Homeಮುಖಪುಟಬೆಳ್ಳಿಚುಕ್ಕಿ; ಗ್ರಹದ ಮಾನ್ಯತೆಯನ್ನು ಕಳೆದುಕೊಂಡ ಪ್ಲೊಟೋದ ಕಥೆ

ಬೆಳ್ಳಿಚುಕ್ಕಿ; ಗ್ರಹದ ಮಾನ್ಯತೆಯನ್ನು ಕಳೆದುಕೊಂಡ ಪ್ಲೊಟೋದ ಕಥೆ

- Advertisement -
- Advertisement -

ಸೌರ ಮಂಡಲದ ಗ್ರಹಗಳು ಒಟ್ಟು ಎಂಟು: ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್. ಇದು ಇಂದಿನ ಪಠ್ಯ ಪುಸ್ತಕಗಳಲ್ಲೂ ಕಂಡುಬರುವ ಮಾಹಿತಿ. ಆದರೆ, 2006ರ ಮೊದಲು ಸೌರ ಮಂಡಲದ ಒಟ್ಟು ಗ್ರಹಗಳ ಬಗ್ಗೆ ಪ್ರಶ್ನೆ ಕೇಳಿದ್ದರೆ, ಉತ್ತರ 9 ಎಂದು ಹೇಳುವುದು ಸಾಮಾನ್ಯವಾಗಿತ್ತು. ಪ್ಲೂಟೋ ಕೂಡ ಒಂದು ಗ್ರಹ ಎಂದು ನಾವು ಗುರುತಿಸಿದ್ದೆವು. ಹಾಗಾದರೆ, ಈ ಪ್ಲೂಟೋಗೆ ಏನಾಯಿತು? ಏಕೆ ಇದು ಈಗ ಗ್ರಹ ಅಲ್ಲ?

1903ರಲ್ಲಿ ಖಗೋಳ ವಿಜ್ಞಾನಿಯಾದ ಪರ್ಸಿವಲ್ ಲೊವೆಲ್ಲ್‌ರವರು ಸೂರ್ಯ ಮತ್ತು ಭೂಮಿಯ 40 ಪಟ್ಟು ದೂರದಲ್ಲಿ ಒಂದು ಕಾಯ ಇದೆ ಎಂದು ಊಹಿಸಿದರು. ಇವರು ಈ ಕಾಯವನ್ನು ಪ್ಲಾನೆಟ್ X ಎಂದು ಕರೆದು, ಈ ಕಾಯಕ್ಕಾಗಿ ಬಹಳ ಹುಡುಕಾಡಿದರು. ಅವರಿಗೆ ಅದು ಸಿಗಲಿಲ್ಲ. ನಂತರ ಲೊವೆಲ್ಲ್ ಅವರ ಥಿಯರಿಯ ಮೇಲೆ ಕ್ಲೈಡೆ ಟೊಂಬಾಗ್ ರವರು 1930ರಲ್ಲಿ ಲೊವೆಲ್ಲೆ ವೀಕ್ಷಣಾಲಯದಿಂದ ಪೋಟೋಗ್ರಫಿಕ್ ಪ್ಲೇಟ್‌ಗಳಲ್ಲಿ ಆಕಾಶದ ಚಿತ್ರಗಳನ್ನು ತೆಗೆದು, Blink Microscope ಸಹಾಯದಿಂದ ಪ್ಲೂಟೋ (ಪ್ಲಾನೆಟ್ X) ಕಾಯದ ಇರುವಿಕೆಯನ್ನು ಮೊದಲ ಬಾರಿಗೆ ಕಂಡುಹಿಡಿದರು. ಅಂದಿನಿಂದ ಸುಮಾರು 76 ವರ್ಷಗಳವರೆಗೆ ಪ್ಲೂಟೋ ಗ್ರಹದ ಪಟ್ಟಿಯಲ್ಲಿಯೇ ಇದ್ದು, ಸೌರ ಮಂಡಲದ ಒಂಬತ್ತನೇ ಗ್ರಹ ಎಂದು ಕರೆಯಲಾಗಿತ್ತು.

