ತೇಜಸ್ವಿ ಸೂರ್ಯ

ಮೂಲ : ನಿಧಿ ಸುರೇಶ್‌, ನ್ಯೂಸ್‌ ಲಾಂಡ್ರಿ.
ಅನುವಾದ : ರಾಜೇಶ್‌ ಹೆಬ್ಬಾರ್

ವಾರ್‌ ರೂಂ ಹೈಡ್ರಾಮಾದಲ್ಲಿ ಸಂಸದ ತೇಜಸ್ವಿ ಸೂರ್ಯ ತಂಡ ಹದಿನೇಳು ಜನ ಉದ್ಯೋಗಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿತ್ತು. ಈ ಹಿನ್ನಲೆಯಲ್ಲಿ ಅಮಾನತ್ತುಗೊಂಡ ಆ ಹದಿನೇಳು ಜನರೂ ಪೊಲೀಸ್‌ ತನಿಖೆಯಲ್ಲಿ ಆರೋಪಮುಕ್ತರಾಗಿ ಬಂದಿದ್ದಾರೆ. ಬಿಬಿಎಂಪಿ ಮಾತ್ರ ಎಲ್ಲರನ್ನೂ ಕೆಲಸಕ್ಕೆ ಸೇರಿಸಿಕೊಂಡಿರುವುದಾಗಿ ಹೇಳುತ್ತಿದೆ. ಆದರೆ ಬಹುತೇಕರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿಲ್ಲ. ಈ ಕುರಿತು ನ್ಯೂಸ್‌ ಲಾಂಡ್ರಿ ವಿವರವಾದ ವರದಿ ಮಾಡಿದ್ದು ಅದನ್ನು ಕನ್ನಡದಲ್ಲಿ ನೀಡುತ್ತಿದ್ದೇವೆ.

ವಾರ್‌ ರೂಂ ಹೈ ಡ್ರಾಮಾದ ನಂತರ ಕೆಲಸದಿಂದ ಅಮಾನತ್ತುಗೊಂಡು ಪೊಲೀಸರಿಂದ ಬಂಧನಕ್ಕೆ ಒಳಪಟ್ಟ ಮುಸ್ಲಿಂ ಧರ್ಮಕ್ಕೆ ಸೇರಿದ ಉದ್ಯೋಗಿಯೊಬ್ಬರು ಹೇಳುತ್ತಾರೆ
“ನಮ್ಮ ಜೀವನ ಏರುಪೇರಾಗಿದೆ. ಅವರು ಹೇಳುತ್ತಾರೆ ನಮ್ಮನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆಯೆಂದು. ಆದರೆ ನಿರುದ್ಯೋಗದ ಭೀತಿ ಮತ್ತು ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸುವ ಭಯ ನಮ್ಮನ್ನು ಕಾಡುತ್ತಿದೆ” ಎಂದು. ಆದರೆ ಈ ಘಟನೆ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ಅಮಾನಿತ್ತಿಗೆ ಒಳಗಾಗಿ ಅವಮಾನ ಎದುರಿಸಿದ ಉದ್ಯೋಗಿಗಳ ಮರು ನೇಮಕಾತಿಗೆ ಸಂಬಂಧಿಸಿದಂತೆ ಅನೇಕ ಊಹಾಪೋಹಗಳು – ಗೊಂದಲಗಳು ಎದ್ದಿವೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇ 05, 2021ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಇತರ ಮೂವರು ಶಾಸಕರ ತಂಡ ಕೋವಿಡ ವಾರ್‌ ರೂಂ ಗೆ ದಿಢೀರ್‌ ಧಾಳಿ ನಡೆಸಿ ನಾಟಕೀಯವಾಗಿ 16 ಜನ ಒಂದೇ ಸಮುದಾಯಕ್ಕೆ ಸೇರಿದ ಉದ್ಯೋಗಿಗಳ ಮೇಲೆ ಬೆಡ್‌ ಬ್ಲಾಕಿಂಗ್‌ ಮತ್ತು ಅಕ್ರಮ ಬೆಡ್‌ ಬುಕಿಂಗ್‌ ಆರೋಪವನ್ನು ಮಾಡಿತು. ಆದರೆ ಹದಿನಾರು ಜನ ಉದ್ಯೋಗಿಗಳು ಮುಸ್ಲೀಂ ಸಮುದಾಯಕ್ಕೆ ಸೇರಿದ್ದುದು ಆಶ್ಚರ್ಯವಾದರೂ ಅದು ಕಾಕತಾಳೀಯವಲ್ಲ.

