Homeಅಂಕಣಗಳುಪುಟಕ್ಕಿಟ್ಟ ಪುಟಗಳುಹಿಂದುತ್ವವಾದಿಗಳು ವಿರೋಧಿಸಿದ್ದ ಪುಸ್ತಕ: 'ಹಿಂದೂಗಳು - ಬೇರೊಂದು ಚರಿತ್ರೆ'

ಹಿಂದುತ್ವವಾದಿಗಳು ವಿರೋಧಿಸಿದ್ದ ಪುಸ್ತಕ: ‘ಹಿಂದೂಗಳು – ಬೇರೊಂದು ಚರಿತ್ರೆ’

ವೆಂಡಿ ಡೊನಿಗರ್ ’ದ ಹಿಂದೂಸ್: ಯಾನ್ ಆಲ್ಟರ್ನೇಟಿವ್ ಹಿಸ್ಟರಿ’ ಎಂಬ ಸಂಶೋಧನಾ ಕೃತಿಯನ್ನು ಡಾ.ಬಂಜಗೆರೆ ಜಯಪ್ರಕಾಶ್‌ರವರು ಕನ್ನಡಕ್ಕೆ ಅನುವಾದಿಸಿದ್ದಾರೆ.

- Advertisement -
- Advertisement -

ಸಂಸ್ಕೃತ ಭಾಷೆಯಲ್ಲಿ ಮತ್ತು ಭಾರತ ದೇಶೀಯ ಅಧ್ಯಯನದಲ್ಲಿ ಪಂಡಿತೆಯೂ, ಅನೇಕ ಸಂಸ್ಕೃತ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ತಂದ ಅನುವಾದಕಿಯೂ ಮತ್ತು ಮತಧರ್ಮಗಳ ಚರಿತ್ರೆಯನ್ನು ಬೋಧಿಸುತ್ತಿರುವ ಅಧ್ಯಾಪಕಿಯೂ ಆಗಿರುವ ವೆಂಡಿ ಡೊನಿಗರ್ ’ದ ಹಿಂದೂಸ್: ಯಾನ್ ಆಲ್ಟರ್ನೇಟಿವ್ ಹಿಸ್ಟರಿ’ ಎಂಬ ಸಂಶೋಧನಾ ಕೃತಿಯು ಹಿಂದೂ ಧರ್ಮ ಮತ್ತು ಸಾಂಸ್ಕೃತಿಕ ಚರಿತ್ರೆಯ ಕುರಿತಾಗಿ ಬರೆದ ಅನೇಕ ಪುಸ್ತಕಗಳಲ್ಲಿ ಒಂದು. ಆದರೆ ಇದು ಬಿಡುಗಡೆಯಾದಾಗ ಅಧ್ಯಯನಶೀಲ ಪಂಡಿತರು, ಒಳನೋಟಗಳನ್ನು ಬಯಸುವ ವೈಚಾರಿಕರು, ಬೌದ್ಧಿಕ ಜಿಜ್ಞಾಸೆಯುಳ್ಳ ಕುತೂಹಲಿಗಳು ತೆರೆದ ಮನದಿಂದ ಸ್ವಾಗತಿಸಿದರೆ, ಹಿಂದುತ್ವವಾದಿಗಳು ವಿರೋಧಿಸಿದರು. ಬಹಳಷ್ಟು ಸಲ ಕೃತಿಯ ಅಧ್ಯಯನವನ್ನು ಮಾಡದೇ, ಕೃತಿಯ ಆಶಯವನ್ನು ತಿಳಿಯದೇ ಬರಿದೇ ಸುದ್ದಿಯ ಮೇಲೆಯೇ ಸದ್ದಾಗಿಬಿಡುತ್ತದೆ.

ಅಂತಹ ಸದ್ದಿನ ಗದ್ದಲವಾಗಬಾರದೆಂದೇ ಈ ಲೇಖನದಲ್ಲಿ ನಾನು ಕಂಡುಕೊಂಡಂತಹ ಕೃತಿಯ ಆಶಯವನ್ನು ಮೊದಲೇ ಹೇಳಿಬಿಡುತ್ತೇನೆ.