ಪ್ಲೂಟೋ, ಸೌರ ಮಂಡಲದ ವಿಶೇಷವಾದ ಕಾಯ. ಈ ಪ್ಲೂಟೋ ಸೂರ್ಯ ಮತ್ತು ಭೂಮಿಯ 40 ಪಟ್ಟು ದೂರದಲ್ಲಿರುವುದರಿಂದ, ಸೂರ್ಯನ ಕಿರಣಗಳು ಪ್ಲೂಟೋ ತಲುಪುವುದು ಕಷ್ಟ. ಆ ಕಾರಣದಿಂದ ಪ್ಲೂಟೋದಲ್ಲಿನ ತಾಪಮಾನ ಅತ್ಯಂತ ಕಡಿಮೆ ಅಂದರೆ -226ರಿಂದ -240 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಹಾಗಾಗಿ ಪ್ಲೂಟೋ ಅನ್ನು ಹಿಮಾವೃತ ಕಾಯ (Icy Bodies) ಎಂದೂ ಕರೆಯುತ್ತಾರೆ. ಭೂಮಿಗೆ ಹೊಲಿಸಿದರೆ ಪ್ಲೂಟೋ ಅದರ ಆರನೇ ಒಂದು ಭಾಗದಷ್ಟು ದೊಡ್ಡದಾಗಿದೆ. ಅಲ್ಲದೆ, ಭೂಮಿಗೆ ಒಂದು ಉಪಗ್ರಹವಾದ ಚಂದ್ರನಿದ್ದರೆ, ಅಷ್ಟು ಚಿಕ್ಕ ಕಾಯವಾದ ಪ್ಲೂಟೋಗೆ ಐದು ಉಪಗ್ರಹಗಳಿವೆ!

ಪ್ಲೂಟೋ ಏಕೆ ಗ್ರಹವಲ್ಲ?

ಸುಮಾರು 76 ವರ್ಷಗಳವರೆಗೆ ಗ್ರಹದ ಪಟ್ಟಿಯಲ್ಲಿದ್ದ ಪ್ಲೂಟೋವನ್ನು ಈಗ ಏಕೆ ಗ್ರಹ ಎಂದು ಕರೆಯಲಾಗುತ್ತಿಲ್ಲ? ಪ್ಲೂಟೋ ಕಂಡುಹಿಡಿದಾಗಿನಿಂದಲೂ, ಇದು ಗ್ರಹ ಅಥವಾ ಗ್ರಹ ಅಲ್ಲವೋ ಎಂಬ ಚರ್ಚೆ ನಡೆಯುತ್ತಲೇ ಇತ್ತು. 1800ರಲ್ಲಿ ಸಿರಸ್ (Ceres) ಎಂಬ ಕಾಯ ಮಂಗಳ ಮತ್ತು ಗುರು ಗ್ರಹದ ಮಧ್ಯೆ ಇರುವುದನ್ನು ಕಂಡುಹಿಡಿದಾಗಲೂ, ಸಿರಸ್‌ಅನ್ನು ಗ್ರಹ ಎಂದು ಕರೆಯಲಾಗಿತ್ತು. ತದನಂತರ, ಸಿರಸ್ ಇರುವ ಕಕ್ಷೆಯಲ್ಲಿ ಹಲವಾರು ಕಾಯಗಳನ್ನು ಕಂಡು ಹಿಡಿದಮೇಲೆ ಆ ಕಕ್ಷೆಯನ್ನು Asteroid Belt ಎಂದು ಕರೆದು, ಸಿರಸ್ ಅನ್ನು ಕ್ಷುದ್ರ ಗ್ರಹ (Dwarf Planet) ಎಂದು ಕರೆದರು. ಹೀಗೆ ಸೌರಮಂಡಲದ ಮೊದಲ ಕ್ಷುದ್ರ ಗ್ರಹ ಎಂಬ ಹೆಸರು ಸಿರಸ್‌ಗೆ ಸಿಕ್ಕಿತು. ಪ್ಲೂಟೋ ಗ್ರಹದ ಸ್ಥಾನದಲ್ಲಿರಬೇಕಾದರೆ, 1990-2000ದ ದಶಕದಲ್ಲಿ ಪ್ಲೂಟೋ ನಂತಹ ಅನೇಕ ಹಿಮಾವೃತ ಕಾಯಗಳು ಪ್ಲೂಟೋ ಬಳಿ ಇರುವುದನ್ನು ಕಂಡುಹಿಡಿಯಲಾಯಿತು, ಇದನ್ನು ಕೈಪರ್ ಬೆಲ್ಟ್ (Kuiper Belt) ಎಂದು ಕರೆಯಲಾಯಿತು. ಪ್ಲೂಟೋ ಕೂಡ ಕೈಪರ್ ಬೆಲ್ಟ್‌ನಲ್ಲಿರುವ ಇತರೆ ಕಾಯಗಳಂತೆ ಒಂದು ಕಾಯ.