ಇಲ್ಲಿ ಕೋಮು ಸಾಮರಸ್ಯವನ್ನು ಕದಡುವ ಮತ್ತು ಒಂದು ಸಮುದಾಯವನ್ನು ಗುರಿಯಾಗಸುವ ಅಜೆಂಡಾ ಇತ್ತು ಎನ್ನುವುದಕ್ಕೆ ಶಾಸಕ ರವಿ ಸುಬ್ರಹ್ಮಣ್ಯ ಇದು ಮದರಸಾವೋ ಅಥವಾ ಕಾರ್ಪೋರೇಷನ್‌ ಕೋವಿಡ್‌ ವಾರ್‌ ರೂಮೋ? ಎಂದು ಪತ್ರಿಕೆಯವರ ಮುಂದೆ ಬಿಬಿಎಂಪಿ ವಿಶೇಷ ಕಮಿಷನರ್‌ ತುಳಸಿ ಮದಿನೇನಿ ಅವರನ್ನು ಪ್ರಸ್ನಿಸಿದ್ದೇ ಸಾಕ್ಷಿ.

ತಮ್ಮ ಉದ್ಯೋಗಿಗಳ ಬೆಂಬಲಕ್ಕೆ ನಿಲ್ಲುವ ಬದಲು ಬಿಬಿಎಂಪಿ ಕೂಡ ಯಾವುದೇ ತನಿಖೆ ನಡಿಸದೇ ದಿಢೀರನೇ ಆ ಹದಿನಾರು ಜನ ಒಂದೇ ಸಮುದಾಯಕ್ಕೆ ಸೇರಿದ ಉದ್ಯೋಗಿಗಳನ್ನು ಕೆಲಸದಿಂದ ಅಮಾನತ್ತುಗೊಳಿಸಿತು. ಆ ಎಲ್ಲಾ ಉದ್ಯೋಗಿಗಳೂ ತೇಜಸ್ವಿ ಸೂರ್ಯ ಓದಿದ ಪಟ್ಟಿಯಲ್ಲಿದ್ದ ಹೆಸರುಗಳೇ ಆಗಿದ್ದವು.! ಜೊತೆಗೆ ಉಳಿದ ಉದ್ಯೋಗಿಗಳ ಸಂಬಳವನ್ನೂ ತನಿಖೆ ಮುಗಿಯುವ ತನಕ ತಡೆ ಹಿಡಿಯುವುದಾಗಿ ಹೇಳಿತು. ಪೊಲೀಸರು ಮಧ್ಯ ಪ್ರವೇಶಿಸಿ ತನಿಖೆ ನಡೆಸಿದರೂ ಮುಸ್ಲೀಂ ಉದ್ಯೋಗಿಗಳ ಮೇಲಿನ ಆರೋಪಕ್ಕೆ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಮತ್ತು ಪೊಲೀಸರು ಪ್ರಕರಣದಿಂದ ಈ ಆರೋಪಿಗಳನ್ನು ಕೈ ಬಿಟ್ಟರು.

ಮೇ 10 ರಂದು ಮತ್ತೊಂದು ಸುದ್ದಿಗೋಷ್ಠಿ ಕರೆದ ತೇಜಸ್ವಿ ಸೂರ್ಯ ಈ ಪ್ರಕರಣದಲ್ಲಿ ಯಾವುದೇ ಕೋಮು ಉದ್ಧೇಶಗಳು ಇರಲಿಲ್ಲ. ಧರ್ಮದ ಆಧಾರದಲ್ಲಿ ಯಾರನ್ನೂ ಗುರಿಯಾಗಿಸಿ ಕೊಂಡಿಲ್ಲ. ಬಿಬಿಎಂಪಿಯವರು ಕೊಟ್ಟ ಉದ್ಯೋಗಿಗಳ ಪಟ್ಟಿಯನ್ನೇ ತಾನು ಓದಿದ್ದೇನೆ ಎಂದು ಸ್ಪಷ್ಟೀಕರಣ ಕೊಡಲು ಮಾತ್ರ ಈ ಸುದ್ದಿಗೋಷ್ಠಿಯನ್ನು ಸೀಮಿತಗೊಳಿಸಿದರು. ಕನಿಷ್ಠ ಸೌಜನ್ಯಕ್ಕೂ ನೊಂದ ಉದ್ಯೋಗಿಗಳಲ್ಲಿ ಕ್ಷಮೆ ಕೇಳುವ ಗೋಜಿಗೆ ಹೋಗಲಿಲ್ಲ.

ಅದೇ ದಿನ ಬಿಬಿಎಂಪಿ ಬೆಡ್‌ ಬ್ಲಾಕಿಂಗ್‌ ನಲ್ಲಿ ಹದಿನಾರು ಜನ ಉದ್ಯೋಗಿಗಳ ಪಾತ್ರ ಇರುವುದಕ್ಕೆ ತನ್ನಲ್ಲಿ ಯಾವುದೇ ಸಾಕ್ಷ್ಯವಿಲ್ಲವೆಂದು ಸ್ಪಷ್ಟೀಕರಣ ನೀಡಿತು.