“ಚರಿತ್ರೆಯನ್ನು ದುರ್ಬಳಕೆ ಮಾಡಿಕೊಳ್ಳುವುದೆಂಬುದು ಕೇವಲ ದುರ್ಬಳಕೆಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಭವಿಷ್ಯದ ಕುರಿತು ಎಲ್ಲರೂ ಇಷ್ಟೊಂದು ಆಲೋಚಿಸುತ್ತಿರುವ ಯುಗದಲ್ಲಿ ವರ್ತಮಾನವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಇನ್ನೂ ಗತಕಾಲದೊಳಕ್ಕೆ ಯಾಕಾಗಿ ಹೋಗುತ್ತಿದ್ದಾರೆನ್ನುವುದು ಸಮಸ್ಯೆ – ಇದು ಈ ಪುಸ್ತಕ ಕಾಳಜಿ. ಹಿಂದಕ್ಕೆ ಸರಿದುಹೋಗಿರುವ ಸಂಗತಿಗಳು, ಸಂಘರ್ಷಗಳು, ಸಂಕಥನಗಳು, ಸಂಕಷ್ಟಗಳು ಈ ಸಂಕ್ರಮಣ ಕಾಲದಲ್ಲಿ ಸಂಕೀರ್ಣತೆಯನ್ನು ಸೃಷ್ಟಿಸಬಾರದಾಗಿದೆ. ವಾಸ್ತವವಾಗಿ ಸಂಕುಚಿತತೆಯಿಂದ ವಿಕಸನದೆಡೆಗೆ ಬರುವ ಬದಲು, ಸಂಕಲಿತ ಜನಮನವು ಸೇಡಿನ ಸಂದಾಯಕ್ಕೆ ಸನ್ನದ್ಧವಾಗುತ್ತಿರುವುದು ಭಾರತದ ಸದ್ಯದ ಆತಂಕದ ಸಂಗತಿ.

ಈ ಪುಸ್ತಕದ ಕನ್ನಡಾವೃತ್ತಿಯನ್ನು ಪ್ರಕಾಶಕರಾದ ರವೀಂದ್ರನಾಥ್ ಸಿರಿವರ ಅವರು ಪ್ರಕಾಶಕರ ನುಡಿಯಲ್ಲೇನೋ ಪ್ರಶ್ನಿಸಿದ್ದಾರೆ.

“ಹೌದು, ಹಿಂದೂಗಳೆಂದರೆ ಯಾರು? ಅವರ ಆಚಾರ ವಿಚಾರ, ಪೂಜೆ ಪುಣ್ಯ, ಶಾಸ್ತ್ರ ಸಂಪ್ರದಾಯ, ಉಡುಗೆ ತೊಡುಗೆ, ವೇಷ ಭೂಷಣ ಏನು? ಏಕೆ? ನಾನು ಕ್ರಿಶ್ಚಿಯನ್, ಮುಸ್ಲಿಂ, ಜೈನ, ಸಿಖ್ ಅಲ್ಲ. ಹಾಗಾದರೆ ನಮ್ಮ ಹಿರಿಯರು ಹೇಳಿದಂತೆ ನಾನು ಹಿಂದೂವೇ ಆಗಿರಬೇಕು. ಮೇಲೆ ಹೇಳಿರುವ ಧರ್ಮಗಳಿಗೂ ದೇವರು ಒಬ್ಬನೇ. ಸಣ್ಣಪುಟ್ಟ ಜೊತೆಗಾರರೂ ಇರಬಹುದು. ಆದರೆ 336 ಕೋಟಿ ದೇವತೆಗಳನ್ನು ಪಡೆದಿರುವ ಈ ಧರ್ಮದಲ್ಲಿ ಆಚಾರ ವಿಚಾರ ಶಾಸ್ತ್ರ ಸಂಬಂಧಗಳು ಎಲ್ಲಾ ವಿಭಿನ್ನ, ವಿಚಿತ್ರ. ನಮ್ಮಲ್ಲೇ ಇರುವ ದಲಿತರು ಮನೆಯೊಳಗಾಗಲಿ, ದೇವಾಲಯದೊಳಗಾಗಲಿ ಬರುವಂತಿಲ್ಲ. ಆದರೂ ಅವರು ಹಿಂದೂಗಳು. 337ಕೋಟಿ ದೇವತೆಗಳಿಗೆ ಅಷ್ಟೇ ಪ್ರಮಾಣದ ಒಕ್ಕಲುಗಳಿದ್ದು ಒಬ್ಬರನ್ನೊಬ್ಬರು ಕೊಟ್ಟು ತೆಗೆದುಕೊಳ್ಳುವ (ಮದುವೆ ಕಾರ್ಯಗಳಲ್ಲಿ), ಸಂಬಂಧ, ಸಂಸ್ಕಾರ ಯಾವುದೂ ಇರುವುದಿಲ್ಲ. ಹಾಗಾದರೆ ನಮ್ಮದು ಒಂದೇ ಧರ್ಮ ಎಂದು ಹೇಗೆ ಹೇಳಲು ಸಾಧ್ಯ?”

