Homeಮುಖಪುಟಶಿಕ್ಷಣ ಕ್ಷೇತ್ರದಲ್ಲಿ ತಕ್ಷಣ ಜಾರಿಯಾಗಬೇಕಾದ ಅಂಶಗಳಿವು: ಸಿಎಂಗೆ ಶಿಕ್ಷಣ ತಜ್ಞ ನಿರಂಜನಾರಾಧ್ಯರ ಪತ್ರ

ಶಿಕ್ಷಣ ಕ್ಷೇತ್ರದಲ್ಲಿ ತಕ್ಷಣ ಜಾರಿಯಾಗಬೇಕಾದ ಅಂಶಗಳಿವು: ಸಿಎಂಗೆ ಶಿಕ್ಷಣ ತಜ್ಞ ನಿರಂಜನಾರಾಧ್ಯರ ಪತ್ರ

- Advertisement -
- Advertisement -

ಶಾಲೆ ಪ್ರಾರಂಭವಾಗಲು ಕೇವಲ 10 ದಿನಗಳು ಮಾತ್ರ ಬಾಕಿ ಇದ್ದು ಸರ್ಕಾರ ಶಿಕ್ಷಣದ ವಿಷಯವನ್ನು ಅತ್ಯಂತ ಜರೂರಿನ ವಿಷಯವನ್ನಾಗಿ ಪರಿಗಣಿಸಿ, ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು, ಅವುಗಳನ್ನು ತಕ್ಷಣದ ಆದ್ಯತೆ ಮತ್ತು ನಂತರದ ಆದ್ಯತೆಗಳೆಂದು ಪರಿಗಣಿಸಿ ಕ್ರಮ ವಹಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಮತ್ತು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಸಂಸ್ಥಾಪಕ ಪೋಷಕರಾದ ವಿ.ಪಿ ನಿರಂಜನಾರಾಧ್ಯರವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

 ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕೈಗೊಳ್ಳಬೇಕಾದ ತಕ್ಷಣದ ಆದ್ಯತೆಗಳು

ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ನೇಮಕಾತಿ ಮಕ್ಕಳ ಕಲಿಕೆಯನ್ನು ಪೂರ್ಣವಾಗಿ ಹಳಿ ತಪ್ಪಿಸಿದೆ. 2021-22  ನೇ ಸಾಲಿನಲ್ಲಿ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಸರಿ ಸುಮಾರು 1,41,358.  ಈ ಪೈಕಿ  13,352  ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಶಾಲೆ ಪ್ರಾರಂಭವಾಗುವ ಮುನ್ನ ಅವರು ಶಾಲೆಗಳಲ್ಲಿರುವಂತೆ ತುರ್ತು ಕ್ರಮ ವಹಿಸುವುದು.

ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದರೂ ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಖಾಯಂ ಶಿಕ್ಷಕರ ನೇಮಕವಾಗಬೇಕು.

ಬಾಕಿ ಖಾಲಿ ಉಳಿಯುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ಜೂನ್‌ 15ರ ಒಳಗಾಗಿ ನೇಮಿಸಿಕೊಳ್ಳಲು ಯುದ್ಧೋಪಾದಿಯಲ್ಲಿ ಕ್ರಮ ವಹಿಸುವುದು. ಈ ಪ್ರಕ್ರಿಯೆಯನ್ನು ಎಸ್‌ಡಿಎಂಸಿ ವ್ಯಾಪ್ತಿ ಹಾಗು ವಿವೇಚನೆಗೆ ಬಿಡಬೇಕು

ಶಾಲೆ ಪ್ರಾರಂಭಕ್ಕೆ ಮುನ್ನ ಎಲ್ಲಾ ಮಕ್ಕಳಿಗೆ ದೊರೆಯಬೇಕಾದ ಉತ್ತೇಜಕಗಳಾದ ಪಠ್ಯಪುಸ್ತಕ, ಸಮವಸ್ತ್ರ , ಷೂ ಮತ್ತು ಸಾಕ್ಸ್‌ ಗಳನ್ನು ತಕ್ಷಣ ಸಕಾಲಕ್ಕೆ ಒದಗಿಸುವುದು .

ಶಾಲಾ ಹಂತದಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಸರ್ಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ 1 ರಿಂದ 12 ನೇ ತರಗತಿಯವರೆಗೆ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಬಸ್‌ ಪಾಸ್‌ ನೀಡುವುದು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಶಾಲಾ ಅನುದಾನಗಳು ಪೂರ್ಣ ಪ್ರಮಾಣದಲ್ಲಿ ಬಾರದಿರುವುದರಿಂದ ಸೀಮೇಸುಣ್ಣ-ಬಿಳೀ ಹಾಳೆಗಳ ಖರೀದಿಯೂ ಕಷ್ಟವಾಗಿದ್ದು, ತಕ್ಷಣ ಶಾಲಾ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ವಹಿಸಬೇಕು.