ನ್ಯೂಸ್‌ ಲಾಂಡ್ರಿ ಪತ್ರಿಕೆಯು ಈ ಕುರಿತಾಗಿ ಅಮಾನತ್ತುಗೊಂಡಿದ್ದ ಹದಿನೇಳು ಜನ ವಾರ್‌ ರೂಂ ಉದ್ಯೋಗಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರಲ್ಲಿ ಒಬ್ಬರು ಮಾತ್ರ ಪತ್ರಿಕೆಗೆ ಪ್ರತಿಕ್ರಿಯಿಸುವ ಧೈರ್ಯ ತೋರಿದ್ದಾರೆ. ಐದು ಜನರು ದೂರವಾಣಿಯ ಮೂಲಕ ನಮ್ಮೊಂದಿಗೆ ಮಾತನಾಡಲು ಒಪ್ಪಿದರು. ಇಬ್ಬರು ಮಾತನಾಡಲು ನಿರಾಕರಿಸಿದರೆ ಇಬ್ಬರು ತಮ್ಮ ದೂರವಾಣಿ ಸಂಖ್ಯೆಯನ್ನೇ ಬದಲಾಯಿಸಿಕೊಂಡಿದ್ದರು. ಉಳಿದ ಏಳು ಜನರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಸಂಪರ್ಕಕ್ಕೆ ಸಿಕ್ಕ ಆರು ಜನರು ಹೇಳುವ ಪ್ರಕಾರ ಅವರನ್ನು ಇನ್ನು ಉದ್ಯೋಗಕ್ಕೆ ಸೇರಿಸಿಕೊಂಡಿಲ್ಲ.

ನ್ಯೂಸ್‌ ಲಾಂಡ್ರಿ ಬೆಂಗಳೂರು ದಕ್ಷಿಣ ವಲಯದ ಕೋವಿಡ್‌ ವಾರ್‌ ರೂಮನಲ್ಲಿ ಕಾರ್ಯನಿರ್ವಹಿಸುತ್ತಿರುವ, ತೇಜಸ್ವಿ ಸೂರ್ಯ ಪ್ರೆಸ್‌ ಮೀಟ್‌ ದಿನ ಹಾಜರಿದ್ದ 135 ಉದ್ಯೋಗಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅದರಲ್ಲಿ 62 ಜನರು ಈ ಕುರಿತು ಮಾತನಾಡಲು ನಿರಾಕರಿಸಿದ್ದರೆ, 50 ಜನರು ಸಂಪರ್ಕಕ್ಕೆ ಸಿಕ್ಕಿಲ್ಲ. ನ್ಯೂಸ್‌ ಲಾಂಡ್ರಿಯೊಂದಿಗೆ ಮಾತನಾಡಿದ 21 ಜನರಲ್ಲಿ ಒಂಭತ್ತು ಜನರು ಹೇಳುವ ಪ್ರಕಾರ ಅಮಾನತ್ತುಗೊಂಡ ಯಾವ ಮುಸ್ಲಿಂ ಉದ್ಯೋಗಿಯನ್ನು ಬಿಬಿಎಂಪಿ ಮರಳಿ ಕೆಲಸಕ್ಕೆ ನಿಯೋಜಿಸಿಲ್ಲ. ಉಳಿದವರು ಈ ಕುರಿತು ಮಾತನಾಡಲು ನಿರಾಕರಿಸಿದ್ದಾರೆ.

ನ್ಯೂಸ್‌ ಲಾಂಡ್ರಿಯ ಪ್ರತಿನಿಧಿಗಳು ಮೇ 22 ರಂದು ಬೆಂಗಳೂರು ಸೌತ್‌ ಜೋನ್‌ ವಾರ್‌ ರೂಂ ಗೆ ಭೇಟಿ ನೀಡಿ ವಾರ್‌ ರೂಂ ಉಸ್ತುವಾರಿ ಬಿಬಿಎಂಪಿ ವಿಶೇಷ ಆಯುಕ್ತೆ ತುಳಸಿ ಮದಿನೇನಿಯವರನ್ನು ಅಮಾನತ್ತುಗೊಂಡ ಉದ್ಯೋಗಿಗಳ ಮರು ನಿಯುಕ್ತಿ ಕುರಿತು ಕೇಳುವ ಪ್ರಯತ್ನ ಮಾಡಿದರು. ಆದರೆ ವಿಶೇಷ ಆಯುಕ್ತೆ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ತೇಜಸ್ವಿ ಸೂರ್ಯ ಮತ್ತು ತಂಡದ ದಾಳಿಯ ನಂತರ ಅಮಾನತ್ತುಗೊಂಡ ಉದ್ಯೋಗಿಯ ಪರವಾಗಿ ಮಾತನಾಡಿದ ಆಯೇಷಾ ಶೇಕ್‌ ಅವರನ್ನು ಬಲವಂತವಾಗಿ ಉದ್ಯೋಗದಿಂದ ತೆರವುಗೊಳಿಸಲಾಗಿದೆ. ಆಯೇಷಾ ಅವರು ಹೇಳುವ ಪ್ರಕಾರ ಅಮಾನತ್ತುಗೊಂಡ 16 ಜನರಲ್ಲಿ ಆರು ಜನರು ಮರಳಿ ಕೆಲಸಕ್ಕೆ ಬರಲು ನಿರಾಕರಿಸಿದ್ದಾರೆ. ಉಳಿದ 10 ಜನರು ಕೆಲಸ ಮರಳಿ ಸಿಗುವ ನಿರೀಕ್ಷೆಯಲ್ಲಿ ಬಿಬಿಎಂಪಿಯ ಮುಖ ನೋಡುತ್ತಿದ್ದಾರೆ.