ಒಬ್ಬ ಪ್ರಶ್ನಾತೀತ ಸಂಪ್ರದಾಯಸ್ಥನಾದರೆ, “ಅಧಿಕ ಪ್ರಸಂಗ ಎಲ್ಲಾ ಬೇಡ. ಹೇಳಿದಷ್ಟು ಮಾಡಿಕೊಂಡು ಹೋಗು” ಎಂದು ಹೇಳಬಹುದು. ಆದರೆ, ಹೇಳಿದಷ್ಟು ಮಾಡಿಕೊಂಡು ಹೋಗುವಂತಹ ವಿನಯಶೀಲ ಧಾರ್ಮಿಕನಿಗೂ ಇಲ್ಲಿ ಸಮಸ್ಯೆ ಇದೆ. ಯಾರು ಹೇಳಿದಷ್ಟನ್ನು ಕೇಳಿಕೊಂಡು ಹೋಗಬೇಕು? ಮಾಧ್ವರನ್ನೇ, ಸ್ಮಾರ್ತರನ್ನೇ, ವೈಷ್ಣವರನ್ನೇ, ಶೈವರನ್ನೇ, ವೈಶ್ಯರನ್ನೇ, ಕ್ಷತ್ರಿಯರನ್ನೇ, ಒಕ್ಕಲಿಗರನ್ನೇ, ಯಾರನ್ನು? ಒಬ್ಬೊಬ್ಬರಿಗೆ ಒಂದೊಂದು ದೇವರು. ಒಬ್ಬೊಬ್ಬರಿಗೆ ಒಂದೊಂದು ಆಚಾರ ವಿಚಾರ. ಒಂದಕ್ಕೊಂದು ಸಂಬಂಧವೇ ಇರದಷ್ಟು ಭಿನ್ನತೆಗಳು. ಹೋಗತ್ಲಾಗೆ ಎಲ್ಲವನ್ನೂ ಕೇಳಿಕೊಂಡು ಪಾಲಿಸಿಬಿಡೋಣ ಅಂದರೆ ಅದರಲ್ಲಿರುವ ವೈರುಧ್ಯಗಳನ್ನು ಬೆಸುಗೆ ಹಾಕಲು ಬರುವುದೇ ಇಲ್ಲ. ಹಾಗಿರುವಾಗ ನಾವು ಹೇಗೆ ಹಿಂದೂಗಳು? ಎಂಬ ಪ್ರಶ್ನೆಗೆ ವೆಂಡಿ ಡೋನಿಗರ್ ಚಾರಿತ್ರಿಕವಾಗಿ ಉತ್ತರಿಸಲು ಪ್ರಯತ್ನಿಸುತ್ತಾರೆ. ಅವರ ಅಧ್ಯಯನವನ್ನು ಆಧರಿಸಿಕೊಂಡು ಒಂದಷ್ಟು ಗೊಂದಲಗಳನ್ನು ನಿವಾರಿಸಿಕೊಳ್ಳಲು ಅಥವಾ ಇಂತಹ ಗೊಂದಲಗಳೇಕಿವೆ ಎಂಬುದನ್ನು ತಿಳಿದುಕೊಳ್ಳಲಾದರೂ ಒಂದಿಷ್ಟು ಸಹಾಯ ಮಾಡುತ್ತಾರೆ.