ಪ್ಲೂಟೋ ಸೌರಮಂಡಲದ ತುದಿಯಲ್ಲಿರುವ ಗ್ರಹ. 2006ವರೆಗೂ ಪ್ಲೂಟೋ ಗ್ರಹ ಎಂದು ಕರೆದು, 2006 ನಂತರ ಗ್ರಹದ ಪಟ್ಟಿಯಿಂದ ಕೈಬಿಟ್ಟು ಕುಬ್ಜ ಗ್ರಹದ ಪಟ್ಟಿಗೆ ಸೇರಿಸಲಾಯಿತು. ಅಂದರೆ, ಸಿರಸ್‌ನಂತಹ ಆಕಾಶಕಾಯಗಳ ಪಟ್ಟಿಗೆ ಸೇರಿಸಲಾಯಿತು. ವಿಸ್ಮಯದ ಸಂಗತಿ ಏನೆಂದರೆ, ಸೂರ್ಯನ ಸುತ್ತು ಪ್ಲೂಟೋ ಒಂದು ಸುತ್ತು ತಿರುಗುವುದಕ್ಕೆ ಬರೋಬ್ಬರಿ 249 ಭೂವರ್ಷವನ್ನು ತೆಗೆದುಕೊಳ್ಳುತ್ತದೆ. ಅಂದರೆ, ನಾವು ಪ್ಲೂಟೋವನ್ನು ಕಂಡುಹಿಡಿದು, ಗ್ರಹ ಎಂದು ವ್ಯಾಖ್ಯಾನಿಸಿದ ನಂತರ ಕುಬ್ಜ ಗ್ರಹ ಎಂದು ಮರು ವ್ಯಾಖ್ಯಾನಿಸದರೂ, ಪ್ಲೂಟೋ ಇನ್ನೂ ಸೂರ್ಯನ ಸುತ್ತು ಒಂದು ಸುತ್ತು ತಿರುಗಿಲ್ಲ!

2005ರಲ್ಲಿ ಖಗೋಳ ವಿಜ್ಞಾನಿಗಳು ಕೈಪರ್ ಬೆಲ್ಟ್‌ನಲ್ಲಿ ಪ್ಲೂಟೋಗಿಂತಲೂ ದೊಡ್ಡದಾದ ಹಿಮಾವೃತ ಕಾಯಗಳನ್ನು ಕಂಡುಹಿಡಿದರು. ಇದನ್ನು ಝೇನಾ (Xena) ಎಂದು ಕರೆದರು. ಆಗಿನ ಗ್ರಹದ ವ್ಯಾಖ್ಯಾನದ ಪ್ರಕಾರ, ಝೇನಾ 10ನೇ ಗ್ರಹವಾಗಬೇಕಿತ್ತು. ಈ ಸಂಬಂಧವಾಗಿ ಹಲವು ಚರ್ಚೆಗಳು ನಡೆದವು. ತದನಂತರ ಎರಿಸ್ (Eris) ಕಾಯವನ್ನು ಕಂಡುಹಿಡಿಯಲಾಯಿತು. ಪ್ಲೂಟೋ ಗ್ರಹವಾದರೆ ಇದೂ ಕೂಡ ಗ್ರಹವಾಗಬೇಕು ಎನ್ನುವ ವಾದವು ಹೆಚ್ಚಾಯಿತು. ಜೊತೆಗೆ, ಖಗೋಳ ವಿಜ್ಞಾನಿಗಳ ನಡುವೆಯೇ ಪ್ಲೋಟೋವನ್ನು ಗ್ರಹದ ಪಟ್ಟಿಯಿಂದ ತೆಗೆದು ಕ್ಷುದ್ರ ಗ್ರಹದ ಪಟ್ಟಿಗೆ ಸೇರಿಸಬೇಕು ಎಂಬ ಚರ್ಚೆಗಳು ಮಂಚೂಣಿಯಲ್ಲಿದ್ದವು.