ನ್ಯೂಸ್‌ ಲಾಂಡ್ರಿಯೊಂದಿಗೆ ಮಾತನಾಡಿದ ಆರು ಜನ ಉದ್ಯೋಗಿಗಳು ತಮ್ಮ ಹೆಸರನ್ನು ಬಹಿರಂಗಗೊಳಿಸಲು ಹೆದರುತ್ತಿರುದ್ದಾರೆ. ಹಾಗಾದರೆ ಯಾಕೆ ?

ಅವರ ಗುರುತನ್ನು ಬಹಿರಂಗಗೊಳಿಸದಿರುವುದಕ್ಕೆ ಕಾರಣವನ್ನು ಕೇಳಿದರೆ ಆ ಆರು ಜನರು ಹೇಳುವುದು ಒಂದೆ ನಾವು ಭಯಭೀತರಾಗಿದ್ದೇವೆ. ಮತ್ತೆ ನಮ್ಮನ್ನು ಪುನಃ ಕೆಲಸಕ್ಕೆ ಕರೆಯುವುದಿಲ್ಲವೋ ಎನ್ನುವ ಆತಂಕ ಕಾಡುತ್ತಿದೆ ಎಂದು. ಆರಂಭದಲ್ಲಿ ನಾವು ಬಹಿರಂಗವಾಗಿ ಪತ್ರಿಕೆಗಳೊಂದಿಗೆ, ಮಾಧ್ಯಮಗಳೊಂದಿಗೆ ಮಾತನಾಡಿದೆವು. ಆದರೆ ಅದರಿಂದಾದ ಪ್ರಯೋಜನವಾದರೂ ಏನು? ಎಂದು ಸಲೀಂ ಎಂದು ಹೆಸರಿಸಲಾದ ವ್ಯಕ್ತಿ ಪ್ರತಿಕ್ರಿಯಿಸುತ್ತಾರೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ 23 ವರ್ಷದ ಸಲೀಂ ವಾರ್‌ ರೂಂ ಘಟನೆಯ ನಂತರ ತನ್ನ ತಂದೆ ತಾಯಿಯರ ಊರು ಆಂಧ್ರ ಪ್ರದೇಶಕ್ಕೆ ತೆರಳಿದ್ದಾರೆ. ಸಲೀಂ ಬಿಬಿಎಂಪಿ ವಾರ್‌ ರೂಂ ಗೆ ಉದ್ಯೋಗಿಗಳನ್ನು ಒದಗಿಸುವ ಕ್ರಿಸ್ಟಲ್‌ ಇನ್ಫೋ ಸಿಸ್ಟಮ್‌ ಜೊತೆಗೆ ಸತತವಾಗಿ ಸಂಪರ್ಕದಲ್ಲಿ ಇದ್ದಾರೆ. ಬಿಬಿಎಂಪಿ ಕೊಡುವ ತಿಂಗಳಿಗೆ 13,500 ರೂಪಾಯಿ ಸಂಬಳವನ್ನೇ ನಂಬಿ ಜೀವನ ನಡೆಸುತ್ತಿರುವ ಈ ಉದ್ಯೋಗಿಗಳು ಇನ್ನಷ್ಟೆ ಮರಳಿ ಕೆಲಸಕ್ಕೆ ಹೋಗಬೇಕಿದೆ.