ಸರ್ಕಾರಿ ಶಾಲೆಗಳಲ್ಲಿ ಬಳಸುವ ವಿದ್ಯುಚ್ಛಕ್ತಿ ಹಾಗು ನೀರಿನ ಬಳಕೆಯ ಬಿಲ್‌ ಗಳ ಹಣವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡುವುದು

ಪ್ರೌಢ  ಶಿಕ್ಷಣ ಮುಂದುವರಿಸಲು  ಅನುಕೂಲವಾಗುವಂತೆ ಹೆಣ್ಣು ಹಾಗು ಗಂಡು ಮಕ್ಕಳಿಗೆ ಸಿಗುತ್ತಿದ್ದ ಬೈಸಿಕಲ್‌ ವಿತರಣೆ ಕಳೆದ ನಾಲ್ಕು ವರ್ಷಗಳಿಂದ (2019-200) ಸ್ಥಗಿತವಾಗಿದ್ದು ಸಾವಿರಾರು ಮಕ್ಕಳು ಶಾಲೆ ಬಿಟ್ಟಿದ್ದಾರೆ.  ಆದ್ದರಿಂದ, ಕೂಡಲೇ  ಮಕ್ಕಳಿಗೆ ಬೈಸಿಕಲ್‌ ವಿತರಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು.

ವಿವಿಧ ಇಲಾಖೆಗಳ ಅಡಿಯಲ್ಲಿ ನಡೆಯುತ್ತಿರುವ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜೂನ್ ಒಂದರ ಒಳಗೆ ಎಲ್ಲಾ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳು ಪುನರಾರಂಭಗೊಳ್ಳುವಂತೆ ಜರೂರು ಕ್ರಮ ವಹಿಸುವುದು.

ಶುದ್ಧ ಕುಡಿಯುವ ನೀರು, ಮಕ್ಕಳ ಶೌಚಾಲಯ, ತರಗತಿ ಕೋಣೆ  ಸೇರಿದಂತೆ ಮೂಲಭೂತ ಸೌಕರ್ಯಗಳು ಪ್ರಥಮ ಆದ್ಯತೆಯಾಗಬೇಕು

ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಭಾಗವಾಗಿ ಮಧ್ಯಾಹ್ನದ ಬಿಸಿಯೂಟದ ವೆಚ್ಚಕ್ಕೆ ಈಗಿರುವ ಪ್ರತೀ ಮಗುವಿನ ಯುನಿಟ್‌ ವೆಚ್ಚವನ್ನು ಹೆಚ್ಚಿಸಬೇಕು.

ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ನಲ್ಲಿ / ಮಾದರಿಯಲ್ಲಿ ಮಧ್ಯಾಹ್ನ ಉಚಿತ ಊಟ ಒದಗಿಸಬೇಕು .

2023-24ನೇ ಸಾಲಿನ ಪಠ್ಯಪುಸ್ತಕಗಳು ಮುದ್ರಣಗೊಂಡು ಈಗಾಗಲೇ ಬಹುತೇಕ  98.21  ರಷ್ಟು ಸರಬರಾಜಾಗಿರುವುದರಿಂದ, ಈ ಪಠ್ಯಪುಸ್ತಕಗಳಲ್ಲಿ ಬದಲಾಗಿದ್ದ ಪ್ರಮುಖ ಪಾಠಗಳನ್ನು ಮತ್ತು ಕಲಿಕಾಂಶಗಳನ್ನು ಕಲಿಕೆ ಮತ್ತು ಮೌಲ್ಯಮಾಪನದಿಂದ ಕೈಬಿಡಲು   ಹಾಗು ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಕಡ್ಡಾಯವಾಗಿ ನಿರಂತರ ಮತ್ತು  ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಳ್ಳುವ ಮೂಲಕ  ಅತ್ಯುತ್ತಮವಾಗಿ ಕಲಿಸುವಂತೆ ಸ್ಪಷ್ಟ ಮಾರ್ಗಸೂಚಿ  ಹೊರಡಿಸುವುದು.