ಈ ಹಿಂದೆ 2000ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ಸೌರಮಂಡಲದ ಗ್ರಹಗಳ ಪಟ್ಟಿಯಲ್ಲಿ ಪ್ಲೂಟೋವನ್ನು ಹೊರಗಿಟ್ಟಾಗ, ಅಂದಿನ ಮ್ಯೂಸಿಯಂನ ನಿರ್ದೇಶಕರಾದ ಹೆಸರಾಂತ ನೀಲ್ ಡಿಗ್ರಸ್ ಟೈಸನ್‌ರವರಿಗೆ ಮಕ್ಕಳು, ವಿದ್ಯಾರ್ಥಿಗಳು ಪತ್ರವನ್ನು ಬರೆದು ಪ್ಲೂಟೋವನ್ನು ಗ್ರಹದಿಂದ ಹೊರಗಿಟ್ಟಿದ್ದಕ್ಕೆ ಗಲಾಟೆ ಎಬ್ಬಿಸಿದ್ದರು. ವಿಜ್ಞಾನ ಲೇಖಕರಾದ ಡೇವ್ ಸೊಬೆಲ್, 2005ರಲ್ಲಿ ಪ್ರಕಟವಾದ ತಮ್ಮ ‘ದಿ ಪ್ಲಾನೆಟ್’ ಪುಸ್ತಕದಲ್ಲಿ, ’ಮಕ್ಕಳು ಪ್ಲೂಟೋವನ್ನು ಅದರ ಚಿಕ್ಕ ಗಾತ್ರದಿಂದ ಹೆಚ್ಚಾಗಿ ಗುರುತಿಸುತ್ತಾರೆ’ ಎಂದು ಹೇಳಿದ್ದರು. ಹೀಗೆ ನಮಗೆ ತಿಳಿದೋ ತಿಳಿಯದೆಯೋ ಪ್ಲೂಟೋ 9ನೇ ಗ್ರಹವಾಗಿ ನಮ್ಮ ಭಾವನೆಯಲ್ಲಿ ಉಳಿದಿತ್ತು ಎನ್ನಬಹುದೇನೋ! ಆದರೆ, ವಿಜ್ಞಾನ ನಮ್ಮ ನಿಮ್ಮ ಭಾವನೆಗಳಿಗೆ ಕಾಳಜಿವಹಿಸುವುದಿಲ್ಲ. ನಮ್ಮ ಸುತ್ತಲು ಇರುವ ಪರಿಸರ ಕಾರ್ಯನಿರ್ವಹಿಸುವುದನ್ನು ತಾರ್ಕಿಕವಾಗಿ ಚರ್ಚಿಸಲು ಅನುವುಮಾಡಿಕೊಡುತ್ತದೆಯೇ ಹೊರತು ಯಾರೊಬ್ಬರಿಗೆ ಇಷ್ಟವಾಗುವ ರೀತಿಯಲ್ಲಿ ಇರುವುದಿಲ್ಲ.