ಅನುವಾದಕರಾದ ಬಂಜಗೆರೆ ಜಯಪ್ರಕಾಶ್ ಹೇಳುವುದು ಹೀಗೆ. “ಹಿಂದೂಮತ ಎನ್ನುವುದು ಸರಳ, ನೇರ ವ್ಯಾಖ್ಯಾನಕ್ಕೆ ಒಳಪಡುವಂತಹದ್ದಲ್ಲ. ಅದನ್ನು ಏಕಮುಖ ದೃಷ್ಟಿಕೋನದಿಂದ ನೋಡುವುದರಿಂದ ಉಪಯೋಗವಿಲ್ಲ. ಅದೊಂದು ಪಾರಂಪರಿಕ ಕಲಾತ್ಮಕ ಹೆಣಿಗೆ. ಏಕಕಾಲದಲ್ಲಿ ಅದರಲ್ಲಿ ಶಿಲಾಯುಗದ ಜನರಿಂದ ಹಿಡಿದು ಈಚಿನ ಮೊಘಲ್ ಸಾಮ್ರಾಟರು ಹಾಗೂ ಬ್ರಿಟಿಷರವರೆಗಿನ ಕಾಲಾವಧಿಗಳ ಹಲವು ಪದರಗಳು ಸೇರಿಕೊಂಡಿವೆ. ಅವುಗಳಲ್ಲಿ ಎಷ್ಟೋ ಅಂಶಗಳು ಈಗಲೂ ಕ್ರಿಯಾವಿಧಿಗಳ, ನಂಬಿಕೆಗಳ, ಆರಾಧನೆ ಮತ್ತು ಆಚರಣೆಗಳ ರೂಪದಲ್ಲಿ ಚಾಲ್ತಿಯಲ್ಲುಳಿದುಕೊಂಡಿವೆ.”

ಇದನ್ನೇ ಡೊನಿಗರ್ ತಮ್ಮ ಕೃತಿಯಲ್ಲಿ ವಿವಿಧ ಆಧಾರ ವಿಷಯಗಳನ್ನು ಉಲ್ಲೇಖಿಸುತ್ತಾ, ವಿವಿಧ ಗ್ರಂಥಗಳ ಉಲ್ಲೇಖಗಳನ್ನು ಪರಾಮರ್ಶಿಸುತ್ತಾ, ತಾರ್ಕಿಕವಾಗಿ ಈಗಿನ ಸನ್ನಿವೇಶ ಮತ್ತು ಸಂದರ್ಭಗಳಿಗೆ ಅನ್ವಯ ಮಾಡುತ್ತಾ ತಮ್ಮ ಆಲ್ಟರ್ನೇಟಿವ್ ಹಿಸ್ಟರಿಯಲ್ಲಿ ಹಿಂದೂ ಧರ್ಮವನ್ನು ವಿವರಿಸಲು ಯತ್ನಿಸುತ್ತಾರೆ. ಆದರೆ ಅವರ ಎಲ್ಲಾ ಆಧಾರಗಳೂ ಬಹುಪಾಲು ಸಂಸ್ಕೃತ ಕೃತಿಗಳೇ ಆಗಿವೆ. ವೇದ, ಉಪನಿಷತ್ತು, ಅರಣ್ಯಕಗಳು, ವಿವಿಧ ಸಂಹಿತೆಗಳು, ಪುರಾಣಗಳು. ಹಾಗೆಯೇ ಪಾಶ್ಚಾತ್ಯ ವಿದ್ವಾಂಸರ ಕೃತಿಗಳನ್ನೂ ಒಳಗೊಂಡಂತೆ ಗಾಂಧೀಜಿ, ಎಸ್ ರಾಧಾಕೃಷ್ಣನ್, ಅಂಬೇಡ್ಕರ್ ಮತ್ತು ಆರ್‌ಎಸ್‌ಎಸ್‌ನ ಗೋಲ್ವಾಲ್ಕರ್‌ರಂತಹ ಆಧುನಿಕ ಭಾರತದ ಲೇಖಕರು ಬರೆದಿರುವ, ಇಂಗ್ಲಿಷಿನಲ್ಲಿ ಲಭ್ಯ ಇರುವ ಕೃತಿಗಳನ್ನು ತಮ್ಮ ಮೂಲ ಕೃತಿಗಳ ಅಧ್ಯಯನಕ್ಕೆ ಸಂವಾದಿಯಾಗಿ ಬಳಸಿಕೊಂಡಿದ್ದಾರೆ. ಹಾಗಿದ್ದರೂ ಇದು ಅಪೂರ್ಣವೇ. ಕನ್ನಡವೇ ಸೇರಿದಂತೆ ಭಾರತದ ವಿವಿಧ ಭಾಗಗಳ ಜನಪದ ಕಾವ್ಯಗಳು ಕೂಡಾ ಸಂಸ್ಕೃತದ ವೇದ, ಉಪನಿಷತ್ತು ಮತ್ತು ಪುರಾಣಗಳನ್ನು ಮುರಿದು ಕಟ್ಟುವ ಮೂಲಕ ಧಾರ್ಮಿಕತೆಯನ್ನು, ಆಧ್ಯಾತ್ಮಿಕತೆಯನ್ನು, ತಾತ್ವಿಕತೆಯನ್ನು ಜನರಿಗೆ ರೂಢಿ ಮಾಡಿಸಿದೆ. ಹೀಗಾಗಿ ಹಿಂದೂ ಎನ್ನುವ ಪರಿಕಲ್ಪನೆಯು ಮತ್ತಷ್ಟು ಜಟಿಲವೂ, ಸಂಕೀರ್ಣವೂ ಆಗುತ್ತದೆ.