ಸಲೀಂ ಹೇಳುವಂತೆ ಈ ಘಟನೆ ನಡೆದ ಕೆಲ ದಿನಗಳಲ್ಲಿ ಏಜೆನ್ಸಿಯು ಸೌತ್‌ ಝೋನ್‌ ವಾರ್‌ ರೂಂ ನಲ್ಲಿ ಯಾವುದೇ ಉದ್ಯೋಗ ಖಾಲಿ ಇಲ್ಲ. ಸದ್ಯ ಈಸ್ಟ್‌ ಜೋನ್‌ ನಲ್ಲಿ ಕೆಲಸ ಮಾಡುವಂತೆ ಸೂಚಿಸಿತ್ತು. ಆದರೆ ಯಾವುದೇ ವಾಹನ ಸೌಲಭ್ಯವಿಲ್ಲ. ಸಾರಿಗೆ ವೆಚ್ಚ ಭರಿಸುವುದು ಕಷ್ಟವಾಗುತ್ತದೆ ಎಂದು ಸಲೀಂ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಮರು ನಿಯುಕ್ತಿ ಮಾಡುವಂತೆ ಸಲೀಂ ಕೇಳಿಕೊಂಡಾಗ ಹೈರಿಂಗ್‌ ಏಜೆನ್ಸಿಯ ವ್ಯವಸ್ಥಾಪಕರಾದ ಶಿವು ನಾಯಕ್ ಸದ್ಯ ಯಾವುದೇ ಕೆಲಸ ಖಾಲಿ ಇಲ್ಲ. ನಾವು ಈಗಾಗಲೇ ಬೇರೆಯವರನ್ನು ಬದಲಿಯಾಗಿ ತೆಗೆದುಕೊಂಡಿದ್ದೇವೆ ಎಂದು ಉತ್ತರಿಸುತ್ತಾರೆ.

ಮೇ 7 ರಂದು ಶಿವು ನಾಯಕ್‌ ಸೌಥ್‌ ಜೋನ್‌ ವಾಟ್ಸಾಪ್‌ ಗ್ರೂಪನಲ್ಲಿ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳೊಂದಿಗೆ ಕಛೇರಿ ಕೆಲಸದ ಕುರಿತು ಮಾತನಾಡದಂತೆ ಕಠಿಣ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಸಲೀಂ ವಾರ್‌ ರೂಂ ನಲ್ಲಿ ಕಳೆದ ಹತ್ತು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಮಾನತ್ತುಗೊಂಡ ಉಳಿದ ಉದ್ಯೋಗಿಗಳು ಇತ್ತೀಚೆಗಷ್ಟೆ ಉದ್ಯೋಗಕ್ಕೆ ಸೇರಿದವರಾಗಿದ್ದಾರೆ.

ಆರಂಭದಲ್ಲಿ ಕೋವಿಡ್‌ ಸೋಂಕು ತೀವ್ರವಾಗಿ ಹರಡುತ್ತಿದ್ದಾಗ ಸಲೀಂ ದಿನದಲ್ಲಿ ಎರಡು ಶಿಫ್ಟ್‌ ಗಳಂತೆ ಬೆಳಗ್ಗೆ 08 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಅಂದರೆ 15 ಗಂಟೆ ವಾರ್‌ ರೂಂ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ರಮೇಣ ಕೊರೋನಾ ತೀವ್ರತೆ ಇಳಿಮುಖವಾದ ಮೇಲೆ ದಿನದಲ್ಲಿ ಒಂದು ಶಿಫ್ಟ್‌ ಮಾತ್ರ ಕಾರ್ಯನಿರ್ವಹಿಸುತ್ತಿದ್ದರು.

ಮೇ 5 ರ ಮಧ್ಯಾಹ್ನ ಸಲೀಂ ತಮ್ಮ ಕೆಲಸ ಮುಗಿಸಿ ಮನೆಗೆ ಬಂದು ಫೇಸ್‌ಬುಕ್ ನೋಡಿದರೆ ದೊಡ್ಡ ಆಘಾತ ಅವರಿಗೆ ಕಾದಿತ್ತು. ಅದಾದ ಮೇಲೆ ಅವರಿಗೆ ನೂರಾರು ವಾಟ್ಸಾಪ್‌ ಸಂದೇಶಗಳು ಬರತೊಡಗಿದವು. ಇವರ ಹೆಸರು ಮತ್ತು ಚಿತ್ರವನ್ನು ಹಾಕಿ ಸಾವಿರಾರು ಬೆಂಗಳೂರಿಗರನ್ನು ಕೊಲ್ಲುತ್ತಿರುವ ಹದಿನೇಳು ಜನ ಎಂದು ಬಿಂಬಿಸಲಾಗಿತ್ತು. ಆದರೆ ಸಲೀಂ ಹೇಳುವಂತೆ ನಮ್ಮ ಮೇಲೆ ಇವರಿಗೆ ಯಾವ ದ್ವೇಷ ತಿಳಿಯದು. ನಾವು ನಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದೇವೆ. ಜನರಿಗೆ ಸಹಾಯ ಮಾಡುತ್ತಿದ್ದೆವು ಎನ್ನುತ್ತಾರೆ.