2006ರಲ್ಲಿ ನಡೆದ ಇಂಟರ್ನ್ಯಾಷನಲ್ ಅಸ್ಟ್ರಾನಾಮಿಕಲ್ ಯೂನಿಯನ್ (International Astronomical Union) ಸಭೆಯಲ್ಲಿ, ಪ್ಲೂಟೋದ ಬಗ್ಗೆ ಖಗೋಳ ವಿಜ್ಞಾನಿಗಳಲ್ಲಿ ಮತ್ತೊಂದು ಗಲಭೆ ಎದ್ದಿತ್ತು. ಈ ಸಭೆಯಲ್ಲಿನ ಸದಸ್ಯರು, ಸೌರಮಂಡಲದ ಕಾಯವನ್ನು ಗ್ರಹ ಎಂದು ವ್ಯಾಖ್ಯಾನಿಸಬೇಕಾದರೆ, ಇರುವ ಮಾನದಂಡಗಳನ್ನು ಪರಿಷ್ಕರಿಸಿದರು. ಈ ಪರಿಷ್ಕರಣೆಯ ಪ್ರಕಾರ, ಒಂದು ಆಕಾಶ ಕಾಯವು ಗ್ರಹವಾಗಬೇಕೇಂದರೆ, 1) ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಸುತ್ತಬೇಕು. 2) ಆ ಕಾಯವು ಗೋಳಾಕಾರದಲ್ಲಿ (Spherical or close to Spherical) ಇರುವಷ್ಟು ಅಗತ್ಯ ದ್ರವ್ಯರಾಶಿ ಹೊಂದಿರಬೆಕು 3) ಅದರ ಕಕ್ಷೆಯಲ್ಲಿ ಅಥವಾ ಹತ್ತಿರದಲ್ಲಿ ಇನ್ನಿತರ ಯಾವುದೇ ಆಕಾಶ ಕಾಯಗಳು ಹಾದು ಹೋಗಬಾರದು ಅಥವಾ ಇರಬಾರದು. ಹೀಗೆ ಅಂದಿನ ಸಭೆಯಲ್ಲಿ ಗ್ರಹದ ವ್ಯಾಖ್ಯಾನವನ್ನು ಬದಲಿಸಲಾಯಿತು.

ಗ್ರಹದ ಹೊಸದಾದ ವ್ಯಾಖ್ಯಾನದಿಂದ ಪ್ಲೂಟೋವನ್ನು ಗಮನಿಸಿದಾಗ, ಪ್ಲೂಟೋ ಮೊದಲ ಎರಡು ಮಾನದಂಡಕ್ಕೆ ಅನುಗುಣವಾಗಿದ್ದು, ಮೂರನೇ ಮಾನದಂಡಕ್ಕೆ ಮಾನ್ಯವಾಗಿರಲಿಲ್ಲ. ಈ ವ್ಯಾಖ್ಯಾನವನ್ನು ಪ್ಲೂಟೋ ಮತ್ತು ಪ್ಲೂಟೋನಂತಹ ಇತರೆ ಕಾಯಗಳನ್ನು ಗ್ರಹದ ಪಟ್ಟಿಗೆ ಸೇರಿಸದೆ ಹೊರಗಿಡಲು ಅನುವಾಗುವಂತೆಯೇ ರಚಿಸಲಾಗಿತ್ತು. ಈಗಾಗಲೇ ನಾವು ತಿಳಿದ ಹಾಗೆ ಪ್ಲೂಟೋ ಕೈಪರ್ ಬೆಲ್ಟ್‌ನಲ್ಲಿರುವ ಆಕಾಶ ಕಾಯಗಳ ಸದಸ್ಯ. ಅಂದರೆ, ಅದರ ಕಕ್ಷೆಯ ಹತ್ತಿರದಲ್ಲಿ ಇರುವ ಇತರೆ ಪ್ಲೂಟಿನೋಸ್ (Plutinos objects) ಕಾಯಗಳು (ಕೈಪರ್ ಬೆಲ್ಟ್‌ನ ಕಾಯಗಳು) ಸೂರ್ಯನ ಸುತ್ತ ಸುತ್ತುತ್ತಿವೆ. ಇಂತಹ ಕಾಯಗಳನ್ನು ಕ್ಷುದ್ರ ಗ್ರಹ ಎಂದು ಕರೆದರು (ಸಿರಸ್ ಕೂಡ Asteroid Belt ಸದಸ್ಯ). ಈ ಕಾರಣದಿಂದ ಪ್ಲೂಟೋ ತನ್ನ ಗ್ರಹದ ಸ್ಥಾನವನ್ನು ಕಳೆದುಕೊಂಡು ಕ್ಷುದ್ರ ಗ್ರಹದ ಪಟ್ಟಿಗೆ ಬಂದಿತು.