ಭೌಗೋಳಿಕವಾಗಿ ಎಲ್ಲರೂ ಹಿಂದೂ ಎನ್ನುವ ಸಾಮಾನ್ಯ ವಿಚಾರವನ್ನು ಸಂಕುಚಿತಗೊಳಿಸಿ ಹಿಂದೂ ಎಂಬ ಜೀವನ ಪದ್ಧತಿಯನ್ನು ಸ್ಥಾಪಕ ಧರ್ಮದ ಚೌಕಟ್ಟಿಗೆ ಅಳವಡಿಸಲು ಯತ್ನಿಸಿ, ಅದನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ಅಧಿಕಾರ ಸ್ಥಾಪಿಸುವಂತಹ ವರ್ಗದ ಬಗ್ಗೆ ಡೊನಿಗರ್ ಬರೆಯುತ್ತಾರೆ. ’ಹಿಂದೂ ಸಂಪ್ರದಾಯಗಳನ್ನು ರೂಪಿಸುವಲ್ಲಿ ಯಾವ ಪಾತ್ರವನ್ನೂ ನಿರ್ವಹಿಸದ ವರ್ಗಗಳೆಲ್ಲಾ ವಾಸ್ತವವಾಗಿ ಹಿಂದೂ ಮತಕ್ಕಾಗಿ ಏನು ಮಾಡಿದ್ದಾರೆಂದು ಹೇಳುವುದು ನನ್ನ ಉದ್ದೇಶ. ಹಿಂದೂ ಮತದೊಳಗಿನ ಭಿನ್ನ ಶ್ರೇಣಿಗಳ ರಚನೆಯನ್ನು ತಲೆಕೆಳಗು ಮಾಡಬೇಕೆಂದಾಗಲಿ, ಅವುಗಳನ್ನು ಅವಾಸ್ತವಿಕವಾಗಿ ಚಿತ್ರಿಸಬೇಕೆಂದಾಗಲಿ ನಾನು ಅಂದುಕೊಳ್ಳುತ್ತಿಲ್ಲ. ಆ ಅಂತಸ್ತುಗಳು ಬಲಿಷ್ಠವಾಗಿ ಕೂದಲು ಕೊಂಕದೇ ಉಳಿದುಕೊಂಡು ಬಂದಿವೆ. ಸಂಸ್ಕೃತ ಗ್ರಂಥಗಳನ್ನು ರಚಿಸಿ, ಭದ್ರಪಡಿಸುವ ಪುರುಷ ಬ್ರಾಹ್ಮಣರೇ ಆ ಗ್ರಂಥಗಳನ್ನು ತಿದ್ದಿ ತೀಡಿ ಅಂತಿಮ ರೂಪ ಕೊಡುತ್ತಾರೆಂಬುದು ವಾಸ್ತವ. ಆ ವಾಸ್ತವವನ್ನು ನಿರಾಕರಿಸುವುದೂ ನನ್ನ ಉದ್ದೇಶವಲ್ಲ. ಆದರೆ ಆ ವರ್ಗಗಳು ಮರೆತುಬಿಟ್ಟ ಪಾತ್ರಧಾರಿಗಳನ್ನು, ಕಥನಗಳನ್ನು ರಂಗದ ಮೇಲೆ ತರಬೇಕೆಂಬುದು ನನ್ನ ಆಲೋಚನೆ. ಬ್ರಾಹ್ಮಣ ಸಂಸ್ಕೃತ ಪಂಡಿತರು ನಡೆದ ಮಾರ್ಗಕ್ಕೆ ಪಕ್ಕದಲ್ಲಿಯೇ ಅದ್ಭುತವಾದ ಮೇಧಾವಿಗಳು, ಸೃಜನಶೀಲತೆಯುಳ್ಳ ಚಿಂತನಾಶೀಲರು ಇತರ ವರ್ಗಗಳಲ್ಲಿಯೂ ಇದ್ದರು. ಅವರೆಲ್ಲಾ ಈ ಪುರುಷ ಬ್ರಾಹ್ಮಣರ ಜರಡಿಯಾಡಿಸುವಿಕೆಯಲ್ಲಿ ಕಣ್ಣಿಗೆ ಬೀಳದಂತೆ ಉದುರಿಹೋದರು’.

