣಕಾಸಿನ ನೆರವು ನೀಡಲು 19,692.69 ಕೋಟಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕು ಮತ್ತು ಅಂತಹ ಹಣವನ್ನು ನಿಗದಿಪಡಿಸಿದ ಕಾಲಮಿತಿಯೊಳಗೆ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರಕಾರವು ಆಗ್ರಹಿಸಿದೆ.

ಇದಲ್ಲದೆ ಡಿಸೆಂಬರ್‌ನಲ್ಲಿ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಉಂಟಾದ ಭಾರೀ ಮಳೆಗೆ ಸಂಬಂಧಿಸಿದ  ಹಾನಿಗಳಿಗೆ 18,214.52 ಕೋಟಿ ನೆರವನ್ನು ಕೋರಲಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವಾಲಯದ ಆಂತರಿಕ ತಂಡದ ವರದಿಯ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ. ಇಂತಹ ನಿಷ್ಕ್ರಿಯತೆಯು ರಾಜ್ಯದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.

ಇದು ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಮತ್ತು ರಾಜ್ಯದ ಜನರಿಗೆ ಮಾನಸಿಕ ಯಾತನೆ ಮತ್ತು ಕಷ್ಟಗಳನ್ನು ಉಂಟುಮಾಡುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡು ಸರಕಾರವು ಕೇಂದ್ರ ಸರಕಾರದ ವಿರುದ್ಧ ವಕೀಲ ಡಿ ಕುಮನನ್ ಮತ್ತು ಹಿರಿಯ ವಕೀಲ ಪಿ ವಿಲ್ಸನ್ ಮೂಲಕ ಅರ್ಜಿಯನ್ನು ಸಲ್ಲಿಸಿದೆ. ನೈಸರ್ಗಿಕ ವಿಕೋಪದ ವಿಚಾರದಲ್ಲಿ ಪರಿಹಾರದ ಹಣವನ್ನು ಕೇಂದ್ರವು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ ಮೊರೆ ಹೋದ ಎರಡನೇ ರಾಜ್ಯ ತಮಿಳುನಾಡು ಆಗಿದೆ.

ಈ ಮೊದಲು ರಾಜ್ಯದ ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಎನ್‌ಡಿಆರ್‌ಎಫ್ ನಿಧಿಯಿಂದ 18,171.44 ಕೋಟಿ ಪರಿಹಾರವನ್ನು ನೀಡಲು ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿತ್ತು.

ಇದನ್ನು ಓದಿ: ಕೇಜ್ರಿವಾಲ್‌ನ್ನು ಜೈಲಿನಲ್ಲಿರಿಸಿ ಅವರ ಆರೋಗ್ಯವನ್ನು ಬಿಜೆಪಿ ಅಪಾಯಕ್ಕೆ ಸಿಲುಕಿಸಿದೆ: ಸಚಿವೆ ಅತಿಶಿ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...