ವಿಚಿತ್ರ ಎಂದರೆ ಸಲಿಂ ಗೆ ಸಂಸದ ತೇಜಸ್ವಿ ಸೂರ್ಯ ಹೆಸರು ಗೊತ್ತಾಗಿದ್ದು ಈ ಘಟನೆಯ ನಂತರವೇ ! ಅದುವರೆಗೆ ತೇಜಸ್ವಿ ಸೂರ್ಯ ಅವರ ಹೆಸರನ್ನೂ ಸಲೀಂ ಕೇಳಿರಲಿಲ್ಲ.

ಸಲೀಂ ಅವರ ವಯಸ್ಸಾದ ತಂದೆ ತಾಯಿ, ಓದುತ್ತಿರುವ ಸಹೋದರಿಯರು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ. ಅವರ ಸಹೋದರಿಯರ ಕಾಲೇಜು ಶುಲ್ಕವನ್ನೂ ಸಲೀಂ ಭರಿಸಬೇಕಿದೆ. ಕೂಲಿ ಕಾರ್ಮಿಕರಾದ ಸಲೀಂ ಪೋಷಕರು ಕಳೆದ ಲಾಕ್‌ ಡೌನ್‌ ನಿಂದ ಕೆಲಸ ಕಳೆದುಕೊಂಡಿದ್ದಾರೆ. ಸದ್ಯ ಸಲೀಂ ದುಡಿಮೆಯ ಮೇಲೆಯೇ ನಿಂತಿದ್ದ ಆಂಧ್ರದಲ್ಲಿ ವಾಸವಿರುವ ಈ ಕುಟುಂಬ ಯಾವುದೇ ಆದಾಯವಿಲ್ಲದೇ ಈಗ ಅತಂತ್ರವಾಗಿದೆ.

ಸಲೀಂ ಹೇಳುವಂತೆ “ಈ ಘಟನೆ ನಡೆದ ದಿನ ನನ್ನ ಕುಟುಂಬ ಆತಂಕಕ್ಕೆ ಒಳಗಾಯಿತು. ಹಳ್ಳಿಯ ಜನ ಹತ್ತಾರು ಪ್ರಶ್ನೆ ಕೇಳಿ ನನ್ನ ಪೋಷಕರನ್ನು ಹಿಂಸಿಸುತ್ತಿದ್ದರು. ನನ್ನ ಪೋಷಕರು ಧೈರ್ಯ ಕಳೆದುಕೊಳ್ಳಬಾರದೆಂದು ಮರಳಿ ಆಂಧ್ರದ ನನ್ನ ಈ ಹಳ್ಳಿಗೆ ಬಂದೆ” ಎನ್ನುತ್ತಾರೆ.

ಎಲ್ಲದಕ್ಕೂ ಕಾರಣವಾದ ಹೆಸರು..!

ವೈರಲ್‌ ಆಗಿರುವ ತೇಜಸ್ವಿ ಸೂರ್ಯ ವಾರ್‌ ರೂಂ ದಾಳಿಯ ವಿಡಿಯೋದಿಂದ ಅನೇಕರ ಭವಿಷ್ಯವೇ ಮಂಕಾಗಿದೆ. ವಿಡಿಯೋದಲ್ಲಿ ತೇಜಸ್ವಿ ಸೂರ್ಯ ಬಿಬಿಎಂಪಿ ವಾರ್‌ ರೂಂ ಉಸ್ತುವಾರಿಯನ್ನು ಹೇಗೆ ಈ ವ್ಯಕ್ತಿಗಳನ್ನು ಉದ್ಯೋಗಕ್ಕೆ ತೆಗೆದುಕೊಂಡಿರಿ? ನಾನು ಈ ಹದಿನೇಳು ಜನರ ಹೆಸರನ್ನು ಓದುತ್ತೇನೆ ಎನ್ನುತ್ತಾರೆ. ಅವರು ಹದಿನಾರು ಜನರ ಹೆಸರನ್ನು ಓದುತ್ತಾರೆ. ಉಳಿದ ಒಬ್ಬ ವ್ಯಕ್ತಿಯನ್ನು ನಾವಿಲ್ಲಿ ನಿಶಾನ್‌ ಎಂದು ಕರೆದಿದ್ದೇವೆ.

ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದಕ್ಕೆ ತೆತ್ತ ಬೆಲೆ

ಆಯೇ಼ಷಾ ವಾರ್‌ ರೂಂ ನ ಮತ್ತೊಬ್ಬ ಉದ್ಯೋಗಿ ಹದಿನೇಳು ಜನ ಸಹುದ್ಯೋಗಿಗಳ ಅಮಾನತ್ತಿನ ವಿರುದ್ಧ ಧ್ವನಿಯೆತ್ತಿದ ಪರಿಣಾಮ ತಮ್ಮ ಕೆಲಸವನ್ನೇ ಕಳೆದು ಕೊಂಡಿದ್ದಾರೆ. ಬಿಜೆಪಿ ಮತ್ತು ಸಂಸದರ ನಡೆಯನ್ನು ಮಾಧ್ಯಮದ ಮುಂದೆ ಬಹಿರಂಗವಾಗಿ ವಿರೋಧಿಸಿದ ಪರಿಣಾಮವಾಗಿ, ಹೈರಿಂಗ್‌ ಏಜೆನ್ಸಿಯ ವ್ಯವಸ್ಥಾಪಕ ಶಿವು ನಾಯಕ್‌ ಕರೆ ಮಾಡಿ ʼ ಅಮಾನತ್ತಾದವರನ್ನು ಬೆಂಬಲಿಸುವುದಾದರೆ ಕೆಲಸ ಬಿಟ್ಟು ಹೋಗುವಂತೆ ಸೂಚಿಸಿದ್ದಾರೆ. ಧ್ವನಿ ಎತ್ತಿದ ಪರಿಣಾಮ ಆಯೇಷಾ ಬಲವಂತವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಆರೋಪ ಪ್ರತ್ಯಾರೋಪಗಳ ಕೆಸರೆರಚಾಟ

ನ್ಯೂಸ್‌ ಲಾಂಡ್ರಿಯು ಸಂಸದ ತೇಜಸ್ವಿ ಸೂರ್ಯ ಅವರನ್ನು ವಾರ್‌ ರೂಂ ಉದ್ಯೋಗಿಗಳ ಪುನರ್‌ ನಿಯುಕ್ತಿ ಕುರಿತು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರ ಆಪ್ತ ಸಹಾಯಕರು ಮಾತನಾಡಿ ಇದರಲ್ಲಿ ನಮ್ಮ ಪಾತ್ರವಿಲ್ಲ. ಸಂಸದರು ಯಾರನ್ನೂ ಕೆಲಸದಿಂದ ಅಮಾನತ್ತು ಮಾಡಿಲ್ಲ. ಹಾಗಾಗಿ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಹೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಬಿಎಂಪಿಯನ್ನು ಈ ಕುರಿತು ಕೇಳುವಂತೆ ತಮ್ಮ ಜವಾಬ್ದಾರಿಯಿಂದ ನಯವಾಗಿ ಜಾರಿಕೊಳ್ಳುತ್ತಾರೆ.

ಬಿಬಿಎಂಪಿಯ ಜಂಟಿ ಆಯುಕ್ತ ಡಾ. ವೀರಭದ್ರಸ್ವಾಮಿಯವರನ್ನು ಈ ಕುರಿತು ಕೇಳಿದರೆ ಅವರು ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಂಡ ಹೈರಿಂಗ್‌ ಏಜೆನ್ಸಿಯ ಕಡೆ ಬೆರಳು ತೋರಿಸುತ್ತಾರೆ.

ಇನ್ನು ಕೋವಿಡ್‌ ವಾರ್‌ ರೂಂ ನಿರ್ವಹಿಸುವ ಕ್ರಿಸ್ಟೆಲ್‌ ಇನ್ಪೋಟೆಕ್‌ ಸಂಸ್ಥೆಯ ವ್ಯವಸ್ಥಾಪಕ ಶಿವು ನಾಯಕ್‌ ಅವರನ್ನು ಈ ಕುರಿತು ಕೇಳಿದರೆ ಎಲ್ಲಾ ಉದ್ಯೋಗಿಗಳನ್ನು ಕೆಲಸಕ್ಕೆ ನಿಯೋಜಿಸಲಾಗಿದೆ. ಕೆಲವರು ಉದ್ಯೋಗಕ್ಕೆ ಮರಳಿ ಬರಲು ನಿರಾಕರಿಸಿದ್ದಾರೆ. 7-8 ಜನರನ್ನು ಏಜೆನ್ಸಿಯ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಲಾಗಿದೆ ಎಂದು ಉತ್ತರಿಸುತ್ತಾರೆ.

ನ್ಯೂಸ್‌ ಲಾಂಡ್ರಿಯು ಆ ಉದ್ಯೋಗಿಗಳನ್ನು ಪುನಃ ಕೆಲಸಕ್ಕೆ ತೆಗೆದುಕೊಂಡಿಲ್ಲ ಎಂಬುದನ್ನು ಪುರಾವೆ ಸಹಿತ ತೋರಿಸಿದಾಗ ನಾನು 10 ದಿನ ಕೆಲಸಕ್ಕೆ ಹಾಜರಿರಲಿಲ್ಲ. ರಜೆಯಲ್ಲಿ ಇದ್ದೆ ಎಂದು ಕರೆ ಸ್ಥಗಿತ ಗೊಳಿಸುತ್ತಾರೆ.