ಬ್ರಾಹ್ಮಣರಲ್ಲಿ ಭಿನ್ನಮತವುಳ್ಳವರು ಬೇರೆಬೇರೆ ರೀತಿಗಳಲ್ಲಿ ಬರೆದುದನ್ನು, ವರ್ಣ ಸಂಕರಗಳಾದಾಗ ಆ ಬದಲಾವಣೆಗಳನ್ನು ಪ್ರತಿಬಂಧಿಸುವುದಕ್ಕೆ ಬ್ರಾಹ್ಮಣರು ವಿಫಲ ಯತ್ನಗಳನ್ನು ಮಾಡುತ್ತಿದ್ದುದ್ದನ್ನು ಡೋನಿಗರ್ ಗಮನ ಸೆಳೆಯುತ್ತಾರೆ.

ಜಾನಪದೀಯವಾಗಿ ಬೇರೆ ಭಾಷೆಗಳಲ್ಲಿ (ಪ್ರಾಕೃತವೇ ಮೊದಲಾದ ಸ್ಥಳೀಯ ಭಾಷೆಗಳು) ಮೌಖಿಕ ಪರಂಪರೆಯಲ್ಲಿದ್ದ ಕಥನಗಳು, ಜ್ಞಾನಗಳನ್ನು ಕೂಡಾ ಸಂಸ್ಕೃತ ಭಾಷೆಯೊಳಗೆ ಸೇರಿಸಿಕೊಳ್ಳಲಾಯಿತು. ಸಂಸ್ಕೃತ ಭಾಷೆಯಲ್ಲಿರುವುದೆಲ್ಲವೂ ವೈದಿಕವೇನಲ್ಲ. ಹಾಗೆಯೇ ವೇದ ಕಾಲದಲ್ಲಿಯೂ ಕೂಡಾ ಸಂಸ್ಕೃತವೇನೂ ಅಡುಗೆ ಮನೆ ಭಾಷೆಯಾಗಿರಲಿಲ್ಲ. ತಮ್ಮದೇ ಮನೆಯ ಹೆಂಗಸರೊಡನೆ, ಸೇವಕರೊಡನೆ ಸ್ಥಳೀಯ ಭಾಷೆಗಳನ್ನೇ ಮಾತಾಡುತ್ತಿದ್ದರು. ಮೈತ್ರೇಯಿ, ಗಾರ್ಗಿಯಂತಹ ಕೆಲವೇ ಹೆಣ್ಣು ಮಕ್ಕಳು ಸಂಸ್ಕೃತ ವಿದ್ವಾಂಸರಾದ ಹೊರತು ಬ್ರಾಹ್ಮಣರಲ್ಲಿ ಪುರುಷಪ್ರಧಾನವೇ ಇತ್ತು. ಹೆಂಗಸರನ್ನು ಶೂದ್ರರೆಂದೇ ಪರಿಗಣಿಸುತ್ತಿದ್ದದ್ದು ಕೂಡಾ ಉಂಟು. ಅವಳಿಗೆ ಯಜ್ಞ ಮಾಡುವ ಹಕ್ಕಾಗಲಿ, ವಿಧಿ ಸಂಸ್ಕಾರಗಳನ್ನು ಮಾಡ ಅಧಿಕಾರವಾಗಲಿ, ಉಪನಯನದಂತಹ ಸಂಸ್ಕಾರವಾಗಲಿ ಇಲ್ಲ.