ಪ್ಲೂಟೋನನ್ನು ಗ್ರಹದಿಂದ ಕೆಳಗಿಳಿಸಿ, ಕ್ಷುದ್ರ ಗ್ರಹದ ಪಟ್ಟಿಗೆ ತಳ್ಳಿದ್ದಕ್ಕೆ ಪ್ಲೂಟೋಗೆನೂ ತೊಂದರೆಯಾಗಲಿಲ್ಲ. ಅದು, ಅದರ ಕಕ್ಷೆಯಲ್ಲಿ ತನ್ನ ಪಾಡಿಗೆ ಸೂರ್ಯನ ಸುತ್ತ ಸುತ್ತುತ್ತಿದೆ, ಸುತ್ತುತ್ತಿರುತ್ತದೆ. ಆದರೆ ಪ್ಲೂಟೋದ ಈ Downgraded ಪ್ರಕ್ರಿಯೆಗೆ ಕೆಲವು ಖಗೋಳ ವಿಜ್ಞಾನಿಗಳೂ ಆಕ್ಷೇಪ ವ್ಯಕ್ತಪಡಿಸಿದರೆ ಇನ್ನೂ ಹಲವರು ಸ್ವಾಗತಿಸಿದರು. ಪ್ರಪಂಚದ ಶೇ.5ರಷ್ಟು ಖಗೋಳ ವಿಜ್ಞಾನಿಗಳ ಮತಗಳಿಂದ ಗ್ರಹಗಳ ವ್ಯಾಖ್ಯಾನವನ್ನು ಬದಲಿಸಿ, ಪ್ಲೂಟೋವನ್ನು ಗ್ರಹದ ಸ್ಥಾನದಿಂದ Downgrade ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಇನ್ನೂ ಕೆಲವರು, ಪ್ಲೂಟೋ ಎಂದೂ ಗ್ರಹವಾಗಿರಲಿಲ್ಲ, ನಾವು ಅದನ್ನು ತಪ್ಪಾಗಿ ಗ್ರಹದ ಪಟ್ಟಿಗೆ ಸೇರಿಸಿದ್ದೆವು, ಅದನ್ನು ಈಗ ಸರಿಪಡಿಸಲಾಗಿದೆ ಎನ್ನುವ ವಾದವನ್ನು ಮಂಡಿಸಿದರು. ಏನೇ ಇರಲಿ, ಪ್ಲೂಟೊ ಗ್ರಹದ ಪಟ್ಟಿಯಿಂದ ಕುಬ್ಜ ಗ್ರಹದ ಪಟ್ಟಿಗೆ ತೆರಳಿ 15 ವರ್ಷಗಳು ಕಳೆದರೂ, ಮಕ್ಕಳು, ಸಾರ್ವಜನಿಕರಲ್ಲಿ ಅದೇಕೆ ಪ್ಲೋಟೋವನ್ನು ಗ್ರಹದಿಂದ ತೆಗೆದರು ಎನ್ನುವ ಪ್ರಶ್ನೆ ಇನ್ನೂ ಹಸಿರಾಗಿಯೇ ಇದೆ.


ಇದನ್ನೂ ಓದಿ: ಬೆಳ್ಳಿಚುಕ್ಕಿ; ಬಾಹ್ಯಾಕಾಶದಲ್ಲಿ ಅತ್ಯಂತ ದೊಡ್ಡದಾದ ಸ್ಫೋಟ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...