ಸಾರ್ವಜನಿಕ ಶಿಕ್ಷಣದ ಸಮಗ್ರ ಬದಲಾಣೆಗೆ  ಮತ್ತು ಬಲವರ್ಧನೆಗೆ ದಿಕ್ಸೂಚಿಯಾಗಬಲ್ಲ  ಅಲ್ಪಕಾಲದ ಆದ್ಯತೆಗಳು

ಕೇಂದ್ರ ಸರ್ಕಾರ ಅಸಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕವಾಗಿ ಪಾರದರ್ಶಕತೆಯೇ ಇಲ್ಲದೆ ಗೌಪ್ಯವಾಗಿ ಸಂವಿಧಾನ ಪ್ರತಿಪಾದಿಸುವ ಬಹುತ್ವದ ರಾಷ್ಟ್ರೀಯತೆಗೆ ಬದಲಾಗಿ ಧರ್ಮಾಧಾರಿತ ಕೋಮುವಾದಿ ನೆಲೆಯ ಹಿಂದುತ್ವ  ರಾಷ್ಟ್ರೀಯತೆಯನ್ನು ಸಾಧಿಸಲು ರೂಪಿಸಿರುವ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿಧಾನ ಸಭೆಯ ಮೊದಲ ಅಧಿವೇಶನದಲ್ಲಿ ಸಾರಾಸಗಟಾಗಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಬೇಕು. ಅದನ್ನು ಒಕ್ಕೂಟ ಸರಕಾರಕ್ಕೆ ಅಧಿಕೃತವಾಗಿ ತಿಳಿಸಬೇಕು. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದನ್ನು ಒಕ್ಕೂಟ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು.

ಸಂವಿಧಾನದ ಆಶಯದಂತೆ ಸಾರ್ವಜನಿಕ ಶಿಕ್ಷಣವನ್ನು ಸಮಗ್ರವಾಗಿ ಬದಲಾಯಿಸಿ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡಬಲ್ಲ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿ, ಜಾರಿಗೊಳಿಸಿ ಮತ್ತು ನಿರಂತರ ಮೌಲ್ಯಾಂಕನ ಮೂಲಕ  ಸಮಾನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಶಾಶ್ವತ ರಾಜ್ಯ ಶಿಕ್ಷಣ ಆಯೋಗವನ್ನು /ಪ್ರಾಧಿಕಾರವನ್ನು ಸ್ಥಾಪಿಸಬೇಕು.

ಸಂವಿಧಾನದ ಆಶಯದಂತೆ ರೂಪಗೊಂಡ ರಾಜ್ಯ ಶಿಕ್ಷಣ ನೀತಿಯು ಎರಡೂ ಸದನದಲ್ಲಿ ಚರ್ಚೆಯಾಗಿ ಅಂಗೀಕಾರವಾಗಿ ಜಾರಿಯಾಗುವವರೆಗೆ, 2017 -18 ರಲ್ಲಿ ಜಾರಿಯಿದ್ದ ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯ ಪುಸ್ತಕಗಳನ್ನು ಯಥಾವತ್ತಾಗಿ  2024-25ಕ್ಕೆ ಮುಂದುವರಿಸಬೇಕು.

ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮತ್ತು ಸೂಕ್ತ ಆದೇಶವೇ ಇಲ್ಲದೆ ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯ ಖಜಾನೆಗೆ ಕೋಟ್ಯಂತರ ನಷ್ಟ ಮಾಡಿದ ಹಿಂದಿನ ಪಠ್ಯಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಮತ್ತು ತಂಡದ ಸದಸ್ಯರ  ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.ಜೊತೆಗೆ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಮುದ್ರಣವಾಗಿದ್ದ ಕನ್ನಡ ಹಾಗು ಇತಿಹಾಸದ ಪುಸ್ತಕಗಳ ಸರಬರಾಜನ್ನು  ಸ್ಥಗಿತಗೊಳಿಸುವ ಮೂಲಕ ಪೋಲು ಮಾಡಿದ ಕೋಟ್ಯಂತರ ಸಾರ್ವಜನಿಕ ಹಣವನ್ನು ಅವರಿಂದ ವಸೂಲು ಮಾಡಬೇಕು.

ಸಂವಿಧಾನದಲ್ಲಿನ ಮೂಲಭೂತ ಹಕ್ಕಾಗಿರುವ 21ಎ ನ್ನು ಕೊಡಮಾಡುವ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಹಾಗು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗು ನಿಗದಿತ ಸಮಯದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಹೊಸ ಸರ್ಕಾರ ಕಾಲಮಿತಿ ಯೋಜನೆ ರೂಪಿಸಬೇಕು.

ಯಾವುದೇ ನೆಪಹೇಳಿ ಸರ್ಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ/ ವಿಲೀನಗೊಳಿಸುವ ಪ್ರಕ್ರಿಯೆಯನ್ನುಪೂರ್ಣವಾಗಿ ನಿಲ್ಲಿಸುವುದು.

ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣವೂ ಒಳಗೊಂಡಂತೆ  ಕನಿಷ್ಠ 12ನೆಯ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ವಿಸ್ತರಿಸಲು ಸಂವಿಧಾನ ಹಾಗು ಶಿಕ್ಷಣಹಕ್ಕು ಕಾಯಿದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು.

ಸರ್ಕಾರೇತರ ಅನುದಾನರಹಿತ ಶಾಲೆಗಳಲ್ಲಿ ಮಕ್ಕಳ-ಪಾಲಕರ ಹಿತ ಕಾಪಾಡಲು  ಹಾಗು ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ, ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ಪೂರ್ಣವಾಗಿ ನಿಯಂತ್ರಿಸಿ  ಖಾಸಗಿ ಶಾಲೆಗಳು ಜನಸಾಮಾನ್ಯರಿಗೆ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವನ್ನು ಹೊಂದಿರಲು ಅನುವಾಗುವಂತೆ ಶುಲ್ಕ ನಿಯಂತ್ರಣ , ಗುಣಾತ್ಮಕ ಶಿಕ್ಷಣಕ್ಕಾಗಿ ಕನಿಷ್ಟ ಪ್ರಮಾಣಕಗಳು ಹಾಗು ಮಾನದಂಡಗಳು ಮತ್ತು ಪೋಷಕರ ಪಾಲ್ಗೊಳುವಿಕೆಗೆ ಪೂರಕವಾಗುವ ಸಾಂಸ್ಥಿಕ ರಚನೆಯನ್ನು ಒಳಗೊಂಡಿರುವ ಕಟ್ಟುನಿಟ್ಟಾದ  ಸಮಗ್ರ ಕಾನೂನನ್ನು ರೂಪಿಸಬೇಕು.

ಮಕ್ಕಳಿಗೆ ಕ್ಷೀರ ಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರ ಯೋಜನೆಯನ್ನು ಜಾರಿಗೊಳಿಸುವುದು  ಹಾಗು ರಾಜ್ಯದಲ್ಲಿ ಅಪೌಷ್ಠಿಕತೆ ತೊಡೆದು ಹಾಕಲು ಅಂಗನವಾಡಿಯಿಂದ  10 ನೇ ತರಗತಿಯ ಎಲ್ಲಾ ಮಕ್ಕಳಿಗೆ  ಪ್ರತಿದಿನ ಮೊಟ್ಟೆ ವಿತರಿಸಲು ಕ್ರಮ ಕೈಗೊಳ್ಳಬೇಕು.

ಶಾಲಾ ಹಂತದಲ್ಲಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ  ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ರಚಿಸಿ ಬಲವರ್ಧನೆಗೊಳಿಸಲು  ಪರಿಣಾಮಕಾರಿ ತರಬೇತಿ ಒದಗಿಸಲು ಕ್ರಮ.

ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯಗಳನ್ನು ಅಣಬೆಯಂತೆ ತೆರೆಯಲು ನೀಡುವ ಅನುಮತಿಯನ್ನು ಸ್ಥಗಿತಗೊಳಿಸಿ, ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಬಲವರ್ಧನೆಗೊಳಿಸಲು ಮತ್ತು ವಿಸ್ತರಿಸಲು ಎಲ್ಲಾ ರೀತಿಯ ಕ್ರಮಗಳನ್ನು  ಕೈಗೊಳ್ಳಬೇಕು.

ರಾಜ್ಯ ಆಯವ್ಯಯದಲ್ಲಿ ಶಿಕ್ಷಣಕ್ಕೆ ಶೇಕಡ 20 ರಷ್ಟು ಮೀಸಲಿಡಬೇಕು.

ತಮ್ಮ ಈ ಕಾಲಾವಧಿಯಲ್ಲಿ ಶಿಕ್ಷಣ, ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣದ ವಿಷಯ ಆದ್ಯತೆಯ ವಿಷಯವಾಗುವ ಮೂಲಕ ನೆರೆಹೊರೆಯ ಸಮಾನ ಶಾಲೆಯ ಕಲ್ಪನೆ  ಜಾರಿಯಾಗಬೇಕೆಂಬುದು ನನ್ನ ಒತ್ತಾಸೆಯಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ; ಸಿಎಂ ಸಿದ್ದರಾಮಯ್ಯನವರ ಕುರಿತು ಫೇಕ್ ನ್ಯೂಸ್ ಹಂಚಿ ಅಮಾನತ್ತಾದ ಶಿಕ್ಷಕ: ಈ ಕ್ರಮ ಸರಿಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...