ಡೊನಿಗರ್ ಹೇಳುವಂತೆ, “ಬ್ರಾಹ್ಮಣರ ಸ್ತ್ರೀ ದ್ವೇಷ, ಉನ್ನತ ಜಾತಿ ಧೋರಣೆಗಳು ಸಂಸ್ಕೃತ ಕಾವ್ಯಗಳಿಂದ ಸ್ಥಳೀಯ ಭಾಷಾ ಕಾವ್ಯಗಳೊಳಗೆ ಪ್ರವೇಶಗೊಂಡವು ಎನ್ನುವುದು ಕೆಟ್ಟ ಅಂಶವಾದರೆ, ಸ್ಥಳೀಯ ಕಾವ್ಯಗಳೊಳಕ್ಕೆ ಕೆಲವು ಸಂಸ್ಕೃತಿ ಕೃತಿಗಳೊಳಕ್ಕೆ ಇದಕ್ಕೆ ವಿರುದ್ಧವಾದ ಮೌಲ್ಯಗಳು ಸೇರಿಕೊಂಡವು ಎನ್ನುವ ಒಳ್ಳೆಯ ಅಂಶ ಕೂಡಾ ಸಂಭವಿಸಿತು.”

ಹಲವಾರು ಉದಾಹರಣೆ ಮತ್ತು ಉಲ್ಲೇಖಗಳಿಂದ ಹಿಂದೂ ಮತ ಎನ್ನುವುದು ಒಂದು ಮತವಾಗಿರದೆ ಒಂದು ಸಂಕೀರ್ಣ, ವೈಶಿಷ್ಟಪೂರ್ಣ ಸಂಸ್ಕೃತಿಯಾಗಿದೆ. ಇದಕ್ಕೆ ಯಾರೋ ಕೆಲವರು ಮಾತ್ರ ವಾರಸುದಾರರಲ್ಲ, ವಕ್ತಾರರೂ ಅಲ್ಲ ಎನ್ನುವಂತಹ ವಿಷಯವನ್ನು ಕೃತಿಯು ಪ್ರತಿಪಾದಿಸುತ್ತದೆ.
ಹಿಂದೂ ಪರಂಪರೆಯಲ್ಲಿರುವ ವಿರೋಧಾಭಾಸಗಳು, ವಿಶಿಷ್ಟತೆಗಳು, ವಿವೇಚನಾಯುಕ್ತ ಜಿಜ್ಞಾಸೆಗಳು; ಎಲ್ಲವೂ ಕುತೂಹಲಕಾರಿಯೇ.

ಆಯಾ ಕಾಲಘಟ್ಟಗಳ ಪ್ರತಿಸ್ಪಂದನೆಯಾಗಿ ಉದಿಸಿದ ಧರ್ಮಗಳು ಕಾಲಾನುಕ್ರಮಣಿಕೆಯಲ್ಲಿ ತಮ್ಮ ಎಷ್ಟೆಷ್ಟೋ ಔಚಿತ್ಯವನ್ನು ಕಳೆದುಕೊಳ್ಳುವುದು ಸಾಮಾನ್ಯ. ಎಲ್ಲಾ ಮತಗಳಲ್ಲಿಯೂ ಈ ನ್ಯೂನತೆ ಇದೆ. ಇಸ್ಲಾಂ, ಬೌದ್ಧ, ಕ್ರೈಸ್ತ, ಜೈನ ಮತಗಳೂ ಈ ಮಾತಿಗೆ ಹೊರತಲ್ಲ. ಹಾಗಿರುವಾಗ ಈ ಮತದಲ್ಲಿರುವ ಕೆಲವು ನ್ಯೂನತೆಗಳನ್ನು ಮಾತ್ರ ಮುನ್ನೆಲೆಗೆ ತರುತ್ತಾ ಸದಾ ನಿಂದಿಸುತ್ತಾ, ಅವಹೇಳನ ಮಾಡುತ್ತಾ ಇರುವುದು ಅಧ್ಯಯನಶೀಲರಿಗೆ ಮತ್ತು ಸಂಶೋಧಕರಿಗೆ ಹೇಗೆ ಉಚಿತವಲ್ಲವೋ ಹಾಗೆಯೇ ಹಿಂದೂ ಮತವನ್ನು ಬೇರೆ ಮತಗಳಿಗೆ ಹೋಲಿಸುತ್ತಾ ತಮ್ಮದೇ ಶ್ರೇಷ್ಠ ಎನ್ನುವ ಜಿದ್ದಿಗೆ ಬೀಳುವುದು, ಪುರಾತನಕಾಲದಿಂದ ಇದುವರೆಗೂ ಅದೊಂದೇ ಸರಿಯಾಗಿರುವುದು ಎಂದು ಹುಸಿ ಪ್ರತಿಷ್ಠೆಗೆ ಜೋತುಬೀಳುವುದೂ ಕೂಡಾ ಅಷ್ಟೇ ಅನುಚಿತ. ಆದರೆ ಕಟ್ಟರ್ ಸಂಪ್ರದಾಯವಾದಿಗಳ ಕರ್ಮವೆಂದರೆ ತಮ್ಮ ಹಳೆಯ ಆಚಾರವಿಚಾರಗಳನ್ನು ಕಿಂಚಿತ್ತೂ ಪರಿಶೀಲನೆಗೆ ಒಪ್ಪದೇ ಸಮರ್ಥಿಸಿಕೊಂಡು ಧಾರ್ಮಿಕ ಅರ್ಥ ವಿಚಾರಗಳನ್ನು ಸಂಕುಚಿತಗೊಳಿಸುವುದು.

