ಬಿಹಾರದ ಮೊದಲ ಹಂತದ ಚುನಾವಣೆಗೆ 2 ದಿನ ಬಾಕಿ ಇರುವಾಗ ಆರ್‌ಜೆಡಿಯ ಮುಖ್ಯಸ್ಥ ತೇಜಸ್ವಿ ಯಾದವ್ ಬಿಜೆಪಿ ಮತ್ತು ಜೆಡಿಯು ಪಕ್ಷಗಳಿಗೆ ಈರುಳ್ಳಿ ಹಾರ ಹಾಕುವ ಮೂಲಕ ಹೆಚ್ಚುತ್ತಿರುವ ಬೆಲೆಗಳ ವಿರುದ್ಧ ಪ್ರತಿಭಟನೆ ದಾಖಲಿಸಿದ್ದಾರೆ.
“ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದಾಗಿ ಸಾಮಾನ್ಯ ಜನರು ಬಳಲುತ್ತಿದ್ದಾರೆ. ಕೆಲಸ ಮತ್ತು ವ್ಯವಹಾರಗಳು ಸ್ಥಗಿತಗೊಂಡಿವೆ. ರೈತರು, ಕಾರ್ಮಿಕರು, ಯುವಕರು ಮತ್ತು ವ್ಯಾಪಾರಿಗಳು ತಮ್ಮ ಆಹಾರ, ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ. ಬಿಜೆಪಿ ಸಣ್ಣ ಉದ್ಯಮಿಗಳನ್ನು ಕೊಂದಿದೆ. ಬೆಲೆ ಏರಿಕೆ ಇದ್ದಾಗ ಅವರು ಈರುಳ್ಳಿ ಹೂಮಾಲೆ ಧರಿಸಿ ಸುತ್ತಾಡುತ್ತಾರೆ. ಈಗ, ನಾವು ಅವರಿಗೆ ಇದನ್ನು ನೀಡುತ್ತಿದ್ದೇವೆ” ಎಂದು ತಮ್ಮ ಟ್ವಿಟ್ಟರ್‌ನಲ್ಲಿ ತೇಜಸ್ವಿ ಯಾದವ್ ಬರೆದಿದ್ದಾರೆ.
कमर तोड़ महंगाई, भ्रष्टाचार, बेरोजगारी से आम आदमी त्राहिमाम कर रहा है। काम-धंधा ठप्प है। किसान,मज़दूर,नौजवान और व्यापारी वर्ग को खाने के लाले पड़ रहे है। छोटे व्यापारियों को BJP सरकार ने मार दिया है।महंगाई बढ़ने पर ये लोग प्याज़ का माला पहन कर घूमते थे अब हम उन्हें यह सौंप रहे है pic.twitter.com/0kLOPwVrOx
— Tejashwi Yadav (@yadavtejashwi) October 26, 2020
ತಾವು ಅಧಿಕಾರಕ್ಕೆ ಬಂದರೆ ಬಿಹಾರದ ಯುವಜನತೆಗೆ 10 ಲಕ್ಷ ಉದ್ಯೋಗ ಕೊಡುವುದಾಗಿ ಘೋಷಿಸಿರುವ ತೇಜಸ್ವಿ ಯಾದವ್, ಉದ್ಯೋಗವು ಬಿಹಾರದ ಪ್ರಮುಖ ವಿಷಯವಾಗಿದೆ ಎಂದಿದ್ದಾರೆ.
ಈರುಳ್ಳಿ ಪ್ರತಿ ಕೆಜಿಗೆ ₹ 50 ರಿಂದ 60 ಮುಟ್ಟಿದಾಗ ಅದರ ಬಗ್ಗೆ ಮಾತನಾಡುತ್ತಿದ್ದವರು ಈಗ ಪ್ರತಿ ಕೆಜಿಗೆ ₹ 80 ದಾಟಿದಾಗ ಮೌನವಾಗಿದ್ದಾರೆ. ರೈತರು ನಾಶವಾಗುತ್ತಿದ್ದಾರೆ, ಯುವಕರು ನಿರುದ್ಯೋಗಿಗಳಾಗಿದ್ದಾರೆ. ಬಿಹಾರ ಜನತೆ ಬಡವರಾಗಿದ್ದು, ಶಿಕ್ಷಣ, ಉದ್ಯೋಗ ಮತ್ತು ವೈದ್ಯಕೀಯ ಸಹಾಯಕ್ಕಾಗಿ ಜನರು ವಲಸೆ ಹೋಗುತ್ತಿದ್ದಾರೆ. ಹಸಿವು ಹೆಚ್ಚುತ್ತಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಬಿಹಾರದಲ್ಲಿ ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7 ರಂದು ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದ ಫಲಿತಾಂಶ ಘೋಷಣೆಯಾಗಲಿದೆ.
ಇದನ್ನೂ ಓದಿ: ಉಚಿತ ಕೊರೊನಾ ಲಸಿಕೆ ವಿವಾದ: ಬಿಹಾರೇತರ ರಾಜ್ಯದವರು ಬಾಂಗ್ಲಾದೇಶದವರೇ- ಶಿವಸೇನೆ ಪ್ರಶ್ನೆ