ಇನ್ನು ವಾರ್‌ ರೂಂ ಉಸ್ತುವಾರಿಯಲ್ಲಿದ್ದ ತುಳಸಿ ಮೆದಿನೇನಿ ಇದುವರೆಗಿನ ನಮ್ಮ ಯಾವ ಸಂಪರ್ಕಕ್ಕೆ ಸಿಕ್ಕಿಲ್ಲ.

ವಾರ್‌ ರೂಂ ನಲ್ಲಿ ಉಸ್ತುವಾರಿಯಲ್ಲಿರುವ ಬಿಬಿಎಂಪಿ ಅಧಿಕಾರಿಯೋರ್ವರನ್ನು ಈ ಕುರಿತು ಪ್ರಶ್ನಿಸಿದರೆ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಪರಿಣಾಮ ನಾವು ಉದ್ಯೋಗಿಗಲ ಸಂಖ್ಯೆಯನ್ನು ಕಡಿತಗೊಳಿಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಹಿರಿಯ ಅಧಿಕಾರಿ ಅಮಾನತ್ತುಗೊಂಡ ಉದ್ಯೋಗಿಗಳು ಧರ್ಮ ದ್ವೇಷಕ್ಕೆ ತುತ್ತಾಗಿರುವುದು ಸತ್ಯ ಎಂದು ಒಪ್ಪಿಕೊಂಡಿರುವುದಲ್ಲದೇ , ಬೆಡ್‌ ಬ್ಲಾಕಿಂಗ್‌ಗೆ ಸಾಕ್ಷಿ ಎಲ್ಲಿದೆ ? ಇದು ಕೆಲವರ ರಾಜಕೀಯ ಲಾಭಕ್ಕೆ ನಡೆದ ನಾಟಕ ಎನ್ನುತ್ತಾರೆ.

ಆದರೆ ಸಂಸದ ತೇಜಸ್ವಿ ಸೂರ್ಯ ಮೇ 05 ರಂದು ಮಾಧ್ಯಮದ ಮುಂದೆ ಓದಿದ ಹದಿನೇಳು ಜನರ ಹೆಸರಿರುವ ಪಟ್ಟಿ ಎಲ್ಲಿಂದ ಬಂದಿತ್ತು ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಸಂಸದ ಸೂರ್ಯ ಆಪ್ತ ಸಹಾಯಕ ಅರವಿಂದ್‌ ಸುಚೇಂದ್ರ ಹೇಳುವಂತೆ ಬಿಬಿಎಂಪಿ ವಾರ್‌ ರೂಂ ಉದ್ಯೋಗಿ ಸ್ವಾಮಿ ಎನ್ನುವವರು ಮುಸ್ಲಿಂ ಉದ್ಯೋಗಿಗಳ ಹೆಸರು ಮಾತ್ರ ಇರುವ ಪಟ್ಟಿಯನ್ನು ಸಂಸದರಿಗೆ ನೀಡಿರುತ್ತಾರೆ.

ನ್ಯೂಸ್‌ ಲಾಂಡ್ರಿಯು ಸ್ವಾಮಿಯವರನ್ನು ಸಂಪರ್ಕಿಸಿದಾಗ ಅವರು ಹಳೆಯ ವಿಷಯವನ್ನು ಕೆದಕಲು ಇಷ್ಟವಿಲ್ಲ. ಧನಾತ್ಮಕ ಅಂಶಗಳ ಕಡೆ ಗಮನ ಕೊಡಿ ಎಂದು ಗದರಿ ಪ್ರತಿಕ್ರಿಯೆಗೆ ನಿರಾಕರಿಸಿರುತ್ತಾರೆ.

ಸ್ಬಾಮಿಯ ಧನಾತ್ಮಕ ಅಂಶಗಳ ಕಡೆ ಮಾತ್ರ ಗಮನ ಕೊಡುತ್ತಿರುವ ವೇಳೆ ಅಲ್ಲಿ ಅಮಾನತ್ತು ಗೊಂಡ ಮುಸ್ಲಿಂ ಉದ್ಯೋಗಿಗಳು ಕೆಲಸದ ಕರೆಗೆ ಚಾತಕ ಪಕ್ಷಿಗಳಂತೆ ಹಗಲಿರುಳು ನಿರೀಕ್ಷಿಸಿ ಬೇಸತ್ತು ವ್ಯವಸ್ಥೆಯ ಮೇಲೆ ಆಕ್ರೋಶಗೊಂಡು ನಿರುದ್ಯೋಗದಲ್ಲಿಯೇ ಕಾಲ ದೂಡುತ್ತಿದ್ದಾರೆ.

(ಅಮಾನತ್ತುಗೊಂಡ ಮುಸ್ಲಿಂ ಉದ್ಯೋಗಿಗಳ ಹೆಸರು ಬದಲಾಯಿಸಲಾಗಿದೆ.)


ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಅನುವಾದಿತ ಲೇಖನ
+ posts

LEAVE A REPLY

Please enter your comment!
Please enter your name here