ಕಾಲಾನುಕ್ರಮಣಿಕೆಯಲ್ಲಿ ಜೀವಂತವಾಗಿರುವುದು ಬೆಳೆಯಬೇಕು ಮತ್ತು ವಿಕಾಸವಾಗಬೇಕು.

ಆನೋ ಭದ್ರಾಃ ಕೃತವೋ ಯಂತು ವಿಶ್ವತಃ ಎನ್ನುವಂತೆ ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದುಬರಲಿ ಎಂದು ಋಷಿಗಳೇ ಪ್ರಾರ್ಥಿಸಿದಂತೆ, ವಿಶಾಲವಾದ ವಿಷಯಗಳಿಗೆ ಹಿಂದೂ ಮತದಲ್ಲಿ ಗುರುತಿಸಿಕೊಳ್ಳುವವರು ತೆರೆದುಕೊಂಡರೆ, ವೆಂಡಿ ಡೋನಿಗರ್ ಕೃತಿಯೂ ಕೂಡಾ ಪರಾಮರ್ಶೆಗೆ ಅವಕಾಶ ನೀಡುವಂತಹ ಬೆಳಕನ್ನು ಬೀರುತ್ತದೆ.


ಇದನ್ನೂ ಓದಿ: ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸೋಕಾಲ್ಡ್ ಬುದ್ದಿ ಜೀವಿಗಳೇ ,ನಿಮ್ಮ ಬರಹ ಹಿಂಧೂ ಧರ್ಮದ ಬಗ್ಗೆ ಬರೆಯೋ ಬದಲು ಮುಸ್ಲೀಂ ,ಕ್ರಿಶ್ಚಿಯನ್ ರ ಬಗ್ಗೆ ಬರೆಯಿರಿ ,ಯಾಕೆ ಆ ಧರ್ಮಗಳ ಬಗ್ಗೆ ನಿಮಗೆ ಬರೆಯೋಕೆ ಭಯವ ,ಸೋ ಕಾಲ್ಡ್ ಶಿಕ್ಷಿತ ಅವಿವೇಕಿಗಳಾ ,ಮುಸ್ಲೀಂ ಬುರ್ಕ,ತಿಲಕ್ ,ಮಸೀದಿ ಪ್ರವೇಶ ಇವುಗಳಲ್ಲಿ ಮಹಿಳೆಯರಿಗೆ ಆ ಧರ್ಮಗಳಲ್ಲಿ ಶೋಷಣೆ ನಡಿತಿದೆ ಸಾವಿರಾರು ವರ್ಷಗಳಿಂದ ,ಅವರ ಬಗ್ಗೆ ಬರೆದು ಹೋರಾಟ ಮಾಡಿ ನೋಡೋಣಾ ,ವಿವೇಕ ವಿಲ್ಲದ ಶಿಕ್ಷಿತರ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...